‘ಏನೋ ನಾಕು ಕಾಸಿದ್ದ ಮಾತ್ರಕ್ಕೆ ಹಳ್ಳಿಯವರೆಂದರೆ, ಬಡವರೆಂದರೆ ತಮಗಿಂತ ಕೀಳು ಎನ್ನುವುದು ಮೂರ್ಖತನ’
ಬಿಗ್ ಬಾಸ್ ಕಾರ್ಯಕ್ರಮವನ್ನೇ ನೋಡದ ಸಾಕಷ್ಟು ಮಂದಿ ಹಳ್ಳಿ ಹೈದ ಹನುಮಂತ ಲಮಾಣಿ ಗೆದ್ದಿರುವುದಕ್ಕೆ ತುಂಬಾನೇ ಖುಷಿಪಟ್ಟಿದ್ದಾರೆ. ಈ ಪೈಕಿ ಸಾಹಿತಿ ದೀಪಾ ಹಿರೇಗುತ್ತಿ ಅವರು ಕೂಡ ಒಬ್ಬರು ಎಂಬುದು ವಿಶೇಷ. ಇದೇ ವೇಳೆ ಉತ್ತಮ ಸಂದೇಶವೊಂದನ್ನು ಜನರಿಗೆ ತಲುಪಿಸಿದ್ದಾರೆ.

2024ರ ಸೆಪ್ಟೆಂಬರ್ 27ರಂದು ಆರಂಭವಾಗಿ 119 ದಿನಗಳು ಅಂದರೆ ಬರೋಬ್ಬರಿ ನಾಲ್ಕು ತಿಂಗಳು ಪೂರೈಸಿದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಹೊಸ ಅಧ್ಯಾಯದ ನೂತನ ಚಾಂಪಿಯನ್ ಪಟ್ಟ ಹಳ್ಳಿ ಹೈದ ಹನುಮಂತ ಲಮಾಣಿಗೆ ಸಿಕ್ಕಿದೆ. ಬಡವರ ಮಕ್ಕಳು ಬೆಳಿಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ಇದು. ಹನುಮಂತ ಬಿಗ್ ಬಾಸ್ ಗೆದ್ದಿದ್ದು, ಇಡೀ ಕರ್ನಾಟಕದ ಜನತೆಗೆ ತೃಪ್ತಿಕೊಟ್ಟಿದೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಹಳ್ಳಿ ಹೈದ, ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದ ಘಟಾನುಘಟಿ 20 ಸ್ಪರ್ಧಿಗಳನ್ನು ಮಣಿಸಿ ಇದೀಗ ಕಪ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆಂದರೆ ಸುಲಭದ ಮಾತಲ್ಲ.
ಆದರೆ, ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಉಳಿದಿದ್ದು ಇಬ್ಬರು ಮಾತ್ರ. ಫೈನಲ್ನಲ್ಲಿ ಹನುಮಂತ ಮತ್ತು ತ್ರಿವಿಕ್ರಮ್ ಅವರ ಪೈಕಿ ಹನುಮಂತ ಅವರ ಕೈ ಎತ್ತುವ ಮೂಲಕ ಕಿಚ್ಚ ಸುದೀಪ್ ವಿಜೇತರನ್ನು ಘೋಷಿಸಿದರು. ಈ ಗೆಲುವಿನೊಂದಿಗೆ ಹನುಮಂತನಿಗೆ 50 ಲಕ್ಷ ರೂ ಬಹುಮಾನ ಮೊತ್ತ ಸಿಕ್ಕಿದೆ. ಸರಳತೆ, ಶಾಂತ ಮೂರ್ತಿ, ಚಾಣಾಕ್ಷತನ, ಮಾತಿನ ಮೇಲೆ ಹಿಡಿತ ಸಾಧಿಸುತ್ತಾ, ಫಿಲ್ಟರ್ ಇಲ್ಲದೆ ಮಾತನಾಡುತ್ತಾ, ಯಾವುದೇ ಕಪಟತನ ಇಲ್ಲದೆ, ತಾಳ್ಮೆ, ಏಕಾಗ್ರತೆಯಿಂದಲೇ ಬಿಗ್ ಬಾಸ್ ಪ್ರಶಸ್ತಿ ಗೆಲ್ಲುವ ಮೂಲಕ ಅದೆಷ್ಟೋ ಹಳ್ಳಿ ಯುವಕರಿಗೆ ಮಾದರಿಯಾಗಿ ನಿಂತಿದ್ದಾನೆ ಕುರಿ ಕಾಯುವವ. ಈ ಹಳ್ಳಿ ಹೈದನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆಗೈಯುತ್ತಿದೆ.
