ಬರೀ ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡೋದಷ್ಟೇ ಅಲ್ಲ, ಈ ವಿಚಾರದಲ್ಲಿ ನಮ್ಮವರು ಎಚ್ಚೆತ್ತುಕೊಳ್ಳೋದು ಯಾವಾಗ?
ಇನ್ನೇನು ಮುಂದಿನ 10 ದಿನಗಳ ಅವಧಿಯಲ್ಲಿ ಕನ್ನಡದ ಎರಡು ಬಹುನಿರೀಕ್ಷಿತ ಯುಐ ಮತ್ತು ಮ್ಯಾಕ್ಸ್ ಸಿನಿಮಾಗಳು ಬಿಡುಗಡೆ ಆಗಲಿವೆ. ಆದರೆ, ಎಲ್ಲೋ ಒಂದು ಕಡೆ ಪ್ರಚಾರ ವಿಚಾರದಲ್ಲಿ ನಮ್ಮ ಈ ಸಿನಿಮಾಗಳೇ ತುಂಬ ಹಿಂದುಳಿದಿವೆ. - ಚೇತನ್ ನಾಡಿಗೇರ್ ಬರಹ.
ಉಪೇಂದ್ರ ಅಭಿನಯದ ‘UI’ ಚಿತ್ರದ ಬಿಡುಗಡೆಗೆ ಐದು ದಿನಗಳಷ್ಟೇ ಇದೆ. ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರದ ಬಿಡುಗಡೆಗೆ 10 ದಿನಗಳಿವೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಿವು. ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ನಾಲ್ಕೈದು ಚಿತ್ರಗಳು ಗಳಿಕೆ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಬಹಳಷ್ಟು ಚಿತ್ರಗಳು ಗಳಿಕೆ ಮಾಡಿಲ್ಲ. ಹೋಗಲಿ, ಗಳಿಕೆ ಮಾಡಿದ ನಾಲ್ಕೈದು ಚಿತ್ರಗಳಾದರೂ ಲಾಭ ಕಂಡಿವೆಯಾ ಎಂದರೆ ಅದರಲ್ಲೂ ಸರಿಯಾದ ಕ್ಲಾರಿಟಿ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ‘UI’ ಮತ್ತು ‘ಮ್ಯಾಕ್ಸ್’ ಚಿತ್ರಗಳು, ಈ ವರ್ಷ ಸತತ ಸೋಲುಗಳನ್ನು ಕಂಡಿರುವ ಕನ್ನಡ ಚಿತ್ರರಂಗಕ್ಕೆ ಒಂದಿಷ್ಟು ಎನರ್ಜಿ ತುಂಬಬಹುದು, ನೋವಿಗೆ ಮುಲಾಮು ಹಚ್ಚಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿ ಇದೆ. ಎನರ್ಜಿ ತುಂಬಲಿ, ಮುಲಾಮು ಹಚ್ಚಲಿ ಮತ್ತು ಚಿತ್ರಗಳು ಗೆಲ್ಲಲಿ ಎಂಬುದು ಹಾರೈಕೆ.
ಸೋಲೋ, ಗೆಲುವೋ ಬೇರೆ ಮಾತು, ನಮ್ಮಲ್ಲಿ ಆಗಾಗ ಒಂದಿಷ್ಟು ದೊಡ್ಡ ಚಿತ್ರಗಳೇನೋ ಬಿಡುಗಡೆಯಾಗುತ್ತವೆ. ಆದರೆ, ಅದನ್ನು ತಲುಪಿಸುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಯಾವತ್ತೂ ಹಿಂದೆ ಬಿದ್ದಿದೆ. ಸಂಕ್ರಾಂತಿಗೆ ಬಿಡುಗಡೆಯಾಗುವ ತೆಲುಗು ಮತ್ತು ತಮಿಳು ಚಿತ್ರಗಳ ಬಗ್ಗೆ ಈಗಿನಿಂದಲೇ ಅಲ್ಲಿನ ಜನರಿಗೆ ಕುತೂಹಲ ಮತ್ತು ನಿರೀಕ್ಷೆಗಳಿವೆ. ಆದರೆ, ‘UI’ ಮತ್ತು ‘ಮ್ಯಾಕ್ಸ್’ ಚಿತ್ರಗಳ ಬಿಡುಗಡೆಗೆ ಕೆಲವೇ ದಿನಗಳಿದ್ದರೂ, ಆ ಚಿತ್ರಗಳ ಬಿಡುಗಡೆ ಆಗುತ್ತಿರುವ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಚಿತ್ರದ ಬಿಡುಗಡೆಯ ಘೋಷಣೆ ಆಗಿದೆಯಾದರೂ, ಪ್ರಚಾರ ಪೂರ್ಣಪ್ರಮಾಣದಲ್ಲಿ ಶುರುವೇ ಆಗಿಲ್ಲ.
