ಲಾಂಗ್ ಹಿಡಿದು ಪೋಸ್ ನೀಡಿದ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್, ವಿನಯ್ ಗೌಡ ಪೊಲೀಸ್ ವಶಕ್ಕೆ
ಲಾಂಗ್ ಹಿಡಿದು ನಟ ದರ್ಶನ್ ಅವರ ಕರಿಯ ಸಿನಿಮಾದ ಹಾಡಿಗೆ ಪೋಸ್ ನೀಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ ಮತ್ತು ಸೀಸನ್ 11ರ ರಜತ್ ಕಿಶನ್ ಇಬ್ಬರನ್ನು ಸೋಮವಾರ (ಮಾ. 24) ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಕೈಯಲ್ಲಿ ಲಾಂಗ್ ಹಿಡಿದು ನಟ ದರ್ಶನ್ ಅವರ ಕರಿಯ ಸಿನಿಮಾದ ಟ್ಯೂನ್‌ಗೆ ಪೋಸ್ ನೀಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ ಮತ್ತು ಸೀಸನ್ 11ರ ರಜತ್ ಕಿಶನ್ ಇಬ್ಬರನ್ನು ಸೋಮವಾರ (ಮಾ. 24) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇಬ್ಬರಿಗೂ ನೋಟೀಸ್ ಸಹ ನೀಡಲಾಗಿತ್ತು.
ಇದೇ ಕೇಸ್ ವಿಚಾರವಾಗಿ ವಿಚಾರಣೆಗೆಂದು ಇದೀಗ ಈ ಇಬ್ಬರನ್ನು ಠಾಣೆಗೆ ಕರೆತರಲಾಗಿದೆ. ಕೇಸ್ ದಾಖಲಾದ ಬಳಿಕ, ರಜತ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಅವರು ಕೊಪ್ಪಳದಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ರಜತ್ ಪತ್ನಿ ಅಕ್ಷಿತಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈಗ ಅಚ್ಚರಿಯ ರೀತಿಯಲ್ಲಿ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದಾರೆ.
ರಜತ್ ಕಿಶನ್, ತಮ್ಮ ಶರ್ಟ್ ಮೇಲೆ ಡಿ ಬಾಸ್ ಎಂದು ಬರೆದುಕೊಂಡು, ದರ್ಶನ್ ಸಿನಿಮಾಗಳ ಹೆಸರುಗಳಿರುವ ಪ್ಯಾಂಟ್ ಧರಿಸಿ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಕಿಶನ್ ಜತೆಗೆ ವಿನಯ್ ಗೌಡ ಸಹ ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದರು. ಕಳೆದ ಆರು ದಿನಗಳ ಹಿಂದೆಯೇ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು ರಜತ್.
ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದು, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ದುರ್ವತನೆ ಇದಾಗಿದೆ ಎಂದು ದೂರಿನಲ್ಲಿ ನಮೂದಿಸಲಾಗಿದ್ದು, ಬಸವೇಶ್ವರ ಠಾಣೆ ಪಿಎಸ್‌ಐ ಭಾನುಪ್ರಕಾಶ್ ಎಐಆರ್ ದಾಖಲಿಸಿಕೊಂಡಿದ್ದರು. ಇದೀಗ ಇದೇ ರೀಲ್ಸ್‌ಗೆ ಸಂಬಂಧಿಸಿದಂತೆ, ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರನ್ನೂ ಮೌಖಿಕವಾಗಿ ವಿಚಾರಣೆ ಮಾಡಲು ಠಾಣೆಗೆ ಕರೆಸಿದ್ದಾರೆ.
