Seetha Rama Serial: ರೇಟಿಂಗ್‌ ಬಾರದಕ್ಕೆ ಮೂಲೆಗುಂಪಾಯ್ತಾ ಸೀತಾ ರಾಮ ಧಾರಾವಾಹಿ, ಶೀಘ್ರದಲ್ಲಿಯೇ ಮುಕ್ತಾಯ? ಸಮಯ ಬದಲಾವಣೆಯಿಂದ ವೀಕ್ಷಕ ಬೇಸರ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ರೇಟಿಂಗ್‌ ಬಾರದಕ್ಕೆ ಮೂಲೆಗುಂಪಾಯ್ತಾ ಸೀತಾ ರಾಮ ಧಾರಾವಾಹಿ, ಶೀಘ್ರದಲ್ಲಿಯೇ ಮುಕ್ತಾಯ? ಸಮಯ ಬದಲಾವಣೆಯಿಂದ ವೀಕ್ಷಕ ಬೇಸರ

Seetha Rama Serial: ರೇಟಿಂಗ್‌ ಬಾರದಕ್ಕೆ ಮೂಲೆಗುಂಪಾಯ್ತಾ ಸೀತಾ ರಾಮ ಧಾರಾವಾಹಿ, ಶೀಘ್ರದಲ್ಲಿಯೇ ಮುಕ್ತಾಯ? ಸಮಯ ಬದಲಾವಣೆಯಿಂದ ವೀಕ್ಷಕ ಬೇಸರ

Seetha Rama Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಸೀರಿಯಲ್‌, ವೀಕ್ಷಕರಿಗೆ ಶಾಕ್‌ ನೀಡಿದೆ. ಇಷ್ಟು ದಿನ ರತ್ರಿ 9:30ಕ್ಕೆ ಪ್ರಸಾರವಾಗುತ್ತಿದ್ದ ಈ ಸೀರಿಯಲ್‌, ಇದೀಗ ಬದಲಾದ ಸಮಯದಲ್ಲಿ ಪ್ರಸಾರ ಕಾಣಲಿದೆ. ಸಮಯ ಬದಲಾಗಿದ್ದೇ ತಡ, ವೀಕ್ಷಕರ ವಲಯದಲ್ಲಿಯೂ ಬೇಸರ ಮನೆ ಮಾಡಿದೆ.

ಸೀತಾ ರಾಮ ಧಾರಾವಾಹಿ, ಶೀಘ್ರದಲ್ಲಿಯೇ ಮುಕ್ತಾಯ?
ಸೀತಾ ರಾಮ ಧಾರಾವಾಹಿ, ಶೀಘ್ರದಲ್ಲಿಯೇ ಮುಕ್ತಾಯ? (Zee Kannada)

Seetha Rama Serial Slat Change: ಸೀತಾ ರಾಮ ಸೀರಿಯಲ್‌ ಶುರುವಾಗಿ ಎರಡೂವರೆ ವರ್ಷವಾಯ್ತು. ಆರಂಭದಿಂದಲೂ ವೀಕ್ಷಕರ ಮೆಚ್ಚಿನ ಧಾರಾವಾಹಿಯಾಗಿರುವ ಸೀತಾ ರಾಮ, ಸದ್ಯ ಅಚ್ಚರಿಯ ತಿರುವುಗಳ ಜತೆಗೆ ಸಾಗುತ್ತಿದೆ. ಸಿಹಿ ಸಾವು, ಆಕೆಯ ಸಾವಿನ ತನಿಖೆ, ಸುಬ್ಬಿಯ ಎಂಟ್ರಿ.. ಹೀಗೆ ಒಂದಷ್ಟು ಕೌತುಕಕ್ಕೆ ಸೀತಾ ರಾಮ ಸೀರಿಯಲ್‌ ಹೊರಳಿದೆ. ವೀಕ್ಷಕರಿಂದ ಆರಂಭದಿಂದಲೂ ಬಹುಪರಾಕ್‌ ಪಡೆದ ಈ ಧಾರಾವಾಹಿ, ಬಿಗ್‌ ಬಾಸ್‌ ಶುರುವಾದಾಗಿನಿಂದ ಟಿಆರ್‌ಪಿಯಲ್ಲಿ ಕೊಂಚ ಮಂಕಾಗಿತ್ತು. ಆದರೆ, ಇದೀಗ ಇದೇ ಧಾರಾವಾಹಿಯಿಂದ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಾರದ ಸಮಯದಲ್ಲಿ ಬದಲಾವಣೆ ಆಗಿದೆ.

