Chhaava Twitter Review: ಅಮೋಘ, ಅದ್ಭುತ, ಅವಿಸ್ಮರಣೀಯ.. ಛಾವಾ ಚಿತ್ರಕ್ಕೆ ಟ್ವಿಟ್ಟರ್‌ನಲ್ಲಿ ಬ್ಲಾಕ್ ಬಸ್ಟರ್ ವಿಮರ್ಶೆಗಳು
Chhaava X Reviews: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಚಿತ್ರವು ಶಿವಾಜಿ ಸಾವಂತ್ ಬರೆದ ಅದೇ ಶೀರ್ಷಿಕೆಯ ಮರಾಠಿ ಪುಸ್ತಕವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಛಾವಾ ಸಿನಿಮಾವನ್ನು ನಿರ್ಮಿಸಿದೆ. ಇಲ್ಲಿದೆ ಈ ಚಿತ್ರದ ಟ್ವಿಟ್ಟರ್ ವಿಮರ್ಶೆ.

Chhaava Twitter Review: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಸಿನಿಮಾ ಇಂದು (ಫೆ 14) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಆರಂಭದಿಂದಲೂ ಒಂದಷ್ಟು ಕಾರಣಕ್ಕೆ ಸಿನಿಪ್ರಿಯರ ವಲಯದಲ್ಲಿ ಹೆಚ್ಚು ಹೈಪ್ ಸೃಷ್ಟಿ ಮಾಡಿತ್ತು ಈ ಸಿನಿಮಾ. ಬಹುತೇಕರಿಗೆ ಛತ್ರಪತಿ ಶಿವಾಜಿ ಮಹಾರಾಜನ ಕಥೆ ಗೊತ್ತಿತ್ತು. ಸಿನಿಮಾಗಳೂ ಬಂದಿದ್ದವು. ಆದರೆ, ಅದೇ ಶಿವಾಜಿಯ ಹಿರಿಮಗ ಸಂಭಾಜಿ ಮಹಾರಾಜ್ ಬಗ್ಗೆ ಹೆಚ್ಚು ಮಾಹಿತಿ ನೋಡುಗ ವರ್ಗಕ್ಕೆ ಸಿಕ್ಕಿರಲಿಲ್ಲ. ಇದೀಗ ಛಾವಾ ಸಿನಿಮಾದಲ್ಲಿ ಸಂಭಾಜಿಯ ಹೋರಾಟದ ಕಥೆಯನ್ನು ವರ್ಣಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರತಂಡವೂ ಸಂಭ್ರಮದಲ್ಲಿದೆ.
ಐತಿಹಾಸಿಕ ಹಿನ್ನೆಲೆಯ ಈ ಸಿನಿಮಾ ಮರಾಠಾ ದೊರೆ ಛತ್ರವತಿ ಶಿವಾಜಿ ಮಹಾರಾಜ್ ಅವರ ಹಿರಿ ಮಗ ಸಂಭಾಜಿ ಮಹಾರಾಜ್ ಅವರನ್ನು ಆಧರಿಸಿದೆ. ಸಂಭಾಜಿಯಾಗಿ ವಿಕ್ಕಿ ಕೌಶಾಲ್ ನಟಿಸಿದರೆ, ಆತನ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ, ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮರಾಠಿ ಪುಸ್ತಕ ಆಧರಿತ ಕಥೆ
ಛಾವಾ ಚಿತ್ರವು ಶಿವಾಜಿ ಸಾವಂತ್ ಬರೆದ ಅದೇ ಶೀರ್ಷಿಕೆಯ ಮರಾಠಿ ಪುಸ್ತಕವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಛಾವಾ ಸಿನಿಮಾವನ್ನು ನಿರ್ಮಿಸಿದೆ. ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸೌರಭ್ ಗೋಸ್ವಾಮಿ ಛಾಯಾಗ್ರಹಣ ಮತ್ತು ಮನೀಶ್ ಪ್ರಧಾನ್ ಸಂಕಲನ ಈ ಚಿತ್ರಕ್ಕಿದೆ. ಇಂತಿಪ್ಪ ಸಿನಿಮಾ ಗುರುವಾರವೇ ಮುಂಬೈ ಸೇರಿ ಹಲವೆಡೆ ಪ್ರೀಮಿಯರ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ನೆಟ್ಟಿಗರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇಲ್ಲಿದೆ ಛಾವಾ ಸಿನಿಮಾದ ಟ್ವಿಟ್ಟರ್ ವಿಮರ್ಶೆ.
ತರಣ್ ಆದರ್ಶ್ ವಿಮರ್ಶೆ
ಬಾಲಿವುಡ್‌ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್, ಛಾವಾ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಚಿತ್ರ ಅದ್ಭುತವಾಗಿದೆ. ಈ ಚಿತ್ರವನ್ನು ಇತಿಹಾಸ, ಭಾವನೆಗಳು, ಉತ್ಸಾಹ, ದೇಶಭಕ್ತಿ ಮತ್ತು ಆಕ್ಷನ್ ಅಂಶಗಳೊಂದಿಗೆ ತುಂಬಿಸಲಾಗಿದೆ. ವಿಕ್ಕಿ ಕೌಶಲ್ ಅವರ ನಟನೆ ಅದ್ಭುತವಾಗಿದೆ. ಈ ಪೀಳಿಗೆಯ ಶ್ರೇಷ್ಠ ನಟರಲ್ಲಿ ಒಬ್ಬರಾದ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು. ಲಕ್ಷ್ಮಣ್ ಉಟೇಕರ್ ಒಬ್ಬ ಕಥೆಗಾರನಾಗಿ ಉತ್ತಮ ಯಶಸ್ಸನ್ನು ಸಾಧಿಸುವುದು ಖಚಿತ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಛಾವಾ ಸಿನಿಮಾ ಕೇವಲ ಒಂದು ಸಾಮ್ರಾಜ್ಯದ ಕಥೆಯಷ್ಟೇ ಅಲ್ಲ, ಭಾರತ ಕಂಡ ಮಹಾನ್ ಯೋಧನ ಕಥೆಯನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕರು. ಛತ್ರಪತಿ ಸಂಭಾಜಿ ಮಹಾರಾಜರ ಹೃದಯ ವಿದ್ರಾವಕ ಜೀವನ ಕಥೆಯು ಸ್ಪೂರ್ತಿದಾಯಕ ಮಾತ್ರವಲ್ಲದೆ ಕಣ್ಣೀರು ತರಿಸುತ್ತದೆ. "ಇದು ಬೆಳ್ಳಿತೆರೆಯ ಅದ್ಭುತ ದೃಶ್ಯ ಮಾತ್ರವಲ್ಲ, ಒಳ್ಳೆಯ ಆಕ್ಷನ್ ಆಧಾರಿತ ಸಿನಿಮಾ ಕೂಡ. ಮಿಸ್ ಮಾಡಿಕೊಳ್ಳಬೇಡಿ" ಎಂದು ನೆಟಿಜನ್ ಒಬ್ಬರು ಕಾಮೆಂಟ್ ಮಾಡಿದ್ದಾರೆ.
