Rishabh Pant: ಸಿದ್ಧಬಲಿ ಬಾಬಾ ವಿಶೇಷ ಅನುಗ್ರಹ ಕರುಣಿಸಲಿ, ಪೋಸ್ಟ್ ಹಂಚಿಕೊಂಡ ಮಿ.ಐರಾವತ ನಟಿಯ ತಾಯಿ ಮೀರಾ ರೌಟೇಲಾ, ನೆಟಿಜನ್ಸ್ ಏನಂದ್ರು?
ಕೆಲವು ದಿನಗಳ ಹಿಂದೆ ಊರ್ವಶಿ ರೌಟೇಲಾ (Urvashi Rautela) ಹಾಗೂ ರಿಷಭ್ ಪಂತ್ (Rishabh Pant) ನಡುವೆ ಸೋಷಿಯಲ್ ಮೀಡಿಯಾ ವಾರ್ ನಡೆದಿತ್ತು. ಬಾಲಿವುಡ್ (Bollywood) ಕಾರ್ಯಕ್ರಮವೊಂದರಲ್ಲಿ ಊರ್ವಶಿ ರೌಟೇಲಾ, ಆರ್‌ಪಿ ಎಂಬ ಹೆಸರು ಪ್ರಸ್ತಾಪಿಸಿದ್ದರು.
ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ (Rishabh Pant)ಡಿಸೆಂಬರ್ 30 ರಂದು ದೆಹಲಿಯಿಂದ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯಕ್ಕೆ ರಿಷಭ್ ಪಂತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಷಭ್ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ರಿಷಭ್ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ರಿಷಭ್ , ಕಾರಿನ ಡೋರ್ ಗಾಜು ಒಡೆದು ಹೊರ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಷಭ್ ಪಂತ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ರೂರ್ಕಿ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ನುರಿತ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ರಿಷಭ್ ಪಂತ್ ಆದಷ್ಟು ಬೇಗ ಗುಣಮುಖರಾಗಿ ವಾಪಸ್ ಬನ್ನಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾ ಆಟಗಾರರು ಕೂಡಾ ವಿಡಿಯೋ ಮೂಲಕ ರಿಷಭ್, ಶೀಘ್ರ ಚೇತರಿಕೆಗಾಗಿ ವಿಶ್ ಮಾಡಿದ್ದರು. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಾಯಿ ಕೂಡಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಿಷಭ್, ಆದಷ್ಟು ಬೇಗ ಮೊದಲಿನಂತಾಗಿ ಎಂದು ಬರೆದುಕೊಂಡಿದ್ದಾರೆ.
