ಡೊನಾಲ್ಡ್ ಟ್ರಂಪ್ ಕೇವಲ ರಾಜಕಾರಣಿ ಮಾತ್ರವಲ್ಲ, ‘ಕೆಟ್ಟ ನಟ’ ಕೂಡ ಹೌದು! ಇಲ್ಲಿವೆ ಟ್ರಂಪ್ ನಟಿಸಿದ ಹಾಲಿವುಡ್ ಸಿನಿಮಾಗಳ ಲಿಸ್ಟ್
Donald Trump Filmography: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿ ಡೊನಾಲ್ಡ್ ಟ್ರಂಪ್ ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಹಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತುಗಳಲ್ಲಿಯೂ ಕಂಡಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳ ಹೋಸ್ಟ್ ಕೂಡ ಆಗಿದ್ದರು. ಇಲ್ಲಿವೆ ನೋಡಿ ಟ್ರಂಪ್ ಫಿಲ್ಮೋಗ್ರಾಫಿ.
US Election 2024: ಅಮೆರಿಕಾ ನೆಲದಲ್ಲೀಗ ಚುನಾವಣೆ ರಣಕಣ ಜೋರಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾದ ಈ ಸಲದ ಎಲೆಕ್ಷನ್ ಮೇಲೆ ಇಡೀ ಜಗತ್ತಿನ ಕಣ್ಣಿದೆ. ಈ ಸಲದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾಗಿ ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಣದಲ್ಲಿದ್ದಾರೆ. ಅಮೆರಿಕಾ ಕಾಲಮಾನದ ಪ್ರಕಾರ (ನವೆಂಬರ್ 5) ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮತದಾನ ನಡೆಯಲಿದೆ. ಸಂಜೆ 5 ಗಂಟೆಯ ಬಳಿಕ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ. ಮತದಾರರ ಅಭಿಪ್ರಾಯಗಳು ಕೂಡ ಪ್ರಸಾರವಾಗಲಿವೆ.
ಹೀಗಿರುವಾಗಲೇ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಟ್ರಂಪ್ ಕೊಂಚ ಪ್ರಭಾವಿ. ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಇದೇ ಟ್ರಂಪ್ ಹಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ. ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳನ್ನು ನಿರ್ಮಾಣ ಮಾಡಿದ್ದಾರೆ. ಜತೆಗೆ ಟಿವಿ ಶೋಗಳನ್ನು ನಡೆಸಿದ್ದಾರೆ. 2004 ರಿಂದ 2015ರವರೆಗೆ ಟಿವಿ ಕಾರ್ಯಕ್ರಮಗಳಾದ ದಿ ಅಪ್ರೆಂಟಿಸ್ ಮತ್ತು ದಿ ಸೆಲೆಬ್ರಿಟಿ ಅಪ್ರೆಂಟಿಸ್ ಅನ್ನು ಸ್ವತಃ ನಿರ್ಮಿಸಿ, ಹೋಸ್ಟ್ ಮಾಡಿದ್ದರು ಡೊನಾಲ್ಡ್ ಟ್ರಂಪ್. ಹಾಗಾದರೆ ಟ್ರಂಪ್ ನಟನೆಯ ಸಿನಿಮಾಗಳು ಯಾವವು? ಇಲ್ಲಿದೆ ನೋಡಿ ವಿವರ.
ಟ್ರಂಪ್ ನಟಿಸಿದ ಹಾಲಿವುಡ್ ಸಿನಿಮಾಗಳು
ಡೊನಾಲ್ಡ್ ಟ್ರಂಪ್ 1989ರಲ್ಲಿ ಘೋಸ್ಟ್ ಕಾಂಟ್ ಡೂ ಇಟ್, ಹೋಮ್ ಅಲೋನ್ 2; ಲಾಸ್ಟ್ ಇನ್ ನ್ಯೂಯಾರ್ಕ್, ದಿ ಲಿಟಲ್ ರಾಸ್ಕಲ್ಸ್, ಅಕ್ರಾಸ್ ದಿ ಸೀ ಆಫ್ ಟೈಮ್, ಎಡ್ಡಿ, ದಿ ಅಸೋಸಿಯೇಟ್, 54, ಸೆಲೆಬ್ರಿಟಿ, ನ್ಯೂಯಾರ್ಕ್; ದಿ ಡಾಕ್ಯುಮೆಂಟರಿ ಫಿಲಂ, ಜೂಲ್ಯಾಂಡರ್, ಟೂ ವೀಕ್ಸ್ ನೋಟೀಸ್, ಲೀ ಸರ್ಕ್ಯೂ; ಎ ಟೇಬಲ್ ಇನ್ ಹೆವನ್, ಸ್ಮಾಲ್ ಪೊಟ್ಯಾಟೋಸ್, ವಾಲ್ ಸ್ಟ್ರೀಟ್ ಎಂಬ ಹಾಲಿವುಡ್ ಸಿನಿಮಾಗಳಲ್ಲಿ ಡೊನಾಲ್ಡ್ ಟ್ರಂಪ್ ನಟಿಸಿದ್ದಾರೆ.
