ಡ್ಯೂರೆಕ್ಸ್‌ ಅಂದ್ರೆ ಏನಪ್ಪ? ಮಗನ ಕಾಂಡೋಮ್‌ ಪ್ರಶ್ನೆಗೆ ಅಪ್ಪ ನಿರುತ್ತರ; ಬಿಗ್‌ಬಾಸ್‌ ಕಾರ್ಯಕ್ರಮ ಮಕ್ಕಳೂ ನೋಡ್ತಾರೆ ಅನ್ನೋದನ್ನು ಮರೆತ್ರ?!
ಕನ್ನಡ ಸುದ್ದಿ  /  ಮನರಂಜನೆ  /  ಡ್ಯೂರೆಕ್ಸ್‌ ಅಂದ್ರೆ ಏನಪ್ಪ? ಮಗನ ಕಾಂಡೋಮ್‌ ಪ್ರಶ್ನೆಗೆ ಅಪ್ಪ ನಿರುತ್ತರ; ಬಿಗ್‌ಬಾಸ್‌ ಕಾರ್ಯಕ್ರಮ ಮಕ್ಕಳೂ ನೋಡ್ತಾರೆ ಅನ್ನೋದನ್ನು ಮರೆತ್ರ?!

ಡ್ಯೂರೆಕ್ಸ್‌ ಅಂದ್ರೆ ಏನಪ್ಪ? ಮಗನ ಕಾಂಡೋಮ್‌ ಪ್ರಶ್ನೆಗೆ ಅಪ್ಪ ನಿರುತ್ತರ; ಬಿಗ್‌ಬಾಸ್‌ ಕಾರ್ಯಕ್ರಮ ಮಕ್ಕಳೂ ನೋಡ್ತಾರೆ ಅನ್ನೋದನ್ನು ಮರೆತ್ರ?!

ಬಿಗ್‌ಬಾಸ್‌ ಕನ್ನಡವನ್ನು ಜಿಯೋ ಸಿನಿಮಾದಲ್ಲಿ ದೊಡ್ಡ ಟಿವಿ ಪರದೆಯಲ್ಲಿ ಕುಟುಂಬದ ಜತೆ ನೋಡುವಾಗ ಐದು ವರ್ಷದ ಮಗ "ಡ್ಯೂರೆಕ್ಸ್‌ ಅಂದ್ರೆ ಏನಪ್ಪ?" ಎಂದು ಪ್ರಶ್ನಿಸಿದಾಗ ಅಪ್ಪ ನಿರುತ್ತರರಾಗಬೇಕಾಯಿತು. "ರೆವೆನ್ಯೂ ಜನರೇಷನ್‌" ಮತ್ತು "ಯೂಸರ್‌ ಎಕ್ಸ್‌ಪಿರಿಯೆನ್ಸ್‌" ನಡುವೆ ಒಟಿಟಿಗಳು ರೆವೆನ್ಯೂ ಜನರೇಷನ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಇದೆ.

ಡ್ಯೂರೆಕ್ಸ್‌ ಅಂದ್ರೆ ಏನಪ್ಪ? ಮಗುವಿನ ಕಾಂಡೋಮ್‌ ಪ್ರಶ್ನೆಗೆ ಅಪ್ಪ ನಿರುತ್ತರ
ಡ್ಯೂರೆಕ್ಸ್‌ ಅಂದ್ರೆ ಏನಪ್ಪ? ಮಗುವಿನ ಕಾಂಡೋಮ್‌ ಪ್ರಶ್ನೆಗೆ ಅಪ್ಪ ನಿರುತ್ತರ

