Saregamapa Show: ಈ 32 ಅಭ್ಯರ್ಥಿಗಳಲ್ಲಿ ನಿಮ್ಮಿಷ್ಟದ ಸರಿಗಮಪ ಸ್ಪರ್ಧಿ ಯಾರು? ಜನರ ಕೈಗೆ ಅಧಿಕಾರ ನೀಡಿದ ತೀರ್ಪುಗಾರರು
Zee Kannada reality shows: ಈಗಾಗಲೇ ಒಂದು ಪ್ರೋಮೋ ಮೂಲಕ ಗಮನ ಸೆಳೆದಿರುವ ಸರೆಗಮಪ ಸಿಂಗಿಂಗ್ ಶೋ, ಇದೀಗ ಮತ್ತೊಂದು ಪ್ರೋಮೋ ಜತೆಗೆ ಆಗಮಿಸಿದೆ. ಈ ಎರಡನೇ ಪ್ರೋಮೋದಲ್ಲಿ ಈ ಸಲದ 32 ಅಭ್ಯರ್ಥಿಗಳನ್ನು ರಿವೀಲ್ ಮಾಡಿದೆ. ಆ 32ರಲ್ಲಿ ಅಂತಿಮ 16 ಸ್ಪರ್ಧಿಗಳು ಯಾರು ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ.
Saregamapa Show: ಜೀ ಕನ್ನಡದ ಟಾಪ್ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಶೋಗೆ ವಿಶೇಷ ಸ್ಥಾನವಿದೆ. ಇಲ್ಲಿಯವರೆಗೂ ನೂರಾರು ಗಾಯಕರನ್ನು ನಾಡಿಗೆ ಪರಿಚಯಿಸಿದ ಕೀರ್ತಿಯೂ ಈ ಶೋಗೆ ಸಲ್ಲಬೇಕು. ಎಲೆಮರೆಕಾಯಿಯಂತಿದ್ದವರನ್ನೂ ಕರೆತಂದು ಅವರಿಗೊಂದು ದೊಡ್ಡ ವೇದಿಕೆ ಕಲ್ಪಿಸಿಕೊಟ್ಟ ಇದೇ ಸರೆಗಮಪ ರಿಯಾಲಿಟಿ ಶೋ, ಈಗಾಗಲೇ 20 ಸೀಸನ್‌ಗಳನ್ನು ಪೂರೈಸಿದೆ. ಇದೀಗ ಮುಂದುವರಿದು ಹೊಸ ಸೀಸನ್ ಜತೆಗೆ ಆಗಮಿಸುತ್ತಿದೆ. ಸೀಸನ್‌ನಿಂದ ಸೀಸನ್‌ಗೆ ಹೊಸತನ್ನು ಪರಿಚಯಿಸುತ್ತಲೇ ಬಂದಿರುವ ಈ ಶೋ ಈಗ ಯೂನಿಕ್ ಕಾನ್ಸೆಪ್ಟ್ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ.
ಈಗಾಗಲೇ ಒಂದು ಪ್ರೋಮೋ ಮೂಲಕ ಗಮನ ಸೆಳೆದಿರುವ ಸರೆಗಮಪ ಸಿಂಗಿಂಗ್ ಶೋ, ಇದೀಗ ಮತ್ತೊಂದು ಪ್ರೋಮೋ ಜತೆಗೆ ಆಗಮಿಸಿದೆ. ಹಾಗಾದರೆ ಎರಡನೇ ಪ್ರೋಮೋದಲ್ಲಿ ಏನಿದೆ? ಅದಕ್ಕೂ ಮುನ್ನ ಈ ಸಲದ ಸ್ಪರ್ಧಿಗಳ ಯಾರು ಎಂಬ ಬಗ್ಗೆ ತಿಳಿದುಕೊಳ್ಳೊಣ. ಈ ವರೆಗೂ ಈ ಸಲದ ಶೋನಲ್ಲಿ ಯಾರೆಲ್ಲ ಹಾಡುಗಾರರು ಸ್ಪರ್ಧಿಗಳಾಗಿ ಇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಬದಲಿಗೆ, ಎಂದಿನಂತೆ ರಾಜ್ಯದ ಹಲವು ಕಡೆಗಳಲ್ಲಿ ಸರೆಗಮಪ ಆಡಿಷನ್‌ಗಳು ನಡೆದಿವೆ. ಸಾವಿರಾರು ಮಂದಿ ಗಾಯಕರು ತಮ್ಮ ಪ್ರತಿಭೆ ತೋರಿಸಿದ್ದಾರೆ. ಆ ಪೈಕಿ ಒಂದಷ್ಟು ಗಾಯಕರನ್ನು ತೀರ್ಪುಗಾರರು ಫೈನಲ್ ಮಾಡಿದ್ದಾರೆ.
