ದೀಪಾವಳಿಗೆ ಶುಭಾಶಯ ಕೋರುವಾಗ ಈ ತಪ್ಪು ಮಾಡ್ಬೇಡಿ; ದೀಪಾವಳಿಗೂ, ದಿವಾಲಿಗೂ ವ್ಯತ್ಯಾಸ ಇದೆ ಕಣ್ರಿ; ವಿಕ್ಕಿಪಿಡಿಯಾ ವಿಕಾಸ್‌ ಕೊಟ್ಟ ಸಂದೇಶ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ದೀಪಾವಳಿಗೆ ಶುಭಾಶಯ ಕೋರುವಾಗ ಈ ತಪ್ಪು ಮಾಡ್ಬೇಡಿ; ದೀಪಾವಳಿಗೂ, ದಿವಾಲಿಗೂ ವ್ಯತ್ಯಾಸ ಇದೆ ಕಣ್ರಿ; ವಿಕ್ಕಿಪಿಡಿಯಾ ವಿಕಾಸ್‌ ಕೊಟ್ಟ ಸಂದೇಶ ನೋಡಿ

ದೀಪಾವಳಿಗೆ ಶುಭಾಶಯ ಕೋರುವಾಗ ಈ ತಪ್ಪು ಮಾಡ್ಬೇಡಿ; ದೀಪಾವಳಿಗೂ, ದಿವಾಲಿಗೂ ವ್ಯತ್ಯಾಸ ಇದೆ ಕಣ್ರಿ; ವಿಕ್ಕಿಪಿಡಿಯಾ ವಿಕಾಸ್‌ ಕೊಟ್ಟ ಸಂದೇಶ ನೋಡಿ

ಜನರು ನಿತ್ಯ ಬದುಕಿನಲ್ಲಿ ಏನೆಲ್ಲ ಕಾಣುತ್ತಾರೋ ಅದಕ್ಕೇ ಒಂದಿಷ್ಟು ಕಾಮಿಡಿ ಮಿಕ್ಸ್‌ ಮಾಡಿ ಜನರಿಗೆ ಉಣಬಡಿಸುವ ವಿಕ್ಕಿಪಿಡಿಯಾ ವಿಕಾಸ್‌ ಈ ಬಾರಿ ದೀಪಾವಳಿಗಾಗಿ ವಿಶೇಷ ಕಟೆಂಟ್‌ ನೀಡಿದ್ದಾರೆ. ವಿಡಿಯೋ ನೋಡಿದ ಎಲ್ಲರೂ ಇದು ಈ ಸಮಯಕ್ಕೆ ಪ್ರಸ್ತುತವಾದ ವಿಡಿಯೋ ಎಂದು ಹೊಗಳಿದ್ದಾರೆ.

