ಅಣ್ಣಯ್ಯ ಸೀರಿಯಲ್ ಸಲುವಾಗಿ ಲಕ್ಷ್ಮೀ ನಿವಾಸ ಧಾರಾವಾಹಿ ವೀಕ್ಷಕರಿಗೆ ಬೇಸರದ ಸುದ್ದಿ ನೀಡಿದ ವಾಹಿನಿ
ಲಕ್ಷ್ಮೀ ನಿವಾಸ ಮತ್ತು ಅಣ್ಣಯ್ಯ ಜೀ ಕನ್ನಡ ವಾಹಿನಿಯ ಎರಡು ಪ್ರಮುಖ ಧಾರಾವಾಹಿಗಳು. ಇದೀಗ ಮುಂದಿನ ಎರಡು ದಿನಗಳ ಮಟ್ಟಿಗೆ ಇದೇ ಸೀರಿಯಲ್‌ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಅಣ್ಣಯ್ಯ ಒಂದು ಗಂಟೆಯ ಮಹಾಸಂಚಿಕೆಯೊಂದಿಗೆ ಪ್ರಸಾರ ಕಂಡರೆ, ಲಕ್ಷ್ಮೀ ನಿವಾಸ ಅರ್ಧ ಗಂಟೆ ಪ್ರಸಾರ ಕಾಣಲಿದೆ.

Kannada Television: ಜೀ ಕನ್ನಡದಲ್ಲಿ ಸದ್ಯ ಪ್ರಸಾರ ಕಾಣುತ್ತಿರುವ ಹತ್ತಾರು ಧಾರಾವಾಹಿಗಳಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಳ್ಳುವ ಸೀರಿಯಲ್ ಎಂದರೆ ಅದು ಲಕ್ಷ್ಮೀ ನಿವಾಸ. ಕೂಡು ಕುಟುಂಬದ ಬಗೆಬಗೆ ಮನಸ್ಸುಗಳ, ಹಲವು ಕಥೆಗಳ ಗುಚ್ಛ ಈ ಸೀರಿಯಲ್. ಮನೆ ಯಜಮಾನ ಶ್ರೀನಿವಾಸ ಮತ್ತು ಲಕ್ಷ್ಮೀ ದಂಪತಿಗೆ ಹೇಗಾದ್ರೂ ಮಾಡಿ, ತಮ್ಮದೂ ಅಂತ ಒಂದು ಸ್ವಂತ ಹೊಸ ಮನೆ ಕಟ್ಟುವ ಕನಸು. ಆ ಕನಸಿನ ಹಾದಿಯಲ್ಲಿ ಮಿಡಲ್ ಕ್ಲಾಸ್ ಕುಟುಂಬದ ಏರಿಳಿವೂ ಈ ಸೀರಿಯಲ್‌ನ ಜೀವಾಳ. ಹೀಗೆ ಬಗೆಬಗೆ ಕವಲುಗಳಾಗಿ ಕಿರುತೆರೆ ವೀಕ್ಷಕರನ್ನು ಸೆಳೆದ ಈ ಧಾರಾವಾಹಿ ಇದೀಗ ವೀಕ್ಷಕರಿಗೆ ಬೇಸರದ ಸುದ್ದಿಯೊಂದನ್ನು ಹೊತ್ತು ತಂದಿದೆ.
ಹೌದು, ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಮುಖ್ಯ ಸ್ಲಾಟ್‌ನಲ್ಲಿ ಒಂದು ಗಂಟೆಗಳ ಕಾಲ ಲಕ್ಷ್ಮೀ ನಿವಾಸ ಸೀರಿಯಲ್ ಪ್ರಸಾರ ಕಾಣುತ್ತಿದೆ. ಹಿರಿದಾದ ಕಥೆ, ಹತ್ತಾರು ಕಲಾವಿದರು ಈ ಸೀರಿಯಲ್‌ನಲ್ಲಿ ಇರುವುದರಿಂದಲೇ ಈ ಧಾರಾವಾಹಿಯನ್ನು 1 ಗಂಟೆ ಪ್ರಸಾರ ಮಾಡಲಾಗುತ್ತಿದೆ. ಇದೀಗ ಮುಂದಿನ ಎರಡು ದಿನಗಳ ಕಾಲ, ಅಂದರೆ, ಸೋಮವಾರ (ಫೆ. 10) ಮತ್ತು ಮಂಗಳವಾರ (ಫೆ. 11) ಪ್ರಸಾರದ ಸಮಯದಲ್ಲಿ ಕೊಂಚ ವ್ಯತ್ಯಾಸವಾಗಲಿದೆ. ಅದೆಲ್ಲದಕ್ಕೂ ಕಾರಣ ಅಣ್ಣಯ್ಯ ಸೀರಿಯಲ್!
