ವಿಷ್ಣುವರ್ಧನ್‍- ದ್ವಾರಕೀಶ್‍ ಮಧ್ಯೆ ಬಿರುಕು ಮೂಡಿದ್ದು ಯಾಕೆ? ಇದು ಇಬ್ಬರು ಸ್ಟಾರ್‌ಗಳ ನಡುವಿನ ʻಅಹಂʼ ವಿಚಾರ
ಕನ್ನಡ ಸುದ್ದಿ  /  ಮನರಂಜನೆ  /  ವಿಷ್ಣುವರ್ಧನ್‍- ದ್ವಾರಕೀಶ್‍ ಮಧ್ಯೆ ಬಿರುಕು ಮೂಡಿದ್ದು ಯಾಕೆ? ಇದು ಇಬ್ಬರು ಸ್ಟಾರ್‌ಗಳ ನಡುವಿನ ʻಅಹಂʼ ವಿಚಾರ

ವಿಷ್ಣುವರ್ಧನ್‍- ದ್ವಾರಕೀಶ್‍ ಮಧ್ಯೆ ಬಿರುಕು ಮೂಡಿದ್ದು ಯಾಕೆ? ಇದು ಇಬ್ಬರು ಸ್ಟಾರ್‌ಗಳ ನಡುವಿನ ʻಅಹಂʼ ವಿಚಾರ

ದ್ವಾರಕೀಶ್‌ ಮತ್ತು ವಿಷ್ಣುವರ್ಧನ್ ‌ಸಾಕಷ್ಟು ಚಿತ್ರಗಳನ್ನು ಮಾಡಿದ್ದರೂ, ಇಬ್ಬರ ಸಂಬಂಧ ಸರಳವಾಗೇನೂ ಇರಲಿಲ್ಲ. ಇಬ್ಬರೂ ಸಾಕಷ್ಟು ಬಾರಿ ಜಗಳವಾಡಿಕೊಂಡು ದೂರಾಗಿದ್ದರು. ಮತ್ತೆ ಹತ್ತಿರವಾಗಿ ಜೊತೆಗೆ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರೂ ಜಗಳ ಆಡುತ್ತಿದ್ದುದು ಯಾಕೆ?

ವಿಷ್ಣುವರ್ಧನ್‍- ದ್ವಾರಕೀಶ್‍ ಮಧ್ಯೆ ಬಿರುಕು ಮೂಡಿದ್ದು ಯಾಕೆ? ಇದು ಇಬ್ಬರು ಸ್ಟಾರ್‌ಗಳ ನಡುವಿನ ʻಅಹಂʼ ವಿಚಾರ
ವಿಷ್ಣುವರ್ಧನ್‍- ದ್ವಾರಕೀಶ್‍ ಮಧ್ಯೆ ಬಿರುಕು ಮೂಡಿದ್ದು ಯಾಕೆ? ಇದು ಇಬ್ಬರು ಸ್ಟಾರ್‌ಗಳ ನಡುವಿನ ʻಅಹಂʼ ವಿಚಾರ

Dr Vishnuvardhan: ವಿಷ್ಣುವರ್ಧನ್‌ ಮತ್ತು ದ್ವಾರಕೀಶ್‌ ಕನ್ನಡ ಚಿತ್ರರಂಗದಲ್ಲಿ ‘ಆಪ್ತಮಿತ್ರ’ರೆಂದು ಗುರುತಿಸಿಕೊಂಡವರು. ಇಬ್ಬರೂ ಜೊತೆಯಾಗಿ ಹಲವು ಚಿತ್ರಗಳಲ್ಲಿ ನಟಿಸಿದರೆ, ದ್ವಾರಕೀಶ್ ನಿರ್ಮಾಣದ ಹಲವು ಚಿತ್ರಗಳಲ್ಲಿ ವಿಷ್ಣುವರ್ಧನ್‍ ನಾಯಕನಾಗಿ ನಟಿಸಿದ್ದರು. ಜೊತೆಗೆ ಅಷ್ಟು ಚಿತ್ರಗಳನ್ನು ಮಾಡಿದ್ದರೂ, ಇಬ್ಬರ ಸಂಬಂಧ ಸರಳವಾಗೇನೂ ಇರಲಿಲ್ಲ. ಇಬ್ಬರೂ ಸಾಕಷ್ಟು ಬಾರಿ ಜಗಳವಾಡಿಕೊಂಡು ದೂರಾಗಿದ್ದಾರೆ. ಮತ್ತೆ ಹತ್ತಿರವಾಗಿ ಜೊತೆಗೆ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರೂ ಜಗಳ ಆಡುತ್ತಿದ್ದುದು ಯಾಕೆ?

