Hamsalekha: ಹೊಸ ಸಿನಿಮಾ ಘೋಷಣೆ ಮಾಡಿದ ನಾದಬ್ರಹ್ಮ ಹಂಸಲೇಖ; ಮಜವಾಗಿದೆ ಚಿತ್ರದ ಶೀರ್ಷಿಕೆ, ಜನವರಿಯಿಂದ ಶೂಟಿಂಗ್ ಶುರು
ಸಿನಿಮಾ ಒಳ ಹೊರಗನ್ನು ಚೆನ್ನಾಗಿ ಬಲ್ಲವರಾದ ಹಂಸಲೇಖ, ಈ ಸುದೀರ್ಘ ಸಿನಿಮಾ ಪಯಣದಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ಹಾಡುಗಳಿಗೆ ಸಂಗೀತ ನೀಡುವುದರಿಂದ ಹಿಡಿದು, ಸಾಹಿತ್ಯ, ಕಥೆ, ಸಂಭಾಷಣೆಯನ್ನೂ ನೀಡಿದ್ದಾರೆ. ಆದರೆ, ಸಿನಿಮಾ ನಿರ್ದೇಶನಕ್ಕೆ ಇಳಿದಿರಲಿಲ್ಲ. ಈಗ ಸದ್ದಿಲ್ಲದೆ ತಮ್ಮ 73ನೇ ವಯಸ್ಸಿನಲ್ಲಿ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ.
Hamsalekha: ನಾದಬ್ರಹ್ಮ ಹಂಸಲೇಖ ಎಂದರೆ ಅಲ್ಲಿ ನೂರಾರು ಹಾಡುಗಳು ಕಣ್ಣಮುಂದೆ ತೇಲಿ ಬರುತ್ತವೆ. ಕಿವಿಗೂ ಇಂಪು ನೀಡುತ್ತವೆ. ಸಂಗೀತ ನಿರ್ದೇಶಕರಾಗಿ, ಹಾಡುಗಳಿಗೆ ಸಾಹಿತ್ಯ ನೀಡುವ ಮೂಲಕ ತಮ್ಮದೇ ಒಂದು ಟ್ರೆಂಡ್ ಸೆಟ್ ಮಾಡಿದ್ದ ಹಂಸಲೇಖ, ಇಂದಿಗೂ ಹೊಸ ಪೀಳಿಗೆಗೂ ಅಚ್ಚುಮೆಚ್ಚು. ಸಿನಿಮಾರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರೂ, ಹಲವು ಬೇರೆ ಬೇರೆ ವಿಭಾಗಗಳಲ್ಲಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ. ಹಾಡುಗಳಿಗೆ ಸಾಹಿತ್ಯ ಒದಗಿಸುವುದರ ಜತೆಗೆ ಬರಹಗಾರರಾಗಿ, ಚಿತ್ರಗಳಿಗೆ ಕಥೆ, ಸಂಭಾಷಣೆಯನ್ನೂ ನೀಡಿದ್ದಾರೆ. ಆದರೆ, ನಿರ್ದೇಶಕನ ಕ್ಯಾಪ್ ಮಾತ್ರ ಧರಿಸಿರಲಿಲ್ಲ. ಈಗ ಅದಕ್ಕೂ ಸಮಯ ಕೂಡಿ ಬಂದಿದೆ.
ಸಿನಿಮಾ ಒಳ ಹೊರಗನ್ನು ಚೆನ್ನಾಗಿ ಬಲ್ಲವರಾದ ಹಂಸಲೇಖ, ಈ ಸುದೀರ್ಘ ಸಿನಿಮಾ ಪಯಣದಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ಹಾಡುಗಳಿಗೆ ಸಂಗೀತ ನೀಡುವುದರಿಂದ ಹಿಡಿದು, ಸಾಹಿತ್ಯ, ಕಥೆ, ಸಂಭಾಷಣೆಯನ್ನೂ ನೀಡಿದ್ದಾರೆ. ಆದರೆ, ಸಿನಿಮಾ ನಿರ್ದೇಶನಕ್ಕೆ ಇಳಿದಿರಲಿಲ್ಲ. ಈಗ ಸದ್ದಿಲ್ಲದೆ ತಮ್ಮ 73ನೇ ವಯಸ್ಸಿನಲ್ಲಿ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಆ ಚಿತ್ರಕ್ಕೆ ಗಿಟಾರ್ ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇನ್ನೇನು ಹೊಸ ವರ್ಷ 2025ರ ಜನವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ.
ಸಿನಿಮಾ ಬಗ್ಗೆ ಹಂಸಲೇಖ ಹೇಳಿದ್ದೇನು?
ಚಂದನವನದ ಚಿಲುಮೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಂಸಲೇಖ ತಮ್ಮೊಳಗಿನ ಮನದಾಳವನ್ನು ಬಿಚ್ಚಿಟ್ಟರು. ಪುಸ್ತಕ ಬಿಡುಗಡೆ ಮಾಡುವ ನೆಪದಲ್ಲಿ, ತಮ್ಮ ಸಿನಿಮಾ ಕನಸಿನ ಬಗ್ಗೆಯೂ ಹೇಳಿಕೊಂಡರು. "ಸ್ಯಾಂಡಲ್‌ವುಡ್‌ನಿಂದ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬುದು ನನ್ನ ಬಹುಕಾಲದ ಬಯಕೆ. ಅದು 2025ರಲ್ಲಿ ನನಸಾಗ್ತಿದೆ. ಒಂದು ಗ್ಲೋಬಲ್ ಟೋನ್ ಇರತಕ್ಕಂಥ ಸಿನಿಮಾವನ್ನು ಜನವರಿಯಿಂದ ಆರಂಭಿಸಲಿದ್ದೇನೆ. ಆ ಸಿನಿಮಾದ ಹೆಸರು ಗಿಟಾರ್. ಆ ಗಿಟಾರ್‌ನಿಂದ ಬರುವ ಧ್ವನಿ ದೇಸಿ ಧ್ವನಿಯಾಗಿ, ಗ್ಲೋಬಲ್ ದನಿಯಾಗಲಿ ಎಂದು ನೀವೆಲ್ಲರೂ ನನಗೆ ಹಾರೈಸಿ" ಎಂದಿದ್ದಾರೆ ಹಂಸಲೇಖ.
ಸದ್ಯಕ್ಕೆ ಶೀರ್ಷಿಕೆ ಘೋಷಣೆ ಮಾತ್ರ
ಈ ಕಾರ್ಯಕ್ರಮದಲ್ಲಿ ಸದ್ಯ ಗಿಟಾರ್ ಸಿನಿಮಾ ಮಾಡುತ್ತಿರುವ ಬಗ್ಗೆ ಮಾತ್ರ ಹಂಸಲೇಖ ಮಾಹಿತಿ ನೀಡಿದ್ದಾರೆ. ಇದೊಂದು ಸಂಗೀತಮಯ ಸಿನಿಮಾ ಎಂಬುದು ಟೈಟಲ್ ಹೇಳುತ್ತಿದೆ. ಈ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ತಾಂತ್ರಿಕ ವರ್ಗ ಹೇಗಿದೆ? ನಿರ್ಮಾಪಕರು ಯಾರು, ನಿರ್ದೇಶಕನದ ಜತೆಗೆ ಸಂಗೀತವನ್ನೂ ಹಂಸಲೇಖ ಅವರೇ ಜವಾಬ್ದಾರಿ ವಹಿಸಿಕೊಳ್ತಾರಾ? ಇವೆಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿಯೇ ಉತ್ತರ ಸಿಗಲಿದೆ.
ಬರಹಗಾರರಾಗಿ ಹಂಸಲೇಖ
ಅವನೇ ನನ್ನ ಗಂಡ, ಗಂಧರ್ವ, ಶಾಪ ಸಿನಿಮಾಗಳಿಗೆ ಸ್ವತಃ ಹಂಸಲೇಖ ಅವರೇ ಕಥೆ ಒದಗಿಸಿದ್ದಾರೆ. ನಿಮ್ಮಜ್ಜಿ ಮತ್ತು ಗಂಧರ್ವ ಸಿನಿಮಾಗಳಿಗೆ ಚಿತ್ರಕಥೆಯನ್ನು ಬರೆದಿದ್ದಾರೆ. ಪ್ರೇಮಲೋಕ, ರಣಧೀರ, ರಣರಂಗ, ಅವನೇ ನನ್ನ ಗಂಡ, ಯುಗ ಪುರುಷ, ಹಳ್ಳಿ ಮೇಷ್ಟ್ರು, ಗಂಧರ್ವ ಸಿನಿಮಾಗಳಿಗೆ ಸಂಭಾಷಣೆಕಾರರಾಗಿಯೂ ಕೆಲಸ ಮಾಡಿದ್ದಾರೆ.