ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ
Chhaava: ಮಹಾರಾಷ್ಟ್ರದ ಇತಿಹಾಸಕ್ಕೆ ಸಂಬಂಧಿಸಿದ ಚಾರಿತ್ರಿಕ ಸಿನಿಮಾ ಛಾವಾ. ಮರಾಠ ಸಾಮ್ರಾಜ್ಯದ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಶೌರ್ಯದ ಕಥೆಯಿರುವ ಛಾವಾ ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಮುಂಬಯಿ ಡಬ್ಬಾವಾಲಗಳು ಈ ಕುರಿತು ಸಿಎಂಗೆ ಪತ್ರ ಬರೆದಿದ್ದಾರೆ.

Chhaava: ವಿಕಿ ಕೌಶಾಲ್ ಹಾಗೂ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಸಿನಿಮಾ ಛಾವಾ ಗಲ್ಲಾ ಪೆಟ್ಟಿಗೆ ದೋಚುತ್ತಿದ್ದು, ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದೇ ವಾರದಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರ್ಪಡೆಯಾಗುವತ್ತ ಮುನ್ನುಗ್ಗುತ್ತಿರುವ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಆಗ್ರಹಿಸಿ ಮುಂಬಯಿ ಡಬ್ಬಾವಾಲಗಳು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಲು ಮುಂಬಯಿ ಡಬ್ಬಾವಾಲ ಆಗ್ರಹ
ಛಾವಾ ಸಿನಿಮಾ ಚಾರಿತ್ರಿಕವಾಗಿ ಮಹತ್ವ ಪಡೆದಿರುವಂಥದ್ದು. ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಐತಿಹಾಸಿಕ ಕಥಾ ಹಂದರ ಇರುವಂಥ ಸಿನಿಮಾ ಆಗಿರುವ ಕಾರಣ, ಅದನ್ನು ತೆರಿಗೆ ಮುಕ್ತಗೊಳಿಸಬೇಕು ಎಂಬುದು ಮುಂಬಯಿ ಡಬ್ಬಾವಾಲಾಗಳ ಆಗ್ರಹ. ಸಂಭಾಜಿ ಮಹಾರಾಜರ ಜತೆಗೆ ಇದ್ದು ಹೋರಾಟ ನಡೆಸಿದವರು ನಮ್ಮ ಪೂರ್ವಜರು. ಹಾಗಾಗಿ ಛಾವಾ ಸಿನಿಮಾ ತಮಗೆ ಅತ್ಯಂತ ಆಪ್ತವಾದುದು ಎಂದು ಡಬ್ಬಾವಾಲಾಗಳ ಸಂಘದ ಅಧ್ಯಕ್ಷ ಸುಭಾಷ್ ತಲೇಕರ್ ಹೇಳಿಕೊಂಡಿದ್ದಾರೆ.
ಛಾವಾ ಸಿನಿಮಾವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಿದರೆ, ಟಿಕೆಟ್ ದರಗಳು ಕಡಿಮೆಯಾಗಲಿವೆ. ಇನ್ನಷ್ಟು ಜನ ಈ ಚಾರಿತ್ರಿಕ ಸಿನಿಮಾ ನೋಡಲಿದ್ದಾರೆ. ಸಂಭಾಜಿ ಮಹಾರಾಜರ ಬದುಕು, ತ್ಯಾಗಗಳ ಅರಿವು ಅವರಿಗೆ ಆಗಲಿದೆ. ಮಹಾರಾಷ್ಟ್ರದ ಯುವ ಪೀಳಿಗೆಗೆ ರಾಜ್ಯದ ಶ್ರೀಮಂತ ಇತಿಹಾಸ ಮನವರಿಕೆಯಾಗಬೇಕು. ಈ ಸಿನಿಮಾ ಮನರಂಜನೆ ಮಾತ್ರವಲ್ಲದೆ, ಮರಾಠಾ ರಾಜನಿಗೆ ಸಲ್ಲಿಕೆಯಾಗಿರುವ ಗೌರವವೂ ಹೌದು. ಹಾಗಾಗಿ ಛಾವಾ ಸಿನಿಮಾ ತೆರಿಗೆ ಮುಕ್ತವಾಗಬೇಕು ಎಂದು ತಲೇಕರ್ ಆಗ್ರಹಿಸಿದ್ದಾರೆ.
ಛಾವಾ ಸಿನಿಮಾ ತೆರಿಗೆ ಮುಕ್ತಗೊಳ್ಳಲಿ; ಎಫ್‌ಡಬ್ಲ್ಯುಐಸಿಇ ಆಗ್ರಹ
ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್‌ಡಬ್ಲ್ಯುಐಸಿಇ) ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಛಾವಾ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದೆ. ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣ ಜೋಡಿ ಅಭಿನಯಿಸಿರುವ ಛಾವಾ ಸಿನಿಮಾ ಸಂಭಾಜಿ ಮಹಾರಾಜರ ಶೌರ್ಯದ ಚಾರಿತ್ರಿಕ ಕಥೆಯನ್ನು ಆಧರಿಸಿದ ಕಥಾ ಹಂದರ ಇರುವಂಥದ್ದು. ಮರಾಠ ಇತಿಹಾಸ, ಚಾರಿತ್ರಿಕ ಕಥೆಯಾದ ಕಾರಣ ತೆರಿಗೆ ವಿನಾಯಿತಿ ನೀಡಿ, ಸಿನಿಮಾವನ್ನು ಇನ್ನಷ್ಟು ಜನರು ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದೆ.
ಮರಾಠಾ ಯೋಧ ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಸಾಹಸದ ಜೀವನ ಆಧರಿಸಿದ ಕಥೆಯಾಗಿದೆ. ಶಿವಾಜಿ ಸಾವಂತ್ ಬರೆದ ಛಾವಾ (ಸಿಂಹದ ಮರಿ) ಕಾದಂಬರಿಯ ಕಥೆಯನ್ನು ಆಧರಿಸಿ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ಸಿನಿಮಾ ಮಾಡಿದ್ದಾರೆ.
ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದರೆ, ಸಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಸೌರಭ್ ಗೋಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್ ಖನ್ನಾ, ದಿವ್ಯಾ ದತ್ತ, ಅಶುತೋಷ್ ರಾಣಾ, ವಿನೀತ್ ಕುಮಾರ್ ಸಿಂಗ್, ಸಂತೋಷ್ ಜುವೇಕರ್, ಅಲೋಕ್‌ನಾಥ್ ಮತ್ತು ಕಿರಣ್ ಕಮರ್ಕರ್ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಭಾಗ