ಬಯಸದೇ ಬಂದಿದ್ದ ಎರಡು ದಿನದ ಪಟ್ಟ, ಡಾಕ್ಟರೇಟ್ ಬಂದಿದ್ದು ನಂಗಲ್ಲ ನಿರ್ದೇಶಕ ಟಿಎನ್ ಸೀತಾರಾಮ್ ಸ್ಪಷ್ಟನೆ
ಕೆಲವೊಮ್ಮೆ ಒಂದೇ ರೀತಿಯ ಹೆಸರುಗಳಿದ್ದಾಗ ಆಗುವ ಅವಾಂತರಗಳು ಒಂದೆರಡಲ್ಲ. ಇದಕ್ಕೆ ಸಾಕ್ಷಿ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಫೇಸ್‌ಬುಕ್ ಪೋಸ್ಟ್. ಇವರಿಗೆ ಡಾಕ್ಟರೇಟ್ ಬಂದಿದೆ ಎಂದು ಹಲವರು ವಿಶ್ ಮಾಡಿದ್ರು, ಆದ್ರೆ ಮೈಸೂರು ವಿವಿ ಡಾಕ್ಟರೇಟ್ ನೀಡಿದ್ದು ಎಂ.ಆರ್. ಸೀತಾರಾಮ್ ಅವರಿಗೆ. ಈ ಬಗ್ಗೆ ಸ್ಪಷ್ಪನೆ ನೀಡಿದ್ದಾರೆ ನಿರ್ದೇಶಕರು.

ಒಂದೇ ರೀತಿಯ ಹೆಸರಿದ್ದು, ಇನಿಷಿಯಲ್‌ಗಳು ಬೇರೆ ಬೇರೆ ಇದ್ದಾಗ ಗೊಂದಲ ಆಗುವುದು ಸಹಜ. ಎಷ್ಟೋ ಬಾರಿ ಅವರ ಹೆಸರು ಇವರಿಗೆ, ಇವರ ಹೆಸರು ಅವರಿಗೆ ಬರೆದು ಬಿಡುತ್ತಾರೆ. ಇದ್ರಿಂದ ಆಗುವ ಅವಾಂತರಗಳನ್ನು ಕೇಳ್ಬೇಕಾ. ಇನ್ನು ಪತ್ರಿಕೆಗಳಲ್ಲಿ ತಪ್ಪಾದ ಗ್ರಹಿಕೆಯ ಕಾರಣದಿಂದ ಹೆಸರು ತಪ್ಪಾಗಿ ಸುದ್ದಿ ಪ್ರಕಟವಾಗುತ್ತದೆ. ಅವರ ಹೆಸರಿಗೆ ಇವರ ಹೆಸರು ಬರೆದು ಗೊಂದಲ ಮೂಡಲು ಕಾರಣವಾಗುತ್ತದೆ. ಮಾತ್ರವಲ್ಲ ಇದರಿಂದ ಯಾರದ್ದೋ ಡಾಕ್ಟರೇಟ್ ಪದವಿ ಇನ್ಯಾರಿಗೋ ಲಭಿಸಬಹುದು. ಕೆಲವರಿಗೆ ಇದು ತಮಾಷೆ ಅನ್ನಿಸಿದ್ರೂ, ಇಂತಹ ಘಟನೆಗಳು ನಡೆದಿರುವುದು ಸತ್ಯ.
ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ವಿಚಾರದಲ್ಲೂ ಇಂತಹ ಘಟನೆ ನಡೆದಿದೆ. ಎಂ.ಆರ್. ಸೀತಾರಾಮ್ ಅವರಿಗೆ ಮೈಸೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ. ಆದರೆ ಪತ್ರಿಕೆಗಳಲ್ಲಿ ಟಿ.ಎನ್. ಸೀತಾರಾಮ್ ಎಂದು ತಪ್ಪಾಗಿ ಪ್ರಕಟವಾಗಿತ್ತು, ಇದ್ರಿಂದ ಏನೆಲ್ಲಾ ಅವಾಂತರ ಆಯ್ತು ಅಂತ ಟಿ.ಎನ್. ಸೀತಾರಾಮ್ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹವನ್ನು ನೀವೂ ಓದಿ.
ಟಿ.ಎನ್. ಸೀತಾರಾಮ್ ಬರಹ
ಎಲ್ಲರಿಗೂ ನಮಸ್ಕಾರಗಳು, ನನಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಬಂದಿದೆ ಎಂದು ತುಂಬಾ ಜನ ನನ್ನನ್ನು ಅಭಿನಂದಿಸಿ ಹಾರೈಸಿದ್ದೀರಿ. ನನಗೂ ಇದು ಪರಮಾಶ್ಚರ್ಯಗಳಲ್ಲಿ ಒಂದರಂತೆ ಅನಿಸಿತ್ತು. ಆದರೆ ಅದು ಮಾನ್ಯ ಶ್ರೀ ಎಂ.ಆರ್. ಸೀತಾರಾಮ್‌ರವರಿಗೆ ಬಂದಿದ್ದು ಟಿ.ಎನ್.ಸೀತಾರಾಮ್ ಎಂದು ಕೆಲವು ಪತ್ರಿಕೆಗಳಲ್ಲಿ ತಪ್ಪಾಗಿ ಬಂದಿರುವಂತೆ ಕಾಣುತ್ತದೆ. ನನಗೆ ಡಾಕ್ಟರೇಟ್ ಬಂದಿಲ್ಲ. ಸಂಬಂಧಪಟ್ಟವರೂ ನನಗೆ ಡಾಕ್ಟರೇಟ್ ಬಂದಿದೆ ಎಂದು ಹೇಳಿರಲಿಲ್ಲ. ಹಾಗಾಗಿ ಸಾವಿರಾರು ಸಹೃದಯರು ನನಗೆ ಪ್ರೀತಿಯಿಂದ ಅಭಿನಂದಿಸಿದ್ದೀರಿ ಮತ್ತು ಹಾರೈಸಿದ್ದೀರಿ.
