Chhaava: ಮರಾಠರ ಘನತೆ ಎತ್ತಿಹಿಡಿದ ಸಂಭಾಜಿ ಮಹಾರಾಜ್ ಯಾರು? ಮೊಘಲರ ಎದುರು ಗರ್ವದಿಂದ ತಲೆಎತ್ತಿದ್ದ ಸಿಂಹದ ಮರಿಯ ಬದುಕಿನ ಕಥೆ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  Chhaava: ಮರಾಠರ ಘನತೆ ಎತ್ತಿಹಿಡಿದ ಸಂಭಾಜಿ ಮಹಾರಾಜ್ ಯಾರು? ಮೊಘಲರ ಎದುರು ಗರ್ವದಿಂದ ತಲೆಎತ್ತಿದ್ದ ಸಿಂಹದ ಮರಿಯ ಬದುಕಿನ ಕಥೆ ಇಲ್ಲಿದೆ

Chhaava: ಮರಾಠರ ಘನತೆ ಎತ್ತಿಹಿಡಿದ ಸಂಭಾಜಿ ಮಹಾರಾಜ್ ಯಾರು? ಮೊಘಲರ ಎದುರು ಗರ್ವದಿಂದ ತಲೆಎತ್ತಿದ್ದ ಸಿಂಹದ ಮರಿಯ ಬದುಕಿನ ಕಥೆ ಇಲ್ಲಿದೆ

Chhaava: ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ 'ಛಾವ' ಸಿನಿಮಾದ ಪ್ರಚಾರ ಈಗಾಗಲೇ ಆರಂಭವಾಗಿದೆ. ಇದು ಸಂಭಾಜಿ ಮಹಾರಾಜರ ಜೀವನ ಆಧರಿತ ಐತಿಹಾಸಿಕ ಚಿತ್ರ. ಟ್ರೇಲರ್ ನೋಡಿದ ಅಭಿಮಾನಿಗಳು ಸಂಭಾಜಿ ಯಾರು? ಅವರ ಬದುಕು ಹೇಗಿತ್ತು? ಎಂದು ಹುಡುಕಾಡುತ್ತಿದ್ದಾರೆ. ಇಂಥ ಪ್ರಶ್ನೆಗಳು ನಿಮ್ಮಲ್ಲೂ ಇದ್ದರೆ ಈ ಬರಹದಲ್ಲಿ ಉತ್ತರ ಸಿಗಲಿದೆ.

ಮರಾಠರ ಘನತೆ ಎತ್ತಿಹಿಡಿದ ಸಂಭಾಜಿ ಮಹಾರಾಜ್ ಯಾರು?
ಮರಾಠರ ಘನತೆ ಎತ್ತಿಹಿಡಿದ ಸಂಭಾಜಿ ಮಹಾರಾಜ್ ಯಾರು?

Who Is Sambhaji Maharaj: ಐತಿಹಾಸಿಕ ಸಿನಿಮಾ ‘ಛಾವ’ದ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಸಂಭಾಜಿ ಮಹಾರಾಜ್‌ ಯಾರು? ಅವರ ಬದುಕು ಹೇಗಿತ್ತು? ಎಂಬ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನ ಕೌತುಕ ಹೊಂದಿದ್ದಾರೆ. ಅದೇ ರೀತಿ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಅಭಿನಯದ ಸಿನಿಮಾ ಬಿಡುಗಡೆಯ ಸುದ್ದಿ ಕೇಳಿಬರುತ್ತಿದ್ದಂತೆ ನಿಜ ಜೀವನದಲ್ಲಿ ಸಂಭಾಜಿ ಹೇಗಿದ್ದರು? ಅವರ ಹಿನ್ನಲೆ ಏನು ಎಂದು ತಿಳಿದುಕೊಳ್ಳಲು ಹಲವರು ಹುಡುಕಾಡುತ್ತಿದ್ದಾರೆ. ಅಂಥವರಿಗಾಗಿ ಇಲ್ಲಿದೆ ಒಂದಿಷ್ಟು ಮಾಹಿತಿ

ಸಂಭಾಜಿ ಮಹಾರಾಜ್ ಯಾರು?

