Anantnag BJP Joining: ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಹಿರಿಯ ನಟ ಅನಂತ್‌ನಾಗ್ ಗೈರು.. ಕಾರಣ ಅದೇ ಇರಬಹುದಾ..?
ಕೊನೆ ಕ್ಷಣದಲ್ಲಿ ಅನಂತ್‌ನಾಗ್ ಬಿಜೆಪಿ ಸೇರುವ ನಿರ್ಧಾರವನ್ನು ಬದಲಿಸಿದ್ರಾ..? ಅಥವಾ ಬಿಜೆಪಿ ಸೇರುವ ದಿನಾಂಕವನ್ನು ಮುಂದೂಡಿದ್ದಾರಾ..? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಮಾತ್ರ ಸಿಕ್ಕಿಲ್ಲ.
ನಾನು ಮೋದಿ ಭಕ್ತ ಎಂದು ಅನೇಕ ಬಾರಿ ಬಹಿರಂಗವಾಗಿ ಹೇಳಿಕೊಂಡಿರುವ ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್, ತಾವು ಭಾರತೀಯ ಜನತಾ ಪಕ್ಷ ಸೇರುವುದಾಗಿ ಹೇಳಿದ್ದರು. ಪಕ್ಷ ಸೇರ್ಪಡೆಗೆ ಫೆಬ್ರವರಿ 22 ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮುಹೂರ್ತ ಕೂಡಾ ಫಿಕ್ಸ್ ಆಗಿತ್ತು. ಆದರೆ ನಟ ಅನಂತ್‌ನಾಗ್ ಕಾರ್ಯಕ್ರಮಕ್ಕೆ ಗೈರಾಗಿದ್ದು, ಅವರ ನಡೆ ಅನುಮಾನ ಮೂಡಿಸಿದೆ.
ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್, ಸಮ್ಮುಖದಲ್ಲಿ ಬುಧವಾರ ಸಂಜೆ 4.30ಕ್ಕೆ ಬಿಜೆಪಿ ಕಚೇರಿಯಲ್ಲಿ ಅನಂತ್‌ನಾಗ್ ಅವರು ಬಿಜೆಪಿ ಸೇರಬೇಕಿತ್ತು. ಕಾಂಗ್ರೆಸ್‌ನ ಕೆಲವು ಮಂದಿ ಬಿಜೆಪಿ ಸೇರಿದರು. ಆದರೆ ಅನಂತ್ ನಾಗ್ ಮಾತ್ರ ಕಾರ್ಯಕ್ರಮಕ್ಕೆ ಬರಲಿಲ್ಲ. ಕೊನೆ ಕ್ಷಣದಲ್ಲಿ ಅನಂತ್‌ನಾಗ್ ಬಿಜೆಪಿ ಸೇರುವ ನಿರ್ಧಾರವನ್ನು ಬದಲಿಸಿದ್ರಾ..? ಅಥವಾ ಬಿಜೆಪಿ ಸೇರುವ ದಿನಾಂಕವನ್ನು ಮುಂದೂಡಿದ್ದಾರಾ..? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದ ಉತ್ತರ ಮಾತ್ರ ಸಿಕ್ಕಿಲ್ಲ. ಆದರೆ ಫೆಬ್ರವರಿ 27 ರಂದು ಪ್ರಧಾನಿ ಮೋದಿ ಶಿವಮೊಗ್ಗ ಆಗಮಿಸಲಿದ್ದಾರೆ. ಬಹುಶ: ಆ ದಿನ ಅನಂತ್‌ನಾಗ್ ಅವರು ಮೋದಿ ಹಾಗೂ ಬಿಜೆಪಿಯ ಇತರ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಬಹುದು ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಎವರ್‌ಗ್ರೀನ್ ಹೀರೋ ನಡೆ ಸಾಕಷ್ಟು ಚರ್ಚೆಗೆ ಕಾರಣ ಆಗಿರುವುದಂತೂ ನಿಜ.
2004ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತ್‌ನಾಗ್
ಅನಂತ್ ನಾಗ್, ಜೆ.ಹೆಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ವಿಧಾನಪರಿಷತ್ ಸದಸ್ಯರಾಗಿ, ಶಾಸಕರಾಗಿ ಕೆಲಸ ಮಾಡಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೂಡಾ ಅನಂತ್ ನಾಗ್ ಸೇವೆ ಸಲ್ಲಿಸಿದ್ದಾರೆ. 2004ರಲ್ಲಿ ಜನತಾ ದಳದಿಂದ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅನಂತ್‌ನಾಗ್ ಸೋಲು ಅನುಭವಿಸಿದರು. ಅಂದಿನಿಂದ ರಾಜಕೀಯದಿಂದ ದೂರ ಉಳಿದಿದ್ದ ಅನಂತ್‌ನಾಗ್ ಇದೀಗ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಲು ಮುಂದೆ ಬಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿರುವುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ವರ್ಷ ಡಾಕ್ಟರೇಟ್ ಪದವಿ ಪಡೆದಿದ್ದ ಅನಂತ್‌ನಾಗ್
ಕನ್ನಡ ಚಿತ್ರರಂಗಕ್ಕೆ ಅನಂತ್‌ನಾಗ್ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಕಳೆದ ವರ್ಷ, ಗೌರವ ಡಾಕ್ಟರೇಟ್ ಘೋಷಿಸಿತ್ತು. ಜುಲೈ 15 ರಂದು ಕೋಲಾರದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು. ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು. ಅನಂತ್ ನಾಗ್ ಅವರ ಜೊತೆಗೆ ಖ್ಯಾತ ಶಯನಾಯಿ ವಾದಕ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯ ಎಸ್. ಬಲ್ಲೇಶ್ ಭಜಂತ್ರಿ ಅವರಿಗೆ ಸಂಗೀತ ಕ್ಷೇತ್ರಕ್ಕೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶರತ್ ಶರ್ಮಾ ಅವರಿಗೆ ಕೂಡಾ ಗೌರವ ಡಾಕ್ಟರೇಟ್ ನೀಡಲಾಗಿತ್ತು.
ಸಂಕಲ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅನಂತ್‌ನಾಗ್
ಮುಂಬೈನಲ್ಲಿದ್ದಾಗ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅನಂತ್‌ನಾಗ್, 1973 ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆಗೆ ಮಾಲ್ಗುಡಿ ಡೇಸ್, ಗರ್ವ, ಪ್ರೀತಿ ಇಲ್ಲದ ಮೇಲೆ, ಚಿಟ್ಟೆ ಹೆಜ್ಜೆ ಸೇರಿದಂತೆ ಕೆಲವೊಂದು ಧಾರಾವಾಹಿಗಳಲ್ಲಿ ಕೂಡಾ ಅನಂತ್‌ನಾಗ್ ಅಭಿನಯಿಸಿದ್ದಾರೆ.