Urigowda Nanjegowda: 'ಉರಿಗೌಡ- ನಂಜೇಗೌಡ' ಚಿತ್ರಕ್ಕೆ ನಿರ್ದೇಶಕರು ಫಿಕ್ಸ್, ಫಸ್ಟ್ ಲುಕ್ ರಿಲೀಸ್, ಮುಹೂರ್ತಕ್ಕೂ ದಿನಾಂಕ ನಿಕ್ಕಿ..
ಬಿಜೆಪಿ ರಾಜಕಾರಣಿಗಳಾದ ಆರ್. ಅಶೋಕ್, ಸಿಟಿ ರವಿ, ಮುನಿರತ್ನ ಮತ್ತು ಸಿ.ಎನ್ ಅಶ್ವತ್ಥ ನಾರಾಯಣ್ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ 'ಉರಿಗೌಡ- ನಂಜೇಗೌಡ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.
Urigowda Nanjegowda Muhurtha: ಉರಿಗೌಡ ಮತ್ತು ನಂಜೇಗೌಡ ಟಿಪ್ಪುವನ್ನು ಹತ್ಯಗೈದ ಒಕ್ಕಲಿಗ ವೀರರೆಂದು ಬಿಜೆಪಿ ಹೇಳಿಕೆ ನೀಡಿತ್ತು. ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದವು. ಸಿನಿಮಾ ಮಾಡುವುದಾಗಿಯೂ ನಿರ್ಮಾಪಕ ಮತ್ತು ಸಚಿವ ಮುನಿರತ್ನ ಶೀರ್ಷಿಕೆ ನೋಂದಣಿ ಮಾಡಿಸಿದ್ದರು. ಇದೀಗ ಸದ್ದಿಲ್ಲದೆ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ನಿರ್ದೇಶಕರೂ ಫಿಕ್ಸ್ ಆಗಿದ್ದಾರೆ!
'ಉರಿಗೌಡ- ನಂಜೇಗೌಡ' ಹೆಸರುಗಳು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದಂತೆ, ಗುರುವಾರವಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ 'ಉರಿಗೌಡ- ನಂಜೇಗೌಡ' ಹೆಸರನ್ನೂ ನೋಂದಣಿ ಮಾಡಿಸಿದ್ದರು ಮುನಿರತ್ನ. ಚಂದನವನಲ್ಲಿ ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ದೊಡ್ಡ ಬಜೆಟ್‌ನ ಹಲವು ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕ ಮುನಿರತ್ನ, ಇದೀಗ ಮುಂದುವರಿದು ಆ ಸಿನಿಮಾ ಕೆಲಸಗಳಿಗೂ ಚಾಲನೆ ನೀಡಿದ್ದಾರೆ.
ನಿರ್ದೇಶಕರು ಯಾರು?
ಬಿಜೆಪಿ ಪ್ರಕಾರ ಐತಿಹಾಸಿಕ ಹಿನ್ನೆಲೆಯುಳ್ಳ ಈ 'ಉರಿಗೌಡ- ನಂಜೇಗೌಡ' ಚಿತ್ರಕ್ಕೀಗ ನಿರ್ದೇಶಕರನ್ನು ಅಂತಿಮ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ಅಷ್ಟೇ ಅಲ್ಲ ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಆಗಿದ್ದು, ಮುಹೂರ್ತಕ್ಕೂ ಸಮಯ ನಿಕ್ಕಿಯಾಗಿದೆ. ಆರ್. ಎಸ್ ಗೌಡ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಸಚಿವ. ಡಾ. ಸಿ.ಎನ್. ಅಶ್ವತ್ಥನಾರಾಯಣ್ ಚಿತ್ರಕಥೆ ಒದಗಿಸಿದರೆ, ಗೋಪಿ ಕುರುಕ್ಷೇತ್ರ ಕಲಾ ನಿರ್ದೇಶಕರಾಗಿದ್ದಾರೆ. ಸದ್ಯಕ್ಕೆ ಈ ವಿಚಾರಗಳನ್ನು ಒಳಗೊಂಡ ಹೊಸ ಪೋಸ್ಟರ್ ಅನ್ನು ನಿರ್ಮಾಪಕ ಮುನಿರತ್ನ ಹಂಚಿಕೊಂಡಿದ್ದಾರೆ. ಮೇ 18ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ನೆರವೇರಲಿದೆ. ವೃಷಭಾದ್ರಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಅಚ್ಚರಿ ಏನೆಂದರೆ ಆರ್ ಅಶೋಕ್ ಮತ್ತು ಸಿಟಿ ರವಿ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
1755-1799ರ ಅವಧಿಯಲ್ಲಿ ನಡೆದ ಸತ್ಯಘಟನೆ..
