ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರರಂಗಕ್ಕೂ- ಪುರಂದರದಾಸರಿಗೂ ಇದೆ ಗಾಢ ನಂಟು; ಹೀಗಿವೆ ಚಂದನವನದಲ್ಲಿ ದಾಸಶ್ರೇಷ್ಠರ ಹೆಜ್ಜೆಗುರುತು
ದಾಸಶ್ರೇಷ್ಠ ಪುರಂದರದಾಸರ ಕುರಿತಾಗಿ ಕನ್ನಡ ಚಿತ್ರರಂಗದಲ್ಲೊಂದು ಈ ವಾರ (ಡಿಸೆಂಬರ್ 05) ಸದ್ದಿಲ್ಲದೆ ಬಿಡುಗಡೆ ಆಗಿದೆ. ‘ಹರಿದಾಸರ ದಿನಚರಿ’ ಹೆಸರಿನ ಈ ಚಿತ್ರದಲ್ಲಿ ಡಾ. ವಿದ್ಯಾಭೂಷಣರು ಪುರಂದರದಾಸರಾಗಿ ಕಾಣಿಸಿಕೊಂಡಿರುವುದು ವಿಶೇಷ. ಈ ಸಿನಿಮಾ ನೆಪದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ದಾಸರ ಕುರಿತ ಸಿನಿಮಾಗಳ ಹೆಜ್ಜೆಗುರುತುಗಳ ಬಗೆಗಿನ ಅಂಕಣ ಇಲ್ಲಿದೆ.
Cine Smrithi Column: ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರಿಗೂ, ಕನ್ನಡ ಚಿತ್ರರಂಗಕ್ಕೂ ಬಹಳ ಹತ್ತಿರವಾದ ನಂತರ. ಪುರಂದರದಾಸರ ಹಲವು ಕೀರ್ತನೆಗಳನ್ನು ಕನ್ನಡದ ಹಲವು ಚಿತ್ರಗಳಲ್ಲಿ ಹಾಡುಗಳನ್ನಾ ಬಳಸಿಕೊಳ್ಳಲಾಗಿದೆ. ಇನ್ನು, ಪುರಂದರದಾಸರ ಕುರಿತು ಕನ್ನಡದಲ್ಲಿ 60ರ ದಶಕದಲ್ಲಿ ಈಗಾಗಲೇ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಈಗ ಬಿಡುಗಡೆಯಾಗಿರುವ ‘ಹರಿದಾಸರ ದಿನಚರಿ’ ಚಿತ್ರವು ಈ ಸಾಲಿನಲ್ಲಿ ನಾಲ್ಕನೇ ಚಿತ್ರವಾಗಿದೆ.
1937ರಲ್ಲಿ ಮೊದಲ ಚಿತ್ರ ಬಂದಿತ್ತು
ಪುರಂದರದಾಸರ ಕುರಿತು ಕನ್ನಡದಲ್ಲಿ ಬಂದ ಮೊದಲ ಚಿತ್ರವೆಂದರೆ, ಅದು 1937ರಲ್ಲಿ ಬಿಡುಗಡೆಯಾದ ಬಿ. ಚವ್ಹಾಣ್ ನಿರ್ದೇಶನದ ‘ಪುರಂದರದಾಸ’. ಶ್ರೀನಿವಾಸ ನಾಯಕನೆಂಬ ಶ್ರೀಮಂತ ಜಿಪುಣ ಪರಿವರ್ತನೆಯಾಗಿ, ಹೇಗೆ ತನ್ನ ಸಂಪತ್ತನ್ನೆಲ್ಲಾ ದಾನ ಮಾಡಿ ಹರಿನಾಮ ಸ್ಮರಣೆ ಮಾಡಿ, ಕೊನೆಗೆ ಹೇಗೆ ದೇವರಲ್ಲಿ ಲೀನರಾಗುತ್ತಾರೆ ಎಂಬ ಕಥೆ ಈ ಚಿತ್ರದ್ದು. ಈ ಚಿತ್ರವನ್ನ ಪುರಂದರದಾಸರ ನಾಟಕವನ್ನು ಆಧರಿಸಿತ್ತು. ಕನ್ನಡದ ಮೊದಲ ಚಿತ್ರಸಾಹಿತಿ ಬೆಳ್ಳಾವ ನರಹರಿಶಾಸ್ತ್ರಿಗಳು ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದರು. ಬಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುರಂದರದಾಸರ ಹಲವು ಕೀರ್ತನೆಗಳನ್ನು ಬಳಸಿಕೊಳ್ಳಲಾಗಿತ್ತಂತೆ.
ಡಾ. ರಾಜಕುಮಾರ್, ಪುರಂದರದಾಸರಾದಾಗ …
ಇದಾಗಿ 1964ರಲ್ಲಿ ಪುರಂದರದಾಸರ ಕುರಿತಾಗಿ ‘ನವಕೋಟಿ ನಾರಾಯಣ’ ಎಂಬ ಚಿತ್ರ ಬಂದಿತ್ತು. ಇದು ಸಹ ಪುರಂದರದಾಸರ ಜೀವನ ಚರಿತ್ರೆಯೇ. ಡಾ. ರಾಜಕುಮಾರ್ ಪುರಂದರದಾಸರಾಗಿ ನಟಿಸಿದ ಈ ಚಿತ್ರವನ್ನು ಎಸ್.ಕೆ.ಎ. ಚಾರಿ ನಿರ್ದೇಶನ ಮಾಡಿದ್ದರು. ಶ್ರೀನಿವಾಸ ನಾಯಕ, ಪುರಂದರದಾಸರಾಗಿ ಬದಲಾಗುವ ಈ ಚಿತ್ರದಲ್ಲಿ ರಾಜಕುಮಾರ್ ಅವರ ಜೊತೆಗೆ ಸಾಹುಕಾರ್ ಜಾನಕಿ, ರಾಮಚಂದ್‍ರ ಶಾಸ್ತ್ರಿ, ಡಿಕ್ಕಿ ಮಾಧವರಾವ್ ಮುಂತಾದವರು ನಟಿಸಿದ್ದರು. ಈ ಚಿತ್ರದಲ್ಲಿ ‘ಮಧುಕರ ವೃತ್ತಿ ಎನ್ನದು …’, ‘ಕೆರೆಯ ನೀರನು ಕೆರೆಗೆ ಚೆಲ್ಲಿ …’, ‘ಆದದ್ದೆಲ್ಲಾ ಒಳಿತೇ ಆಯಿತು …’ ಮುಂತಾದ ದಾಸರ ಕೀರ್ತನೆಗಳನ್ನು ಬಳಸಿಕೊಳ್ಳುವುದರ ಜೊತೆಗೆ ನರೇಂದ್ರ ಬಾಬು ಸಹ ಸಾಹಿತ್ಯ ರಚಿಸಿದ್ದರು.
ಅಶ್ವತ್ಥ್ ಅಭಿನಯದಲ್ಲೂ ಒಂದು ಚಿತ್ರ
1967ರಲ್ಲಿ ಪುರಂದರದಾಸರ ಕುರಿತು ‘ಶ್ರೀಪುರಂದರದಾಸರು’ ಎಂಬ ಇನ್ನೊಂದು ಚಿತ್ರ ಬಂದಿತ್ತು. ಅದರಲ್ಲಿ ದಾಸರಾಗಿ ಕೆ.ಎಸ್. ಅಶ್ವತ್ಥ್ ನಟಿಸಿದ್ದರು. ಸಿ.ವಿ. ರಾಜು ನಿರ್ದೇಶನದ ಈ ಚಿತ್ರದಲ್ಲಿ ಅಶ್ವತ್ಥ್ ಅವರ ಜೊತೆಗೆ ಆರ್. ನಾಗೇಂದ್ರ ರಾವ್, ರಾಜಾಶಂಕರ್, ಉದಯಕುಮಾರ್, ಬಾಲಕೃಷ್ಣ ಮುಂತಾದವರು ನಟಿಸಿದ್ದರು. ದಾಸರ ಕೀರ್ತನೆಗಳನ್ನು ಈ ಚಿತ್ರಕ್ಕಾಗಿ ಬಳಸಿಕೊಳ್‍ಳಲಾಗಿತ್ತು. ಡಾ. ಬಾಲಮುರಳಿಕೃಷ್ಣ ಕೆಲವು ಕೀರ್ತನೆಗಳನ್ನು ಹಾಡಿದ್ದು ವಿಶೇಷಷವಾಗಿತ್ತು
ದಾಸರ ದಿನಚರಿಯ ಕುರಿತಾದ ಚಿತ್ರ ಇದು
ಇದಾಗಿ ಸುಮಾರು 57 ವರ್ಷಗಳ ನಂತರ ಕನ್ನಡದಲ್ಲಿ ಇದೀಗ ‘ಹರಿದಾಸರ ದಿನಚರಿ’ ಚಿತ್ರ ಬಿಡುಗಡೆಯಾಗಿದೆ. ಮೊದಲ ಮೂರು ಚಿತ್ರಗಳು ಪುರಂದರದಾಸರ ಜೀವನಚರಿತ್ರೆಯನ್ನು ಹೇಳಿದರೆ, ಈ ಚಿತ್ರವು ಪುರಂದರದಾಸರ ದೈನಂದಿನ ಜೀವನದ ದೃಶ್ಯಗಳನ್ನು ಒಳಗೊಂಡಿದೆ. ದಾಸರು ತಮ್ಮ ದಿನಚರಿಯಲ್ಲಿ ‘ಜಗದೋದ್ಧಾರನ ಆಡಿಸಿದಳೆ ಯಶೋದೆ …’ ಸೇರಿದಂತೆ ಹಲವು ರಚನೆಗಳನ್ನು ಹೇಗೆ ಮಾಡಿದರು ಮತ್ತು ಅದರ ಹಿನ್ನೆಲೆ ಏನರಿಬಹುದು ಎಂದು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ದಾಸರ ಈ ವಿಶೇಷ ದಿನವನ್ನು ಮುಂಜಾನೆಯ ಪ್ರಾರ್ಥನಾ ಕರ್ಮಗಳಿಂದ ಪ್ರಾರಂಭಿಸಿ, ರಾತ್ರಿ ಮಲಗುವ ತನಕ ಚಿತ್ರಣ ನೀಡಲಾಗುತ್ತದೆ.
ವಿದ್ಯಾಭೂಷಣರು ಪುರಂದರದಾಸರಾದಾಗ
ಕನ್ನಡದ ಖ್ಯಾತ ದಾಸ ಸಾಹಿತ್ಯದ ಗಾಯಕ ಡಾ. ವಿದ್ಯಾಭೂಷಣರು, ಈ ಚಿತ್ರದಲ್ಲಿ ಶ್ರೀ ಪುರಂದರದಾಸರಾಗಿ ಕಾಣಿಸಿಕೊಂಡಿದ್ದಾರೆ. ಇತರೆ ಪಾತ್ರಗಳಲ್ಲಿ ಘನಶ್ಯಾಮ್ ಕೆ.ವಿ, ಗೋಕುಲ್ ಅಯ್ಯರ್, ವಾಸುದೇವ ಮೂರ್ತಿ ಕೆ.ಎನ್, ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನ ಹೊಣೆ ಹೊತ್ತವರು ಗಿರೀಶ್ ನಾಗರಾಜ. ಡಾ. ವಿದ್ಯಾಭೂಷಣರು ಸಂಗೀತ ಸಂಯೋಜಿಸುವುದರ ಜೊತೆಗೆ ಎಲ್ಲಾ ಹಾಡುಗಳನ್ನು ಹಾಡಿದ್ದಾರೆ. ಪುರಂದರದಾಸರ ಹಲವು ಕೀರ್ತನೆಗಳನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.
