ಕನ್ನಡ ಸುದ್ದಿ  /  Entertainment  /  Viral Song Singer Malavalli Mahadevaswamy Ee Sundarana Sanyasi Madabahude Song Trending On Instagram Arjunana Jogi Mnk

Viral Song: ಈ ಸುಂದರನ ಸನ್ಯಾಸಿ ಮಾಡಬಹುದೇ; ವೈರಲ್‌ ಹಾಡಿನ ವಿಶೇಷತೆ ನಿಮಗೆ ಗೊತ್ತೆ? ಇದನ್ನು ಹಾಡಿದವರು ಮಳವಳ್ಳಿ ಡಾಕ್ಟರ್!‌

ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಸದ್ಯ ಸನ್ಯಾಸಿಯದ್ದೇ ಟ್ರೆಂಡ್. ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡು ಸಿಂಗಲ್‌ ಸುಂದರರ ಗಮನ ಸೆಳೆದಿದೆ. ಸಾಲು ಸಾಲು ರೀಲ್ಸ್‌ ಸೃಷ್ಟಿಯಾಗುತ್ತಿವೆ. ಹೀಗಿದೆ ನೋಡಿ ಈ ಹಾಡಿನ ಹಿನ್ನೆಲೆ ಮತ್ತು ಹಾಡಿದವರ ಬಗೆಗಿನ ಮಾಹಿತಿ.

ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡನ್ನು ಖ್ಯಾತ ಜನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಹಾಡಿದ್ದಾರೆ. ಅರ್ಜುನನ ಜೋಗಿ ಸರಣಿ ಹೆಸರಿನಲ್ಲಿ 2019ರಲ್ಲಿ ಝೇಂಕಾರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.
ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡನ್ನು ಖ್ಯಾತ ಜನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಹಾಡಿದ್ದಾರೆ. ಅರ್ಜುನನ ಜೋಗಿ ಸರಣಿ ಹೆಸರಿನಲ್ಲಿ 2019ರಲ್ಲಿ ಝೇಂಕಾರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.

Ee Sundarana Sanyasi Madabahude: ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಒಂದಲ್ಲ ಒಂದು ವಿಡಿಯೋ, ಆಡಿಯೋ, ಫೋಟೋ ತುಣುಕು ಇತ್ಯಾದಿ ಇತ್ಯಾದಿ ವೈರಲ್‌ ಆಗುತ್ತಲೇ ಇರುತ್ತವೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ(Instagram Reel) ಬಗೆಬಗೆ ಹಾಡಿನ ರೀಲ್‌ಗಳು ಸಖತ್‌ ಟ್ರೆಂಡ್‌ ಕ್ರಿಯೆಟ್‌ ಮಾಡುತ್ತಿರುತ್ತವೆ. ಇದೀಗ ಅಂಥದ್ದೇ ಹಾಡೊಂದು ವೈರಲ್‌ ಆಗಿದೆ. ಅದೇ "ಅನ್ಯಾಯಕಾರಿ ಬ್ರಹ್ಮ, ಈ ಸುಂದರನ ಸನ್ಯಾಸಿ ಮಾಡಬಹುದೇ.." ಹಾಡು.

ಕರ್ನಾಟಕದಲ್ಲಿ ಸದ್ಯ ಜಾನಪದ ಶೈಲಿಯ ಹಾಡಿಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಫಿದಾ ಆಗಿದ್ದಾರೆ. "ಅನ್ಯಾಯಕಾರಿ ಬ್ರಹ್ಮ, ಈ ಸುಂದರನ ಸನ್ಯಾಸಿ ಮಾಡಬಹುದೇ.." ಹಾಡೀಗ ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ವೈರಲ್‌ ಆಗಿ, ಎಲ್ಲರ ಅಕೌಂಟ್‌ಗಳಲ್ಲಿ ರೀಲ್‌ಗಳಾಗಿ ಹೊರಹೊಮ್ಮುತ್ತಿದೆ. ಹಾಗಾದರೆ ಈ ಸಾಂಗ್ ಯಾವುದು? ಇದು ಸಿನಿಮಾ ಹಾಡಾ? ಹಾಡಿದವರು ಯಾರು? ಇಲ್ಲಿದೆ ನೋಡಿ ಕಿರು ಮಾಹಿತಿ.

ಇದನ್ನೂ ಓದಿ: ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ 3 ವರ್ಷಗಳು; ಯುವ ಸಾಮ್ರಾಟ್‌ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್‌ ಯಾವಾಗ?

"ಈ ಸುಂದರನ ಸನ್ಯಾಸಿ ಮಾಡಬಹುದೇ.." ಹಾಡು ನೀವಂದುಕೊಂಡಂತೆ ಸಿನಿಮಾದ ಹಾಡಲ್ಲ. ಇದೊಂದು ಅಪ್ಪಟ ಜಾನಪದ ಹಾಡು. ಈ ಹಾಡನ್ನು ಹಾಡಿದವರು ಖ್ಯಾತ ಜನಪದ ಹಾಡುಗಾರ ಮಳವಳ್ಳಿ ಮಹಾದೇವಸ್ವಾಮಿ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದವರು. ಒಂದಲ್ಲ ಎರಡಲ್ಲ ಬರೋಬ್ಬರಿ 1000ಕ್ಕೂ ಅಧಿಕ ಜಾನಪದ ಹಾಡುಗಳು ಇವರ ಕಂಠದಿಂದ ಹೊರಬಂದಿವೆ. ಮಹಾದೇವಸ್ವಾಮಿ ಹುಟ್ಟಿದ್ದು 1959ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ. ಇವರ ತಂದೆ ಶಹನಾಯಿ ವಾದಕ ಮಾದಯ್ಯ, ತಾಯಿ ಸೋಬಾನೆ ಹಾಡುಗಾರ್ತಿ ಮಂಚಮ್ಮ.

