weekend with Ramesh season 5: ಮಾರ್ಚ್ 25ರಿಂದ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5ರ ಆರಂಭ; ಯಾರಾಗಲಿದ್ದಾರೆ ಮೊದಲ ಅತಿಥಿ?
weekend with Ramesh season 5: ʼವೀಕೆಂಡ್ ವಿತ್ ರಮೇಶ್ 5ನೇ ಸೀಸನ್ʼ ಸದ್ಯದಲ್ಲೇ ಆರಂಭವಾಗಲಿದೆ ಎಂಬ ಸುದ್ದಿ ತಿಳಿದಾಗಿನಿಂದ ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗಲಿದೆ, ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಇದೀಗ ಕಾರ್ಯಕ್ರಮ ಪ್ರಸಾರಕ್ಕೆ ದಿನಾಂಕ ನಿಗದಿಯಾಗಿದ್ದು, ಮೊದಲ ಅತಿಥಿ ಯಾರು ಎಂಬುದು ನಿಗೂಢವಾಗಿದೆ.
ʼವೀಕೆಂಡ್ ವಿತ್ ರಮೇಶ್ʼ, ಇದು ಸಾಧಕರ ವೇದಿಕೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಇಲ್ಲಿ ಕರೆದು, ಪರಿಚಯಿಸಲಾಗುತ್ತದೆ. ಈಗಾಗಲೇ ಯಶಸ್ವಿ 4 ಸೀಸನ್‌ಗಳನ್ನು ಮುಗಿಸಿದೆ ವೀಕೆಂಡ್ ವಿತ್ ರಮೇಶ್. ಇದೀಗ 5ನೇ ಸೀಸನ್‌ನ ಸುದ್ದಿ.
ಟ್ರೆಂಡಿಂಗ್ ಸುದ್ದಿ
ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಆರಂಭವಾಗಲಿದೆ ಎಂಬ ಸುದ್ದಿ ತಿಳಿದಾಗಿನಿಂದ ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗಲಿದೆ, ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಇದೀಗ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಕಾರ್ಯಕ್ರಮದ ಮೊದಲ ಸಂಚಿಕೆ ಮಾರ್ಚ್ 25ರ ಶನಿವಾರದಂದು ಪ್ರಸಾರವಾಗಲಿದೆ. ಮಾರ್ಚ್ 25ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಅಧಿಕೃತ ಪುಟದಲ್ಲಿ ಪ್ರೋಮೊ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದೆ ಜೀ ಕನ್ನಡ ವಾಹಿನಿ.
ಕಾರ್ಯಕ್ರಮ ಆರಂಭವಾಗಲು ತಿಂಗಳು ಇರುವಾಗಲೇ ಪ್ರೋಮೊಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಕಾರ್ಯಕ್ರಮದ ಕುರಿತು ಸಾಕಷ್ಟು ಕುತೂಹಲ ಹುಟ್ಟಿಸಿತ್ತು ಜೀ ವಾಹಿನಿ. ಈ ಬಾರಿಯ 5ನೇ ಸೀಸನ್‌ನಲ್ಲಿ ಯಾವ ಯಾವ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ ಎಂಬುದರಿಂದ ಹಿಡಿದು, ಮೊದಲ ಸಂಚಿಕೆಯಲ್ಲಿ ಯಾರು ಭಾಗವಹಿಸಲಿದ್ದಾರೆ, ಕಾರ್ಯಕ್ರಮ ಎಂದಿನಿಂದ ಪ್ರಸಾರವಾಗಲಿದೆ ಎಂಬ ಬಗ್ಗೆಲ್ಲಾ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು.
