Vijayanand OTT Release: ಎರಡು ವರ್ಷಗಳ ಬಳಿಕ ಒಟಿಟಿಗೆ ಬಂದ ಕರುನಾಡ ಸ್ಫೂರ್ತಿ ಕಥೆ, ವಿಜಯ್‌ ಸಂಕೇಶ್ವರ್‌ ಬಯೋಪಿಕ್‌ ‘ವಿಜಯಾನಂದ್’
ಕನ್ನಡ ಸುದ್ದಿ  /  ಮನರಂಜನೆ  /  Vijayanand Ott Release: ಎರಡು ವರ್ಷಗಳ ಬಳಿಕ ಒಟಿಟಿಗೆ ಬಂದ ಕರುನಾಡ ಸ್ಫೂರ್ತಿ ಕಥೆ, ವಿಜಯ್‌ ಸಂಕೇಶ್ವರ್‌ ಬಯೋಪಿಕ್‌ ‘ವಿಜಯಾನಂದ್’

Vijayanand OTT Release: ಎರಡು ವರ್ಷಗಳ ಬಳಿಕ ಒಟಿಟಿಗೆ ಬಂದ ಕರುನಾಡ ಸ್ಫೂರ್ತಿ ಕಥೆ, ವಿಜಯ್‌ ಸಂಕೇಶ್ವರ್‌ ಬಯೋಪಿಕ್‌ ‘ವಿಜಯಾನಂದ್’

ಖ್ಯಾತ ಉದ್ಯಮಿ, ಪದ್ಮಶ್ರೀ ಪುರಸ್ಕೃತ VRL ಸಂಸ್ಥೆಯ ಎಂಡಿ ವಿಜಯ್‌ ಸಂಕೇಶ್ವರ್‌ ಅವರ ಜೀವನ ಆಧರಿತ ಸಿನಿಮಾ ವಿಜಯಾನಂದ್‌ ಇದೀಗ ಒಟಿಟಿಗೆ ಆಗಮಿಸಿದೆ. VRL ಫಿಲ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ್ ಸಂಕೇಶ್ವರ್ ಈ ಸಿನಿಮಾವನ್ನು ನಿರ್ಮಿಸಿದ್ದರು.

ವಿಜಯ್‌ ಸಂಕೇಶ್ವರ್‌ ಬಯೋಪಿಕ್‌ ‘ವಿಜಯಾನಂದ್’
ವಿಜಯ್‌ ಸಂಕೇಶ್ವರ್‌ ಬಯೋಪಿಕ್‌ ‘ವಿಜಯಾನಂದ್’ (IMDb)

Vijayanand OTT Release: ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಎಂಡಿ ಪದ್ಮಶ್ರೀ ಪುರಸ್ಕೃತ ವಿಜಯ್‌ ಸಂಕೇಶ್ವರ್‌ ಅವರ ಜೀವನ ಆಧಾರಿತ ಸಿನಿಮಾ ವಿಜಯಾನಂದ್.‌ 2022ರ ಡಿಸೆಂಬರ್ 9ರಂದು ಕನ್ನಡ ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು ಈ ಸಿನಿಮಾ. ನವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. VRL ಫಿಲ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ್ ಸಂಕೇಶ್ವರ್ ವಿಜಯಾನಂದ್‌ ಸಿನಿಮಾವನ್ನು ನಿರ್ಮಿಸಿದ್ದರು. ಚಿತ್ರಮಂದಿರಗಳಲ್ಲೂಈ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ ಇದೀಗ ಎರಡು ವರ್ಷಗಳ ಬಳಿಕ ಒಟಿಟಿಗೆ ಆಗಮಿಸಿದೆ.

ನಿಹಾಲ್ ರಜಪೂತ್‌, ಭರತ್ ಬೋಪಣ್ಣ, ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ವಿನಯ ಪ್ರಸಾದ್ ಮತ್ತು ಸಿರಿ ಪ್ರಹ್ಲಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಜಯಾನಂದ್‌ ಸಿನಿಮಾ, 2022ರ ಡಿಸೆಂಬರ್‌ನಲ್ಲಿ ಬಿಡುಗಡೆ ಆದರೂ, ಒಟಿಟಿ ಅಂಗಳಕ್ಕೆ ಬಂದಿರಲಿಲ್ಲ. ವಿಜಯ್‌ ಸಂಕೇಶ್ವರ್‌ ಅವರ ಜೀವನವನ್ನು ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡದೇ ಇದ್ದವರು, ಒಟಿಟಿಗೆ ಅದ್ಯಾವಾಗ ಬರಲಿದೆ ಎಂದು ಕಾದಿದ್ದೇ ಬಂತು. ಆದರೆ, ಒಟಿಟಿಯಷ್ಟೇ ಅಲ್ಲ, ಕಿರುತೆರೆಯಲ್ಲಿಯೂ ಈ ಸಿನಿಮಾ ಪ್ರಸಾರ ಕಂಡಿರಲಿಲ್ಲ. ಇದೀಗ ಸುದೀರ್ಘ 2 ವರ್ಷಗಳ ಬಳಿಕ ಒಟಿಟಿಗೆ ಪ್ರವೇಶಿಸಿ, ಸ್ಟ್ರೀಮಿಂಗ್‌ ಆರಂಭಿಸಿದೆ.