ಹನುಮಂತ ಮಾದರಿ
ಕೆಲವೊಂದಿಷ್ಟು ಮಂದಿ ಅಪ್ಪ-ಅಮ್ಮ ಸಂಪಾದಿಸಿದ ಹಣದಲ್ಲಿ ಮಜಾ ಮಾಡುತ್ತಾರೆ. ಅಥವಾ ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದೇವೆ ಎಂಬ ಅಹಂ ಬೆಳೆಸಿಕೊಳ್ಳುತ್ತಾರೆ. ಏನೋ ನಾಕು ಕಾಸಿದ್ದ ಮಾತ್ರಕ್ಕೆ ಹಳ್ಳಿಯವರೆಂದರೆ, ಬಡವರೆಂದರೆ ತಮಗಿಂತ ಕೀಳು ಎಂಬುದು ಹಲವರ ಭಾವನೆ. ಒಂದು ವೇಳೆ ಹಾಗೆಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಎಂದರೆ ತಪ್ಪಾಗಲ್ಲ. ಇದೀಗ ಇಂತಹವರಿಗೆಲ್ಲರಿಗೂ ಹನುಮಂತ ಉತ್ತಮ ಮಾದರಿಯಾಗಿದ್ದಾರೆ. ಹನುಮಂತನ ಗೆಲುವನ್ನು ಇಡೀ ಕರ್ನಾಟಕ ಸಂಭ್ರಮಿಸುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮವನ್ನೇ ನೋಡದ ಸಾಕಷ್ಟು ಮಂದಿ ಹಳ್ಳಿ ಹೈದ ಗೆದ್ದಿದ್ದಕ್ಕೆ ತುಂಬಾನೆ ಖುಷಿಪಟ್ಟಿದ್ದಾರೆ. ಈ ಪೈಕಿ ಸಾಹಿತಿ ದೀಪಾ ಹಿರೇಗುತ್ತಿ ಅವರು ಕೂಡ ಒಬ್ಬರು ಎಂಬುದು ವಿಶೇಷ.
ಸಾಹಿತಿ ದೀಪಾ ಹಿರೇಗುತ್ತಿ ಹೇಳಿದ್ದು ಹೀಗೆ
ಹನುಮಂತ ಟ್ರೋಫಿಗೆ ಮುತ್ತಿಕ್ಕಿದ ಬಳಿಕ ಫೇಸ್ಬುಕ್ನಲ್ಲಿ ಸಂತಸ ಹಂಚಿಕೊಂಡಿರುವ ದೀಪಾ ಅವರು ಎಲ್ಲರಲ್ಲೂ ಪ್ರತಿಭೆ ಇದೆ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ. ಹೀಗಿದೆ ಅವರ ಮಾತು, ‘ನಿಜ ಹೇಳಬೇಕೆಂದರೆ ಇವತ್ತಿನವರೆಗೆ ನಾನು ಒಂದು ಹತ್ತು ನಿಮಿಷ ಕೂಡಾ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿಲ್ಲ. ಫೇಸ್ಬುಕ್ನಲ್ಲಿ ಬರುವ ರೀಲ್ಸ್ ಕೆಲವು ನೋಡಿರಬಹುದು. ಒಂದು 10 ಸೆಕೆಂಡು ಅಂದುಕೊಂಡರೂ ಅದೂ ಹತ್ತು ನಿಮಿಷ ದಾಟುವುದಿಲ್ಲ. ಆದರೆ ಅದರ ಬಗ್ಗೆ ಸ್ನೇಹಿತರು ಹಾಕುವ ಪೋಸ್ಟ್‌ಗಳನ್ನು ಓದುತ್ತೇನೆ. ನಿನ್ನೆ ಯಾರೋ ಒಬ್ಬಳು ಹಳ್ಳಿಯವರಿಗೆ ಫೈನಲ್ ಅವಕಾಶ ಸಿಕ್ಕಿಬಿಡುತ್ತೆ ಅಂತೆಲ್ಲ ಒದರುತ್ತಿದ್ದಾಗ ಈ ಹನುಮಂತ ಅನ್ನುವ ಹಳ್ಳಿಯ ಹುಡುಗನೇ ಗೆಲ್ಲಲಿ ಅನ್ನಿಸಿತ್ತು. ಇವತ್ತು ಮಗಳ ಜತೆ ಕೊನೆಯ ಅರ್ಧ ಗಂಟೆ ನೋಡಿದೆ. ಈಗ ಆತ ಗೆದ್ದಿದ್ದಾನೆ’
‘ಒಳ್ಳೆಯದಾಯಿತು. ಹಳ್ಳಿಯವರೆಂದರೆ ಬಡವರೆಂದರೆ ತಮಗಿಂತ ಕೀಳು, ಏನೋ ನಾಕು ಕಾಸಿದ್ದ ಅಪ್ಪ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ ಪ್ರಿವಿಲೆಜ್ ಹೊಂದಿದ ಮಾತ್ರಕ್ಕೆ ತಾವು ಭಾರೀ ದೊಡ್ಡ ಜನರು ಅಂತ ತಿಳಿದುಕೊಂಡ ಮೂರ್ಖರಿಗೆ ನಾನು ಹೇಳುವುದಿಷ್ಟೇ, ಪ್ರತಿಭೆ ಎಲ್ಲರಲ್ಲೂ ಇದೆ. ಸಮಾನ ಅವಕಾಶ ಸಿಕ್ಕಬೇಕಷ್ಟೇ. Congratulations ಹನುಮಂತ ಅವರೇ! ಐದು ಕೋಟಿ ಚಿಲ್ಲರೆ ಓಟು ಅಂದ್ರೆ ಹುಡುಗಾಟದ ಮಾತಲ್ಲ ಬಿಡಿ’ ಎಂದು ಹನುಮಂತನನ್ನು ಕೊಂಡಾಡಿ ಉತ್ತಮ ಸಂದೇಶವನ್ನೂ ಕೊಟ್ಟಿದ್ದಾರೆ.
