Upendra About Kabzaa teaser: ಜನರು ನನ್ನನ್ನು ದಡ್ಡ ಅಂದುಕೊಂಡಿದ್ದಾರೆ...ರಿಯಲ್ ಸ್ಟಾರ್ ಹೀಗೆ ಹೇಳಿದ್ದೇಕೆ..?
''ಇದು ನಿಜಕ್ಕೂ ಸಂತೋಷ ಪಡುವ ವಿಚಾರ. ಏಕೆಂದರೆ ಕೆಜಿಎಫ್‌ನಂತ ಸಿನಿಮಾ ಕನ್ನಡದಲ್ಲಿ ಮತ್ತೊಂದು ಬರುತ್ತಿದೆ ಎಂದರೆ ಅದು ನಮಗೆ ಹೆಮ್ಮೆ. ಮೇಕಿಂಗ್, ಸೆಟ್ ಹಾಗೇ ಕಾಣುತ್ತೆ, ಆದರೆ ಸಿನಿಮಾ ಬಿಡುಗಡೆಯಾದಾಗ ಅದೇ ಬೇರೆ ಕಥೆ, ಇದೇ ಬೇರೆ ಕಥೆ ಎಂದು ಜನರಿಗೆ ತಿಳಿಯುತ್ತದೆ'' ಎಂದಿದ್ದಾರೆ.
ಉಪೇಂದ್ರ ಅಭಿನಯದ ಬಹುನಿರೀಕ್ಷಿತ 'ಕಬ್ಜ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಉಪೇಂದ್ರ ಹುಟ್ಟುಹಬ್ಬದ ಅಂಗವಾಗಿ ಒಂದು ದಿನ ಮುನ್ನವೇ, ಸೆಪ್ಟೆಂಬರ್ 17 ರಂದು ಚಿತ್ರತಂಡ ಕಬ್ಜ ಟೀಸರ್ ಬಿಡುಗಡೆ ಮಾಡಿದೆ. ಟೀಸರ್ ತೆರೆ ಕಂಡ ಮೂರು ದಿನಗಳಲ್ಲೇ 25 ಮಿಲಿಯನ್ಸ್ ವೂವ್ಸ್ ಕಂಡಿದೆ. ಇದು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಖುಷಿಯವ ವಿಚಾರವಾಗಿದೆ.
ಇನ್ನು 'ಕಬ್ಜ' ಟೀಸರ್ ನೋಡುತ್ತಿದ್ದಂತೆ ಕೆಲವರು ಅದನ್ನು ಕೆಜಿಎಫ್‌ಗೆ ಹೋಲಿಸಿದ್ದರು. ಈ ಟೀಸರ್ ನೋಡುತ್ತಿದ್ದರೆ ಕೆಜಿಎಫ್ ಸಿನಿಮಾ ನೋಡಿದಂತೆ ಆಗುತ್ತಿದೆ. ಕಬ್ಜ ಟೀಸರ್ ಕೂಡಾ ರೆಟ್ರೋ ಶೈಲಿಯಲ್ಲಿದ್ದು ಹಿನ್ನೆಲೆ ಸಂಗೀತ, ಪಾತ್ರಧಾರಿಗಳು, ಸೆಟ್, ಗ್ರಾಫಿಕ್ಸ್, ಮೇಕಿಂಗ್ ಎಲ್ಲವೂ ಕೆಜಿಎಫ್ ಹೋಲುತ್ತಿದೆ. ಬಾಲ್ಯದಲ್ಲಿ ನೋವು ಕಂಡ ಬಾಲಕ ಭೂಗತ ಲೋಕಕ್ಕೆ ಅಧಿಪತಿಯಾಗುವ ಕಥೆ ಇರಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಆದರೆ ಉಪೇಂದ್ರ ಪ್ರತಿಕ್ರಿಯಿಸಿ, ಮೊದಲು ಸಿನಿಮಾ ನೋಡಿ ನಂತರ ಕಮೆಂಟ್ ಮಾಡಿ ಎನ್ನುತ್ತಿದ್ದಾರೆ.
''ಜನರು ವಿಚಾರವಂತರಾಗಬೇಕು, ನನಗೆ ಏನೂ ಗೊತ್ತಿಲ್ಲ, ನಾನು ದಡ್ಡ ಎಂಬ ವಿಚಾರ ಎಲ್ಲರ ತಲೆಯಲ್ಲಿ ಕುಳಿತಿದೆ. ನಾನು ಬುದ್ಧಿವಂತ ಎಂದು ನೀವು ಎಲ್ಲರಿಗೂ ತಿಳಿ ಹೇಳಬೇಕು. ಬಹುಶ: ಡಿಸೆಂಬರ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಬಹಳ ಜನರು ಟೀಸರನ್ನು ಕೆಜಿಎಫ್‌ಗೆ ಹೋಲಿಸುತ್ತಿದ್ದಾರೆ. ಇದು ನಿಜಕ್ಕೂ ಸಂತೋಷ ಪಡುವ ವಿಚಾರ. ಏಕೆಂದರೆ ಕೆಜಿಎಫ್‌ನಂತ ಸಿನಿಮಾ ಕನ್ನಡದಲ್ಲಿ ಮತ್ತೊಂದು ಬರುತ್ತಿದೆ ಎಂದರೆ ಅದು ನಮಗೆ ಹೆಮ್ಮೆ. ಮೇಕಿಂಗ್, ಸೆಟ್ ಹಾಗೇ ಕಾಣುತ್ತೆ, ಆದರೆ ಸಿನಿಮಾ ಬಿಡುಗಡೆಯಾದಾಗ ಅದೇ ಬೇರೆ ಕಥೆ, ಇದೇ ಬೇರೆ ಕಥೆ ಎಂದು ಜನರಿಗೆ ತಿಳಿಯುತ್ತದೆ'' ಎಂದಿದ್ದಾರೆ.
ಕಬ್ಜ ಸಿನಿಮಾ ಆರಂಭವಾಗುತ್ತಿದ್ದಂತೆ ಸಿನಿಮಾ ಭಾರೀ ಸುದ್ದಿಯಲ್ಲಿತ್ತು. ಇದು ಪ್ಯಾನ್ ಇಂಡಿಯಾ ಸಿನಿಮಾ, ಉಪೇಂದ್ರ ಹಾಗೂ ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಅಭಿಮಾನಿಗಳು ಈ ಚಿತ್ರದ ಪ್ರತಿ ಅಪ್‌ಡೇಟ್ ತಿಳಿಯಲು ಕಾಯುತ್ತಿದ್ದರು. ಕಳೆದ ವರ್ಷವೇ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ನಿಧನ ಹಾಗೂ ಇನ್ನಿತರ ಕಾರಣಗಳಿಂದ ಟೀಸರ್ ಬಿಡುಗಡೆಯಾಗುವುದು ತಡವಾಯ್ತು. ಇದೀಗ ಟೀಸರ್ ರಿಲೀಸ್ ಆಗಿದೆ. ಟೀಸರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಪರ ವಿರೋಧ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗುತ್ತಿದೆ.
'ಕಬ್ಜ' ಚಿತ್ರವನ್ನು ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಆರ್. ಚಂದ್ರು ಅವರೇ ನಿರ್ಮಿಸಿದ್ದು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಪ್ರಕಾಶ್ ರೈ, ಶ್ರೀನಿವಾಸ್ ರಾವ್ ಕೋಟಾ, ಜಗಪತಿ ಬಾಬು, ಎಂ. ಕಾಮರಾಜ್, ಕಬೀರ್ ದುಹಾನ್ ಸಿಂಗ್, ಬೊಮನ್ ಇರಾನಿ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಒರಿಯಾ ಹಾಗೂ ಮರಾಠಿ ಸೇರಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಉಪೇಂದ್ರ, ಶ್ರಿಯಾ ಸರನ್, ಸುದೀಪ್ ಹಾಗೂ ಇನ್ನಿತರರು ನಟಿಸಿದ್ದಾರೆ.