ಈ ಬಾರಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಭ್ ಶೆಟ್ಟಿ, ಪ್ರಭುದೇವ, ಖ್ಯಾತ ಯೂಟ್ಯೂಬರ್ ಡಾ. ಬ್ರೋ, ಡಾಲಿ ಧನಂಜಯ್, ಧ್ರುವ ಸರ್ಜಾ, ಕ್ರಿಕೆಟಿಗ ಕೆ.ಎಲ್ ರಾಹುಲ್, ರಚಿತಾ ರಾಮ್, ಅನುಶ್ರೀ, ರಮ್ಯಾ ಮೊದಲಾದವರು ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೊದಲ ಸಂಚಿಕೆಯಲ್ಲಿ ಯಾರು ಬರಲಿದ್ದಾರೆ?
ಸೀಸನ್ 5ರ ಮೊದಲ ಸಂಚಿಕೆಯಲ್ಲಿ ರಿಷಭ್ ಶೆಟ್ಟಿ ಭಾಗವಹಿಸುತ್ತಾರೆ ಎಂಬ ವದಂತಿ ಇತ್ತು, ಈಗ ಮೊದಲ ಸಂಚಿಕೆಯ ಕೆಂಪು ಖುರ್ಚಿಯ ಮೇಲೆ ಪ್ರಭುದೇವ ಕುಳಿತುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಉತ್ತರವಿಲ್ಲ. ಪ್ರಸಾರ ದಿನಾಂಕ ಹಂಚಿಕೊಂಡ ಪ್ರೋಮೊದಲ್ಲೂ ಮೊದಲ ಅತಿಥಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಜೀ ವಾಹಿನಿ. ಹಾಗಾದರೆ ಯಾರಾಗಲಿದ್ದಾರೆ ಮೊದಲ ಅತಿಥಿ ಎನ್ನುವುದಕ್ಕೆ ವಾಹಿನಿಯೇ ಉತ್ತರ ನೀಡಬೇಕಿದೆ.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಪ್ರೋಮೊ
ಕಳೆದ ನಾಲ್ಕು ಸೀಸನ್‌ಗಳಿಂದ ತಮ್ಮ ಅದ್ಭುತ ನಿರೂಪಣಾ ಶೈಲಿಯ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು ನಟ ರಮೇಶ್. ವೀಕೆಂಡ್ ರಮೇಶ್ ಕಾರ್ಯಕ್ರಮದ ಮೂಲಕ ಇವರು ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. 5ನೇ ಸಂಚಿಕೆಯ ಪ್ರಸಾರ ದಿನಾಂಕದ ಪ್ರೋಮೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ರಮೇಶ್ ಅರವಿಂದ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಹಂಚಿಕೊಂಡಿದೆ ವಾಹಿನಿ.
ʼಡಾ. ಬ್ರೋ ಕರೆಸಿʼ
ಇವರ ಈ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ʼಡಾ. ಬ್ರೋ ಅವರನ್ನು ಕರೆಸಿʼ ಎಂದು ಸಾಕಷ್ಟು ಮಂದಿ ಕೇಳಿಕೊಂಡಿದ್ದಾರೆ. ʼಸಿನಿಮಾ ಕ್ಷೇತ್ರದ ಸಾಧಕರನ್ನು ಕರೆಸುವ ಬದಲು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಕರೆಸಿʼ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ʼರೈತರನ್ನು ಕರೆಸಿ, ಸೈನಿಕರನ್ನು ಕರೆಸಿʼ ಎಂದೂ ಹಲವರು ಕಮೆಂಟ್ ಮಾಡಿದ್ದಾರೆ. ಕೆಪಿ ಅರವಿಂದ್, ರಮ್ಯಾ, ರಚಿತ ರಾಮ್, ಶ್ರೀನಾಥ್ ಹೀಗೆ ಹಲವರು ಹೆಸರನ್ನು ಕಮೆಂಟ್‌ನಲ್ಲಿ ಬರೆಯುವ ಮೂಲಕ ಅವರನ್ನು ವೀಕೆಂಡ್ ವಿತ್ ರಮೇಶ್ ವೇದಿಕೆಯ ಮೇಲೆ ಕಾಣುವ ಹಂಬಲ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.