ವಾಮಿಕಾಳಿಂದಾಗಿ ಬೇಗ ಮಲಗ್ತಿವಿ, ಇದರಿಂದ ನಮಗೆ ಸಾಕಷ್ಟು ಲಾಭವಾಗಿದೆ ಎಂದ ಅನುಷ್ಕಾ ಶರ್ಮಾ; ಸ್ಲೀಪ್ ಹೈಜೀನ್ ಬಯಸುವವರಿಗೆ ಇಲ್ಲಿದೆ ಟಿಪ್ಸ್
Early Sleep Routine: ಹೆತ್ತವರಿಗೆ ಮಕ್ಕಳ ಕಾಳಜಿ ವಹಿಸುವ ಸಮಯದಲ್ಲಿ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಮುಂಬೈನಲ್ಲಿ ಈ ಕುರಿತು ಮಾತನಾಡಿದ್ದಾರೆ. ಪುಟ್ಟ ಮಕ್ಕಳ ಕಾಳಜಿ ವಹಿಸುವ ಸಮಯದಲ್ಲಿ ತಾಯಿಯಾದವಳು ನಿದ್ರೆಗೆ ನೀಡಬೇಕಾದ ಮಹತ್ವವನ್ನು ಹೇಳಿದ್ದಾರೆ.
Early Sleep Routine: ಹೆತ್ತವರಿಗೆ ಮಕ್ಕಳ ಕಾಳಜಿ ವಹಿಸುವ ಸಮಯದಲ್ಲಿ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಮುಂಬೈನಲ್ಲಿ ಈ ಕುರಿತು ಮಾತನಾಡಿದ್ದಾರೆ. ಪುಟ್ಟ ಮಕ್ಕಳ ಕಾಳಜಿ ವಹಿಸುವ ಸಮಯದಲ್ಲಿ ತಾಯಿಯಾದವಳು ನಿದ್ರೆಗೆ ನೀಡಬೇಕಾದ ಮಹತ್ವವನ್ನು ಹೇಳಿದ್ದಾರೆ. ಡಿಸೈನರ್ ಮಸಬಾ ಗುಪ್ತಾ ಅವರ ಜತೆಗಿನ ಸಂವಾದದ ಸಮಯದಲ್ಲಿ ಅನುಷ್ಕಾ ಶರ್ಮಾ ಸಾಕಷ್ಟು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಮಗಳು ವಾಮಿಕಾ ಜನಿಸಿದ ಬಳಿಕ ಬೇಗನೇ ಮಲಗುವುದು ನನ್ನ ಜೀವನದ ಭಾಗವಾಯ್ತು ಎಂದು ಅವರು ಹೇಳಿದ್ದಾರೆ. "ಈಗ ನಮ್ಮ ಕುಟುಂಬದ ಎಲ್ಲರೂ ಅದನ್ನು ಪಾಲಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ಅಂದಹಾಗೆ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಆ ಮಗುವಿನ ಹೆಸರು ಅಕಾಯ್.
"ನನ್ನ ಮಗಳು ವಾಮಿಕಾಗೆ ಡಿನ್ನರ್ ಬೇಗ ಬೇಕು. ಎಷ್ಟು ಬೇಗ ಎಂದರೆ ಸಂಜೆ 5.30 ಗಂಟೆಗೆ ಬೇಕು. ನಾನು ಬಹುತೇಕ ಸಮಯ ಆಕೆಯೊಂದಿಗೆ ಮನೆಯಲ್ಲಿರುವೆ. ನನಗೂ ಅದೇ ಸರಿ ಎನಿಸಿತ್ತು. ನಾನೂ ಬೇಗ ಡಿನ್ನರ್ ಮಾಡಲು ಆರಂಭಿಸಿದೆ. ನಾನೂ ಬೇಗ ಮಲಗಲು ಆರಂಭಿಸಿದೆ. ನಿಜ ಹೇಳಬೇಕೆಂದರೆ ನನಗೆ ಅದರಿಂದ ತುಂಬಾ ಪ್ರಯೋಜನ ದೊರಕಿತ್ತು. ನನಗೆ ಒಳ್ಳೆಯ ನಿದ್ರೆ ದೊರಕಿತು. ಬೆಳಗ್ಗೆ ಎದ್ದಾಗ ತಾಜಾ ಅನುಭವ ದೊರಕಿತ್ತು. ತಲೆ ಧಿಮ್ ಅನ್ನೋದು ಕಡಿಮೆಯಾಯ್ತು. ಈಗ ನನ್ನ ಕುಟುಂಬದ ಎಲ್ಲರೂ ಬೇಗ ಮಲಗಲು ಆದ್ಯತೆ ನೀಡುತ್ತಿದ್ದಾರೆ" ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ಸ್ಲೀಪ್ ಹೈಜೀನ್ ಯಾಕೆ ಮುಖ್ಯ?
ಈ ಕುರಿತು ಸಾಷ್ಟು ಚರ್ಚೆಗಳಾಗಿವೆ. ಲಿಂಕ್ಡ್‌ಇನ್‌ನಲ್ಲಿ ಡಾಕ್ಟರ್ ಅಭಿಷೇಕ್ ಪಸಾರಿ ಹೀಗೆ ಬರೆದಿದ್ದಾರೆ. "ಸ್ಲೀಪ್ ಹೈಜೀನ್ ಎನ್ನುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದೆ. ಇದು ಮಕ್ಕಳಿಗೆ ಮಾತ್ರವಲ್ಲದೆ ಹೆತ್ತವರಿಗೂ ಒಳ್ಳೆಯದು.
ಸ್ಲೀಪ್ ಹೈಜೀನ್ ಎಂದರೇನು?