‘UI’ ವಿಚಾರವನ್ನೇ ತೆಗೆದುಕೊಂಡರೆ, ಇದುವರೆಗೂ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಒಂದೊಂದು ಪತ್ರಿಕಾಗೋಷ್ಠಿ ಮಾಡಿ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಉಪೇಂದ್ರ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅದು ಬಿಟ್ಟರೆ, ಶುಕ್ರವಾರ ಒಂದಿಷ್ಟು ಚಾನಲ್‍ಗಳಿಗೆ ಸಂದರ್ಶನ ನೀಡಿದ್ದಾರೆ. ಇಂದು ಹೈದರಾಬಾದ್‍ನಲ್ಲಿ ಸಂದರ್ಶನಗಳನ್ನು ನೀಡುತ್ತಿರುವ ಉಪೇಂದ್ರ, ನಾಳೆ ಅಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾಡಿದ್ದು ಬೆಂಗಳೂರಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವಿದೆ. ಮಂಗಳವಾರ ಮತ್ತು ಬುಧವಾರಗಳಂದು ಚೆನ್ನೈ ಮತ್ತು ಮುಂಬೈನಲ್ಲಿ ಪ್ರಚಾರ ಮಾಡಿದರೆ, ಶುಕ್ರವಾರ ಚಿತ್ರದ ಬಿಡುಗಡೆ. ಇನ್ನು, ‘ಮ್ಯಾಕ್ಸ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಅದೂ ಸಹ ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ, ಬೇರೆ ರಾಜ್ಯಗಳಿಗೂ ಹೋಗಿ ಅಲ್ಲಿ ಪತ್ರಿಕಾಗೋಷ್ಠಿ ಮಾಡಿ, ಚಿತ್ರದ ಪ್ರಚಾರ ಮಾಡುವ ಶಾಸ್ತ್ರ ಮಾಡಲಾಗುತ್ತದೆ.
ಈ ವಿಷಯದಲ್ಲಿ ಬೇರೆ ಭಾಷೆಯವರನ್ನು ನೋಡಿ ಕಲಿಯಬೇಕು. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದವರು ಇಲ್ಲಿ ಬಂದು ಪತ್ರಿಕಾಗೋಷ್ಠಿಗಳನ್ನು ಮಾಡುವುದಷ್ಟೇ ಅಲ್ಲ, ಇಲ್ಲಿನ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಪ್ರೀ-ರಿಲೀಸ್ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಪ್ರಚಾರವನ್ನು ಅದೆಷ್ಟು ವ್ಯವಸ್ಥಿತವಾಗಿ ಮಾಡಲಾಗುತ್ತದೆ ಎಂದರೆ ಬರೀ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳುವುದಷ್ಟೇ ಅಲ್ಲ, ಚಿತ್ರಕ್ಕೆ ನಿರೀಕ್ಷೆ ಹುಟ್ಟುವಂತೆ ಮಾಡುತ್ತಾರೆ. ನಮ್ಮಲ್ಲಿ ನಿರೀಕ್ಷಿತ ಚಿತ್ರಗಳು ಬಿಡಿ, ಯಾವ ಚಿತ್ರದ ಬಗ್ಗೆಯೂ ಚಿತ್ರತಂಡ ಮಾಹಿತಿಗಳನನ್ನು ಹಂಚಿಕೊಳ್ಳುವುದಿಲ್ಲ. ಚಿತ್ರದ ವಿಶೇಷತೆ ಏನು, ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದಾರೆ ಮುಂತಾದ ಯಾವ ವಿಷಯಗಳನ್ನೂ ಹಂಚಿಕೊಳ್ಳುವುದಿಲ್ಲ. ಎಲ್ಲವನ್ನೂ ಚಿತ್ರದಲ್ಲೇ ನೋಡಿ ಎಂದು ಹೇಳಿ ಸುಮ್ಮನಾಗುತ್ತಾರೆ. ಎಷ್ಟೋ ಬಾರಿ ಚಿತ್ರದ ಬಗ್ಗೆ ಹೇಳುವುದಕ್ಕೆ ಚಿತ್ರತಂಡದವರಿಗೂ ಏನೂ ಇರುವುದಿಲ್ಲ, ಮಾಧ್ಯಮದವರಿಗೆ ಬರೆಯುವುದಕ್ಕೂ, ತೋರಿಸುವುದಕ್ಕೂ ಏನೂ ಇರುವುದಿಲ್ಲ. ಚಿತ್ರದ ಬಗ್ಗೆ ಯಾವೊಂದು ವಿಷಯ ಗೊತ್ತಾಗದಿದ್ದರೆ, ಪ್ರೇಕ್ಷಕರಿಗಾದರೂ ಯಾಕೆ ಚಿತ್ರ ನೋಡಬೇಕಂತನಿಸುತ್ತದೆ ಹೇಳಿ? ಹಾಗಂತ ಬೇರೆ ಭಾಷೆಯಲ್ಲಿ ಎಲ್ಲವನ್ನೂ ಹೇಳುತ್ತಾರೆ, ತೋರಿಸುತ್ತಾರೆ ಅಂತಲ್ಲ. ಮೊದಲಿಗೆ ಚಿತ್ರತಂಡದಿಂದ ಒಂದಿಷ್ಟು ನಿರೀಕ್ಷೆಗಳು ಶುರುವಾಗುತ್ತವೆ. ನಂತರ ಚಿತ್ರದ ತುಣುಕುಗಳು, ಹಾಡು, ಟೀಸರ್, ಟ್ರೇಲರ್ ಅದನ್ನು ಮುಂದುವರೆಸಿಕೊಂಡು ಹೋಗುತ್ತವೆ. ಆದರೆ, ಇಲ್ಲಿ ಮೊದಲೂ ನಿರೀಕ್ಷೆ ಇಲ್ಲ, ಆ ನಂತರವೂ ನಿರೀಕ್ಷೆ ಇಲ್ಲ ಎನ್ನುವಂತಾಗಿದೆ.
ಕಣ್ಣ ಮುಂದಿದೆ ಪುಷ್ಪ 2 ಚಿತ್ರದ ಉದಾಹರಣೆ
‘ಪುಷ್ಪ’ ಯಶಸ್ಸಿನಿಂದ ‘ಪುಷ್ಪ 2’ ಮೇಲೆ ನಿರೀಕ್ಷೆ ಹೆಚ್ಚಿರುತ್ತದೆ, ಚಿತ್ರ ಗೆಲ್ಲುತ್ತದೆ ಎಂದು ಚಿತ್ರತಂಡ ಸುಮ್ಮನೆ ಕೂರಲಿಲ್ಲ. ಚಿತ್ರೀಕರಣ ಪ್ರಾರಂಭವಾದಾಗಿನಿಂದ ಚಿತ್ರವು ನಿರಂತರವಾಗಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇತ್ತು. ಪೋಸ್ಟರ್, ದೃಶ್ಯ, ಹಾಡುಗಳ ಮೂಲಕ ನಿರೀಕ್ಷೆಗಳನ್ನು ಚಿತ್ರತಂಡ ದುಪ್ಪಟ್ಟು ಮಾಡುತ್ತಾ ಹೋಯಿತು. ಇದರಿಂದ ಚಿತ್ರತಂಡಕ್ಕೆ ಎಷ್ಟು ಪ್ಲಸ್ ಆಯಿತೆಂದರೆ, ಬಿಡುಗಡೆಗೆ ಮೂರು ತಿಂಗಳಿವೆ ಎನ್ನುವಾಗಲೇ ಹಕ್ಕುಗಳ ಮಾರಾಟದಿಂದ ಚಿತ್ರದ ನಿರ್ಮಾಪಕರು 1000 ಕೋಟಿ ರೂ. ವ್ಯಾಪಾರ ಮಾಡಿದ್ದರು. ಹಲವು ಜನಪ್ರಿಯ ಉತ್ಪನ್ನಗಳ ಜೊತೆಗೆ ಇನ್ ಬ್ರಾಂಡಿಂಗ್ ಮಾಡಿಕೊಂಡು, ಅದರಿಂದ ಒಂದಿಷ್ಟು ಲಾಭ ಬಂತು. ಅಷ್ಟಾಯಿತು ಎಂದು ಸುಮ್ಮನಿರಲಿಲ್ಲ. ಜನ ಬಂದು ಚಿತ್ರ ನೋಡುತ್ತಾರೆ ಎಂದು ಚಿತ್ರತಂಡ ಸುಮ್ಮನೆ ಕೂರಲಿಲ್ಲ. ಉತ್ತರ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಬಿಹಾರದ ಪಾಟ್ನಾದಲ್ಲಿ ನವೆಂಬರ್‍ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಬಾಲಿವುಡ್‍ನವರೇ ಉತ್ತರ ಭಾರತಕ್ಕೆ ಹೋಗಿ ಟ್ರೇಲರ್ ಬಿಡುಗಡೆ ಮಾಡುವುದು ಕಡಿಮೆ. ಹಾಗಿರುವಾಗ, ‘ಪುಷ್ಪ 2’ ಚಿತ್ರತಂಡದವರು ಹೋಗಿ ಧೂಳೆಬ್ಬಿಸಿ ಬಂದರು. ಅಷ್ಟೇ ಅಲ್ಲ, ಚಿತ್ರ ಮೊದಲ ವಾರ 1000 ಕೋಟಿ ರೂ. ಗಳಿಕೆ ಮಾಡಿದ ಖುಷಿಯಲ್ಲಿ ಚಿತ್ರತಂಡ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ, ಚಿತ್ರ ಗೆಲ್ಲಿಸಿದ ದೇಶದ ಜನರಿಗೆ ಧನ್ಯವಾದ ಹೇಳಿದರು. ಚಿತ್ರದ ಬಗ್ಗೆ ಇರುವ ನಿರೀಕ್ಷೆ ಹೆಚ್ಚು ಮಾಡಿ ಬಂದರು. ಜನವರಿ 10ರಂದು ರಾಮ್ ಚರಣ್ ತೇಜ ಅಭಿನಯದ ‘ಗೇಮ್ ಚೇಂಜರ್’ ಎಂಬ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆಯಾಗುತ್ತಿದೆ. ಜನರನ್ನು ಸೆಳೆಯುವುದಕ್ಕೆ ಶಂಕರ್ ಮತ್ತು ರಾಮ್ ಚರಣ್ ತೇಜ ಹೆಸರುಗಳು ಸಾಕು. ಹಾಗಂತ ಚಿತ್ರತಂಡ ಸುಮ್ಮನಿಲ್ಲ, ಲಕ್ನೋಗೆ ಹೋಗಿ ದೊಡ್ಡ ಕಾರ್ಯಕ್ರಮದಲ್ಲಿ ಟೀಸರ್ ಬಿಡುಗಡೆ ಮಾಡಿ ಬಂದಿದೆ.
ಬರೀ ತಲೆಗೆ ಹುಳ ಬಿಡೋದಷ್ಟೇ ಅಲ್ಲ…
‘ಪುಷ್ಪ 2’ ಚಿತ್ರ ಚೆನ್ನಾಗಿದೆಯೋ, ಇಲ್ಲವೋ ಎಂಬ ವಿಷಯ ಪಕ್ಕಕ್ಕಿರಲಿ. ಚಿತ್ರವು ಕರ್ನಾಟಕದಲ್ಲಿ ದೊಡ್ಡ ಓಪನಿಂಗ್ ಪಡೆಯುವುದಕ್ಕೆ ಮತ್ತು ಮೊದಲ ವಾರ 64 ಕೋಟಿ ರೂ. ಗಳಿಕೆ (ಮೂಲಗಳ ಪ್ರಕಾರ) ಮಾಡಿದೆ ಎಂದರೆ ಅದಕ್ಕೆ ಕಾರಣ ಈ ನಿರೀಕ್ಷೆ. ಅದಕ್ಕೆ ಪೂರಕವಾಗಿ, ಚಿತ್ರದ ಬಗ್ಗೆ ನಿರಂತರವಾಗಿ ಸುದ್ದಿಗಳು ಬರುತ್ತಲೇ ಇದ್ದವು. ದಾಖಲೆ, ಹೆಗ್ಗಳಿಕೆಗಳು ಆಗುತ್ತಲೇ ಇದ್ದವು. ಕನ್ನಡ ಚಿತ್ರಗಳ ವಿಷಯದಲ್ಲಿ ದಾಖಲೆ, ಹೆಗ್ಗಳಿಕೆ, ವೈಶಿಷ್ಟ್ಯಗಳು ಕಡಿಮೆಯೇ. ಅದನ್ನು ಚಿತ್ರತಂಡಗಳು ಹೇಳಿಕೊಳ್ಳುವುದು ಸಹ ಕಡಿಮೆಯೇ. ‘UI’ ಚಿತ್ರದಲ್ಲಿ ಹಲವು ವೈಶಿಷ್ಟ್ಯಗಳಿರುವ ಸಾಧ್ಯತೆ ಇದೆ. ಚಿತ್ರಕ್ಕೆ ಆಗಿರುವ ಕೆಲಸ, ಬಳಸಿರುವ ತಂತ್ರಜ್ಞಾನ ಇವೆಲ್ಲವೂ ದೊಡ್ಡದಾಗಿಯೇ ಇರುತ್ತದೆ. ಆದರೆ, ಚಿತ್ರತಂಡದವರು ಚಿತ್ರದ ಬಗ್ಗೆ ಮಾತನಾಡುವುದಕ್ಕೇ ರೆಡಿ ಇರುವುದಿಲ್ಲ. ವಿವರಿಸುವ ಮನಸ್ಥಿತಿ ಇಲ್ಲವೇ ಇಲ್ಲ. ಹಾಗಾಗಿ, ಎರಡೂವರೆ ವರ್ಷಗಳಿಂದ ನಾನು, ನೀವು, ತಲೆಗೆ ಹುಳ ಇಂಥ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಬರೀ ‘UI’ ಒಂದೇ ಅಲ್ಲ, ಬಹಳಷ್ಟು ಕನ್ನಡ ಚಿತ್ರಗಳ ಪತ್ರಿಕಾಗೋಷ್ಠಿ ಮತ್ತು ಕಾರ್ಯಕ್ರಮಗಳಲ್ಲಿ ಕಲಾವಿದರು ಮತ್ತು ತಂತ್ರಜ್ಞರು ಸಹಕಾರ, ಪ್ರೋತ್ಸಾಹ, ಬೆಂಬಲಗಳ ಬಿಟ್ಟು ಬೇರೆ ಮಾತನಾಡುವುದಿಲ್ಲ.