ಜೀ ಕನ್ನಡದಲ್ಲಿ ಅಣ್ಣಯ್ಯ ಸೀರಿಯಲ್ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ. ಇದೀಗ ಇದೇ ಸೀರಿಯಲ್‌ನಲ್ಲಿ ಕಥೆಯ ಓಟ ಹೊಸ ತಿರುವಿನತ್ತ ಸಾಗಿದ ಬೆನ್ನಲ್ಲೇ, ವೀಕ್ಷಕರಿಗೆ ಮಗದಷ್ಟು ಮನರಂಜನೆ ನೀಡುವ ಉದ್ದೇಶಕ್ಕೆ ಮಹಾಸಂಚಿಕೆಯ ಮೊರೆ ಹೋಗಿದೆ ಜೀ ಕನ್ನಡ. ಅಂದರೆ, ಇಂದು ಮತ್ತು ನಾಳೆ ಅಣ್ಣಯ್ಯ ಸೀರಿಯಲ್‌ನ ಮಹಾ ಸಂಚಿಕೆ ಪ್ರಸಾರವಾಗಲಿದೆ. ಸಾಲದ ಸುಳಿಯಲ್ಲಿ ಶಿವಣ್ಣ ಸಿಲುಕಿದರೆ, ಆ ಸಾಲ ನೀಡಿದ ಸತ್ಯ ಅರಿತ ಪಾರು ಸುಮ್ಮನಿರ್ತಾಳಾ? ಈ ರೋಚಕ ಸಂಗತಿಯ ಒಂದು ಗಂಟೆಯ ಸಂಚಿಕೆ ಸೋಮವಾರ (ಫೆ. 10) ಮತ್ತು ಮಂಗಳವಾರ (ಫೆ. 11) ರಾತ್ರಿ 7:30ರಿಂದ 8:30ರ ವರೆಗೆ ಪ್ರಸಾರವಾಗಲಿದೆ.
ಈ ಅಣ್ಣಯ್ಯ ಸೀರಿಯಲ್‌ನ ಮಹಾಸಂಚಿಕೆಯ ಸಲುವಾಗಿ, ಲಕ್ಷ್ಮೀ ನಿವಾಸ ಸೀರಿಯಲ್ ಈ ಎರಡು ದಿನಗಳ ಕಾಲ 8:30ರಿಂದ 9 ಗಂಟೆಯವರೆಗೂ ಪ್ರಸಾರ ಕಾಣಲಿದೆ. ಈ ಹಿಂದೆ ಒಂದಷ್ಟು ಹೊಸ ಸೀರಿಯಲ್‌ಗಳು ಪ್ರಸಾರಕ್ಕೆ ಅಣಿಯಾದಾಗ, ಲಕ್ಷ್ಮೀ ನಿವಾಸ ಒಂದು ಗಂಟೆಯ ಬದಲು ಅರ್ಧ ಗಂಟೆಗೆ ಬರಬಹುದು ಎಂದೇ ವೀಕ್ಷಕರು ಊಹಿಸಿದ್ದರು. ಆದರೆ, ನೋಡುಗರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿರುವುದರಿಂದ ಒಂದು ಗಂಟೆಯ ಸಂಚಿಕೆಯೇ ಮುಂದುವರಿಯಲಿದೆ ಎಂದು ವಾಹಿನಿ ತಿಳಿಸಿತ್ತು.

ವಿಭಾಗ