Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ
ಕನ್ನಡ ಸುದ್ದಿ  /  ಮನರಂಜನೆ  /  Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ

Manada Kadalu Review: ‘ಮನದ ಕಡಲು’ ಸಿನಿಮಾ ವಿಮರ್ಶೆ; ಹಳೆಯ ಕಡಲಲ್ಲಿ ಹೊಸ ನಾವೆ

ಇವತ್ತಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಿರುವ ಯೋಗರಾಜ್‍ ಭಟ್‍ ಸಿನಿಮಾ ‘ಮನದ ಕಡಲು’ ಈ ಸಿನಿಮಾದ ವಿಮರ್ಶೆ ಇಲ್ಲಿದೆ ಗಮನಿಸಿ.

‘ಮನದ ಕಡಲು’ ಸಿನಿಮಾ ವಿಮರ್ಶೆ
‘ಮನದ ಕಡಲು’ ಸಿನಿಮಾ ವಿಮರ್ಶೆ

ಯುವ ಮನಸ್ಸುಗಳನ್ನು ಅರ್ಥ ಮಾಡಿಕೊಂಡು, ಅವರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುವವರ ಪೈಕಿ ಯೋಗರಾಜ್ ಭಟ್ ಪ್ರಮುಖರು. ಅವರ ಹೊಸ ಚಿತ್ರ ‘ಮನದ ಕಡಲು’ ಸಹ ಅಂತಹ ಪ್ರಯತ್ನಗಳಲ್ಲೊಂದು. ಇವತ್ತಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಿರುವ ಯೋಗರಾಜ್‍ ಭಟ್‍, ಈ ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದಾರೆ? ಮುಂದೆ ಓದಿ

ಚಿತ್ರದ ಕಥೆ ಏನು?

ಸುಮುಖ ಒಬ್ಬ ಮೆಡಿಕಲ್‍ ವಿದ್ಯಾರ್ಥಿ. ಒಂದು ದುರ್ಘಟನೆಯ ನಂತರ ವೈದ್ಯಕೀಯ ವೃತ್ತಿ ಬಗ್ಗೆ ತಿರಸ್ಕಾರ ಬಂದು ಓದುವುದನ್ನೇ ನಿಲ್ಲಿಸುತ್ತಾನೆ. ಹೀಗಿರುವಾಗಲೇ ರಾಶಿಕಾ ಎಂಬ ಕ್ರಿಕೆಟ್‍ ಆಟಗಾರ್ತಿಯ ಮೇಲೆ ಮೊದಲ ನೋಟದಲ್ಲೇ ಅವನಿಗೆ ಪ್ರೀತಿಯಾಗುತ್ತದೆ. ಆರು ತಿಂಗಳ ನಂತರ ನೋಡೋಣ ಎಂದು ಹೇಳಿಕಳುಹಿಸುವ ಅವಳು, ಆರು ತಿಂಗಳು ಮುಗಿಯುವುದರೊಳಗೆ ಮಾಯವಾಗಿರುತ್ತಾಳೆ. ಅವಳನ್ನು ಹುಡುಕಿಕೊಂಡು ದೋಣಿದುರ್ಗ ಎಂಬ ಊರಿಗೆ ಹೋಗುವ ಸುಮುಖನಿಗೆ ಅಂಜಲಿ ಎಂಬ ಇನ್ನೊಂದು ಹುಡುಗಿಯ ಪರಿಚಯವಾಗುತ್ತಾಳೆ. ಸುಮುಖನಿಗೆ ರಾಶಿಕಾಳ ಮೇಲೆ ಪ್ರೀತಿಯಾದರೆ, ಅಂಜಲಿಗೆ ಸುಮುಖನ ಮೇಲೆ ಪ್ರೀತಿಯಾಗುವುದರ ಮೂಲಕ ತ್ರಿಕೋನ ಪ್ರೇಮಕಥೆಯಾಗುತ್ತದೆ. ಮುಂದೇನಾಗುತ್ತದೆ ಎಂಬುದಕ್ಕೆ ಚಿತ್ರ ನೋಡಬೇಕು.

ಹೇಗಿದೆ ಚಿತ್ರ?

ಇದೊಂದು ಟಿಪಿಕಲ್‍ ಯೋಗರಾಜ್‍ ಭಟ್‍ ಚಿತ್ರ. ಅವರ ಚಿತ್ರಗಳಲ್ಲಿ ಕಾಣಸಿಗುವ ಅಪರೂಪದ ಪಾತ್ರಗಳು ಇಲ್ಲೂ ಮುಂದವರೆದಿವೆ. ಎಲ್ಲರನ್ನೂ ಬೈದುಕೊಂಡು ಓಡಾಡುವ ನಾಯಕ, ಉತ್ಸಾಹದ ಚಿಲುಮೆಯಂತಿರುವ ನಾಯಕಿಯರು, ಒಂದಿಷ್ಟು ವಿಚಿತ್ರ ಪಾತ್ರಗಳು ಇಲ್ಲೂ ಮುಂದುವರೆದಿವೆ. ಜೊತೆಗೆ ಆಧುನಿಕತೆ ಮತ್ತು ಬುಡಕಟ್ಟು ಜನಾಂಗ, ಆಧುನಿಕ ಮತ್ತು ಪುರಾತನ ವೈದ್ಯಕೀಯ ಪದ್ಧತಿ ಎಲ್ಲವೂ ಇದೆ. ಕಥೆಯಲ್ಲಿ ಹಲವು ಮಜಲುಗಳಿವೆಯಾದರೂ, ಯಾವುದರಲ್ಲೂ ತೀವ್ರತೆ ಇಲ್ಲ. ಯಾವುದರಲ್ಲೂ ಗಟ್ಟಿತನ ಇಲ್ಲ. ಕೊನೆಯ 10 ನಿಮಿಷದಲ್ಲಿ ಚಿತ್ರ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲೊಂದು ಫೀಲ್‍ ಇಲ್ಲ. ಇದರ ಜೊತೆಗೆ ಚಿತ್ರವನ್ನು ಒಂದಿಷ್ಟು ಕತ್ತರಿಸುವ ಸಾಧ್ಯತೆಯೂ ಇತ್ತು. ಚಿತ್ರದಲ್ಲಿ ಒಂದಿಷ್ಟು ಮಜವಾದ ಸಂಭಾಷಣೆಗಳಿವೆಯಾದರೂ ಪಂಚ್‍ ಕೊಡುವುದಿಲ್ಲ.

ತಾಂತ್ರಿಕವಾಗಿ ಶ್ರೀಮಂತ ಚಿತ್ರ

ಚಿತ್ರದಲ್ಲಿ ಕಥೆ-ಚಿತ್ರಕಥೆ ಮೈನಸ್‍ ಆದರೂ, ಇದೊಂದು ತಾಂತ್ರಿಕವಾಗಿ ಶ್ರೀಮಂತವಾದ ಚಿತ್ರ. ಯೋಗರಾಜ್‍ ಭಟ್‍ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್‍ನ ಚಿತ್ರವೆಂದರೆ, ಅಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಒಂದೆರಡು ಹಾಡುಗಳನ್ನು ಹೊರತುಪಡಿಸಿದರೆ, ಚಿತ್ರದ ಹಾಡುಗಳು ಅಷ್ಟೇನೂ ಗಮನಸೆಳೆಯುವುದಿಲ್ಲ. ಕೇಳುವುದಕ್ಕೆ ಸುಮಾರಾದರೂ, ಅದನ್ನ ಬಹಳ ಸುಂದರವಾಗಿ ಸೆರೆಹಿಡಿದಿದ್ದಾರೆ ಸಂತೋಷ್‍ ರೈ ಪಾತಾಜೆ. ಬರೀ ಹಾಡುಗಳಷ್ಟೇ ಅಲ್ಲ, ಇಡೀ ಚಿತ್ರವನ್ನು ಸಂತೋಷ್‍ ಕ್ಯಾಮೆರಾ ಕಣ್ಣುಗಳಲ್ಲಿ ನೋಡುವುದೇ ಚೆಂದ. ಕಲಾ ನಿರ್ದೇಶನವೂ ಚೆನ್ನಾಗಿದೆ.

ಗಮನಸೆಳೆಯುವ ಹೊಸ ಪ್ರತಿಭೆಗಳು

ಇಡೀ ಚಿತ್ರ ಸುಮುಖ, ರಾಶಿಕಾ ಮತ್ತು ಅಂಜಲಿ ಸುತ್ತ ಸುತ್ತತ್ತದೆ. ಮೂವರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸುಮುಖ ಕೆಲವೊಮ್ಮೆ ದಿಗಂತ್‍ ಅವರನ್ನು ನೆನಪಿಸುತ್ತಾರೆ. ಹುಡುಗಿಯರ ಬಾಯಲ್ಲಿ ರಂಡೆ, ಮುಂಡೆ ಪದಗಳನ್ನು ಕೇಳುವುದು ಕಿರಿಕಿರಿ ಎನ್ನುವುದು ಬಿಟ್ಟರೆ, ಇಬ್ಬರೂ ಲವಲವಿಕೆಯಿಂದ ಅಭಿನಯಿಸಿದ್ದಾರೆ. ರಂಗಾಯಣ ರಘು ಇಡೀ ಚಿತ್ರದಲ್ಲಿ ಇದ್ದಾರಾದರೂ ನಟನೆಗೆ ಅವಕಾಶ ಕಡಿಮೆಯೇ. ದತ್ತಣ್ಣ ಅವರ ಪಾತ್ರ ತೂಕದ್ದಾಗಿದ್ದು, ಅವರು ಅಷ್ಟೇ ಚೆನ್ನಾಗಿ ನಟಿಸಿದ್ದಾರೆ.

ಒಟ್ಟಾರೆ, ‘ಮನದ ಕಡಲು’ ಇನ್ನೊಂದು ಯೋಗರಾಜ್‍ ಭಟ್‍ ಬ್ರಾಂಡ್‍ನ ಚಿತ್ರ. ಅವರ ಸಿನಿಮಾಗಳನ್ನು ಇಷ್ಟಪಡುವವರು ‘ಮನದ ಕಡಲ’ಲ್ಲಿ ಈಜಬಹುದು.

ಸಿನಿಮಾ: ಮನದ ಕಡಲು

ಜಾನರ್‍: ಲವ್‍ ಡ್ರಾಮಾ

ನಿರ್ದೇಶನ: ಯೋಗರಾಜ್ ಭಟ್‍

ನಿರ್ಮಾಣ: ಇ. ಕೃಷ್ಣಪ್ಪ

ಸಂಗೀತ: ವಿ. ಹರಿಕೃಷ್ಣ

ಛಾಯಾಗ್ರಹಣ: ಸಂತೋಷ್‍ ರೈ ಪಾತಾಜೆ

ಸಿನಿಮಾದ ಅವಧಿ: 154 ನಿಮಿಷಗಳು

ಎಚ್‍ಟಿ ಕನ್ನಡ ರೇಟಿಂಗ್‍: 2.5/5

Suma Gaonkar

eMail
Whats_app_banner