ರಾತ್ರಿ ಉತ್ತಮ ಗುಣಮಟ್ಟದ ನಿದ್ದೆ ಮಾಡುವುದಕ್ಕೆ ನೆರವಾಗುವ ಅಭ್ಯಾಸವನ್ನು ಸ್ಲೀಪ್ ಹೈಜೀನ್ ಎನ್ನುತ್ತಾರೆ. ಬೇಗ ಮಲಗುವುದು, ಬೇಗ ಎದ್ದೇಳುವುದು ಕೂಡ ಇದರಲ್ಲಿ ಸೇರಿದೆ. ಪ್ರತಿರಾತ್ರಿ ಒಳ್ಳೆಯ ನಿದ್ರೆಗೆ ಈ ಅಭ್ಯಾಸ ಸಹಕರಿಸುತ್ತದೆ.
ಮಗು ಹೆತ್ತ ಬಳಿಕ ತಾಯಂದರಿಗೆ ಇದು ಅತ್ಯಂತ ಅಗತ್ಯ. ಮಗು ನಿದ್ದೆ ಮಾಡಿದಾಗ ಎಚ್ಚರದಿಂದ ಇದ್ದು, ಮಗು ಎದ್ದಾಗ ನಿದ್ದೆ ಮಾಡಲಾಗದೆ ಸಾಕಷ್ಟು ತಾಯಂದಿರು ತೊಂದರೆ ಅನುಭವಿಸುತ್ತಾರೆ. ಗುಣಮಟ್ಟದ ನಿದ್ರೆಯು ಚಿಂತೆ, ಆತಂಕ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಹೆತ್ತವರೇ ಈ ತಪ್ಪು ಮಾಡಬೇಡಿ
- ಮಗು ಮಲಗಿದೆ, ಇನ್ನು ಸ್ವಲ್ಪ ಟೀವಿ ನೋಡುವೆ, ಮೊಬೈಲ್ ನೋಡುವೆ ಎಂದು ರಾತ್ರಿ ನಿದ್ರೆಗೆಡಬೇಡಿ, ಮಗುವಿನೊಂದಿಗೆ ನೀವು ಮಗುವಿನಂತೆ ಮಲಗಿ.
- ನಿದ್ರೆಗೆ ಮೊದಲು ಸ್ಕ್ರೀನ್ ಟೈಮ್ ಅವಾಯ್ಡ್ ಮಾಡಿ. ಅಂದರೆ, ಮೊಬೈಲ್ , ಟೀವಿಯಂತಹ ಸ್ಕ್ರೀನ್ ನೋಡಬೇಡಿ. ಆಮೇಲೆ ರಾತ್ರಿ ಸರಿಯಾಗಿ ನಿದ್ದೆ ಬರೋಲ್ಲ.
- ಮಗುವಿನ ನಿದ್ದೆ, ದಿನಚರಿಗೆ ತಕ್ಕಂತೆ ನಿಮ್ಮ ದಿನಚರಿಯನ್ನು ಹೊಂದಿಸಿಕೊಳ್ಳಿ. ಅಸರ್ಮಪಕ ದಿನಚರಿ ಕೂಡ ನಿಮ್ಮ ನಿದ್ರೆ ಹಾಳು ಮಾಡುತ್ತದೆ.
- ಮಗುವಿನ ಕಾಳಜಿಗೆ ಮಾತ್ರ ಗಮನ ನೀಡುವುದು, ನಿಮ್ಮ ನಿದ್ರ, ಆರೋಗ್ಯದ ಕುರಿತು ಗಮನಹರಿಸದೆ ಇರುವುದು ಮಾಡಬೇಡಿ.
- ಟೀ ಕಾಫಿ ಇತ್ಯಾದಿಗಳನ್ನು ಅತಿಯಾಗಿ ಸೇವಿಸಬೇಡಿ. ಆಮೇಲೆ ರಾತ್ರಿ ನಿದ್ರೆ ಬಾರದೆ ಹೊರಳಾಡಬೇಡಿ.
ಏನು ಮಾಡಬಹುದು?
- ಅನುಷ್ಕಾ ಶರ್ಮಾ ಮಾತನ್ನೇ ಸ್ಪೂರ್ತಿಯಾಗಿ ತೆಗೆದುಕೊಳ್ಳಿ. ನೀವು ಮಾತ್ರವಲ್ಲದೆ ಕುಟುಂಬದ ಎಲ್ಲರೂ ಬೇಗ ಮಲಗುವಂತೆ ಪ್ರೋತ್ಸಾಹಿಸಿ.
- ನಿದ್ರೆಗೆ ಮುನ್ನ ಧ್ಯಾನದಂತಹ ಮೆಡಿಟೇಷನ್ ಕ್ರಮಗಳನ್ನು ಅನುಸರಿಸಿ.
- ಮೊಬೈಲ್‌ನಂತಹ ಗ್ಯಾಜೆಟ್‌ಗಳನ್ನು ನಿದ್ರೆಗಿಂತ ಒಂದು ಗಂಟೆ ಮೊದಲು ಬಳಸಬೇಡಿ. ಟವಿ ಕೂಡ ಬೇಡ.
- ಕೆಫಿನ್‌ಯುಕ್ತ ಪಾನೀಯ ಕಡಿಮೆ ಮಾಡಿ.
- ಸುಖನಿದ್ರೆಗೆ ಸಹಕರಿಸುವ ಒಳ್ಳೆಯ ದಿಂಬು, ಹಾಸಿಗೆಗೆ ಹೂಡಿಕೆ ಮಾಡಿ.
- ನಿಮಗಾಗಿ ಸಮಯ ಮೀಸಲಿಡಿ. ಆ ಸಮಯದಲ್ಲಿ ರಿಲಾಕ್ಸ್ ಆಗಿ.