ಗಿರೀಶ್ ಕಾರ್ನಾಡ್ ಅವರ ‘ಕನಕ ಪುರಂದರ’
ಇದಲ್ಲದೆ, ಕರ್ನಾಟಕದಲ್ಲಿ ಭಕ್ತಿ ಚಳವಳಿಯನ್ನು ಮುನ್ನಡೆಸಿದ ಪುರಂದರದಾಸರು ಮತ್ತು ಕನಕದಾಸರನ್ನು ಕುರಿತು ‘ಕನಕಪುರಂದರ’ ಎಂಬ ಕಿರುಚಿತ್ರವನ್ನು ಗಿರೀಶ್ ಕಾರ್ನಾಡ್, ಫಿಲಂಸ್ ಡಿವಿಷನ್‍ಗಾಗಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಶ್ರೀನಿವಾಸ ಪ್ರಭು ಅವರು ಪುರಂದರದಾಸರಾಗಿ ಕಾಣಿಸಿಕೊಂಡರೆ, ಕನಕದಾಸರಾಗಿ ಶಂಕರ್ ನಾಗ್ ನಟಿಸಿದ್ದರು. ಮಿಕ್ಕಂತೆ ಅರುಂಧತಿ ನಾಗ್, ಹಾಸಕೃ ಮುಂತಾದವರು ಅಭಿನಯಿಸಿದ್ದರು.
ಸಂದರ್ಭಕ್ಕೆ ತಕ್ಕ ಹಾಗೆ ದಾಸರ ಕೀರ್ತನೆಗಳು
ಇದು ಪುರಂದರದಾಸರ ಕುರಿತಾದ ಚಿತ್ರಗಳಾದರೆ, ಅವರು ರಚಿಸಿದ ಕೀರ್ತನೆಗಳನ್ನು ಹಲವು ಚಿತ್ರಗಳಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಳ್ಳಲಾಗಿದೆ. ‘ಗಾಳಿಗೋಪುರ’ ಚಿತ್ರದಲ್ಲಿ ‘ಯಾರಿಗೆ ಯಾರುಂಟು ಎರವಿನ ಸಂಸಾರ …’ ಕೀರ್ತನೆಯನ್ನು ಹಾಡನ್ನಾಗಿ ಬಳಸಿಕೊಳ್ಳಲಾಗಿತ್ತು. ಈ ಹಾಡನ್ನು ತೆಲುಗಿನ ಜನಪ್ರಿಯ ಗಾಯಕ ಘಂಟಸಾಲ ಹಾಡಿದ್ದರು. ‘ಅನುರಾಧ’ ಚಿತ್ರಕ್ಕಾಗಿ ಪಿ.ಬಿ. ಶ್ರೀನಿವಾಸ್, ‘ಗುಮ್ಮನ ಕರೆಯದಿರೆ ಅಮ್ಮಾ ನೀನು …’ ಎಂಬ ಅದ್ಭುತ ಹಾಡೊಂದನ್ನು ಹಾಡಿದ್ದರು. ರಾಜನ್-ನಾಗೇಂದ್ರ ಸಂಗೀತ ಸಂಯೋಜಿಸಿದ ಈ ಹಾಡಿನಲ್ಲಿ ಪಂಡರಿಬಾಯಿ ಮತ್ತು ಕುಟ್ಟಿ ಪದ್ಮಿನಿ ಕಾಣಿಸಿಕೊಂಡರು. ಪುರಂದರಾಸರು ಕೀರ್ತನೆಯನ್ನು ಬಳಸಿಕೊಂಡ ಇನ್ನೊಂದು ಚಿತ್ರವೆಂದರೆ, ಅದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಉಪಾಸನೆ’. ಈ ಚಿತ್ರದಲ್ಲಿ ‘ಆಚಾರವಿಲ್ಲದ ನಾಲಗೆ …’ಯನ್ನು ಸಂದರ್ಭಕ್ಕೆ ತಕ್ಕ ಹಾಗೆ ಅದ್ಭುತವಾಗಿ ಬಳಸಿಕೊಳ್ಳಲಾಗಿತ್ತು. ಅದೇ ರೀತಿಯ ಇನ್ನೊಂದು ಹಾಡೆಂದರೆ ಅದು ‘ಹಾಲು ಜೇನು’ ಚಿತ್ರದ ‘ಪೋಗದಿರೆಲೋ ರಂಗ …’. ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜನೆಯ ಈ ಹಾಡಿಗೆ ಎಸ್. ಜಾನಕಿ ಧ್ವನಿಯಾಗಿದ್ದರು. ‘ನೋಡಿ ಸ್ವಾಮಿ ನಾವಿರೋದು ಹೀಗೇ’ ಚಿತ್ರದ ‘ಭಾಗ್ಯದ ಲಕ್ಷ್ಮೀ ಬಾರಮ್ಮ …’ ಹಾಡಿಗೆ ಪಂಡಿತ್ ಭೀಮಸೇನ ಜೋಷಿ ಧ್ವನಿಯಾದರೆ, ಅನಂತ್ ನಾಗ್, ಶಂಕರ್ ನಾಗ್, ಲಕ್ಷ್ಮೀ ಮುಂತಾದವರು ನಟಿಸಿದ್ದರು.
ಇದಲ್ಲದೆ, 'ಕಣ್ತೆರದು ನೋಡು' ಚಿತ್ರದ 'ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರೂ ...', 'ಸಂಧ್ಯಾ ರಾಗ' ಚಿತ್ರದ 'ಈ ಪರಿಯ ಸೊಬಗು ..' ಮತ್ತು 'ತೇಲಿಸೋ ಇಲ್ಲ ಮುಳುಗಿಸೋ' ...' ‘ಭಲೇ ಅದೃಷ್ಟವೋ ಅದೃಷ್ಟ’ ಚಿತ್ರದ ‘ಕಂಡು ಕಂಡು ನೀ ಎನ್ನ …’, ‘ಮಾಲತಿ ಮಾಧವ’ ಚಿತ್ರವು ‘ಬೃಂದಾವನದೊಳು ಆಡುವನಾರೆ …’, ‘ದೇವರು ಕೊಟ್ಟ ತಂಗಿ’ ಚಿತತ್ರದ ‘ಲಾಲಿಸಿದಳು ಮಗನ ಯಶೋದೆ …’, ‘ಅಡ್ಡದಾರಿ ಚಿತ್ರದ ‘ತಾಳು ತಾಳೆಲೋ ರಂಗಯ್ಯ …’, ‘ಮೃಗಾಲಯ’ ಚಿತ್ರದ ‘ಮೆಲ್ಲಮೆಲ್ಲನೆ ಬಂದನೆ ಗೋಪಮ್ಮ ಕೇಳೆ …’, ‘ಮಲಯ ಮಾರುತ’ ಚಿತ್ರದ ‘ಶ್ರೀನಿವಾಸ ಎನ್ನ ಬಿಟ್ಟು …’, ‘ಅಮೃತಧಾರೆ’ ಚಿತ್ರದ ‘ಗಿಳಿಯು ಪಂಜರದೊಳಿಲ್ಲ …’ ಕೀರ್ತನೆಗಳನ್ನು ಬಳಸಿಕೊಳ್ಳಲಾಗಿತ್ತು. ವಿಶೇಷವೆಂದರೆ, ಸುದೀಪ್ ಅಭಿನಯದ ಎರಡು ಚಿತ್ರಗಳಲ್ಲಿ ‘ಜಗೋದಾದ್ಧಾರನ …’ ಕೀರ್ತನೆಯನ್ನು ಬಳಸಿಕೊಳ್ಳಲಾಗಿದೆ. ‘ಮೈ ಆಟೋಗ್ರಾಫ್’ ಚಿತ್ರದಲ್ಲಿ ರಶ್ಮಿ ಮತ್ತು ಶ್ರೀವಿದ್ಯಾ ಹಾಡಿದರೆ, ‘ರನ್ನ’ ಚಿತ್ರಕ್ಕಾಗಿ ಕಾರ್ತಿಕ್ ಮತ್ತು ವಾಣಿ ಹರಿಕೃಷ್ಣ ಹಾಡಿದ್ದರು. ಇದು ಕೆಲವು ಉದಾಹರಣೆಗಳಷ್ಟೇ. ಇದಲ್ಲದೆ, ಪುರಂದರದಾಸರ ಇನ್ನೂ ಹಲವು ಕೀರ್ತನೆಗಳನ್ನು ಇನ್ನಷ್ಟು ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದ್ದು, ಇಲ್ಲಿ ಕೆಲವಷ್ಟನ್ನೇ ಹೆಸರಿಸಲಾಗಿದೆ.
ಎಂದೂ ಮರೆಯಲಾಗದ ಬಿ.ವಿ. ಕಾರಂತರ ‘ಸತ್ತವರ ನೆರಳು’
ಇನ್ನು, ಪುರಂದರದಾಸರ ಕೀರ್ತನೆಗಳನ್ನು ಅದ್ಭುತವಾಗಿ ಬಳಸಿಕೊಂಡ ನಾಟಕವೆಂದರೆ ಅದು ‘ಸತ್ತವರ ನೆರಳು’. 1974ರಲ್ಲಿ ಮೊದಲ ಬಾರಿಗೆ ಪ್ರಯೋಗಗೊಂಡ ಈ ನಾಟಕ, ಇದುವರೆಗೂ 600ಕ್ಕೂ ಹೆಚ್ಚ ಬಾರಿ ಜಗತ್ತಿನಾದ್ಯಂತ ಪ್ರದರ್ಶನವಾಗಿರುವುದು ವಿಶೇಷ. ಈ ನಾಟಕಕ್ಕೆ ಪುರಂದರದಾಸರ ಹಲವು ಕೀರ್ತನೆಗಳನ್ನು ಸಂದರ್ಭೋಚಿವಾಗಿ ಬಳಸಿಕೊಳ್ಳಲಾಗಿತ್ತು. ಬೆನಕ ತಂಡಕ್ಕಾಗಿ ಈ ನಾಟಕವನ್ನು ನಿರ್ದೇಶನ ಮಾಡುವುದರ ಜೊತೆಗೆ, ಹಾಡುಗಳನ್ನು ಸಂಯೋಜಿಸಿದವರು ಬಿ.ವಿ. ಕಾರಂತ್. ‘ಆಚಾರವಿಲ್ಲದ ನಾಲಗೆ’, ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’, ‘ಕುರುಡು ನಾಯಿ ತಾ ಸಂತೆಗೆ ಬಂತಂತೆ …’, ‘ಇಬ್ಬರೆಂಡಿರ ಸುಖವ …’, ‘ಆದದ್ದೆಲ್ಲಾ ಒಳಿತೇ ಆಯಿತು …’ ಮುಂತಾದ ಕೀರ್ತನೆಗಳನ್ನು ಬಳಸಿಕೊಳ್ಳಲಾಗಿತ್ತು.
ಲೇಖಕ ಚೇತನ್ ನಾಡಿಗೇರ್ ಪರಿಚಯ
ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರ ‘ಖುಷಿಯಿಂದ ರಮೇಶ್’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್ ಶಾಟ್ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.