ಒಟಿಟಿಯಲ್ಲಿ ಒಂದೇ ದಿನ ಎರಡು ಪಾಪ್ಯುಲರ್ ಆಕ್ಷನ್ ಸಿನಿಮಾಗಳ ಆಗಮನ; ಒಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ, ಇನ್ನೊಂದು ಪ್ರೈಮ್‌ನಲ್ಲಿ
ಒಟಿಟಿ ವೀಕ್ಷಕರಿಗೆ ಈ ವಾರ ಬ್ಲಾಕ್ ಬಸ್ಟರ್ ವಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಈ ವಾರ ಹತ್ತಾರು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಹಿಟ್ ಆದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು ಇದೇ ವಾರ ಆಗಮಿಸುತ್ತಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಮಲಯಾಳಂ ಆ್ಯಕ್ಷನ್ ಥ್ರಿಲ್ಲರ್ ಎಲ್2: ಎಂಪುರಾನ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ದಾಖಲೆ ನಿರ್ಮಿಸಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್‌ಲಾಲ್ ನಟಿಸಿರುವ ಆ ಚಿತ್ರ ಅದ್ಭುತ ಯಶಸ್ಸು ಕಂಡಿತು. ಅದೇ ರೀತಿ ತಮಿಳಿನಲ್ಲಿ ತೆರೆಕಂಡ ಚಿಯಾನ್ ವಿಕ್ರಮ್ ನಟಿಸಿರುವ ಆ್ಯಕ್ಷನ್ ಥ್ರಿಲ್ಲರ್ ʻವೀರ ಧೀರ ಸೂರನ್: ಪಾರ್ಟ್ 2ʼ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಎರಡು ಚಿತ್ರಗಳು ಇದೀಗ ಒಂದೇ ದಿನ ಬೇರೆ ಬೇರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿವೆ. ಸ್ಟ್ರೀಮಿಂಗ್‌ನಲ್ಲಿ ಪೈಪೋಟಿಗೆ ಸಿದ್ಧವಾಗಿವೆ. ಈ ಎರಡು ಚಿತ್ರಗಳ ಒಟಿಟಿ ವೇದಿಕೆ ಕುರಿತ ಮಾಹಿತಿ ಇಲ್ಲಿದೆ.
ಎಲ್ 2: ಎಂಪುರಾನ್
ಭಾರಿ ನಿರೀಕ್ಷೆಗಳೊಂದಿಗೆ ಬಂದ ಮಲಯಾಳಂ ಚಿತ್ರ ‘ಎಲ್2: ಎಂಪುರಾನ್’ ಅದೇ ರೀತಿಯ ಯಶಸ್ಸು ಕಂಡಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾ ತೆರೆಕಂಡಿತ್ತು. ಮೋಹನ್‌ಲಾಲ್ ನಟಿಸಿರುವ ಈ ಚಿತ್ರ ಮಾರ್ಚ್ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದಾರೆ. ಲೂಸಿಫರ್ ಚಿತ್ರಕ್ಕೆ ಸೀಕ್ವೆಲ್ ಆಗಿ ಬಂದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಈ ವರೆಗೂ ಯಾರೂ ಮಾಡದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಬರೋಬ್ಬರಿ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ನೂತನ ರೆಕಾರ್ಡ್ ತನ್ನದಾಗಿಸಿಕೊಂಡಿದೆ.
ಇದೀಗ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ʻಎಲ್2: ಎಂಪುರಾನ್ʼ ಸಿನಿಮಾ ಒಟಿಟಿಗೆ ಬರುತ್ತಿದೆ. ಈ ಗುರುವಾರ (ಏಪ್ರಿಲ್ 24) ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿಲಿದೆ. ಮಲಯಾಳಂ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ಹಿಟ್ ಆದಂತೆ ಒಟಿಟಿಯಲ್ಲಿಯೂ ಹೆಚ್ಚು ವೀಕ್ಷಣೆ ಕಾಣುವ ಸಾಧ್ಯತೆ ಇದೆ. ಎಲ್2: ಎಂಪುರಾನ್ ಚಿತ್ರದಲ್ಲಿ ಮೋಹನ್‌ಲಾಲ್, ಪೃಥ್ವಿರಾಜ್ ಜೊತೆಗೆ ಅಭಿಮನ್ಯು ಸಿಂಗ್, ಮಂಜು ವಾರಿಯರ್, ಟೊವಿನೊ ಥಾಮಸ್, ಇಂದ್ರಜಿತ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಒಂದಷ್ಟು ವಿವಾದಗಳ ಮೂಲಕ ಸುದ್ದಿಯಾಗಿದ್ದ ಈ ಸಿನಿಮಾ, ಅದಾದ ಮೇಲೆ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ.
ವೀರ ಧೀರ ಸೂರನ್: ಪಾರ್ಟ್ 2
ʻವೀರ ಧೀರ ಸೂರನ್: ಪಾರ್ಟ್ 2ʼ ಚಿತ್ರವೂ ಮಾರ್ಚ್ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಚಿಯಾನ್ ವಿಕ್ರಮ್ ನಟಿಸಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಸ್.ಯು. ಅರುಣ್ ಕುಮಾರ್ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿತ್ತು. ಮೂಲ ತಮಿಳಿನ ಜತೆಗೆ ಕನ್ನಡ, ತೆಲುಗಿನಲ್ಲಿಯೂ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ವಿಕ್ರಮ್ ಅವರ ನಟನೆ ಜತೆಗೆ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರ ಮೈನವಿರೇಳಿಸಿದ್ದವು. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೂ ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡಲಿಲ್ಲ ಈ ಸಿನಿಮಾ. ಕೇವಲ 60 ಕೋಟಿ ಕಲೆಕ್ಷನ್ ಮಾಡಲಷ್ಟೇ ಶಕ್ತವಾಯಿತು.
ಚಿತ್ರಮಂದಿರಗಳಲ್ಲಿ ಹೆಚ್ಚು ಸದ್ದು ಮಾಡದ ಈ ಸಿನಿಮಾ ಒಟಿಟಿಯಲ್ಲಾದರೂ ಪಾಸಿಟಿವ್ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಅಂದಹಾಗೆ ವೀರ ಧೀರ ಸೂರನ್ ಸಿನಿಮಾ ಏಪ್ರಿಲ್ 24ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ತಮಿಳು ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಒಟ್ಟಿನಲ್ಲಿ ಒಂದೇ ದಿನ ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಎಲ್2 ಎಂಪುರಾನ್, ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ವೀರ ಧೀರ ಸೂರನ್ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಈ ಎರಡರ ಪೈಕಿ ಯಾವ ಸಿನಿಮಾ ಹೆಚ್ಚು ವೀಕ್ಷಣೆ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.


