Anantnag on wife Gayatri: ಪಂಜಾಬಿ ಮೂಲದ ನಟಿ ಗಾಯತ್ರಿ ಸಿನಿಮಾದಿಂದ ದೂರಾಗಿದ್ದೇಕೆ...ಪತ್ನಿ ತ್ಯಾಗದ ಬಗ್ಗೆ ಅನಂತ್‌ನಾಗ್ ಹೇಳಿದ್ದೇನು..?
ಗಾಯತ್ರಿ ಈಗ ಸಂಪೂರ್ಣ ಗೃಹಿಣಿ. ಮನೆಯ ಜವಾಬ್ದಾರಿ, ನನ್ನ ಸಿನಿಮಾ ಕೆಲಸಗಳು ಎಲ್ಲವನ್ನೂ ಗಾಯತ್ರಿ ನಿಭಾಯಿಸುತ್ತಿದ್ದಾರೆ. ಹೇಳಬೇಕೆಂದರೆ ನಾನು ಆಕ್ಟಿಂಗ್ ಬಿಟ್ಟು ಬೇರೇನೂ ಕೆಲಸ ಮಾಡುವುದಿಲ್ಲ. ಆಕೆಯದ್ದು 75% ಕೆಲಸವಾದ್ರೆ ನನ್ನದು 25% ಮಾತ್ರ'' ಎಂದು ಪತ್ನಿಯನ್ನು ಹೊಗಳಿದ್ದಾರೆ.
ಅನಂತ್‌ನಾಗ್, ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಟ. ಇವರ ನಟನೆಗೆ, ವ್ಯಕ್ತಿತ್ವಕ್ಕೆ ಮರುಳಾಗದವರೇ ಇಲ್ಲ. ಮೊದಲ ಚಿತ್ರದಿಂದ ಇಲ್ಲಿವರೆಗೂ ಅದೇ ಹುಮ್ಮಸ್ಸಿನಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ 74 ವರ್ಷದ ಈ ಹಿರಿಯ ನಟ ಇಂದಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.
ಸದ್ಯಕ್ಕೆ ಅನಂತ್‌ನಾಗ್ ಅಭಿನಯದ 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಚಿತ್ರತಂಡ ಈಗಾಗಲೇ ಟ್ರೇಲರ್ ಬಿಡುಗಡೆ ಮಾಡಿದ್ದು ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದೆ. ಇತ್ತೀಚೆಗೆ ನಟಿ, ನಿರೂಪಕಿ ಅನುಶ್ರೀ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾಗೆ ಸಂಬಂಧಿಸಿದಂತೆ ಹಿರಿಯ ನಟ ಅನಂತ್‌ನಾಗ್ ಹಾಗೂ ಸ್ಯಾಂಡಲ್‌ವುಡ್ ದೂದ್ ಪೇಡಾ ಎಂದೇ ಹೆಸರಾಗಿರುವ ದಿಗಂತ್, ಅವರ ಸಂದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅನಂತ್‌ನಾಗ್, ತಮ್ಮ ವೈಯಕ್ತಿಕ ಹಾಗೂ ಸಿನಿಮಾಗೆ ಸಂಬಂಧಿಸಿದ ಅನೇಕ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಮ್ಮೆಲ್ಲರಿಗೂ ತಿಳಿದಿರುವಂತೆ ಅನಂತ್‌ನಾಗ್ ಅವರ ಪತ್ನಿ ಗಾಯತ್ರಿ ಕೂಡಾ ಚಿತ್ರರಂಗದಲ್ಲಿ ನಟಿಯಾಗಿ ಹೆಸರು ಮಾಡಿದ್ದವರು. ಮೂಲತ: ಪಂಜಾಬಿ ಕುಟುಂಬಕ್ಕೆ ಸೇರಿದ ಅವರು, ಬಾಲಿವುಡ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. 'ಆಟೋರಾಜ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಗಾಯತ್ರಿ ವಸಂತಗೀತ, ಆರದಗಾಯ, ಕುಲಪುತ್ರ, ಇಂದಿನ ರಾಮಾಯಣ, ಶ್ವೇತಗುಲಾಬಿ, ಜ್ವಾಲಾಮುಖಿ, ಹೆಂಡ್ತಿ ಬೇಕು ಹೆಂಡ್ತಿ, ಅದೇ ಕಣ್ಣು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಹೆಸರು ಮಾಡಿದ್ದಾರೆ. ಕನ್ನಡ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳಿನಲ್ಲಿ ಕೂಡಾ ಅವರು ಖ್ಯಾತ ನಟರೊಂದಿಗೆ ನಟಿಸಿದ್ದಾರೆ. ಅದರೆ ಅನಂತ್‌ನಾಗ್ ಅವರನ್ನು ಮದುವೆಯಾದ ನಂತರ ಗಾಯತ್ರಿ, ಚಿತ್ರರಂಗದಿಂದ ದೂರಾದರು. ಸಿನಿ ಬದುಕಿನಿಂದ ದೂರಾಗಿದ್ದು ಮಾತ್ರವಲ್ಲದೆ, ಎಲ್ಲಿಯೂ ಕ್ಯಾಮರಾ ಎದುರು ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಅಪರೂಪಕ್ಕೆ ಒಮ್ಮೆ ಆಗಲೋ, ಈಗಲೋ ಒಮ್ಮೆ ಕಾಣಸಿಗುತ್ತಾರೆ.
