ಅಬ್ಬೋ ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌ ಇಷ್ಟೊಂದು ಕೋಟಿನಾ? ಕೇವಲ 10 ಏಪಿಸೋಡ್‌ಗೆ ನೂರು ದಿನದ ಶೂಟಿಂಗ್‌!
ಕನ್ನಡ ಸುದ್ದಿ  /  ಮನರಂಜನೆ  /  ಅಬ್ಬೋ ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌ ಇಷ್ಟೊಂದು ಕೋಟಿನಾ? ಕೇವಲ 10 ಏಪಿಸೋಡ್‌ಗೆ ನೂರು ದಿನದ ಶೂಟಿಂಗ್‌!

ಅಬ್ಬೋ ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌ ಇಷ್ಟೊಂದು ಕೋಟಿನಾ? ಕೇವಲ 10 ಏಪಿಸೋಡ್‌ಗೆ ನೂರು ದಿನದ ಶೂಟಿಂಗ್‌!

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌ ಅಪಾರ ವೀಕ್ಷಕ ಬಳಗವನ್ನು ಹೊಂದಿದೆ. ಮಿಡಲ್‌ ಕ್ಲಾಸ್‌ ಮನೆಗಳ ವಾಸ್ತವ ಸ್ಥಿತಿಯನ್ನು ವೀಕ್ಷಕರ ಮುಂದೆ ಈ ತಂಡ ಇಡುತ್ತಿದೆ. ಬರೋಬ್ಬರಿ 60 ಜನ ಕಲಾವಿದರು ಈ ಸೀರಿಯಲ್‌ನಲ್ಲಿದ್ದಾರೆ. 200 ಕ್ಕೂ ಅಧಿಕ ತಂತ್ರಜ್ಞರು ನಿತ್ಯ ಕೆಲಸ ಮಾಡುತ್ತಾರೆ. ಹಾಗಾದರೆ ಇದೇ ಸೀರಿಯಲ್‌ ಬಜೆಟ್‌ ಎಷ್ಟು?

ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌
ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌ (Zee5)

Lakshmi Nivasa Serial Budget: ಸೀರಿಯಲ್‌ಗಳೆಂದರೆ ವೀಕ್ಷಕ ವಲಯದಲ್ಲಿ ಒಂದು ಸಣ್ಣ ಕುತೂಹಲವಿದೆ. ಕಡಿಮೆ ಬಜೆಟ್‌ನಲ್ಲಿಯೇ ಸೀರಿಯಲ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂಬುದು. ಆದರೆ, ಆ ವ್ಯಾಪ್ತಿ ಇದೀಗ ಹಿರಿದಾಗಿದೆ. ಮೇಕಿಂಗ್‌ ವಿಚಾ ರದಲ್ಲಿಯೇ ವೀಕ್ಷಕರನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತ ಸಾಗಿವೆ ಕಿರುತೆರೆ ಧಾರಾವಾಹಿಗಳು. ಶೂಟಿಂಗ್‌ ಸಲುವಾಗಿ ಹೆಲಿಕಾಪ್ಟರ್‌ ಸಹ ಇಲ್ಲಿ ಇಳಿದಿವೆ, ವಿದೇಶಗಳಲ್ಲಿಯೂ ಧಾರಾವಾಹಿಗಳ ಶೂಟಿಂಗ್‌ ನಡೆದಿವೆ. ನೋಡುಗನಿಗೆ ಸಿನಿಮಾ ನೋಡಿದ ಫೀಲ್‌ ನೀಡಬೇಕೆಂಬುದು ಇದರ ಒಟ್ಟಾರೆ ಉದ್ದೇಶ. ಹಾಗಾದರೆ ಕನ್ನಡದ ಒಂದು ಸೀರಿಯಲ್‌ನ ಸದ್ಯದ ಬಜೆಟ್‌ ಎಷ್ಟಿರಬಹುದು? ಹೀಗಿದೆ ನೋಡಿ ಉತ್ತರ.

ಜೀ ಕನ್ನಡದಲ್ಲಿ ಸದ್ಯ ಒಂದು ಗಂಟೆಯ ಸಂಚಿಕೆಯ ಮೂಲಕವೇ ದೊಡ್ಡ ವೀಕ್ಷಕ ಬಳಗವನ್ನು ಹೊಂದಿರುವ ಸೀರಿಯಲ್‌ ಎಂದರೆ ಅದು ಲಕ್ಷ್ಮೀ ನಿವಾಸ. ತುಂಬು ಕುಟುಂಬದ ಕಥೆಯೊಂದಿಗೆ ಮಧ್ಯಮ ವರ್ಗದ ಬದುಕು ಬವಣೆಯೂ ಈ ಸೀರಿಯಲ್‌ನಲ್ಲಿ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕರು. ಜಯಂತ್‌- ಜಾನು, ಲಕ್ಷ್ಮೀ - ಶ್ರೀನಿವಾಸ, ಸಿದ್ದೇಗೌಡ- ಭಾವನಾ ಹೀಗೆ ಹಲವು ಕವಲುಗಳಾಗಿ ಈ ಸೀರಿಯಲ್‌ ಎಲ್ಲರಿಗೂ ಇಷ್ಟವಾಗುತ್ತಿದೆ. ಈ ಕಥೆಯ ಜತೆಗೆ ಬಹುತಾರಾಗಣವೂ ಈ ಸೀರಿಯಲ್‌ನ ಹೈಲೈಟ್‌. ಮೇಕಿಂಗ್‌ ವಿಚಾರದಲ್ಲಿಯೂ ಅಷ್ಟೇ ರಿಚ್‌ ಆಗಿಯೇ ಈ ಸೀರಿಯಲ್‌ ಮೂಡಿಬರುತ್ತಿದೆ. ಈಗ ಇದೇ ಸೀರಿಯಲ್‌ನ ಬಜೆಟ್‌ ಎಷ್ಟು ಎಂಬುದನ್ನು ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ರಿವೀಲ್‌ ಮಾಡಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌ ಎಷ್ಟು?