ಇದು ಸ್ಫೂರ್ತಿ ಕಥೆ

ಚಿಕ್ಕ ವಯಸ್ಸಿನಲ್ಲಿಯೇ ಗದಗ ನಗರದಲ್ಲಿ ಸಾರಿಗೆ ಉದ್ಯಮವನ್ನು ಕೇವಲ ಒಂದೇ ಒಂದು ಟ್ರಕ್‌ನೊಂದಿಗೆ ಪ್ರಾರಂಭಿಸುತ್ತಾರೆ ವಿಜಯ್‌ ಸಂಕೇಶ್ವರ್. ‌ಅಲ್ಲಿಂದ ಹಲವಾರು ಸವಾಲುಗಳ ಹೊರತಾಗಿಯೂ, ವರ್ಷದಿಂದ ವರ್ಷಕ್ಕೆ ಉದ್ಯಮವನ್ನು ವಿಸ್ತರಿಸುತ್ತಲೇ ಹೋಗುತ್ತಾರೆ. ಇದೀಗ ಅಂತಿಮವಾಗಿ 4,300 ವಾಹನಗಳ ಬೃಹತ್‌ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ ಸಂಕೇಶ್ವರ್. ವಿಜಯಾನಂದ್ ರೋಡ್ ಲೈನ್ಸ್ (VRL) ಭಾರತದ ಅತಿದೊಡ್ಡ ಸಾರಿಗೆ ಕಂಪನಿಗಳಲ್ಲಿ ಒಂದಾಗಿ ಬೆಳೆದು ನಿಂತಿದೆ.

ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ

ಗೋಪಿ ಸುಂದರ್ ಸಂಗೀತ ಸಂಯೋಜಿಸಿರುವ ವಿಜಯಾನಂದ್ ಸಿನಿಮಾ 2022 ಡಿಸೆಂಬರ್ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದೀಗ ಈ ಚಿತ್ರವು ಇಂದಿನಿಂದ (ಫೆಬ್ರವರಿ 14) ಕನ್ನಡದ "ನಮ್ಮ ಫ್ಲಿಕ್ಸ್‌" (Namma Flix) ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ವಿಜಯಾನಂದ್‌ ಸಿನಿಮಾ, ಇದೀಗ ಒಟಿಟಿಯಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಸ್ಟ್ರೀಮಿಂಗ್‌ ಆಗುತ್ತಿದೆ.

ವಿಜಯಾನಂದ್ ಸಿನಿಮಾ ತಾರಾಗಣ

ವಿಜಯಾನಂದ್ ಚಿತ್ರದಲ್ಲಿ ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ರಜಪೂತ್, ಆನಂದ್ ಸಂಕೇಶ್ವರ್ ಪಾತ್ರದಲ್ಲಿ ‌ಭರತ್ ಬೋಪಣ್ಣ, ಬಿಜಿ ಸಂಕೇಶ್ವರ್ ಪಾತ್ರದಲ್ಲಿ ಮತ್ತು ಅನಂತ್ ನಾಗ್ ಕಾಣಿಸಿಕೊಂಡಿದ್ದಾರೆ. ಗಣೇಶ್ ದಾದಾ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡರೆ, ಪ್ರಕಾಶ್ ಬೆಳವಾಡಿ ಮತ್ತು ಅನೀಶ್ ಕುರುವಿಲ್ಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಂದ್ರಮ್ಮ ಪಾತ್ರದಲ್ಲಿ ವಿನಯ ಪ್ರಸಾದ್, ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ವಾಣಿ ಸಂಕೇಶ್ವರ ಪಾತ್ರದಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ರಮೇಶ್ ಭಟ್, ದಯಾಳ್ ಪದ್ಮನಾಭನ್, ​​ಶೈನ್ ಶೆಟ್ಟಿ ಇನ್ನುಳಿದ ಪಾತ್ರವರ್ಗದಲ್ಲಿದ್ದಾರೆ.

ವಿಜಯಾನಂದ್‌ ಚಿತ್ರದ ತಾಂತ್ರಿಕ ಬಳಗ

ವಿಜಯಾನಂದ್ ಚಿತ್ರ ವಿಆರ್‌ಎಲ್‌ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಾ. ಆನಂದ್ ಸಂಕೇಶ್ವರ್ ನಿರ್ಮಿಸಿದ್ದಾರೆ. ರಿಷಿಕಾ ಶರ್ಮಾ ಬರೆದು ನಿರ್ದೇಶಿಸಿದ್ದಾರೆ. ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಗೋಪಿ ಸುಂದರ್ ಸಿ ನೀಡಿದರೆ, ಹಾಡುಗಳನ್ನು ವಿಜಯ್ ಪ್ರಕಾಶ್ ಮತ್ತು ಕೀರ್ತನಾ ವೈದ್ಯನಾಥನ್ ಹಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ರವಿವರ್ಮ ಸಾಹಸ, ಇಮ್ರಾನ್ ಸರ್ಧಾರಿಯಾ ಅವರ ನೃತ್ಯ ನಿರ್ದೇಶನ, ಅನಿಲ್ ಕಬೀರ್ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Manjunath Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner