Writers Auditions: ಕಥೆ ಬರೆಯೋ ಕೌಶಲ, ಸಂಭಾಷಣೆ ಬರೆಯೋ ಟ್ಯಾಲೆಂಟ್ ನಿಮಗಿದ್ರೆ, ಜೀ ಕನ್ನಡದಲ್ಲಿ ಹೀಗೊಂದು ದೊಡ್ಡ ಅವಕಾಶ
ಜೀ ಕನ್ನಡ ವಾಹಿನಿ ಕಥೆ, ಚಿತ್ರಕಥೆ ಸೇರಿ ಬರವಣಿಗೆ ಹಿನ್ನೆಲೆಯಿದ್ದವರಿಗೆ ಒಂದೊಳ್ಳೆಯ ಅವಕಾಶವನ್ನು ನೀಡುತ್ತಿದೆ. ಕಥಗಾರರನ್ನು, ಸಂಭಾಷಣೆಗಾರರನ್ನು ಹೈರಿಂಗ್ ಮಾಡಿಕೊಳ್ಳುತ್ತಿದೆ. ನಿಮಗೆ ಬರವಣಿಗೆ ಮೇಲೆ ಹಿಡಿತವಿದ್ದರೆ, ಅದರಲ್ಲೂ ಅಚ್ಚ ಕನ್ನಡವನ್ನು ಚೆಂದವಾಗಿ ಬರೆದು ಒಪ್ಪಿಸುವ ಕೆಲಸ ನಿಮಗೆ ಗೊತ್ತಿದ್ದರೆ ರೈಟರ್ಸ್ ಆಡಿಷನ್ಸ್‌ನಲ್ಲಿ ಭಾಗವಹಿಸಿ.
Zee Kannada Writers Auditions: ಮನರಂಜನಾ ಕ್ಷೇತ್ರದಲ್ಲಿ ಕಂಟೆಂಟ್‌ಗೆ ಬೆಲೆ ಜಾಸ್ತಿ. ಬರವಣಿಗೆಯ ಮೂಲ ಆಧಾರದ ಮೇಲೆ ನಿಂತಿದೆ ಆ ಕ್ಷೇತ್ರ. ಭಿನ್ನ ವಿಭಿನ್ನ ಬರಹಗಳೇ ಆ ವೇದಿಕೆಗೆ ಭೂಷಣ. ಜನಾಕರ್ಷಣೆಯ ಕಂಟೆಂಟ್ ಕೈಯಲ್ಲಿದ್ದರೆ ಅಲ್ಲಿ ಎಲ್ಲವೂ ಅಚ್ಚುಕಟ್ಟು. ಅಷ್ಟೇ ಸರಳ ಮತ್ತು ಸುಲಲಿತ. ಹೀಗಿರುವಾಗ ಎಷ್ಟೋ ಮಂದಿಗೆ ಬರವಣಿಗೆಯಲ್ಲಿ ಆಸಕ್ತಿ. ಕಥೆ ಕಾದಂಬರಿ ಕವನ ಬರೆಯುವ ಹವ್ಯಾಸ. ಆದರೆ, ಆ ಕಲೆಗೆ ಒಂದು ವೇದಿಕೆ ಮಾತ್ರ ಸಿಕ್ಕಿರುವುದಿಲ್ಲ. ಈಗ ಅಂಥ ಒಂದು ಬೃಹತ್ ವೇದಿಕೆಯನ್ನು ಒದಗಿಸುತ್ತಿದೆ ಜೀ ಕನ್ನಡ.
ಕ್ರಿಯೇಟಿವ್ ಬರಹಗಾರರು ಬೇಕಾಗಿದ್ದಾರೆ
ಹೌದು ಜೀ ಕನ್ನಡ ವಾಹಿನಿ ಕಥೆ, ಚಿತ್ರಕಥೆ ಸೇರಿ ಬರವಣಿಗೆ ಹಿನ್ನೆಲೆಯಿದ್ದವರಿಗೆ ಒಂದೊಳ್ಳೆಯ ಅವಕಾಶವನ್ನು ನೀಡುತ್ತಿದೆ. ಕಥಗಾರರನ್ನು, ಸಂಭಾಷಣೆಗಾರರನ್ನು ಹೈರಿಂಗ್ ಮಾಡಿಕೊಳ್ಳುತ್ತಿದೆ. ನಿಮಗೆ ಬರವಣಿಗೆ ಮೇಲೆ ಹಿಡಿತವಿದ್ದರೆ, ಅದರಲ್ಲೂ ಅಚ್ಚ ಕನ್ನಡವನ್ನು ಚೆಂದವಾಗಿ ಬರೆದು ಒಪ್ಪಿಸುವ ಕೆಲಸ ನಿಮಗೆ ಗೊತ್ತಿದ್ದರೆ ಈಗಲೇ ನೀವು ಜೀ ಕನ್ನಡದ ರೈಟರ್ಸ್ ಆಡಿಷನ್ಸ್‌ನಲ್ಲಿ (Zee Kannada Writers Auditions) ಭಾಗವಹಿಸಬಹುದು. ತೆರೆ ಮುಂದೆ ಕಲಾವಿದರು ಮಿಂಚುತ್ತಿದ್ದರೆ, ತೆರೆಹಿಂದೆ ನೀವು ಬರೆದ ಬರಹ ಮಿಂಚುವ ಅವಕಾಶ ಇಲ್ಲಿದೆ. ಈ ಮೂಲಕ ಕ್ರಿಯೇಟಿವ್ ಬರಹಗಾರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ ಜೀ ಕನ್ನಡ.