ಬಿಗ್‌ಬಾಸ್‌ ಕನ್ನಡ ಆರಂಭವಾದ ಬಳಿಕ ರಾತ್ರಿ 9 ಗಂಟೆ ಅಥವಾ 9.30 ಗಂಟೆಗೆ ಟಿವಿ ಆನ್‌ ಮಾಡಿ ಜಿಯೋ ಸಿನಿಮಾ ಒಟಿಟಿಯಲ್ಲಿ ರಿಯಾಲಿಟಿ ಶೋ ನೋಡುವ ಅಭ್ಯಾಸ ಸಾಕಷ್ಟು ಜನರಿಗೂ ಇದೆ. ನಮ್ಮ ಮನೆಯಲ್ಲೂ ರಾತ್ರಿ ಇದೇ ಹೊತ್ತಿಗೆ ಕಳೆದ ಕೆಲವು ದಿನಗಳಿಂದ ಟಿವಿ ಆನ್‌ ಆಗುತ್ತದೆ. ಪ್ರತಿದಿನದ ಬಿಗ್‌ಬಾಸ್‌ ಶೋಗಿಂತ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಶೋ ಅಂದ್ರೆ ನಮ್ಮ ಮನೆಯಲ್ಲಿ ಬಹುತೇಕರಿಗೆ ಇಷ್ಟ. ಹೀಗೆ, ಐದು ವರ್ಷದ ಮಗನ ಜತೆ ಆಟವಾಡುತ್ತ ಒಂದಿನ ಬಿಗ್‌ಬಾಸ್‌ ನೋಡ್ತಾ ಇದ್ದಾಗ ಮಗನ ಬಾಯಿಂದ ಅನಿರೀಕ್ಷಿತವಾಗಿ "ಅಪ್ಪ ಡ್ಯೂರೆಕ್ಸ್‌ ಅಂದ್ರೆ ಏನಪ್ಪ?" ಎಂಬ ಪ್ರಶ್ನೆ ಬಂತು. ಜಾಹೀರಾತು ಬಂದಾಗ ಸ್ವಯಂಚಾಲಿತವಾಗಿ ನನ್ನ ಮನಸ್ಸು ಟಿವಿಯಿಂದ ಆಫ್‌ ಆಗುವ ಅಭ್ಯಾಸವಿದೆ. ಆದರೆ, ಮಕ್ಕಳಿಗೆ ಜಾಹೀರಾತು ಕೂಡ ನೋಡುವುದು ತುಂಬಾ ಇಷ್ಟ. ಆದರೆ, ಮಗನ ಈ ಪ್ರಶ್ನೆಗೆ ಏನೆಂದು ಉತ್ತರಿಸಲಿ. ಟಿವಿ ನೋಡಿದಾಗ ಡ್ಯೂರೆಕ್ಸ್‌ ಜಾಹೀರಾತಿನ ಜತೆಗೆ ಹರೆಯದ ತರುಣ ತರುಣಿಯರ ಲವ್‌ ಮೇಕಿಂಗ್‌ ದೃಶ್ಯವೂ ಕಾಣುತ್ತಿತ್ತು. "ಜಾಸ್ತಿ ಆಗ್ತಿದೆ ಟಿವಿ ನೋಡೋದು, ಹೋಗು ಹೋಮ್‌ ವರ್ಕ್‌ ಮಾಡು" ಎಂದು ಗದರಿಸುವುದಷ್ಟೇ ನನಗಿದ್ದ ದಾರಿ.

ಬಿಗ್‌ಬಾಸ್‌ ಕನ್ನಡವೆಂದರೆ ಮಕ್ಕಳು, ಹಿರಿಯರು, ಮಹಿಳೆಯರು, ಪುರುಷರು, ಯುವಕರು, ಯುವತಿಯರು ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು. ಪುಟ್ಟ ಮಕ್ಕಳು ಕೂಡ ತೆರೆಮೇಲೆ ಕಿಚ್ಚ ಸುದೀಪ್‌ ಬರುವಾಗ ಖುಷಿಪಡುತ್ತಾರೆ. ಈಗ ಸಾಕಷ್ಟು ಜನರು ಟಿವಿ ಕೇಬಲ್‌ ಬದಲು ಜಿಯೋ ಸಿನೆಮಾ ಒಟಿಟಿಯಲ್ಲೇ ಬಿಗ್‌ಬಾಸ್‌ ನೋಡುತ್ತಾರೆ. ಇದು ಬಿಗ್‌ಬಾಸ್‌ಗೆ ಸೀಮಿತವಾದ ವಿಷಯವಲ್ಲ. ಐಪಿಎಲ್‌ ನೋಡುವಾಗಲೂ ಕಾಂಡೋಮ್‌ ಜಾಹೀರಾತುಗಳು ದಾಂಗುಡಿ ಇಡುತ್ತವೆ. ಸಾಕಷ್ಟು ಮಕ್ಕಳು ಇಂತಹ ಜಾಹೀರಾತುಗಳಿಗೆ ಸಹಜವಾಗಿ ಒಗ್ಗಿ ಹೋದಂತೆ ಇದೆ. ಬಂಧುಬಳಗದ ಜತೆ ಬಿಗ್‌ಬಾಸ್‌, ಐಪಿಎಲ್‌ ಇತ್ಯಾದಿ ಕಾರ್ಯಕ್ರಮಗಳನ್ನು ನೋಡುವಾಗ ಸಾಕಷ್ಟು ಬಾರಿ ಕಾಂಡೋಮ್‌ ಜಾಹೀರಾತು ಬರುತ್ತದೆ. ಮನೆಯಲ್ಲಿರುವ ಹೆಣ್ಣು ಮಕ್ಕಳು ನಾವೇನೂ ನೋಡಿಲ್ಲ ಎಂಬಂತೆ ಬೇರೆ ಕಡೆ ಮುಖ ತಿರುಗಿಸುತ್ತಾರೆ. ಕೆಲವರು ಓರೆ ಕಣ್ಣಲ್ಲಿ ನೋಡುತ್ತಾರೆ. ಕುಟುಂಬದ ಜತೆ ನೋಡುವುದು ಸಾಕಷ್ಟು ಜನರಿಗೆ ಮುಜುಗರದ ವಿಷಯ ಅನ್ನೋದು ಸುಳ್ಳಲ್ಲ.

