Seetha Rama Serial: ದೇಸಾಯಿ ಮನೆಗೆ ಸಿಹಿಯ ಪ್ರವೇಶವಾಗುತ್ತಿದ್ದಂತೆ, ಭಾರ್ಗವಿ ಮನದಲ್ಲಿ ಶುರುವಾಯ್ತು ಭಯದ ಪುಕ ಪುಕ
Seetha Rama 13th February Episode: ದೇಸಾಯಿ ಮನೆಗೆ ಸಿಹಿ ರೂಪದಲ್ಲಿ ಸುಬ್ಬಿಯ ಆಗಮನವಾಗಿದೆ. ಮಾನಸಿಕವಾಗಿ ಕುಗ್ಗಿದ್ದ ಸೀತಾ ಮೊದಲಿನಂತಾಗಿದ್ದಾಳೆ. ರಾಮ್ ಮತ್ತು ಅಶೋಕ ಖುಷಿಯಲ್ಲಿದ್ದರೆ, ಭಾರ್ಗವಿ ಮನದಲ್ಲಿ ಭಯ ಆವರಿಸಿದೆ. ಸತ್ತೋದ ಸಿಹಿ ಹೇಗೆ ಬಂದಳು ಎಂಬುದನ್ನು ನಾನೇ ಪತ್ತೆ ಮಾಡ್ತಿನಿ ಎಂದಿದ್ದಾಳೆ.

Seetha Rama February today Episode: ಸೀತಾ ರಾಮ ಸೀರಿಯಲ್ ತನ್ನ ಪ್ರಸಾರದ ಸಮಯ ಬದಲಿಸಿದರೂ, ನೋಡುಗರನ್ನು ಸೆಳೆಯುತ್ತಿದೆ. ಅದಕ್ಕೆ ಕಾರಣ; ಧಾರಾವಾಹಿಯಲ್ಲಾದ ಇತ್ತೀಚಿನ ಬೆಳವಣಿಗೆಗಳು. ಅಂದರೆ, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದ ಸೀತಾಗೆ ಸಿಹಿನೇ ಎಲ್ಲ. ಸಿಹಿ ಇಲ್ಲ ಅನ್ನೋ ಕಲ್ಪನೆಯೇ ಆಕೆಗಿಲ್ಲ. ಈ ನಡುವೆ, ಹೇಗಾದರೂ ಮಾಡಿ ಸೀತಾಳನ್ನು ಮೊದಲಿನಂತೆ ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ರಾಮ್ ಮತ್ತು ಅಶೋಕ್ ಶತಾಯಗತಾಯ ಹೋರಾಡುತ್ತಿದ್ದರು. ಆಗ ಅವರಿಗೆ ಸಿಕ್ಕವಳೇ ಥೇಟ್ ಸಿಹಿಯನ್ನೇ ಹೋಲುವ ಸುಬ್ಬಿ. ಇದೀಗ ಇದೇ ಸುಬ್ಬಿ ಸಿಹಿಯ ಪೋಷಾಕಿನಲ್ಲಿ ದೇಸಾಯಿ ಮನೆಯನ್ನು ಪ್ರವೇಶಿಸಿದ್ದಾಳೆ.
ಸಿಹಿ ಕಂಡು ಬೆಚ್ಚಿಬಿದ್ದ ಭಾರ್ಗವಿ
ಮನೆಯಲ್ಲಿ ಸಿಹಿ ಇಲ್ಲ ಅನ್ನೋ ಸತ್ಯವನ್ನು ಭಾರ್ಗವಿ ಸೀತಾಳ ಮುಂದೆ ಹೇಳಿದ್ದಾಳೆ. ಆವತ್ತೇ ನಿನ್ನ ಮಗಳು ಸತ್ತಿದಿದ್ದರೆ, ಈ ತಲೆ ನೋವೇ ಇರುತ್ತಿರಲಿಲ್ಲ ಎಂದಿದ್ದ ಭಾರ್ಗವಿ ಕುತ್ತಿಗೆಗೆ ಚಾಕು ಹಿಡಿದಿದ್ದಳು ಸೀತಾ. ಸೀತಾಳ ಹುಚ್ಚು ವರ್ತನೆಗೆ ಹುಚ್ಚಾಸ್ಪತ್ರೆಗೂ ದಾಖಲಿಸುವ ನಿರ್ಧಾರಕ್ಕೆ ಬಂದಿದ್ದಳು ಭಾರ್ಗವಿ. ಕೊನೆಗೆ ಅಚ್ಚರಿಯ ಗಳಿಗೆಯಲ್ಲಿಯೇ ಸಿಹಿ ರೂಪದಲ್ಲಿ ಸುಬ್ಬಿಯ ಎಂಟ್ರಿಯಾಗಿದೆ. ಅರೇ ಕ್ಷಣ ಇಡೀ ಮನೆ ಮಂದಿ ಹೌಹಾರಿದ್ದಾರೆ. ಭಾರ್ಗವಿಯಂತೂ ಒಳಗೊಳಗೆ ಕುದಿಯುತ್ತಿದ್ದಳು. ಇದೀಗ ಯಾರು ಈ ಹುಡುಗಿ ಎಂಬ ಪ್ರಶ್ನೆ, ರಾಮ್ ಮತ್ತು ಅಶೋಕನ ಸುತ್ತುವರಿದಿದೆ.