'ಉರಿಗೌಡ- ನಂಜೇಗೌಡ' ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿದ್ದು, ಪೋಸ್ಟರ್‌ನಲ್ಲಿ 1755-1799ರ ಅವಧಿಯಲ್ಲಿ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯ ಕತೆ ಎಂದೂ ನಮೂದಿಸಲಾಗಿದೆ. ಹಾಗಾದರೆ ಈ ಚಿತ್ರದ ಹೀರೋ ಯಾರು? ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ? ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೇ ತಿಂಗಳಲ್ಲಿ ನಡೆಯುವ ಮುಹೂರ್ತದ ವೇಳೆಯೇ ಈ ಚಿತ್ರದ ತಾರಾಗಣವನ್ನು ರಿವೀಲ್ ಮಾಡಲಿದ್ದಾರೆ ಮುನಿರತ್ನ.
ಚೇತನ್ ಹೇಳಿದ್ದೇನು?
ಉರಿಗೌಡ ನಂಜೇಗೌದ ಚಿತ್ರ ಘೋಷಣೆ ಆಗುತ್ತಿದ್ದಂತೆ ನಟ ಚೇತನ್ ಅಹಿಂಸಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ. "ಮುನಿರತ್ನ 'ಉರಿಗೌಡ- ನಂಜೇಗೌಡ' ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ ಮತ್ತು ಕಾಲ್ಪನಿಕ ಜೋಡಿಯ ಮೇಲೆ ಚಲನಚಿತ್ರ ಮಾಡಲು ಉದ್ದೇಶಿಸಿದ್ದಾರೆ. ಸಿನಿಮಾ ಸಾಮಾನ್ಯವಾಗಿ 'ಮಾಯಾ ಪ್ರಪಂಚ' ಆಗಿದ್ದು ಅದು ಪ್ರೇಕ್ಷಕರನ್ನು ಕಪೋಲಕಲ್ಪಿತ ಸನ್ನಿವೇಶಗಳು ಮತ್ತು ಜೀವನಕ್ಕಿಂತ ದೊಡ್ಡ ಹಿಂಸೆಯ ಮೂಲಕ ರಂಜಿಸುತ್ತದೆ. ಫ್ಯಾಂಟಸಿ ಟ್ಯಾಗ್ ಟೀಮ್ ಉರಿ-ನಂಜೆ ಕನ್ನಡ ಚಲನಚಿತ್ರೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಇದೆ" ಎಂದಿದ್ದಾರೆ.
ಇದಕ್ಕೂ ಮೊದಲು ಮತ್ತೊಂದು ಪೋಸ್ಟ್ ಹಾಕಿದ್ದ ಚೇತನ್, "ಹಿಂದುತ್ವದ ಸಿದ್ಧಾಂತವು ದ್ವೇಷ ಮತ್ತು ಸುಳ್ಳಿನ ಮೇಲೆ ಕಟ್ಟಲ್ಪಟ್ಟಿದೆ. ಕರ್ನಾಟಕದ ಮುಸ್ಲಿಂ ಮೂಲದ ಐಕಾನ್ ಟಿಪ್ಪುವನ್ನು ಬ್ರಿಟಿಷ್ ಸೈನಿಕರ ಬದಲು ಉರಿಗೌಡ ಮತ್ತು ನಂಜೇಗೌಡರು ಕೊಂದರು ಎಂಬುದು ಹಿಂದುತ್ವದ ಸ್ವಯಂ-ಘೋಷಿತ ಕಟ್ಟುಕಥೆಯಾಗಿದೆ. ಇಂದು ಇದು ಕಾಲ್ಪನಿಕ ಉರಿಗೌಡ ಮತ್ತು ನಂಜೇಗೌಡ ಅಷ್ಟೇ, ಆದರೆ ನಾಳೆ ಇದೇ ಮಿಕ್ಕಿ (ಮೌಸ್) ಮತ್ತು ಡ್ಯಾಫಿ (ಡಕ್) ಕಾರ್ಟೂನ್‌ಗಳಾಗುವ ಸಂಭವ ಸೃಷ್ಟಿಯಾಗಬಹುದು" ಎಂದಿದ್ದರು.