ಛತ್ರಪತಿ ಶಿವಾಜಿಯ ಮಗ, ಮರಾಠ ಸಾಮ್ರಾಜ್ಯದ ಎರಡನೇ ದೊರೆಯಾಗಿ ಆಳ್ವಿಕೆ ನಡೆಸಿದವರೇ ಸಂಭಾಜಿ. ಮೇ 14, 1657 ರಂದು ಪುಣೆ ಬಳಿಯ ಪುರಂದರಗಡದಲ್ಲಿ ಸಂಭಾಜಿ ಜನನವಾಗುತ್ತದೆ. ಛತ್ರಪತಿ ಶಿವಾಜಿಯ ಮೊದಲ ಪತ್ನಿ ಸಾಯಿಬಾಯಿ ಸಂಭಾಜಿಯ ತಾಯಿ. ಸಾಯಿಬಾಯಿಯ ಮರಣದ ನಂತರ ಜೀಜಾಬಾಯಿ ಸಂಭಾಜಿಯವರನ್ನು ಬೆಳೆಸುತ್ತಾರೆ. ಜೀಜಾಬಾಯಿ ಶಿವಾಜಿಯ ತಾಯಿ.

ಛಲಗಾರ ಸಂಭಾಜಿ

ಸಂಭಾಜಿ ಎರಡು ವರ್ಷದ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಸಂಭಾಜಿ ಒಂಬತ್ತು ವರ್ಷದವರಾಗಿದ್ದಾಗ, ಅವರನ್ನು ಅಂಬರ್ ರಾಜ ಜೈ ಸಿಂಗ್ I ಅವರ ಅರಮನೆಯಲ್ಲಿ ರಾಜಕೀಯ ಒತ್ತೆಯಾಳಾಗಿ ವಾಸಿಸಲು ಕಳಿಸಲಾಗುತ್ತದೆ. 1666 ರಲ್ಲಿ, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಇಬ್ಬರೂ ಮೊಘಲ್ ಚಕ್ರವರ್ತಿ ಔರಂಗಜೇಬನ ಆಸ್ಥಾನದಲ್ಲಿ ಗೃಹಬಂಧನದಲ್ಲಿರುತ್ತಾರೆ. ಎರಡು ತಿಂಗಳ ನಂತರ, ತಂದೆ ಮತ್ತು ಮಗ ಇಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ.

ಛತ್ರಪತಿ ಶಿವಾಜಿ ಮಹಾರಾಜರು ಏಪ್ರಿಲ್ 1680 ರಲ್ಲಿ ಮರಣಹೊಂದಿದ ನಂತರ, ಸಂಭಾಜಿಯ ಮಲಸಹೋದರ ರಾಜಾರಾಮ್ ಅವರನ್ನು ರಾಜನನ್ನಾಗಿ ಮಾಡಲು ಮರಾಠರ ಆಸ್ಥಾನದಲ್ಲಿ ಕೆಲವು ಮಂತ್ರಿಗಳು ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಕೊನೆಗೇ ಇವರೇ ರಾಜರಾಗುತ್ತಾರೆ. ಸಿಂಹಾಸನವನ್ನು ಏರಿದ ನಂತರ, ಸಂಭಾಜಿ ವಿವಿಧ ನೆರೆಯ ಸಾಮ್ರಾಜ್ಯಗಳ ವಿರುದ್ಧ ಕಾರ್ಯಾಚರಣೆ ಆರಂಭಿಸುತ್ತಾರೆ.