ಕ್ಯಾಸೆಟ್‌ ಜಮಾನಾದಿಂದ ಈಗಿನವರೆಗೂ..

ಮಹಾದೇವಸ್ವಾಮಿ ಮಲೆ ಮಾದೇವಪ್ಪ ಮತ್ತು ಮಂಟೆಸ್ವಾಮಿಯ ಅಪ್ಪಟ ಭಕ್ತರು. ಅದರಂತೆ ಅವರ ಬಹುತೇಕ ಎಲ್ಲ ಹಾಡುಗಳು ಮಾದೇವಪ್ಪನ ಕುರಿತಾಗಿಯೇ ಇವೆ. ಹೋಗಲಾರೆ ಹಲಗೂರಿಗೆ, ಮಾದೇಶ್ವರ ದಯಬಾರದೇ, ಅಂದದ ಗಿರಿ ಚಂದ ನೋಡಿರೋ.. ಹೀಗೆ ಎಲ್ಲದರಲ್ಲಿಯೂ ಮಾದಪ್ಪನನ್ನೇ ನೆನೆದಿದ್ದಾರೆ ಮಹದೇವಸ್ವಾಮಿ. 90ರ ದಶಕದಲ್ಲಿ ಮುಂದುವರಿದು 2000ರಲ್ಲಿ ಕ್ಯಾಸೆಟ್‌ ಜಮಾನಾದಲ್ಲಿ ಇವರ ಭಕ್ತಿ ಪ್ರಧಾನ ಜನಪದ ಹಾಡುಗಳಿಗೆ ಭರಪೂರ ಬೇಡಿಕೆ. ಇವರು ಹಾಡಿರುವ ಬರೋಬ್ಬರಿ 20ಲಕ್ಷಕ್ಕೂ ಅಧಿಕ ಕ್ಯಾಸೆಟ್‌ಗಳು ಮಾರಾಟವಾಗಿವೆ ಎಂಬುದೇ ಒಂದು ದಾಖಲೆ.

ಇದನ್ನೂ ಓದಿ: ಧಾರವಾಡದ ವಿಶೇಷ ಚೇತನ ಅಭಿಮಾನಿಗೆ ಖುದ್ದು ಕರೆ ಮಾಡಿ ಅಭಿಷೇಕ್‌ ಅವಿವಾ ಆರತಕ್ಷತೆಗೆ ಆಹ್ವಾನಿಸಿದ ಸುಮಲತಾ ಅಂಬರೀಶ್‌

ಮಲೇ ಮಾದಪ್ಪನ ಕುರಿತ ಮಂಟೆಸ್ವಾಮಿ ಮತ್ತು ಸಿದ್ದಪ್ಪಾಜಿ ಹಾಡಿನ ಮೂಲಕ ತಮ್ಮ ಗಾಯನ ಆರಂಭಿಸಿದ ಮಹಾದೇವಸ್ವಾಮಿ, "ಮಾದೇಶ್ವರಾ ದಯಬಾರದೇ.." ಹಾಡಿನ ಮೂಲಕ ಗುರುತಿಸಿಕೊಂಡರು. ಸಿದ್ದಪ್ಪಾಜಿಯ ಪವಾಡಗಳು (Siddappajiya Pavadagalu) ಸಿನಿಮಾದಲ್ಲಿಯೂ ಮುಖ್ಯಭೂಮಿಕೆ ನಿಭಾಯಿಸಿ, ಮತ್ತಷ್ಟು ಖ್ಯಾತಿ ಮುಡಿಗೇರಿಸಿಕೊಂಡರು. ಓದಿದ್ದು SSLCಯಾದರೂ, ಮೈಸೂರು ವಿಶ್ವವಿದ್ಯಾಲಯ ಇವರ ಈ ಸಾಧನೆಗೆ ಗೌರವ ಡಾಕ್ಟರೇಟ್‌ ನೀಡಿದೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.

ಈ ಸುಂದರನ ಸನ್ಯಾಸಿ ಮಾಡಬಹುದೇ..

ಹೀಗೆ ಇವರ ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಅರ್ಜುನನ ಜೋಗಿ ಹಾಡೂ ಅಷ್ಟೇ ಫೇಮಸ್‌ ಸರಣಿ. ಝೇಂಕಾರ ಮ್ಯೂಸಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ 2019ರ ಜೂನ್‌ 19ರಂದು ಅರ್ಜುನನ ಜೋಗಿ ಸರಣಿ ಹಾಡುಗಳು ಬಿಡುಗಡೆ ಆಗಿವೆ. ಈ ಸರಣಿಯಲ್ಲಿ ಈ ಸುಂದರನ ಸನ್ಯಾಸಿ ಮಾಡಬಹುದೇ.. ಎಂಬ ಹಾಡೂ ಇದೆ. ಅಲ್ಲಿಂದ ಇಲ್ಲಿಯವರೆಗೂ ಈ ಹಾಡನ್ನು 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದೀಗ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿಯೂ ಈ ಹಾಡು ಟ್ರೆಂಡ್‌ ಸೃಷ್ಟಿಸಿದೆ. ಇಂಥಹ ಹಾಡುಗಳು ಟ್ರೆಂಡ್‌ ಆದರೆ ನಮ್ಮ ಜನಪದ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಸಾವಿರಾರು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ. ಅದ್ಬುತ ಸಾಲುಗಳು ಮಧುರವಾದ ಜಾನಪದ ಹಾಡು ಅರ್ಥ ಪೂರ್ಣವಾದ ಹಾಡು ಎಂದೂ ಹೇಳುತ್ತಿದ್ದಾರೆ.

IPL_Entry_Point