 ದೀಪಾವಳಿಗೂ, ದಿವಾಲಿಗೂ ವ್ಯತ್ಯಾಸ ಇದೆ ಕಣ್ರಿ
ದೀಪಾವಳಿಗೂ, ದಿವಾಲಿಗೂ ವ್ಯತ್ಯಾಸ ಇದೆ ಕಣ್ರಿ

ವಿಕ್ಕಿಪಿಡಿಯಾ -ವಿಕಾಸ್‌ ಮಾಡುವ ಎಲ್ಲ ವಿಡಿಯೋಗಳು ವೈರಲ್ ಆಗುತ್ತವೆ. ಜನರು ನಿತ್ಯ ಬದುಕಿನಲ್ಲಿ ಏನೆಲ್ಲ ಕಾಣುತ್ತಾರೋ ಅದಕ್ಕೇ ಒಂದಿಷ್ಟು ಕಾಮಿಡಿ ಮಿಕ್ಸ್‌ ಮಾಡಿ ಜನರಿಗೆ ಉಣಬಡಿಸುವುದೇ ಅವರ ಕೆಲಸ. ಈ ಬಾರಿ ಅವರು ದೀಪಾವಳಿ ಸಮೀಪ ಇರುವ ಕಾರಣ ದೀಪಾವಳಿಗೆ ಸಂಬಂಧಿಸಿದ ಒಂದು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ. ಹಿಂದೆಲ್ಲ ಮುದ್ದುಕುಮಾರ ಎಂದೇ ಜನಪ್ರಿಯತೆ ಗಳಿಸಿದ ವಿಕ್ಕಿಪಿಡಿಯಾ ವಿಕಾಸ್‌ ಅವರು ಹಂಚಿಕೊಂಡ ದೀಪಾವಳಿ ವಿಡಿಯೋ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ದೀಪಾವಳಿ ಹಾಗೂ ದಿವಾಲಿ(ಳಿ) ಈ ಎರಡೂ ಪದಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಕನ್ನಡದಲ್ಲಿ ಇವೆರಡೂ ಪದಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇದೇ ವ್ಯತ್ಯಾಸದ ಬಗ್ಗೆ ವಿಕ್ಕಿಪಿಡಿಯಾ ಕಂಟೆಂಟ್‌ ಕ್ರಿಯೇಟ್ ಮಾಡಿದ್ದಾರೆ. ಉತ್ತರ ಭಾರತದಿಂದ ಬಂದವರು ಕರ್ನಾಟಕಕ್ಕೆ ಬಂದು ಹತ್ತಾರು ವರ್ಷಗಳು ಕಳೆದಿದ್ದರೂ ಇನ್ನೂ ಹ್ಯಾಪಿ ದಿವಾಲಿ ಎಂದೇ ಶುಭಾಶಯ ತಿಳಿಸುತ್ತಾರೆ. ಅದೇ ಒಂದು ಪ್ರಸಂಗವನ್ನು ಮತ್ತೆ ಮರುಸೃಷ್ಟಿ ಮಾಡಿ ಸರಿ ಯಾವುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ದೀಪಾವಳಿ ನಮ್ಮ ಹಬ್ಬವಾದರೆ, ದಿವಾಲಿ ಪದಕ್ಕೆ ಇನ್ನೊಂದು ಅರ್ಥವೇ ಇದೆ. ದಿವಾಳಿ ಎನ್ನುವುದು ನಿರ್ಗತಿಕ ಅಥವಾ ಏನೂ ಇಲ್ಲದವ ಎಂಬುದನ್ನು ಸೂಚಿಸುವ ಪದವಾಗಿದೆ. ಅಂದರೆ ಇರುವುದೆಲ್ಲವನ್ನೂ ಕಳೆದುಕೊಂಡವರಿಗೆ ದಿವಾಳಿಯಾದ ಎಂದು ಹೇಳುತ್ತಾರೆ. ಈ ವ್ಯತ್ಯಾಸ ಗೊತ್ತಿದ್ದರೂ ಸಾಕಷ್ಟು ಜನ ಇಂದಿಗೂ ಹ್ಯಾಪಿ ದಿವಾಲಿ ಎಂದು ವಿಶ್‌ ಮಾಡುತ್ತಾರೆ. ಅಂತವರಿಗಾಗಿ ವಿಕ್ಕಿಪಿಡಿಯಾ ಈ ಕಂಟೆಂಟ್‌ ಕ್ರಿಯೇಟ್ ಮಾಡಿದ್ದಾರೆ. ಬೇರೆಯವರು ಹಾಗೆ ಶುಭಕೋರುತ್ತಾರೆ ಎಂದು ಒಂದಷ್ಟು ಜನ ಆ ತಪ್ಪನ್ನೇ ಅನುಸರಿಸುತ್ತಾರೆ. ಅದು ಬದಲಾಗಬೇಕು ಎಂಬ ಆಶಯ ವಿಡಿಯೋದಲ್ಲಿ ಕಾಣುತ್ತದೆ.