ಇದೀಗ ಹಾಗೆ ಶಾರ್ಟ್ ಲಿಸ್ಟ್ ಆದ ಗಾಯಕರ ಅಂತಿಮ ಆಯ್ಕೆ ನಡೆಯಲಿದೆ. ಹಾಗಾದರೆ ಆ ಆಯ್ಕೆಯನ್ನು ತೀರ್ಪುಗಾರರೇ ಮಾಡಲಿದ್ದಾರಾ? ಇಲ್ಲ, ಈ ಆಯ್ಕೆಯ ಹೊಣೆಯನ್ನು ನಾಡಿನ ವೀಕ್ಷಕರ ಮಡಿಲಿಗೆ ಹಾಕಿದ್ದಾರೆ! ಅಂದರೆ, ಯಾರು ಒಳ್ಳೆಯ ಗಾಯಕಿ/ ಗಾಯಕ ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ. ಅವರೇ ಆಯ್ಕೆ ಮಾಡಲಿದ್ದಾರೆ. ಅವರ ಆಯ್ಕೆಯೇ ಅಂತಿಮವಾಗಿರಲಿದೆ. ಈ ವಿಚಾರವನ್ನು ತಿಳಿಸುವ ಹೊಸ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಹಾಗಾದರೆ, ಜೀ ಕನ್ನಡ ಇನ್‌ಸ್ಟಾಗ್ರಾಂ ಪುಟದಲ್ಲಿ ಬಿಡುಗಡೆಯಾದ ಪ್ರೋಮೋದಲ್ಲಿ ಏನಿದೆ? ಇಲ್ಲಿದೆ ನೋಡಿ.
ಶೋನ ತೀರ್ಪುಗಾರರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ, ಈ ಸಲದ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಬಕೆಟ್ ಹಿಡಿದು ದೊಡ್ಡ ಪೋಸ್ಟ್ ಗಿಟ್ಟಿಸಿಕೊಂಡ ವ್ಯಕ್ತಿಯ ಬಗ್ಗೆ ಮಾತನಾಡಿಕೊಳ್ಳುವ ಇಬ್ಬರನ್ನು ಕಂಡ ಜನ್ಯ, ಇಷ್ಟು ಚೆನ್ನಾಗಿ ಇನ್ನೊಬ್ಬರನ್ನು ಜಡ್ಜ್ ಮಾಡುವ ನೀವು ಇಲ್ಲಿ ಇರಬಾರದಿತ್ತು. ಮತ್ತೆಲ್ಲಿ ಸರ್ ಎಂದು ಆ ಇಬ್ಬರೂ ಕೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸರ್.. ಜೀ ಕನ್ನಡ ಸರಿಗಮಪ ಪೇಜ್‌ಗೆ ಹೋಗಿ, ಅಲ್ಲಿನ ಮೆಗಾ ಆಡಿಷನ್‌ನ ಕಂಟೆಸ್ಟಂಟ್‌ಗಳನ್ನು ಲೈಕ್ ಮಾಡುವ ಮೂಲಕ ಸೆಲೆಕ್ಟ್ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ" ಎಂದಿದ್ದಾರೆ.
ಸರೆಗಮಪ ಇನ್‌ಸ್ಟಾ ಪೇಜ್‌ನಲ್ಲಿ ಏನಿದೆ?
ಈಗಾಗಲೇ ಜೀ ಕನ್ನಡದ zeekannadasaregamapa ಪೇಜ್ ಆಕ್ಟಿವ್ ಆಗಿದೆ. ಈ ಪೇಜ್‌ನಲ್ಲಿ ಬರೋಬ್ಬರಿ 32 ಸ್ಪರ್ಧಿಗಳ ಯಾರೆಂಬುದನ್ನು ರಿವೀಲ್ ಮಾಡಲಾಗಿದೆ. ಈ ಪೈಕಿ 16 ಸ್ಪರ್ಧಿಗಳು ಆಯ್ಕೆಯಾಗಲಿದ್ದಾರೆ. ಈ 32 ಜನರಲ್ಲಿ 15 ಜನ ಮಕ್ಕಳು ಇನ್ನುಳಿದ 17 ಜನ ವಯಸ್ಕರಿದ್ದಾರೆ. ಈ 32 ವಿಡಿಯೋ ತುಣುಕುಗಳಿಗೆ ಸಾವಿರಾರು ಲೈಕ್ಸ್‌ಗಳು ಬಂದಿವೆ. ಅದರಲ್ಲಿ ಹಾವೇರಿಯ ಬಾಲು ಬೆಳಗುಂದಿ ಅವರ ವಿಡಿಯೋ ಅತಿ ಹೆಚ್ಚು (7 ಲಕ್ಷಕ್ಕೂ ಅಧಿಕ) ವೀಕ್ಷಣೆ ಜತೆಗೆ 77 ಸಾವಿರ ಲೈಕ್ಸ್ ಪಡೆದಿದೆ.
ರಾಜೇಶ್ ಕೃಷ್ಣನ್ ಕಂಬ್ಯಾಕ್
ಇತ್ತೀಚಿನ ಕೆಲ ಸೀಸನ್‌ಗಳಲ್ಲಿ ಹಂಸಲೇಖ, ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಶೋಗೆ ಈಗ ಖ್ಯಾತ ಗಾಯಕನ ಆಗಮನವಾಗಿದೆ. ಕೆಲ ಸೀಸನ್‌ಗಳಿಂದ ದೂರವೇ ಉಳಿದಿದ್ದ ರಾಜೇಶ್ ಕೃಷ್ಣನ್ ಇದೀಗ ಮತ್ತೆ ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ಅವರ ಜತೆ ಸೇರಿದ್ದಾರೆ. ಈ ಮೂಲಕ ಹೊಸ ಥ್ರಿಲ್ ಕೊಡಲು ತ್ರಿಮೂರ್ತಿಗಳು ಸಜ್ಜಾಗಿದ್ದಾರೆ.