ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಕೇವಲ 23 ದಿನಕ್ಕೆ ಒಟಿಟಿ ಅಂಗಳಕ್ಕೆ ಕಾಲಿರಿಸಿದ ಕನ್ನಡದ ಕಾಮಿಡಿ ಸಿನಿಮಾ
ಡಾಲಿ ಧನಂಜಯ್, ಮಲೈಕಾ ವಸುಪಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವೀಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 23 ದಿನಕ್ಕೆ ಒಟಿಟಿಗೆ ಆಗಮಿಸಿದೆ. ಅಷ್ಟಕ್ಕೂ ಈ ಚಿತ್ರವನ್ನು ಯಾವ ಒಟಿಟಿಯಲ್ಲಿ ನೋಡಬಹುದು? ಇಲ್ಲಿದೆ ವಿವರ.

ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಡಾಲಿ ಧನಂಜಯ್ ನಿರ್ಮಾಣ ಮಾಡಿದ ವಿದ್ಯಾಪತಿ ಸಿನಿಮಾ ಇದೀಗ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಮುನ್ಸೂಚನೆ ನೀಡದೆ, ನೇರವಾಗಿ ಇಂದಿನಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಏಪ್ರಿಲ್ 10ರಂದು ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟಿದ್ದ ʻವಿದ್ಯಾಪತಿʼ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಡಿಸೆಂಟ್ ಗಳಿಕೆ ಕಂಡಿತ್ತು.
ಹನಿಮೂನ್, ಇಕ್ಕಟ್, ಟಗರು ಪಲ್ಯ ಸಿನಿಮಾ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿರುವ ನಟ ನಾಗಭೂಷಣ್, ʻವಿದ್ಯಾಪತಿʼ ಚಿತ್ರರದ ಮೂಲಕ ಗಮನಸೆಳೆಯುವ ನಟನೆ ನೀಡಿದ್ದರು. ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದರೆ, ಗರುಡ ರಾಮ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದರು. ಡಾಲಿ ಧನಂಜಯ್ ಅನಕೊಂಡ ಅನ್ನೋ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ಏನಿದು ವಿದ್ಯಾಪತಿ ಸಿನಿಮಾ ಕಥೆ?
ಸಿದ್ದು (ನಾಗಭೂಷಣ್) ಸೂಪರ್‌ಸ್ಟಾರ್ ವಿದ್ಯಾಳ (ಮಲೈಕಾ ವಸುಪಾಲ್) ಗಂಡ. ಆಕೆಯ ಶ್ರೀಮಂತಿಕೆಯಲ್ಲಿಯೇ ಲೈಫ್ ಎಂಜಾಯ್ ಮಾಡುತ್ತಿರುತ್ತಾನೆ ಸಿದ್ದು. ಅದೊಂದು ದಿನ ಜಗ್ಗು (ಗರುಡ ರಾಮ್’) ಮತ್ತು ಗ್ಯಾಂಗ್‍ನಿಂದ ಸಾಕಷ್ಟು ಅವಮಾನ ಎದುರಿಸುತ್ತಾನೆ ಸಿದ್ದು. ಅದೇ ಸಿಟ್ಟಿನಲ್ಲಿ ಹೆಂಡತಿ ಮನೆಯಿಂದ ಹೊರ ಬರುವ ಸಿದ್ದು, ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ಆ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ವಿದ್ಯಾಪತಿ ಸಿನಿಮಾದ ಕಥೆ.
ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ
ವಿದ್ಯಾಪತಿ’ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನ ಜವಾಬ್ದಾರಿಯೂ ಅವರದ್ದೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಅವರು ಸಾಹಿತ್ಯ ಬರೆದಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣವಾದ 4ನೇ ಸಿನಿಮಾ ಇದಾಗಿದೆ.
ಯಾವ ಒಟಿಟಿಯಲ್ಲಿ ವೀಕ್ಷಣೆ?
ಇದೀಗ ಇದೇ ವಿದ್ಯಾಪತಿ ಸಿನಿಮಾ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 23 ದಿನಗಳಿಗೆ ಈ ಸಿನಿಮಾ ಒಟಿಟಿ ಅಂಗಳ ತಲುಪಿದೆ. ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಈ ಸಿನಿಮಾ ಇದೀಗ ವೀಕ್ಷಣೆಗೆ ಲಭ್ಯವಿದೆ. ಈ ವಿಚಾರವನ್ನು ಚಿತ್ರದ ನಿರ್ಮಾಪಕ ಡಾಲಿ ಧನಂಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.