ನಿಮ್ಮೆಲ್ಲರ ಪ್ರೀತಿ ಮತ್ತು ಅಭಿನಂದನೆಗಳಿಗೆ ಸಹಸ್ರ ಸಹಸ್ರ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಹಾಗೇ ಇರಲಿ ಎಂದು ಪ್ರಾರ್ಥನೆ..
ಬಯಸದೇ ಬಂದಿದ್ದ ಎರಡು ದಿನದ ಪಟ್ಟ ಇದು.. ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.
ಇಂತೀ
ನಮಸ್ಕಾರಗಳು
ಟಿ.ಎನ್. ಸೀತಾರಾಮ್
ಇಂದು ಬೆಳಿಗ್ಗೆ ಟಿ.ಎನ್. ಸೀತಾರಾಮ್ ತಮ್ಮ ಫೇಸ್‌ಬುಕ್‌ನಲ್ಲಿ ಈ ಪೋಸ್ಟ್ ಹಾಕಿದ್ದಾರೆ. ಆ ಮೂಲಕ ಡಾಕ್ಟರೇಟ್ ಲಭಿಸಿದ್ದು ನಂಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇವರ ಈ ಪೋಸ್ಟ್ ಅನ್ನು ಒಂದೂವರೆ ಸಾವಿರದಷ್ಟು ಮಂದಿ ನೋಡಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
ʼನೀವೇ ಒಂದು ವಿಶ್ವವಿದ್ಯಾಲಯ ಸರ್. ನಿಮಗೆ ಯಾವ ಡಾಕ್ಟರೇಟ್ ಬೇಕಾಗಿಲ್ಲ ಸರ್ʼ ಎಂದು ಸೂರ್ಯ ಕೀರ್ತಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ʼಅಯ್ಯೋ! ಡಾಕ್ಟರೇಟ್ ಪದವಿ ನಿಮಗೆ ಬಂದಿರುವುದು ನಿಜವೇ ಆಗಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು ಸರ್ʼ ಎಂದು ನಟರಾಜು ಮೈದನಹಳ್ಳಿ ಅವರು ಕಾಮೆಂಟ್ ಮಾಡಿದ್ದಾರೆ.
ʼಆದರೂ, ನಿಮಗೆ ಅಭಿನಂದನೆ ಸಲ್ಲಿಸಲು ನಮಗೊಂದು ಒಳ್ಳೇ ಅವಕಾಶ ಸಿಕ್ಕಿತು. ನಾವು Congratulations ಹೇಳಿಬಿಟ್ಟೆವುʼ ಎಂದು ಆನಂದ ತೀರ್ಥ ಪ್ಯಾಟಿ ಕಾಮೆಂಟ್ ಮಾಡಿದ್ದಾರೆ.
ನರಸಿಂಹ ಪ್ರಸಾದ್ ಟಿ.ಎನ್.ಸೀತಾರಾಮ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು ಹೀಗೆ ʼಚಿಂತನೆಯಿಂದ, ದೃಶ್ಯಾವಳಿಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಡಾಕ್ಟರ್ ನೀವಾಗಿದ್ದೀರಿ ಸರ್. ನಿಮ್ಮ ಧಾರಾವಾಹಿಗಳ ಮೂಲಕ ಮತ್ತೆ ಮತ್ತೆ ಬದುಕಿನ ಮೂಲತತ್ವ ಮನುಷ್ಯತ್ವಕ್ಕೆ, ಕರ್ತವ್ಯ ಬದ್ಧವಾಗಿರುವಂತೆ ನಮ್ಮನ್ನು ಪ್ರೇರೇಪಿಸಿದ್ದೀರಿ, ಧನ್ಯವಾದಗಳುʼ.
ʼ10 ಡಾಕ್ಟರೇಟ್ ಪಡೆಯುವಂತ ಪ್ರತಿಭಾವಂತರು ನೀವು ಅಭಿಮಾನಿ ದೇವರುಗಳ ಎದೆಯಲ್ಲಿ ಇದ್ದಿರಲ್ಲ ಸಾಕು ಅದೇ ಅತಿದೊಡ್ಡ ಪುರಸ್ಕಾರʼ ಎಂದು ಅಭಿಮಾನದಿಂದ ಕಾಮೆಂಟ್ ಮಾಡಿದ್ದಾರೆ ಸುರೇಶ್ ಕೊರಕೊಪ್ ಎನ್ನುವವರು.
324ಕ್ಕೂ ಹೆಚ್ಚು ಮಂದಿ ಇವರ ಪೋಸ್ಟಗೆ ಕಾಮೆಂಟ್ ಮಾಡಿದ್ದು, ನಿಮಗೂ ಡಾಕ್ಟರೇಟ್ ಬರಬೇಕಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ನೀವು ಡಾಕ್ಟರೇಟ್ ಪಡೆಯದೇ ಡಾ. ಟಿ. ಎನ್. ಸೀತಾರಾಮ್ ಎಂದು ಕಾಮೆಂಟ್ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)