ರಿಷಭ್ ಪಂತ್ ಫೋಟೋವೊಂದನ್ನು ಹಂಚಿಕೊಂಡಿರುವ ಊರ್ವಶಿ ರೌಟೇಲಾ ತಾಯಿ ಮೀರಾ ರೌಟೇಲಾ, ''ಸೋಷಿಯಲ್ ಮೀಡಿಯಾ ವದಂತಿ ಒಂದು ಕಡೆಯಾದರೆ, ನೀವು ಆರೋಗ್ಯವಂತರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತರಾಖಂಡದ ಹೆಸರನ್ನು ಕೊಂಡೊಯ್ಯಬೇಕಿರುವುದು ಮತ್ತೊಂದು ಕಡೆ, ಸಿದ್ಧಬಲಿ ಬಾಬಾ ನಿಮ್ಮ ಮೇಲೆ ವಿಶೇಷ ಅನುಗ್ರಹ ಕರುಣಿಸಲಿ. ನೀವೆಲ್ಲರೂ ಕೂಡಾ ರಿಷಭ್‌ಗಾಗಿ ಪ್ರಾರ್ಥನೆ ಮಾಡಿ'' ಎಂದು #Godblessyou #RishabhPant ಹ್ಯಾಷ್ ಟ್ಯಾಗ್ ಜೊತೆ ಬರೆದುಕೊಂಡಿದ್ದಾರೆ. ಮೀರಾ ರೌಟೇಲಾ ಪೋಸ್ಟ್ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಅಮ್ಮನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ಊರ್ವಶಿ ಈ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಊರ್ವಶಿ ರೌಟೇಲಾ ಹಾಗೂ ರಿಷಭ್ ಪಂತ್ ನಡುವೆ ಸೋಷಿಯಲ್ ಮೀಡಿಯಾ ವಾರ್ ನಡೆದಿತ್ತು. ಬಾಲಿವುಡ್ ಕಾರ್ಯಕ್ರಮವೊಂದರಲ್ಲಿ ಊರ್ವಶಿ ರೌಟೇಲಾ, ಆರ್‌ಪಿ ಎಂಬ ಹೆಸರು ಪ್ರಸ್ತಾಪಿಸಿದ್ದರು. ''ನಾನು ದೆಹಲಿಯಲ್ಲಿ ಶೋವೊಂದಕ್ಕೆ ತೆರಳಲು ರೆಡಿ ಆಗುತ್ತಿದ್ದಾಗ ಮಿಸ್ಟರ್ ಆರ್‌ಪಿ, ನನ್ನನ್ನು ಭೇಟಿ ಆಗಲು ಬಂದಿದ್ದರು. ಆದರೆ ನಾನು ಬಹಳ ದಣಿದಿದ್ದು ನಿದ್ರೆಗೆ ಜಾರಿದೆ. ಆರ್‌ಪಿಯನ್ನು ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ. ನಂತರ ನನ್ನ ಮೊಬೈಲ್‌ಗೆ ಬಹಳ ಮಿಸ್ಡ್ ಕಾಲ್ ಬಂದಿದ್ದವು. ನನಗಾಗಿ ಬಂದಿದ್ದ ಆರ್‌ಪಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂಬುದು ನನಗೆ ಬೇಸರವಾಯ್ತು, ಆದ್ದರಿಂದ ನಾನು ಮುಂಬೈಗೆ ಬಂದಾಗ ಭೇಟಿ ಆಗೋಣ ಎಂದು ಅವರಿಗೆ ರಿಪ್ಲೇ ಮಾಡಿದ್ದೆ'' ಎಂದು ಹೇಳಿದ್ದರು.
ಈ ವಿಡಿಯೋ ಕ್ಲಿಪ್ಪಿಂಗ್ ಬಹಳ ವೈರಲ್ ಆಗಿತ್ತು. ಇದೇ ವಿಚಾರಕ್ಕೆ ರಿಷಭ್ ಪಂತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದರು. ''ಸಂದರ್ಶನಗಳಲ್ಲಿ ಸುಳ್ಳು ಹೇಳುವ ಜನರನ್ನು ನೋಡಿದರೆ ನನಗೆ ತಮಾಷೆ ಎನ್ನಿಸುತ್ತದೆ. ಬಿಟ್ಟಿ ಪ್ರಚಾರಕ್ಕಾಗಿ ಕೆಲವರು ಹೀಗೆಲ್ಲಾ ಮಾತನಾಡುತ್ತಾರೆ. ದೇವರು ನಿಮಗೆ ಒಳ್ಳೆಯದು ಮಾಡಲಿ, ಆದರೆ ಅಕ್ಕಾ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಸುಳ್ಳಿಗೂ ಒಂದು ಮಿತಿ ಇದೆ'' ಎಂದು ಪರೋಕ್ಷವಾಗಿ ಊರ್ವಶಿಯನ್ನು ಉದ್ದೇಶಿಸಿ ಬರೆದುಕೊಂಡಿದ್ದರು. ಇದೀಗ ಊರ್ವಶಿ ರೌಟೇಲಾ ತಾಯಿ, ರಿಷಭ್ ಗುಣಮುಖರಾಗಲಿ ಎಂದು ಬರೆದುಕೊಂಡಿರುವುದು ಮತ್ತೆ ಚರ್ಚೆಯಾಗುತ್ತಿದೆ.