ಪ್ರಮೋಷನ್‌ನಲ್ಲಿ ಸದಾ ಹಿಂದೆ..
ಇವತ್ತು ಪರಿಸ್ಥಿತಿ ಬದಲಾಗಿದೆ. ಚಿತ್ರಗಳನ್ನು ಮಾಡೋದು ಮುಖ್ಯವಲ್ಲ, ಜನರಿಗೆ ತಲುಪಿಸುವುದು ಬಹಳ ಮುಖ್ಯ. ಅದರಲ್ಲೂ ಪ್ಯಾನ್ ಇಂಡಿಯಾ ಚಿತ್ರಗಳೆಂದರೆ ಇನ್ನೂ ಜವಾಬ್ದಾರಿ ಹೆಚ್ಚು. ಎಷ್ಟೋ ಚಿತ್ರಗಳು ಸರಿಯಾಗಿ ರಾಜ್ಯಕ್ಕೇ ಮುಟ್ಟುವುದಿಲ್ಲ. ಹಾಗಿರುವಾಗ ಬೇರೆ ರಾಜ್ಯಗಳಿಗೆ ಮುಟ್ಟಿಸುವುದು ಇನ್ನೂ ಕಷ್ಟ. ‘ಮಾರ್ಟಿನ್’ ಚಿತ್ರದ ಬಿಡುಗಡೆಗೆ ಎರಡು ತಿಂಗಳಿದೆ ಎನ್ನುವಾಗ ಚಿತ್ರತಂಡ ಮುಂಬೈನಲ್ಲಿ ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿ ಮಾಡಿ ಸುಮ್ಮನಾಯಿತು. ಬಿಡುಗಡೆ ಸಮಯದಲ್ಲಿ ಬೇರೆ ರಾಜ್ಯಗಳಲ್ಲಿ ಸುದ್ದಿಯೂ ಆಗಲಿಲ್ಲ, ಸದ್ದೂ ಆಗಲಿಲ್ಲ. ಈಗ ‘UI’ ಮತ್ತು ‘ಮ್ಯಾಕ್ಸ್’ ಚಿತ್ರಗಳು ಬೇರೆ ರಾಜ್ಯಗಳತ್ತ ಹೊರಟಿವೆ. ಈ ಕಡಿಮೆ ಸಮಯದಲ್ಲಿ ಹೊರರಾಜ್ಯಗಳಲ್ಲಿ ಚಿತ್ರ ಎಷ್ಟು ಜನರನ್ನು ಮುಟ್ಟುವುದಕ್ಕೆ, ತಟ್ಟುವುದಕ್ಕೆ ಸಾಧ್ಯವೋ ಗೊತ್ತಿಲ್ಲ. ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡೋದಷ್ಟೇ ಮುಖ್ಯ ಅಲ್ಲ, ಜನರಿಗೆ ಹೇಗೆ ತಲುಪಿಸಬೇಕು ಎಂದು ಚಿತ್ರತಂಡದವರು ಅರ್ಥ ಮಾಡಿಕೊಂಡರೆ, ಆಗ ಕನ್ನಡ ಚಿತ್ರಗಳು ಇನ್ನಷ್ಟು ಜನರನ್ನು ತಲುಪಿದಂತಾಗುತ್ತದೆ.