ಹಾಗಾದರೆ ಆಡಿಷನ್ಸ್ ಎಲ್ಲಿ, ಯಾವಾಗ?
ಈ ಆಡಿಷನ್ಸ್ ಬಗ್ಗೆ ಮಾಹಿತಿ ನೀಡಲೆಂದೇ ವಿಶೇಷ ಪ್ರೋಮೋವೊಂದನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. "ಕಥೆ ಬರೆಯೋ ಕೌಶಲ್ಯ, ಸಂಭಾಷಣೆ ಬರೆಯೋ ಟ್ಯಾಲೆಂಟ್ ನಿಮಗಿದ್ರೆ ನಿಮಗಿಲ್ಲಿದೆ ಅವಕಾಶದ ಹೆಬ್ಬಾಗಿಲು! ಜನವರಿ 11ರ ಶನಿವಾರ ದಾವಣಗೆರೆ, ಶಿವಮೊಗ್ಗ & ಮಂಗಳೂರಿನಲ್ಲಿ ನಡೆಯೋ ಜೀ ಕನ್ನಡ ರೈಟರಸ್ ಆಡಿಷನ್ಸ್‌ನಲ್ಲಿ ತಪ್ಪದೇ ಭಾಗವಹಿಸಿ" ಎಂದು ಹೇಳಿದೆ. ಅಂದರೆ, ಈ ಆಡಿಷನ್‌ಗೆ ನೀವು ಬೆಂಗಳೂರಿಗೆ ಬರಬೇಕು ಎಂದೇನಿಲ್ಲ. ನೀವಿದ್ದ ಊರಿಗೇ ಜೀ ಕನ್ನಡದ ಬಂಡಿ ಬಂದು ಆಡಿಷನ್ಸ್ ಆಯೋಜನೆ ಮಾಡಲಿದೆ. ಸದ್ಯ ಈ ಮೂರು ಜಿಲ್ಲೆಗಳಲ್ಲಿ ಮಾತ್ರ ಆಡಿಷನ್ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನೂ ಹಲವು ಜಿಲ್ಲೆಗಳಲ್ಲಿಯೂ ರೈಟರ್ಸ್ ಆಡಿಷನ್ ನಡೆಯಲಿದೆ.
- ದಾವಣಗೆರೆಯಲ್ಲಿ ಯಾವಾಗ?
ಜನವರಿ 11ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಆಡಿಷನ್
ಬಿ ಎಸ್ ಚನಬಸಪ್ಪ ಪ್ರಥಮ ದರ್ಜೆ ಕಾಲೇಜು, ಎಸ್‌ಎಸ್ ಲೇಔಟ್
- ಶಿವಮೊಗ್ಗದಲ್ಲಿ ಯಾವಾಗ?
ಜನವರಿ 11ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಆಡಿಷನ್
ಬಸವೇಶ್ವರ ವಿದ್ಯಾಸಂಸ್ಥೆ, ತಾಲೂಕು ಕಚೇರಿ ರಸ್ತೆ, ಕಾರ್ಪೋರೇಷನ್ ಹತ್ತಿರ
- ಮಂಗಳೂರಿನಲ್ಲಿ ಯಾವಾಗ?
MSNIM,
ಬೆಸೆಂಟ್ ಕ್ಯಾಂಪಸ್ ಬೋಂದೆಲ್
ಈಗಾಗಲೇ ಆಡಿಷನ್ಸ್‌ನಲ್ಲಿ ಭಾಗವಹಿಸಿದವ್ರ ಮಾತೇನು?
ಜೀ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಆಡಿಷನ್ಸ್‌ನ ಕಿರು ವಿಡಿಯೋ ಝಲಕ್‌ಅನ್ನು ಶೇರ್ ಮಾಡಿದೆ. "ಏಷ್ಟೋ ಜನ ರೈಟರ್ಸ್ ಆಗಬೇಕು ಅಂದುಕೊಂಡಿರುತ್ತಾರೆ. ಆದರೆ, ಅವಕಾಶ ಮಾತ್ರ ಸಿಕ್ಕಿರುವುದಿಲ್ಲ. ಅಂಥ ಒಂದು ಅವಕಾಶವನ್ನು ಜೀ ಕನ್ನಡ ನೀಡಿದೆ", "ರೈಟರ್ಸ್ ಆಡಿಷನ್ ಅಂತ ನಾನು ಕೇಳುತ್ತಿರುವುದೇ ಇದೇ ಮೊದಲು. ಈ ಥರದ್ದನ್ನು ಎಲ್ಲೂ ಕೇಳಿಲ್ಲ. ಬರಹಗಾರರಿಗೆ ಒಂದೊಳ್ಳೆಯ ಅವಕಾಶ ಇದು. ಹೊಲದಲ್ಲಿ ರೈತರನ್ನು ಹುಡುಕೋದು, ಹೊಸತನದ ರೈಟರ್‌ನ ಹುಡುಕೋದು ತುಂಬ ಕಷ್ಟ" ಎಂದು ಎಷ್ಟೋ ಮಂದಿ ಆಡಿಷನ್ ಕೊಟ್ಟವರು ಮಾತನಾಡಿದ್ದಾರೆ. ಅಂದಹಾಗೆ, ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಈ ಬಗ್ಗೆ ಜೀ ಕನ್ನಡ ಬ್ಯಾನರ್ ಪ್ರದರ್ಶಿಸಿತ್ತು.