ಸಹಜವಾಗಿ ಹೊಸ ಸೀರಿಯಲ್‌ಗಳ ಆಗಮನ ಆಗುತ್ತಿದೆ ಎಂದಾಗ, ಅಲ್ಲಿ ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸುವುದು ಸಹಜ. ಒಂದು ಸೀರಿಯಲ್‌ ಬರ್ತಿದೆ ಎಂದಾಗ, ಇನ್ನೊಂದು ಧಾರಾವಾಹಿ ಅಂತ್ಯಕಾಣಬೇಕು. ಇಲ್ಲವೇ, ಸ್ಲಾಟ್‌ ಹಿಂದೆ ಮುಂದೆ ಆಗಬೇಕು. ಈಗ ಜೀ ಕನ್ನಡದಲ್ಲಿ ಯಾವುದೇ ಸೀರಿಯಲ್‌ ಅಂತ್ಯ ಕಾಣುತ್ತಿಲ್ಲ. ಅದರ ಬದಲಿಗೆ, ನಾ ನಿನ್ನ ಬಿಡಲಾರೆ ಹೊಸ ಧಾರಾವಾಹಿಯ ಗ್ರ್ಯಾಂಡ್‌ ಎಂಟ್ರಿಯಾಗುತ್ತಿದೆ. ಅದೂ ರಾತ್ರಿ 9:30ರ ಸಮಯಕ್ಕೆ! ಹಾಗಾದರೆ, ಸೀತಾ ರಾಮ ಕಥೆ ಏನಾಯ್ತು? ಪ್ರೈಂ ಸ್ಲಾಟ್‌ನಿಂದ ಸೀತಾ ರಾಮ ಧಾರಾವಾಹಿ ಎತ್ತಂಗಡಿ ಆಗಿದೆ.

ನಾ ನಿನ್ನ ಬಿಡಲಾರೆ ಸೀರಿಯಲ್‌ಗೆ ಈ ತ್ಯಾಗ

ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಇನ್ನೇನು ಜನವರಿ 27ರಿಂದ ಆರಂಭವಾಗಲಿದೆ. ಕರುಳಬಳ್ಳಿಯ ಕಾಪಾಡಲು ಹೋರಾಡೋ ಅಮ್ಮನ ‘ಆತ್ಮ’ಕತೆಯೇ ಈ ನಾ ನಿನ್ನ ಬಿಡಲಾರೆ ಧಾರಾವಾಹಿ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಎದೆಬಡಿತ ಹೆಚ್ಚಿಸಿರುವ ಈ ಸೀರಿಯಲ್‌, ಸೋಮವಾರದಿಂದ 9:30ಕ್ಕೆ ಪ್ರಸಾರವಾಗಲಿದೆ. ಈ ಮೊದಲು ಒಂದು ಗಂಟೆ ಪ್ರಸಾರ ಕಾಣುವ ಲಕ್ಷ್ಮೀ ನಿವಾಸ ಸೀರಿಯಲ್‌ ಅರ್ಧಗಂಟೆಗೆ ಕಡಿತಗೊಂಡು, ಮಿಕ್ಕ ಸ್ಲಾಟ್‌ನಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ ಪ್ರಸಾರ ಕಾಣಬಹುದು ಎಂದೇ ಹೇಳಲಾಗಿತ್ತು. ಆದರೆ, ಇದೀಗ ಹೊಸ ಸೀರಿಯಲ್‌ ಆಗಮನಕ್ಕೆ ಸೀತಾ ರಾಮ ಬಲಿಪಶುವಾಗಿದೆ. ಯಾರೂ ಊಹಿಸದ ಸ್ಲಾಟ್‌ಗೆ ಸೀತಾ ರಾಮ ಸೀರಿಯಲ್‌ ಜಿಗಿದಿದೆ. ಸಂಜೆ 5:30ಕ್ಕೆ ಸೀತಾ ರಾಮ ಪ್ರಸಾರ ಕಾಣಲಿದೆ.