ಟಿವಿಯಲ್ಲಿ ಕಾಂಡೋಮ್‌ ಜಾಹೀರಾತು ಪ್ರಸಾರ ಮಾಡುವುದಕ್ಕೆ ಅದರದ್ದೇ ಆದ ಕಾನೂನು ಇದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಕಾಂಡೋಮ್‌ ಜಾಹೀರಾತು ಪ್ರಸಾರ ಮಾಡುವಂತೆ ಇಲ್ಲ. ಏಕೆಂದರೆ, ಈ ಜಾಹೀರಾತುಗಳು ಡೀಸೆಂಟ್‌ ಆಗಿರೋದಿಲ್ಲ ಎನ್ನುವ ಕಾರಣ ನೀಡಿ ಬ್ಯಾನ್‌ ಮಾಡಲಾಗಿದೆ. ಆದರೆ, ಒಟಿಟಿಗಳು ಇದನ್ನು ಪಾಲಿಸ್ತವ ಎನ್ನುವುದು ಸ್ಪಷ್ಟವಾಗಿಲ್ಲ.

ಜಿಯೋ ಸಿನಿಮಾದ ಕಾಂಡೋಮ್‌ ಜಾಹೀರಾತುಗಳು ಬಿಗ್‌ಬಾಸ್‌ನಲ್ಲಿ ಮಾತ್ರವಲ್ಲ, ಐಪಿಎಲ್‌ ಮ್ಯಾಚ್‌ ಸಂದರ್ಭದಲ್ಲಿಯೂ ಕೆಲವು ವೀಕ್ಷಕರಿಗೆ ಮುಜುಗರ ತಂದಿತ್ತು. ಮಕ್ಕಳು ಕೂಡ ಐಪಿಎಲ್‌ ಮ್ಯಾಚ್‌ ನೋಡ್ತಾರೆ, ಕಾಂಡೋಮ್‌ ಜಾಹೀರಾತು ತೋರಿಸೋದು ಸರಿಯಾ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಜಿಯೋ ಸಿನಿಮಾದಂತಹ ಒಟಿಟಿಯು ಉಚಿತವಾಗಿ ವೀಕ್ಷಕರಿಗೆ ಕಂಟೆಂಟ್‌ ನೀಡುತ್ತವೆ. ಈ ಉಚಿತ ಆಫರ್‌ಗೆ ಇಂತಹ ಜಾಹೀರಾತುಗಳ ಮೂಲಕ ಕಂಪನಿ ದೊಡ್ಡಮೊತ್ತದಲ್ಲಿ ಜಾಹೀರಾತು ಹಣ ಸಂಗ್ರಹಿಸುತ್ತದೆ ಎನ್ನಲಾಗುತ್ತದೆ. ಆದರೆ, "ರೆವೆನ್ಯೂ ಜನರೇಷನ್‌" ಮತ್ತು "ಯೂಸರ್‌ ಎಕ್ಸ್‌ಪಿರಿಯೆನ್ಸ್‌" ನಡುವೆ ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ಗಳಂತಹ ಒಟಿಟಿಗಳು ಗಮನಹರಿಸಬೇಕಿದೆ. ಜಿಯೋ ಸಿನಿಮಾ ಒಟಿಟಿಯಲ್ಲಿ ನಾನು ಗಮನಿಸಿದ ಇನ್ನೊಂದು ಕಿರಿಕಿರಿ ಇದೆ. ಉಚಿತ ಜಿಯೋ ಸಿನಿಮಾದಲ್ಲಿ ಸಿನಿಮಾ ಅಥವಾ ಟಿವಿ ಕಾರ್ಯಕ್ರಮ ನೋಡುತ್ತ ಇರುವಾಗ ಜಾಹೀರಾತು ಬರುತ್ತದೆ. ಜಾಹೀರಾತು ಬರುವ ಸಮಯದಲ್ಲಿ ಜಾಹೀರಾತುಗಳ ಸದ್ದು ಸಡನ್‌ ಜೋರಾಗುತ್ತದೆ. ರಿಮೋಟ್‌ ಹುಡುಕಿ ತಕ್ಷಣ ವಾಲ್ಯೂಮ್‌ ಡೌನ್‌ ಮಾಡಬೇಕಾಗುತ್ತದೆ.

ಟಿವಿ ಅಂದರೆ ಈಗ ಕೇವಲ ಟಿವಿಯಲ್ಲ, ಅದೀಗ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಕೂಡ ಹೌದು. ಹೀಗಾಗಿ, ಸರಕಾರವು ಎಲ್ಲರೂ ನೋಡುವ ಕಾರ್ಯಕ್ರಮಗಳ ಕುರಿತು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ.

Whats_app_banner