ಈ ವಿಷಯವಾಗಿ ಹಿರಿಯ ನಿರ್ದೇಶಕ ಭಾರ್ಗವ, ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ವಿಷ್ಣುವರ್ಧನ್‍ ಮತ್ತು ದ್ವಾರಕೀಶ್‍ ಇಬ್ಬರನ್ನೂ ಬಹಳ ಹತ್ತಿರದಿಂದ ನೋಡಿದವರು ಅವರು. ವಿಷ್ಣುವರ್ಧನ್‍ ಒಳ್ಳೆಯ ಸ್ನೇಹಿತನಾದರೆ, ದ್ವಾರಕೀಶ್‍ ಸಂಬಂಧಿ. ಇಬ್ಬರ ಜೊತೆಗೂ ಭಾರ್ಗವ ಅವರಿಗೆ ಒಳ್ಳೆಯ ಗೆಳೆತನ ಇತ್ತು. ಇಬ್ಬರು ದೂರಾದಾಗಲೂ, ಭಾರ್ಗವ ಜೊತೆಗಿನ ಸಂಬಂಧ ಮಾತ್ರ ಹಳಸಲಿಲ್ಲ. ಇಷ್ಟಕ್ಕೂ ವಿಷ್ಣುವರ್ಧನ್‍ ಮತ್ತು ದ್ವಾರಕೀಶ್‍ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದುದೇಕೆ? ಇಗೋ ಸಮಸ್ಯೆಯಿಂದಾಗಿ ಎನ್ನುತ್ತಾರೆ ಭಾರ್ಗವ.

ಇಬ್ಬರ ನಡುವೆ ಅಡ್ಡ ಬಂದ ಅಹಂ

ಸ್ನೇಹವು ಸ್ನೇಹವಾಗಿಯೇ ಇರಬೇಕೇ ಹೊರತು, ಅದರಲ್ಲಿ ನಾನು ದೊಡ್ಡವನು, ನೀನು ಚಿಕ್ಕವನು ಎಂಬುದೆಲ್ಲಾ ಬರಲೇ ಬಾರದು. ನಾನು ಹೆಚ್ಚು, ನೀನು ಹೆಚ್ಚು ಎಂಬ ಇಗೋ ಬಂದುಬಿಟ್ಟರೆ, ಸ್ನೇಹ ಮೊದಲಿನ ತರಹ ಇರುವುದಿಲ್ಲ. ವಿಷ್ಣುವರ್ಧನ್‍ ಮತ್ತು ದ್ವಾರಕೀಶ್‍ ನಡುವೆಯೂ ಇದೇ ಏನೋ ಆಗಿರಬೇಕು. ಹಾಗಾಗಿ, ಅವರಿಬ್ಬರೂ ಆಗಾಗ ಜಗಳ ಕಾಯುತ್ತಿದ್ದರು, ಮಾತಾಡೋದನ್ನು ಬಿಡುತ್ತಿದ್ದರು. ಪುನಃ ಯಾವಾಗಲೋ ಒಂದಾಗಿ ಜೊತೆಯಾಗಿ ಚಿತ್ರ ಮಾಡುತ್ತಿದ್ದರು. ಮತ್ತೆ ಕಿತ್ತಾಡುತ್ತಿದ್ದರು, ಮತ್ತೆ ಸಿನಿಮಾ ಮಾಡುತ್ತಿದ್ದರು.

ಒಂದು ಹಂತದಲ್ಲಿ ಇವರಿಬ್ಬರ ಜಗಳ ಬಹಳ ದೊಡ್ಡದಾಯ್ತು. ಆ ನಂತರ ದ್ವಾರಕೀಶ್‍, ವಿಷ್ಣುವರ್ಧನ್‍ ಅವರನ್ನು ಬಿಟ್ಟು, ಬೇರೆ ಕಲಾವಿದರುಗಳ ಜೊತೆಗೆ ಹೆಚ್ಚು ಕೆಲಸ ಮಾಡಿದರು. ಯಾವುದು ಮಾಡಿದರೂ ವಿಷ್ಣು, ವಿಷ್ಣುನೇ. ಯಾವುದೂ ವಿಷ್ಣು ಸಮ ಬರಲಿಲ್ಲ. ಗೆದ್ದ ಒಂದು ಚಿತ್ರವೆಂದರೆ ಅದು ‘ಶ್ರುತಿ’. ಆ ಚಿತ್ರ ದ್ವಾರಕೀಶ್‍ಗೆ ದೊಡ್ಡ ಯಶಸ್ಸು ಕೊಟ್ಟಿತು. ಆ ನಂತರ ದ್ವಾರಕೀಶ್‍ ಇನ್ನೊಂದು ಚಿತ್ರ ಮಾಡಿದ. ಇದರಲ್ಲಿ ಬಂದ ಲಾಭವೆಲ್ಲಾ ಅದರಲ್ಲಿ ಹೊರಟು ಹೋಯ್ತು.

ಸತತ 19 ಸಿನಿಮಾಗಳ ಸೋಲು

ದ್ವಾರಕೀಶ‍‍ ಸತತವಾಗಿ ಚಿತ್ರ ಮಾಡುತ್ತಲೇ ಇದ್ದ. ದುಡ್ಡು ಬರೋದು, ಹೋಗೋದು ನಡೆಯುತ್ತಲೇ ಇತ್ತು. ಅವನು ಸೈಕಲ್‍ ಹೊಡೆಯುತ್ತಲೇ ಇದ್ದ. ಒಂದು ಹಂತದಲ್ಲಿ ದ್ವಾರಕೀಶ್‍ಗೆ 19 ಚಿತ್ರಗಳು ಸತತವಾಗಿ ಕೈಕೊಟ್ಟಿವೆ. ಅಷ್ಟು ಸೋಲುಗಳ ನಂತರ ಪುನಃ ವಿಷ್ಣುವರ್ಧನ್‍ ಜೊತೆಗೆ ‘ಆಪ್ತಮಿತ್ರ’ ಮಾಡಿದ. ಅದು ಸೂಪರ್ ಹಿಟ್‍ ಆಯ್ತು. ಆ ನಂತರ ಅವರಿಬ್ಬರ ‘ಆಪ್ತಮಿತ್ರ’ ಮುಗಿಯಿತು’ ಎಂದು ಭಾರ್ಗವ ಹೇಳಿಕೊಂಡಿದ್ದಾರೆ.

ಬೇರೆ ಯಾರೂ ದ್ವಾರಕೀಶ್‍ ಮಾಡಿದ ಸಾಧನೆಯನ್ನು ಮಾಡೋಕೆ ಸಾಧ್ಯವಾಗಲೇ ಇಲ್ಲ ಎನ್ನುವ ಭಾರ್ಗವ, ‘ಸಿಂಗಾಪೂರ್‌ಗೆ ಹೋಗಿ ಚಿತ್ರ ಮಾಡಿದ. ಲಂಡನ್‍ನಲ್ಲಿ ರೆಕಾರ್ಡಿಂಗ್‍ ಮಾಡಬೇಕು ಎಂಬ ಆಸೆ ಇತ್ತು. ಬಪ್ಪಿ ಲಹರಿ ಅವರನ್ನಿಟ್ಟುಕೊಂಡು ಲಂಡನ್‍ನಲ್ಲಿ ಹಾಡುಗಳ ರೆಕಾರ್ಡಿಂಗ್‍ ಮಾಡಿದ. ‘ಆಫ್ರಿಕಾದಲ್ಲಿ ಶೀಲ’ ಚಿತ್ರ ಮಾಡಿದ. ಅವನದು ಸಾಹಸಮಯ ವ್ಯಕ್ತಿತ್ವ. ಕಿಶೋರ್ ಕುಮಾರ್ ಹತ್ತಿರ ಹಾಡಿಸಬೇಕು ಎಂಬ ಆಸೆ ಇತ್ತು. ನೇರವಾಗಿ ರಾಜನ್‍- ನಾಗೇಂದ್ರ, ರವಿ ಮುಂತಾದವರನ್ನು ಕಟ್ಟಿಕೊಂಡು ಬಾಂಬೆಗೆ ಹೋದ. ಅವನ ಬಳಿ ಕಿಶೋರ್ ಕುಮಾರ್ ಡೇಟ್ಸ್ ಇರಲಿಲ್ಲ. ಹಾಗಂತ ಸುಮ್ಮನೆ ಬಿಡಲಿಲ್ಲ. ಕಿಶೋರ್ ಕುಮಾರ್ ಡೇಟ್ಸ್ ಪಡೆದು ಅವರಿಂದ ಹಾಡಿಸಿದ. ಕುಮಾರ್ ಸಾನು ಅವರಿಂದ ಒಂದು ಹಾಡು ಹಾಡಿಸಿದ. ಏನೇನೋ ಸಾಧನೆ ಮಾಡುತ್ತಲೇ ಇದ್ದ’ ಎಂದು ನೆನಪಿಸಿಕೊಂಡಿದ್ದಾರೆ.

ಲೇಖನ: ಚೇತನ್‌ ನಾಡಿಗೇರ್

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.