Lankasura Censored: 'ಲಂಕಾಸುರ'ನಿಗೆ ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ..ಶೀಘ್ರದಲ್ಲೇ ಚಿತ್ರ ತೆರೆಗೆ
ಕನ್ನಡ ಸುದ್ದಿ  /  ಮನರಂಜನೆ  /  Lankasura Censored: 'ಲಂಕಾಸುರ'ನಿಗೆ ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ..ಶೀಘ್ರದಲ್ಲೇ ಚಿತ್ರ ತೆರೆಗೆ

Lankasura Censored: 'ಲಂಕಾಸುರ'ನಿಗೆ ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ..ಶೀಘ್ರದಲ್ಲೇ ಚಿತ್ರ ತೆರೆಗೆ

'ಲಂಕಾಸುರ' ಸಿನಿಮಾ ನೋಡಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಬಹು ನಿರೀಕ್ಷಿತ 'ಲಂಕಾಸುರ' ಚಿತ್ರವನ್ನು ಟೈಗರ್ ಟಾಕೀಸ್ ಲಾಂಛನದಲ್ಲಿ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿದ್ದಾರೆ.

 'ಲಂಕಾಸುರ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ
'ಲಂಕಾಸುರ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ

ಮರಿ ಟೈಗರ್‌ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ 'ಲಂಕಾಸುರ' ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಪ್ರಮಾಣ ಪತ್ರ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡವು ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.

'ಲಂಕಾಸುರ' ಸಿನಿಮಾ ನೋಡಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಬಹು ನಿರೀಕ್ಷಿತ 'ಲಂಕಾಸುರ' ಚಿತ್ರವನ್ನು ಟೈಗರ್ ಟಾಕೀಸ್ ಲಾಂಛನದಲ್ಲಿ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನರ ಮೆಚ್ಚುಗೆ ಗಳಿಸಿದೆ. 'ಲಂಕಾಸುರ' ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವ ಹಾಗಿದೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ.

ಪ್ರಮೋದ್ ಕುಮಾರ್ ನಿರ್ದೇಶನದ 'ಲಂಕಾಸುರ' ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನಿರ್ದೇಶನ, ಸುಜ್ಞಾನ್ ಛಾಯಾಗ್ರಹಣ, ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಇದೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ, ವಿನೋದ್ ಪ್ರಭಾಕರ್ ಜೊತೆಯಾಗಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಕೂಡಾ ಚಿತ್ರದಲ್ಲಿದ್ದಾರೆ.

 'ಲಂಕಾಸುರ' ನಿಗೆ ಯು/ಎ ಪ್ರಮಾಣ ಪತ್ರ ನೀಡಿದ ಸೆನ್ಸಾರ್‌ ಮಂಡಳಿ
'ಲಂಕಾಸುರ' ನಿಗೆ ಯು/ಎ ಪ್ರಮಾಣ ಪತ್ರ ನೀಡಿದ ಸೆನ್ಸಾರ್‌ ಮಂಡಳಿ

ಸೆಟ್ಟೇರಿದ ವಿನೋದ್‌ ಪ್ರಭಾಕರ್‌ ಹೊಸ ಚಿತ್ರ

ನಟ, ವಿನೋದ್ ಪ್ರಭಾಕರ್ ವಿಭಿನ್ನ ಪಾತ್ರಗಳ ಮೂಲಕ, ಹೊಸತನದ ಕಥೆಗಳ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸುತ್ತಾ ಬರುತ್ತಿದ್ದಾರೆ. ಇದೀಗ ಅವರು ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರಕ್ಕೆ ಮಾದೇವ ಎಂದು ಹೆಸರಿಡಲಾಗಿದೆ. ಈ ಹಿಂದೆ ಚಿರಂಜೀವಿ ಸರ್ಜಾ ನಟನೆಯ 'ಖಾಕಿ' ಚಿತ್ರ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ನವೀನ್ ಬಿ ರೆಡ್ಡಿ, ಈಗ ವಿನೋದ್ ಪ್ರಭಾಕರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ.

80ರ ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ 'ಮಾದೇವ' ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿದ್ದಾರೆ. ರೈಲು ಮತ್ತು ಜೈಲಿನಲ್ಲಿ ಇಡೀ ಸಿನಿಮಾ ಕಥೆ ನಡೆಯಲಿದ್ದು, ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಹಿರಿಯ ನಟಿ ಶ್ರುತಿ, ಪೋಷಕ ಕಲಾವಿದ ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿ ಒಂದಷ್ಟು ತಾರಾಬಳಗ ಫೈನಲ್ ಆಗಿದೆ. ಸದ್ಯದಲ್ಲೇ ನಾಯಕಿ ಹಾಗೂ ವಿಲನ್ ಪಾತ್ರಗಳ ಆಯ್ಕೆ ನಡೆಯಲಿದೆ. ಗಾಯತ್ರಿ ಆರ್ ಹಳಲೆ ನಿರ್ಮಿಸಲಿರುವ ಈ ಚಿತ್ರಕ್ಕೆ ಪ್ರದ್ಯೋತ್ತನ್ ಸಂಗೀತ ನೀಡಲಿದ್ದು, ಬಾಲಕೃಷ್ಣ ತೋಟ ಛಾಯಾಗ್ರಹಣ ಮಾಡಲಿದ್ದಾರೆ. ಸಹ ನಿರ್ಮಾಣದ ಜವಾಬ್ದಾರಿಯನ್ನು ಲವ್ ಗುರು ಸುಮಂತ್ ಹೊತ್ತುಕೊಂಡಿದ್ದಾರೆ.

Whats_app_banner