ಪವಾಡದಂತಾಯ್ತು ಎಂದ ಸೂರಿ
ಆವತ್ತೇ ಸಿಹಿಯ ಅಂತ್ಯಸಂಸ್ಕಾರ ಮಾಡಿದ್ವಲ್ಲ.. ಅವಳು ಸತ್ತೋಗಿದ್ದಾಳೆ, ಇವಳ್ಯಾರೋ ರಾಮ ಎಂದು ವಿಶ್ವ ಚಿಕ್ಕಪ್ಪ ಕೇಳುತ್ತಿದ್ದಂತೆ. ದಯವಿಟ್ಟು ಸಿಹಿ ಸತ್ತೋಗಿದ್ದಾಳೆ ಎಂದು ಯಾರೂ ಹೇಳಬೇಡಿ. ಅವಳು ಬದುಕಿದ್ದಾಳೆ ಅಷ್ಟೇ ಎಂದು ಎಲ್ಲರ ಬಾಯಿ ಮುಚ್ಚಿಸಿದ್ದಾನೆ. ರಾಮನ ಉತ್ತರಕ್ಕೆ ಗಲಿಬಿಲಿಯಾದ ಭಾರ್ಗವಿ, ಏನಾಗ್ತಿದೆ ಸರಿಯಾಗಿ ಹೇಳು ಎಂದು ರಾಮ್‌ಗೆ ಮತ್ತೆ ಕೇಳಿದ್ದಾಳೆ. ಅದಕ್ಕೆ ರಾಮನ ಬದಲು ಅಶೋಕ ಉತ್ತರ ನೀಡಿದ್ದಾನೆ. ಸಿಹಿ ಬಂದಿದ್ದಾಳೆ ಎಂದರೆ, ಅವಳು ಸತ್ತಿಲ್ಲ ಅಂತಲೇ ಅರ್ಥ. ಇನ್ನೊಂದು ಮಗು ಬಂದರೆ ಸೀತಾ ಸರಿಹೋಗುತ್ತಾಳೆ ಎಂದು ಎಲ್ಲರೂ ಹೇಳುತ್ತಿದ್ದರು. ಈಗ ಸಿಹಿ ಬಂದಿದ್ದಾಳೆ, ಸೀತಾ ಸರಿಹೋಗ್ತಾಳೆ ಎಂದಿದ್ದಾನೆ. ಈ ಕಡೆ ನಾನಂತೂ ಇದೊಂದು ಮಿರಾಕಲ್ ಎಂದುಕೊಂಡು ಖುಷಿಪಡುತ್ತಿದ್ದೇನೆ ಎಂದಿದ್ದಾನೆ ರಾಮ್.
ಇತ್ತ ಸಿಹಿ ಜತೆಗೆ ಸೀತಾ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾಳೆ. ಅವರಿಬ್ಬರ ಸಂಭ್ರಮವನ್ನು ರಾಮ್ ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾನೆ. ಆದರೆ, ಸಿಹಿ ಮನೆಗೆ ಪ್ರವೇಶವಾಗುತ್ತಿದ್ದಂತೆ, ಭಾರ್ಗವಿ ಮಾತ್ರ ಕಣ್ಣು ಕೆಂಪಾಗಿಸಿಕೊಂಡಿದ್ದಾಳೆ. ಎಲ್ಲಿ ತನ್ನ ಬಣ್ಣ ಬಯಲಾಗುತ್ತೋ ಅನ್ನೋ ಭಯದಲ್ಲಿದ್ದಾಳೆ. ವಿಶ್ವನ ಜತೆ ಸಿಹಿ ವಿಚಾರವಾಗಿಯೇ ಮಾತನಾಡುತ್ತ, ಇದರ ಹಿಂದೆ ಬೇರೆ ಏನೋ ಇದೆ. ಅದನ್ನು ಕಂಡು ಹಿಡಿದೇ ಹಿಡಿಯುತ್ತೇನೆ ಎಂದಿದ್ದಾಳೆ ಭಾರ್ಗವಿ. ಹೀಗಿರುವಾಗಲೇ ಸುಬ್ಬಿ ಯಾರದ್ದೋ ಜತೆಗೆ ಮಾತನಾಡುತ್ತಿದ್ದಿದ್ದನ್ನು ಭಾರ್ಗವಿ ನೋಡಿದ್ದಾಳೆ. ಅಲ್ಲಿಗೆ ಸೀತಾ ರಾಮ ಸೀರಿಯಲ್ ಸಂಚಿಕೆ ಮುಕ್ತಾಯವಾಗಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