ವೀರ ಸಂಭಾಜಿ

ಸಂಭಾಜಿಗೆ ಮೊಘಲರಿಂದ ಸದಾ ತೊಂದರೆಯಾಗುತ್ತಿತ್ತು. ಆ ಕಾರಣಕ್ಕಾಗಿ ಆಂಗ್ಲರ ಆಯುಧಗಳು ಮತ್ತು ಗನ್ ಪೌಡರ್ ಅಗತ್ಯವನ್ನು ಮನಗಂಡು 1684ರಲ್ಲಿ ಇಂಗ್ಲಿಷರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಚಿಕ್ಕದೇವರಾಜ ಒಡೆಯರ್ ಆಳ್ವಿಕೆ ನಡೆಸುತ್ತಿದ್ದ ಮೈಸೂರನ್ನು ವಶಪಡಿಸಿಕೊಳ್ಳಲು ಸಂಭಾಜಿ ಪ್ರಯತ್ನಿಸಿದ್ದರು. 1687ರಲ್ಲಿ ಮರಾಠರು ಮತ್ತೊ ಮೊಘಲರ ನಡುವೆ ದೊಡ್ಡ ಯುದ್ಧವಾಗುತ್ತದೆ. ಮರಾಠರೇ ಗೆಲ್ಲುತ್ತಾರೆ. ಮಹಾಬಲೇಶ್ವರದ ದಟ್ಟವಾದ ಕಾಡುಗಳಲ್ಲಿ ಆ ಯುದ್ಧ ನಡೆದಿರುತ್ತದೆ. ಆದರೆ ಅದೇ ಸಂದರ್ಭದಲ್ಲಿ ಸೇನಾಧಿಪತಿ ಹಂಬಿರಾವ್ ಮೋಹಿತೆಯನ್ನು ಅವರು ಕಳೆದುಕೊಳ್ಳುತ್ತಾರೆ. ಅಲ್ಲಿಂದಾಚೆಗೆ ಸಂಭಾಜಿ ಸೈನ್ಯ ದುರ್ಬಲವಾಗುತ್ತಾ ಬರುತ್ತದೆ.

ಸಂಭಾಜಿ ಮಹಾರಾಜರ ಅಂತ್ಯ

ಸಂಭಾಜಿಯನ್ನು 11 ಮಾರ್ಚ್ 1689 ರಂದು ಸಂಭಾಜಿ ಅವರನ್ನು ಕೊಲ್ಲಲಾಯಿತು ಎಂದು ಹಲವೆಡೆ ಉಲ್ಲೇಖವಿದೆ. ಅವರ ಅಂತ್ಯ ಹೇಗಾಯಿತು ಎನ್ನುವ ಬಗ್ಗೆ ಹಲವು ಕಥನಗಳಿವೆ. ಒಂದು ಕಥನದ ಪ್ರಕಾರ ಮೊಘಲರು ಸಂಭಾಜಿಯನ್ನು ಸೆರೆಹಿಡಿದು ತುಲಾಪುರದಲ್ಲಿ ಶಿರಚ್ಛೇದನ ಮಾಡಿದರು. ಕೊಲ್ಲುವ ಮೊದಲು ಅವರಿಗೆ ಚಿತ್ರಹಿಂಸೆ ನೀಡಲಾಯಿತು ಎಂದೂ ಸಹ ಹಲವು ಪಠ್ಯಗಳು ಉಲ್ಲೇಖಿಸುತ್ತವೆ. ಬದುಕಿದ್ದಷ್ಟೂ ದಿನ ತನ್ನತನವನ್ನು ಬಿಡದೆ, ಮೊಘಲರಿಗೆ ಬಗ್ಗದೇ ಮರಾಠ ಸಾಮ್ರಾಜ್ಯವನ್ನು ಕಾಪಾಡಿಕೊಂಡ ಮಹಾವೀರ ಎಂದೇ ಸಂಭಾಜಿ ಮಹಾರಾಜರನ್ನು ಇತಿಹಾಸವು ಗೌರವಿಸುತ್ತಿದೆ.

(ಗಮನಿಸಿ: ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿರುವ ಮಾಹಿತಿಯನ್ನು ಆಧರಿಸಿ ಈ ಲೇಖನ ಬರೆಯಲಾಗಿದೆ)

Whats_app_banner