'ರುಧಿರಂ' ಸಿನಿಮಾದಲ್ಲಿ ಡಾಕ್ಟರ್ ಆದ ರಾಜ್ ಬಿ ಶೆಟ್ಟಿ; ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಕನ್ನಡದ ನಟ?
ಈ ವಾರದಲ್ಲೇ ಬಿಡುಗಡೆಯಾಗಲಿರುವ ಮಲಯಾಳಂ ಸಿನಿಮಾ ‘ರುಧಿರಂ’ನಲ್ಲಿ ರಾಜ್ ಬಿ ಶೆಟ್ಟಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ವಿಲನ್ ಪಾತ್ರ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು. ಆ ಪ್ರಶ್ನೆಗೆ ಇಲ್ಲೇ ಇದೆ ಉತ್ತರ.
ರುಧಿರಂ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ನೆಗೆಟಿವ್ ಪಾತ್ರದಲ್ಲಿ ನಟಿಸಲಿದ್ದಾರಾ ಎಂಬ ಅನುಮಾನ ಮೂಡಿತ್ತು. ಆದರೆ ಅವರು ಈ ಬಗ್ಗೆ ಎಲ್ಲೂ ಅಷ್ಟಾಗಿ ಹೇಳಿಕೊಂಡಿರಲಿಲ್ಲ. ಈಗ ರಾಜ್ ಬಿ ಶೆಟ್ಟಿ ಅಭಿನಯದ ಮಲಯಾಳಂ ಸಿನಿಮಾ ರುಧಿರಂ ತೆರೆಕಾಣಲು ಕೆಲವೇ ದಿನಗಳು ಮಾತ್ರ ಉಳಿದಿದೆ. ಹೀಗಿರುವಾಗ ಸಿನಿಮಾದ ಪ್ರಚಾರಕ್ಕಾಗಿ ಬಂದಾಗ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಆಗ ರಾಜ್ ಬಿ ಶೆಟ್ಟಿಯ ಪಾತ್ರ ಏನು? ಇದು ನೆಗಟಿವ್ ಪಾತ್ರನಾ? ಎಂದು ಪ್ರಶ್ನೆ ಮಾಡಲಾಗಿದೆ. ಆಗ ಕೆಲವೊಂದು ವಿಚಾರವನ್ನು ರಾಜ್ ಬಿ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ಮಲಯಾಳಂ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ
ಇದು ರಾಜ್ ಬಿ ಶೆಟ್ಟಿ ಅವರ ಕನ್ನಡ ಚಿತ್ರವಲ್ಲ. ಬದಲಿಗೆ ‘ರುಧಿರಂ’ ಎಂಬ ಮಲಯಾಳಂ ಚಿತ್ರ. ವರ್ಷದ ಹಿಂದೆ ರಾಜ್ ಶೆಟ್ಟಿ, ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿ ಇತ್ತು. ಈ ಪೈಕಿ ‘ಟರ್ಬೋ’ ಮತ್ತು ‘ಕೊಂಡಂ’ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಇದು ಅವರ ಮೂರನೇ ಚಿತ್ರವಾಗಿದೆ. ಇದೇ ತಿಂಗಳು ಅಂದರೆ ಡಿಸೆಂಬರ್ 13ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಅವರು ನೆಗಟಿವ್ ಪಾತ್ರ ಮಾಡುತ್ತಿದ್ದಾರಾ? ಅಥವಾ ಪಾಸಿಟಿವ್ ಪಾತ್ರ ಮಾಡುತ್ತಿದ್ದಾರಾ? ಎಂಬ ಅನುಮಾನದಲ್ಲಿ ಆ ಪಾತ್ರದ ಬಗ್ಗೆ ಹೆಚ್ಚಿನ ವಿವರಣೆ ಕೇಳಲಾಯಿತು. ಆಗ ಅವರು ಹೇಳಿದ್ದೇನೆಂದರೆ “ಈ ಪಾತ್ರ ದಯೆ ಮತ್ತು ತುಂಬಾ ಉದಾರತೆ ಇರುವ ಪಾತ್ರ. ಈ ಪಾತ್ರದ ಹೆಸರು ಡಾಕ್ಟರ್ ಮ್ಯಾಥೀವ್. ನಾನು ಈ ಹಿಂದೆ ಈ ರೀತಿಯ ಪಾತ್ರಗಳನ್ನು ಮಾಡಿರಲಿಲ್ಲ. ಇದೊಂದು ಹೊಸ ರೀತಿಯ ಪಾತ್ರ” ಎಂದು ಹೇಳಿದ್ದಾರೆ.
ಪಾತ್ರದ ಬಗ್ಗೆ ಹೇಳಿದ್ದೇನು ನೋಡಿ
ಪಾತ್ರದ ಬಗ್ಗೆ ಹೇಳುತ್ತಾ ಅವನೊಳಗೆ ಒಂದು ವಿಭಿನ್ನ ಕಥೆಯಿದೆ, ಅವನಲ್ಲಿ ನೋವಿದೆ, ಹೋರಾಟವಿದೆ ಎಂದು ಹೇಳಿದ್ದಾರೆ. ಈ ಪಾತ್ರದ ಬಗ್ಗೆ ಹೇಳಲು ಇನ್ನಷ್ಟು ವಿಚಾರಗಳಿದ್ದರೂ “ಸಿನಿಮಾದ ಪಯಣದ ಮೂಲಕವೇ ಗೊತ್ತಾಗಲಿದೆ. ಅದುವೇ ಪಾತ್ರದ ಸೊಗಸು” ಎಂದು ಹೇಳಿದ್ದಾರೆ. ನೀವು ಅದನ್ನು ಧನಾತ್ಮಕ ಅಥವಾ ನಕಾರಾತ್ಮಕ ಪಾತ್ರ ಎಂದು ಹೇಳಲು ಸಾಧ್ಯವಿಲ್ಲ ಅವನೊಬ್ಬ ಸಾಮಾನ್ಯ ಮನುಷ್ಯ ಎಂದು ಸಹ ಹೇಳಿದ್ದಾರೆ.
‘ರುಧಿರಂ’ ಒಂದು ಚಿತ್ರ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಪರ್ಣಾ ಬಾಲಮುರಳಿ ಸಹ ನಟಿಸುತ್ತಿದ್ದಾರೆ. ರೈಸಿಂಗ್ ಸನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ವಿ.ಎಸ್. ಲಾಲನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿಶೋ ಲಾನ್ ಆ್ಯಂಟೊನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ‘The axe forgets, but the tree remembers’ ಎಂಬ ಅಡಿಬರಹವಿದೆ. ಅಂದರೆ, ಕೊಡಲಿ ಮರೆತರೂ ಮರ ಮರೆಯುವುದಿಲ್ಲ ಎಂದರ್ಥ.