ಅವರು ಸೃಷ್ಟಿ ಮಾಡಿದ ವಿಡಿಯೋದಲ್ಲಿ ಓರ್ವ ಯುವತಿ ಪಕ್ಕದ ಮನೆಯವರಿಗೆ ದೀಪಾವಳಿ ಶುಭಾಶಯ ಕೋರುತ್ತಾಳೆ. ಆದರೆ ಹ್ಯಾಪಿ ದಿವಾಲಿ ಎಂದು ವಿಶ್ ಮಾಡುತ್ತಾಳೆ. ಆಗ ಆ ಮನೆಯಾಕೆ ದಿವಾಲಿ ಸರಿಯಲ್ಲ, ಕನ್ನಡದಲ್ಲಿ ದೀಪಾವಳಿ ಎಂದು ಉಚ್ಛರಿಸುವಂತೆ ತಿಳಿಸುತ್ತಾಳೆ. ಆದರೆ ಯುವತಿ “ಇಲ್ಲ ನಮ್ಮ ಕಡೆ ಹೀಗೆ ಹೇಳ್ತಾರೆ” ಎಂದು ಮತ್ತೆ ದಿವಾಲಿ ಎಂದೇ ಉಚ್ಛರಿಸುತ್ತಾಳೆ ಯುವತಿ. ಆಗ ಆ ಮನೆಯಲ್ಲಿರುವ ಗಂಡಸು ಸಿಟ್ಟು ಮಾಡಿಕೊಂಡು ದಿವಾಲಿ ಅಂದರೆ ಕನ್ನಡದಲ್ಲಿ ಏನು ಅರ್ಥ ಬರುತ್ತೆ ಎಂದು ತಿಳಿಸುತ್ತಾ ದೀಪಾವಳಿ ಬಗ್ಗೆ ಹೇಳುತ್ತಾರೆ. ಈ ರೀತಿಯಾದ ಸಂಭಾಷಣೆಯನ್ನು ಹಾಡಿನ ಮೂಲಕ ದಿವಾಲಿ ಅಲ್ಲ, ದೀಪಾವಳಿ ಸರಿ ಎಂದು ವಿಕ್ಕಿಪಿಡಿಯಾ ತಿಳಿಸಿಕೊಟ್ಟಿದ್ದಾರೆ.

ಆದರೆ ಎಷ್ಟು ಹೇಳಿದರೂ ಅಷ್ಟೇ ಎಂಬಂತೆ ಆ ಯುವತಿ ಕೊನೆಯಲ್ಲಿ ಮತ್ತೆ ‘ಹ್ಯಾಪಿ ದಿವಾಲಿ’ ಎಂದೇ ಶುಭಕೋರುವ ಮೂಲಕ ವಿಡಿಯೋ ಮುಕ್ತಾಯವಾಗುತ್ತದೆ.

ಈ ವಿಡಿಯೋ ಕಂಟೆಂಟ್ ಸೃಷ್ಟಿಗೆ ಸಹಕರಿಸಿದ ತಮ್ಮ ಬಳಗವನ್ನು ಸ್ಮರಿಸಲು ವಿಕ್ಕಿಪಿಡಿಯಾ ಮರೆತಿಲ್ಲ. ಸಾಹಿತ್ಯ: @anoopsudhee, ಮಿಶ್ರಣ : @deadman_raving, ಚಿತ್ರೀಕರಣ ಮತ್ತು ನಿರ್ದೇಶನ @srtejas ಅವರನ್ನು ಟ್ಯಾಗ್ ಮಾಡುವ ಮೂಲಕ ತಮ್ಮ ಟೀಮ್ ವಿವರ ನೀಡಿದ್ದಾರೆ.

ಹಲವಾರು ಜನ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ನೀವು ಈ ರೀತಿ ವಿಡಿಯೋಗಳನ್ನು ಆಗಾಗ ಮಾಡುತ್ತಿರಿ. ಅದನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿರಿ. ನಿಮ್ಮ ಸ್ನೇಹ ಹಾಗೂ ನಿಮ್ಮಲ್ಲಿ ಹುಟ್ಟುವ ಎಲ್ಲಾ ಕಟೆಂಟ್‌ಗಳು ಸಾಮಾನ್ಯವಾಗಿದ್ದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಗ್ಗೆ ನಮಗೆ ತುಂಬಾ ಸಂತೋಷ ಇದೆ. ನಿಜವಾಗಿಯೂ ಇದು ಈ ಸಂದರ್ಭಕ್ಕೆ ಪ್ರಸ್ತುತ ಎನಿಸುವ ವಿಡಿಯೋ ಎಂದು ಹೇಳಿದ್ದಾರೆ.

Whats_app_banner