ಇವತ್ತು ಕಿರುತೆರೆ ಸಿನಿಮಾ ಮಟ್ಟಕ್ಕೆ ಬೆಳೆದು ನಿಂತಿದೆ. ಅದೇ ಟೆಕ್ನಾಲಜಿ ಸೀರಿಯಲ್‌ಗಳಲ್ಲಿಯೂ ಕಾಣಬಹುದು. ಸಿನಿಮಾಕ್ಕಿಂತ ಟಿವಿ ಯಾವುದರಲ್ಲಿಯೂ ಕಮ್ಮಿ ಇಲ್ಲ. ನಮ್ಮ ಲಕ್ಷ್ಮೀ ನಿವಾಸ ಸೀರಿಯಲ್‌ ಬಜೆಟ್‌ ಬರೋಬ್ಬರಿ 10 ಕೋಟಿ. ಸಿಂಕ್‌ ಸೌಂಡ್‌ನಲ್ಲಿ ಇಡೀ ಸೀರಿಯಲ್‌ ಶೂಟಿಂಗ್‌ ಆಗುತ್ತೆ. ನಮ್ಮ ಸೀರಿಯಲ್‌ನ ಮೊದಲ 10 ಏಪಿಸೋಡ್‌ಗಳನ್ನೇ 100 ದಿನಗಳ ಕಾಲ ಶೂಟಿಂಗ್‌ ಮಾಡಿದ್ದೇವೆ. ದಿನಕ್ಕೆ ಒಮ್ಮೊಮ್ಮೆ ಒಂದೇ ಸೀನ್‌ ಮಾಡಿದ ಉದಾಹರಣೆಗಳಿವೆ.

ಕನ್ನಡ ಕಿರುತೆರೆ ಈಗ ಬೇರೆ ಲೆವೆಲ್‌ನಲ್ಲಿದೆ..

ಇಂದಿನ ಕಾಲದಲ್ಲಿ ಒಂದು ಸಿನಿಮಾವನ್ನು ಯಾರು ಬೇಕಾದರೂ ಮಾಡಬಹುದು, ಯಾವ ಬಜೆಟ್‌ನಲ್ಲಾದರೂ ಮಾಡಬಹುದು. ಅದು ಅವರ ವೈಯಕ್ತಿಕ. ಟಿವಿ ಮಾತ್ರ ವೈಯಕ್ತಿಕ ಅಲ್ಲ. ಅದೊಂದು ಸಂಸ್ಥೆ. ಅದರದ್ದೇ ಆದ ಸ್ಟಾಂಡರ್ಡ್‌ಗಳಿರುತ್ತವೆ. ಕನ್ನಡದಲ್ಲಿ ಕಿರುತೆರೆ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಇದೇ ಶೋ ಬೇರೆ ಎಂಟು ಭಾಷೆಗೂ ರಿಮೇಕ್‌ ಆಗುತ್ತದೆ ಎಂದರೆ, ಕನ್ನಡದ ಕಿರುತೆರೆಗೆ ಸ್ಟ್ಯಾಂಡರ್ಡ್‌ ಹೇಗಿರಬಹುದು ಲೆಕ್ಕಹಾಕಿ.

60 ಜನ ಕಲಾವಿದರು, 200 ಮಂದಿ ಟೆಕ್ನಿಷಿಯನ್ಸ್‌

ನಾವೀಗ ನಿರ್ಮಾಪಕರಾಗಿಯೇ 10 ವರ್ಷಗಳಾದವು. ಕಲರ್ಸ್‌ ಕನ್ನಡದ ಪದ್ಮಾವತಿ, ಕನ್ನಡ ಕೋಗಿಲೆ, ಈಗ ಲಕ್ಷ್ಮೀ ನಿವಾಸ ಸೇರಿ ಇಲ್ಲಿಯವರೆಗೂ 8 ಪ್ರಾಜೆಕ್ಟ್‌ ಮಾಡಿದ್ದೇವೆ. ಎಲ್ಲವೂ ಸೂಪರ್‌ ಹಿಟ್‌. ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ ದೊಡ್ಡ ಚಾಲೆಂಜ್‌ ನಮಗೆ. ಏಕೆಂದರೆ, ಈ ಸೀರಿಯಲ್‌ನಲ್ಲಿ ಒಟ್ಟು 60 ಜನ ಕಲಾವಿದರಿದ್ದಾರೆ. 200 ಜನ ಟೆಕ್ನಿಷಿಯನ್ಸ್‌ ಕೆಲಸ ಮಾಡ್ತಿದ್ದಾರೆ. ಎರಡು ಮೂರು ಯೂನಿಟ್‌ನಲ್ಲಿ ಮಾಡಿ ಶೂಟಿಂಗ್‌ ನಡೆಯುತ್ತಿದೆ. ಅಂದರೆ ನಿತ್ಯ ಒಂದು ಗಂಟೆ ಏಪಿಸೋಡ್‌ ಕಂಟೆಂಟ್‌ ಕೊಡಲೇಬೇಕು. ನಾಲ್ಕೈದು ಜನ ನಿರ್ದೇಶಕರು ಸೇರಿ ಬೇರೆ ಬೇರೆ ಲೊಕೇಷನ್‌ಗಳಲ್ಲಿ ಈ ಸೀರಿಯಲ್‌ಗಾಗಿ ಕೆಲಸ ಮಾಡ್ತಿದ್ದಾರೆ" ಎಂದು ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ.

Whats_app_banner