Vijay Suriya: ಗುಳಿಕೆನ್ನೆ ಹುಡುಗನಿಗೆ ತೆಲುಗಿನಲ್ಲೂ ಡಿಮ್ಯಾಂಡ್... ಅಂಧನ ಪಾತ್ರದ ಮೂಲಕ ಪರಭಾಷೆಗೆ ಹಾರಿದ ವಿಜಯ್ ಸೂರ್ಯ
ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಆಫರ್ ಬರುತ್ತಿದೆ. ಈಗ ಒಪ್ಪಿಕೊಂಡಿರುವ ಸೀರಿಯಲ್ ಕಥೆ ನನಗೆ ಬಹಳ ಇಷ್ಟವಾಯ್ತು. ಇದು ಕೃಷ್ಣ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಲವ್ ಸ್ಟೋರಿ. ಇದರಲ್ಲಿ ನಾನು ಅಂಧನ ಪಾತ್ರದಲ್ಲಿ ನಟಿಸುತ್ತಿದ್ದೇನೆ.
ವಿಜಯ್ ಸೂರ್ಯ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ಗುಳಿಕೆನ್ನೆ ಚೆಲುವ. ಕಿರುತೆರೆಗೆ ಬರುವ ಮುನ್ನ ವಿಜಯ್ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟದ್ದು ಅಗ್ನಿಸಾಕ್ಷಿಯ ಸಿದ್ದಾರ್ಥ್ ಪಾತ್ರ. ಇತ್ತೀಚೆಗೆ ವಿಜಯ್ ಸೂರ್ಯ ನಟನಾಕ್ಷೇತ್ರದಲ್ಲಿ 10 ವರ್ಷಗಳನ್ನು ಪೂರೈಸಿದ್ಧಾರೆ.
ವಿಜಯ್ ಸೂರ್ಯ ಈಗ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಎಂಬ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಅವರು 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು ಚಿತ್ರೀಕರಣಕ್ಕಾಗಿ ಬೆಂಗಳೂರು-ಹೈದರಾಬಾದ್ ಎರಡೂ ನಗರಗಳಿಗೂ ಹೋಗಿ ಬಂದು ಮಾಡುತ್ತಿದ್ದಾರೆ. ನನಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಆಫರ್ ಬರುತ್ತಿದೆ. ಈಗ ಒಪ್ಪಿಕೊಂಡಿರುವ ಸೀರಿಯಲ್ ಕಥೆ ನನಗೆ ಬಹಳ ಇಷ್ಟವಾಯ್ತು. ಇದು ಕೃಷ್ಣ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಲವ್ ಸ್ಟೋರಿ. ಇದರಲ್ಲಿ ನಾನು ಅಂಧನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೆಲವೊಂದು ಕಾರಣಗಳಿಂದ ನಾನು ದೃಷ್ಟಿಯನ್ನು ಕಳೆದುಕೊಳ್ಳುತ್ತೇನೆ. ಈ ಧಾರಾವಾಹಿಯಲ್ಲಿ ಒಡಿಶಾ ನಟಿ ಜಾಸ್ಮಿನ್ ರಥ್ ನನ್ನ ಜೋಡಿಯಾಗಿ ನಟಿಸುತ್ತಿದ್ದಾರೆ ಎಂದು ವಿಜಯ್ ಸೂರ್ಯ, ಧಾರಾವಾಹಿ ಬಗ್ಗೆ ಮಾಹಿತಿ ನೀಡಿದ್ದಾರೆ.
'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ', ಬೆಂಗಾಳಿಯ 'ಸಾಂಝೇರ್ ಬಾಟಿ' ಧಾರಾವಾಹಿಯ ರೀಮೇಕ್ ಆಗಿದೆ. ಈ ಧಾರಾವಾಹಿ ಈಗಾಗಲೇ ಹಿಂದಿ, ತಮಿಳು ಹಾಗೂ ಕನ್ನಡದಲ್ಲಿ ರೀಮೇಕ್ ಆಗಿದೆ. ಕನ್ನಡದಲ್ಲಿ ಕೂಡಾ ಈ ಧಾರಾವಾಹಿ 'ಆಕಾಶ ದೀಪ’ ಹೆಸರಿನಲ್ಲಿ ರೀಮೇಕ್ ಆಗಿ ಪ್ರಸಾರವಾಗಿತ್ತು. ಇದೀಗ ತೆಲುಗು ಧಾರಾವಾಹಿ ತಂಡ ಕನ್ನಡ ನಟನನ್ನು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಧಾರಾವಾಹಿ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಸ್ಟಾರ್ ಸುವರ್ಣದಲ್ಲಿ 'ನಮ್ಮ ಲಚ್ಚಿ' ಪ್ರಸಾರ
ಇತ್ತ ಕನ್ನಡದಲ್ಲಿ ವಿಜಯ್ ಸೂರ್ಯ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಕಥೆಯೊಂದು ಶುರುವಾಗಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು ಹಾಗೂ ಹೊಂಗನಸು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದಿವೆ. ಈ ಸಾಲಿಗೆ ಇದೀಗ 'ನಮ್ಮ ಲಚ್ಚಿ' ಎಂಬ ಹೊಸ ಕಥೆ ಸೇರ್ಪಡೆಯಾಗಿದೆ.
ಹಳ್ಳಿಯಲ್ಲಿ ಬೆಳೆದಿರುವ ಪುಟ್ಟ ಮಗುವಿಗೆ ಸಂಗೀತ ಅಂದ್ರೆ ಪಂಚ ಪ್ರಾಣ. ಆದರೆ ತಾಯಿ ಅದನ್ನು ವಿರೋಧಿಸುತ್ತಾಳೆ. ತಂದೆ ಯಾರೆಂದು ತಿಳಿಯದ ಈ ಮಗುವಿಗೆ ಅಪ್ಪನನ್ನು ಹುಡುಕುವ ಹಂಬಲ. ಹಿಂದೆ ನಡೆದಿರುವ ಕೆಲವೊಂದು ಘಟನೆಗಳಿಂದ ಈ ಮಗುವಿನ ತಂದೆ ತಾಯಿ ದೂರವಾಗಿರುತ್ತಾರೆ. ಹೆತ್ತ ತಂದೆ ದೂರವಾಗಿದ್ದರೂ ಆತನ ಗಾಯನ ಕಲೆ, ಮಗುವಿಗೆ ರಕ್ತಗತವಾಗಿ ಬಂದಿರುತ್ತದೆ. ಸಂಗೀತ ಮಾಂತ್ರಿಕ ಸಂಗಮ್ ಸಾತ್ನೂರ್‌ನ ಅತೀ ದೊಡ್ಡ ಅಭಿಮಾನಿಯಾಗಿರುವ ಈ ಮರಿ ಕೋಗಿಲೆಗೆ, ಆತನೇ ತನ್ನ ತಂದೆ ಎಂಬ ಕಟು ಸತ್ಯ ಹೇಗೆ ತಿಳಿಯುತ್ತದೆ ಎಂಬುದೇ 'ನಮ್ಮ ಲಚ್ಚಿ' ಧಾರಾವಾಹಿಯ ಕಥಾ ಹಂದರ.
ಧಾರಾವಾಹಿಯಲ್ಲಿ ವಿಜಯ್ ಸೂರ್ಯ, ನೇಹಾ ಗೌಡ, ಹಾಗೂ ಲಚ್ಚಿಯಾಗಿ ಸಂಘವಿ, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.