ಕನ್ನಡವೇ ಬಾರದ ನಟಿ ಗಾಯತ್ರಿ ನಂತರ ಕನ್ನಡ ಕಲಿತರು, ಇಲ್ಲಿನ ಜನರ ಅಭಿಮಾನ ಕಂಡು ಮೂಕವಿಸ್ಮಿತರಾದರು. ಕನ್ನಡ ಚಿತ್ರರಂಗದಲ್ಲಿ ಮೇರುನಟಿಯಾಗಿ ಹೆಸರು ಮಾಡುವ ಅವಕಾಶವಿದ್ದರೂ ಗಾಯತ್ರಿಯವರು ಮಾತ್ರ ಅನಂತ್‌ನಾಗ್ ಅವರ ಕೈ ಹಿಡಿದ ನಂತರ ನಟನೆಯಿಂದ ಸಂಪೂರ್ಣ ದೂರಾದರು. 1984 ರಲ್ಲಿ ತೆರೆ ಕಂಡ 'ಸುಖ ಸಂಸಾರಕ್ಕೆ 12 ಸೂತ್ರಗಳು' ಚಿತ್ರದಿಂದ ಆರಂಭವಾದ ಗಾಯತ್ರಿ-ಅನಂತ್‌ನಾಗ್ ಲವ್ ಸ್ಟೋರಿ ಈಗ ಸುಖದ ಸಂಸಾರವಾಗಿ ಸಾಗುತ್ತಿದೆ. ಪತಿ ಅನಂತ್‌ನಾಗ್ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಾ ಗಾಯತ್ರಿಯವರು ಬ್ಯುಸಿಯಾಗಿದ್ದಾರೆ. 1990 ರಲ್ಲಿ ಬಿಡುಗಡೆ ಆದ 'ರಾಮ ರಾಜ್ಯದಲ್ಲಿ ರಾಕ್ಷಸರು' ಗಾಯತ್ರಿ ನಟಿಸಿದ ಕೊನೆಯ ಸಿನಿಮಾ.
ಸಂದರ್ಶನದಲ್ಲಿ ತಮ್ಮ ಪತ್ನಿಯ ತ್ಯಾಗದ ಬಗ್ಗೆ ಮಾತನಾಡಿದ ನಟ ಅನಂತ್‌ನಾಗ್. ''ಮದುವೆಯಾದಾಗ ಗಾಯತ್ರಿ ನನಗೆ ಒಂದು ಕಂಡಿಷನ್ ಹಾಕಿದ್ದರು. ನಾನು ಇನ್ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ, ನೀವೂ ಕೂಡಾ ನನಗೆ ಬಲವಂತ ಮಾಡಬಾರದು, ನನಗೆ ನಟಿಸಬೇಕು ಎಂದೆನಿಸಿದರೆ ನಾನು ನಟಿಸುತ್ತೇನೆ, ಇಲ್ಲವಾದರೆ ಇಲ್ಲ ಎಂದು ಹೇಳಿ, ಕೊನೆಗೆ ನಟನೆಯಿಂದ ದೂರ ಉಳಿದರು. ಈಗ ಆಕೆ ಸಂಪೂರ್ಣ ಗೃಹಿಣಿ. ಮನೆಯ ಜವಾಬ್ದಾರಿ, ನನ್ನ ಸಿನಿಮಾ ಕೆಲಸಗಳು ಎಲ್ಲವನ್ನೂ ಗಾಯತ್ರಿ ನಿಭಾಯಿಸುತ್ತಿದ್ದಾರೆ. ಹೇಳಬೇಕೆಂದರೆ ನಾನು ಆಕ್ಟಿಂಗ್ ಬಿಟ್ಟು ಬೇರೇನೂ ಕೆಲಸ ಮಾಡುವುದಿಲ್ಲ. ಆಕೆಯದ್ದು 75% ಕೆಲಸವಾದ್ರೆ ನನ್ನದು 25% ಮಾತ್ರ'' ಎಂದು ಪತ್ನಿಯನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ ತಾವು 14 ವರ್ಷದವರಿಂದ ಇಲ್ಲಿವರೆಗೂ ಯೋಗಾಭ್ಯಾಸ ಮಾಡುತ್ತೇನೆ ಎಂಬ ವಿಚಾರವನ್ನೂ ರಿವೀಲ್ ಮಾಡಿದ್ದಾರೆ.