ಕಿರುತೆರೆಯಲ್ಲೂ ಮೋಡಿ
ದಿ ಜೆಫರ್‌ಸನ್, ಐ ವಿಲ್ ಟೇಕ್ ಮ್ಯಾನ್‌ಹೆಟನ್, ಸೇಂಟ್ ಅಂಡ್ ಗ್ರೀವೈಸ್, ದಿ ಫ್ರೆಶ್ ಫ್ರಿನ್ಸ್ ಆಫ್ ಬೆಲ್ ಏರ್, ದಿ ನ್ಯಾನಿ, ಸಡನ್ಲಿ ಸುಸಾನ್, ದಿ ಡ್ಯೂವ್ ಕ್ಯಾರಿ ಶೋ, ನೈಟ್ ಮ್ಯಾನ್, ಹೋವಾರ್ಡ್ ಸ್ಟೆಮ್, ಸ್ಪಿನ್ ಸಿಟಿ, ಸೆಕ್ಸ್ ಅಂಡ್ ದಿ ಸಿಟಿ, ದಿ ಜಾಬ್ ಸೇರಿ ಇನ್ನೂ ಹತ್ತಾರು ಟಿವಿ ಶೋಗಳಲ್ಲಿಗೂ ಟ್ರಂಪ್ ನಿರೂಪಕರಾಗಿ, ಆ ಶೋಗಳ ನಿರ್ಮಾಣವನ್ನೂ ಮಾಡಿದ್ದಾರೆ. ಇವುಗಳ ಜತೆಗೆ ಸಾಕಷ್ಟು ಟಿವಿ ಜಾಹೀರಾತುಗಳಲ್ಲಿಯೂ ಟ್ರಂಪ್ ಕಾಣಿಸಿಕೊಂಡಿದ್ದಾರೆ. ಪಿಜ್ಜಾ ಹಟ್, ಮ್ಯಾಕ್ ಡೊನಾಲ್ಡ್, ಪೆಪ್ಸಿ, ಮೆಸೆ, ಒರೆಯೋ ಸೇರಿ ಇನ್ನೂ ಹಲವು ಆಡ್‌ಗಳಲ್ಲಿ ನಟಿಸಿದ್ದಾರೆ.
ಅತಿ ಕೆಟ್ಟ ನಟ ಎಂಬ ಸರಣಿ ಅವಾರ್ಡ್‌ಗಳು...
ಭಾರತೀಯ ಸಿನಿಮೋತ್ಸವಗಳಲ್ಲಿ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಅತಿ ಕೆಟ್ಟ ನಟನೆ ಎಂಬ ಪ್ರಶಸ್ತಿ ಕೊಡುವ ಪದ್ಧತಿ ಇಲ್ಲ. ಆದರೆ, ಹಾಲಿವುಡ್‌ನಲ್ಲಿ ಆ ಸಂಪ್ರದಾಯ ಇದೆ. ಅತ್ಯುತ್ತಮ ನಟ, ನಟಿ, ನಿರ್ದೇಶಕ.. ಈ ರೀತಿಯ ಪ್ರಶಸ್ತಿಯ ಜತೆಗೆ ಕೆಟ್ಟ ನಟ, ಕೆಟ್ಟ ಪೋಷಕ ನಟ, ಅತೀ ಕೆಟ್ಟ ನಟ ನಟ ಪ್ರಶಸ್ತಿಗಳನ್ನೆಲ್ಲ ಹಾಲಿವುಡ್‌ನಲ್ಲಿ ನೀಡಲಾಗುತ್ತದೆ. ಅದೇ ರೀತಿ ಡೊನಾಲ್ಡ್ ಟ್ರಂಪ್ ಸಹ ಅತ್ಯುತ್ತಮ ನಟ ಎಂಬ ಪಟ್ಟದ ಬದಲು ಕೆಟ್ಟ ನಟ ಎಂಬ ಸರಣಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
1990ರಲ್ಲಿನ ಘೋಸ್ಟ್ ಕಾಂಟ್ ಡೂ ಇಟ್ ಚಿತ್ರದಲ್ಲಿ ನಟಿಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ Golden Raspberry Awards ಕಾರ್ಯಕ್ರಮದಲ್ಲಿ ಕೆಟ್ಟ ಪೋಷಕ ನಟ ಅವಾರ್ಡ್ ವಿಜೇತರಾಗಿದ್ದಾರೆ. ಅತಿ ಕೆಟ್ಟ ನಟ (Worst Actor) ಪಟ್ಟಿಯಲ್ಲಿಯೂ ಇವರು ನಾಮಿನೇಟ್ ಆಗಿದ್ದರು. ಅದಾದ ಮೇಲೆ 2019ರಲ್ಲಿ ಡೆಥ್ ಆಫ್ ಎ ನೇಷನ್ ಮತ್ತು ಫ್ಯಾರೆನ್‌ಹೀಟ್ ಚಿತ್ರದಲ್ಲಿನ ನಟನೆಗೆ ಕೆಟ್ಟ ಕಲಾವಿದ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ. ಈ ಎರಡು ಚಿತ್ರಕ್ಕೆ Worst Screen Combo ಎಂಬ ಅವಾರ್ಡ್ ಸಹ ಪಡೆದಿದ್ದಾರೆ ಟ್ರಂಪ್.