ಕೆಲ ತಿಂಗಳ ಹಿಂದಷ್ಟೇ ಅಣ್ಣಯ್ಯ ಸೀರಿಯಲ್‌ ಸಲುವಾಗಿ, 7:30ಕ್ಕೆ ಪ್ರಸಾರ ಕಾಣುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸಮಯ ಬದಲಾಗಿ 6:30ಕ್ಕೆ ಸ್ಲಾಟ್‌ ಬದಲಿಸಿತ್ತು. ಈಗ ಮತ್ತೊಂದು ಬದಲಾವಣೆಗೆ ಜೀ ಕನ್ನಡ ಸಾಕ್ಷಿಯಾಗಲಿದೆ. 6:30ಕ್ಕೆ ಪ್ರಸಾರ ಕಂಡ ಪುಟ್ಟಕ್ಕನ ಮಕ್ಕಳು ಟಿಆರ್‌ಪಿಯಲ್ಲಿ ಆರಂಭದಲ್ಲಿ ಕುಸಿತ ಕಂಡಿತ್ತು. ಈಗ ಮತ್ತೆ ಹಳೇ ಲಯದತ್ತ ಹೊರಳುತ್ತಿದೆ. ಆದರೆ, ಸೀತಾ ರಾಮ ಸೀರಿಯಲ್‌ ಪಾಲಿಗೆ 5:30 ಸ್ಲಾಟ್‌ ಬಿಸಿತುಪ್ಪವಾಗಿ ಪರಿಣಮಿಸಿದೆ. ಸೀರಿಯಲ್‌ ಪ್ರಸಾರವಾಗಿ ಒಂದೆರಡು ವಾರದಲ್ಲಿಯೇ ಈ ಬದಲಾವಣೆಯ ಫಲಿತಾಂಶ ದಕ್ಕಲಿದೆ.

ಶೀಘ್ರದಲ್ಲಿಯೇ ಅಂತ್ಯ?

ಸೀತಾ ರಾಮ ಸೀರಿಯಲ್‌ ಗಮನಿಸಿದರೆ, ಸದ್ಯ ಶೀಘ್ರ ಅಂತ್ಯ ಕಾಣುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸಿಹಿ ಸಾವಿನ ತನಿಖೆ ಆರಂಭಿಸಿರುವ ಸತ್ಯಜಿತ್ ಮತ್ತು ಅಶೋಕನಿಗೆ, ಈಗ ಸಿಸಿಟಿವಿಯಲ್ಲಿ ಲಾಯರ್‌ ರುದ್ರಪ್ರತಾಪ್‌ ಕಾಣಿಸಿದ್ದಾನೆ. ಅವನನ್ನು ಹಿಡಿದು ಬಾಯಿ ಬಿಡಿಸಿದರೆ, ಅದರ ಹಿಂದಿರುವ ಭಾರ್ಗವಿ ಸಿಕ್ಕಿಬೀಳುವ ಸಾಧ್ಯತೆ ಇದೆ. ರಾಮನ ತಾಯಿಯನ್ನು ಹತ್ಯೆ ಮಾಡಿಸಿದ ಬಗ್ಗೆ ಭಾರ್ಗವಿ ಹೇಳಿಕೊಂಡಾಗ, ಆ ಮಾತನ್ನು ಅಲ್ಲೇ ಇದ್ದ ಸಿಹಿ ಕೇಳಿಸಿಕೊಂಡಿದ್ದಳು. ಈಗ ಆ ಸತ್ಯವನ್ನು ಸುಬ್ಬಿಯ ಬಾಯಿಂದಲೇ ಸಿಹಿ ಹೇಳಿಸುವ ಸಾಧ್ಯತೆ ಇದೆ. ಅಲ್ಲಿಗೆ ಭಾರ್ಗವಿ ಜೈಲು ಪಾಲಾದರೆ, ಸಿಹಿ ಇಲ್ಲದ ಸೀತಾಗೆ ಸುಬ್ಬಿಯೇ ಮಗಳಾಗಿ ಮುಂದುವರಿಯಲಿದ್ದಾಳೆ. ಒಟ್ಟಿನಲ್ಲಿ ಸೀತಾ ರಾಮ ಸೀರಿಯಲ್‌ ಸುಖಾಂತ್ಯದ ಸನಿಹ ಬಂದಿದೆ.

Whats_app_banner