ತೆಲುಗಿನ ಇಂದ್ರ ಹಾಸ್ಯ ದೃಶ್ಯ ನೆನಪಿಸಿದ ವಿಜಯನಗರ ದರೋಡೆ; ಥೇಟ್ ಸಿನಿಮಾದಂತೆ ಕೋಟಿಕೋಟಿ ಮಹಾಮೋಸ, ಕಥೆ ಓದಿ
Vijayanagara Crime news: ಒಂದು ಲಕ್ಷಕ್ಕೆ 10 ಲಕ್ಷ ಮಾಡುವುದಾಗಿ ನಂಬಿಸಿ ಪೂಜೆ ನೆಪದಲ್ಲಿ ವಿಜಯನಗರದ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದ ಜನರಿಗೆ 2 ಕೋಟಿ ಮೋಸ ಮಾಡಲಾಗಿದೆ.
ವಿಜಯಪುರ: ತೆಲುಗಿನಲ್ಲಿ ಇಂಧ್ರ ಸಿನಿಮಾ ನೋಡಿರುತ್ತೀರಿ ಎಂದುಕೊಳ್ಳುತ್ತೇನೆ. ಇದರಲ್ಲೊಂದು ಹಾಸ್ಯ ದೃಶ್ಯ ಇದೆ. ಕುಟುಂಬವೊಂದು ಕಾಶೀ ವಿಶ್ವನಾಥನ ದರ್ಶನಕ್ಕೆಂದು ವಾರಣಾಸಿಗೆ ಬಂದಿತ್ತು. ಅದೇ ರೀತಿ ಅಲ್ಲಿನ ಕಳ್ಳರ ಗ್ಯಾಂಗ್ ಕಣ್ಣು ಆ ಕುಟುಂಬದ ಮಹಿಳೆ ಧರಿಸಿದ್ದ ಚಿನ್ನಾಭರಣಗಳ ಮೇಲೆ ಬಿದ್ದಿತ್ತು. ಹೇಗಾದರೂ ಅವರನ್ನು ನಂಬಿಸಬೇಕು ಎಂದು ತಮ್ಮದು ಕೂಡ ನಿಮ್ಮದೇ ಊರು ಎಂದು ಹೇಳಿದ್ದರು. ಅದನ್ನು ನಂಬಿದ್ದ ಆ ಕುಟುಂಬ, ಕಳ್ಳರ ಗ್ಯಾಂಗ್ ಹೇಳಿದಂತೆ ಮಾಡಿತ್ತು. ಅಲ್ಲದೆ, ವಿಶೇಷ ಪೂಜೆಯ ಬಗ್ಗೆಯೂ ಹೇಳಿತ್ತು.
ಅದರಂತೆ ಆ ಗ್ಯಾಂಗ್ನ ಪೂಜಾರಿ, ಚಿನ್ನಾಭರಣಗಳನ್ನು ಗಂಗಾ ನದಿಯಲ್ಲಿ ಮುಳುಗಿಸಿದರೆ ಎರಡು ಪಟ್ಟಾಗುತ್ತವೆ ಎಂದು ಹೇಳುತ್ತಾರೆ. ಗ್ಯಾಂಗ್ ಹೇಳಿದ ಮರಳು ಮಾತುಗಳನ್ನು ನಂಬಿದ ಕುಟುಂಬ ತಮ್ಮಲ್ಲಿದ್ದ ಚಿನ್ನಾಭರಣ ಗಂಟು ಮೂಟೆ ಕಟ್ಟಿ ಸ್ವಾಮೀಜಿಯೊಂದಿಗೆ ನದಿಯಲ್ಲಿ ಮುಳುಗಿಸುತ್ತಾರೆ. ಆದರೆ, ಆ ಕುಟುಂಬ ನಿರೀಕ್ಷಿಸಿದಂತೆ ಆಗುವುದಿಲ್ಲ. ಆಕಾಶಕ್ಕೆ ಕೈ ಮುಗಿಯುತ್ತಾ ಮಂತ್ರ ಪಠಿಸುವಂತೆ ಹೇಳುತ್ತಾರೆ. ಆದರೆ ಅವರು ಆಕಾಶಕ್ಕೆ ಮುಖ ಮಾಡುತ್ತಲೇ ಗಂಟು ಬದಲಿಸುತ್ತದೆ ಆ ಗ್ಯಾಂಗ್. ನಂತರ ಆ ಕುಟುಂಬ ಬದಲಾದ ಗಂಟು ಮೂಟೆ ನೋಡಿ ಶಾಕ್ ಆಗಿತ್ತು. ಅದರಲ್ಲಿ ಬರೀ ಇದ್ದಿಲು ಮಾತ್ರ ಇತ್ತು.
ಇದು ಇಂಧ್ರ ಸಿನಿಮಾದ ಅದ್ಭುತ ಹಾಸ್ಯ ದೃಶ್ಯವಾಗಿತ್ತು. ಆದರೆ, ಇದೀಗ ನಿಜ ಜೀವನದಲ್ಲೂ ಇಂತಹ ದರೋಡೆಯೊಂದು ನಡೆದಿದೆ. ಒಂದಕ್ಕೆ 10 ಪಟ್ಟು ಆಸೆ ತೋರಿಸಿ ಮಾಡಿರುವ ಮೋಸ ಇದಾಗಿದೆ. ದುರುಳರು ಪೂಜೆ ಹೆಸರಲ್ಲಿ ಇಡೀ ಗ್ರಾಮಕ್ಕೆ ಕೋಟಿ ಕೋಟಿ ಹಣ ಪಂಗನಾಮ ಹಾಕಿದ್ದಾರೆ. ಒಂದಲ್ಲ, ಎರಡಲ್ಲ, ಹತ್ತು ಪಟ್ಟು ಅಂದರೆ 1 ಲಕ್ಷಕ್ಕೆ 10 ಲಕ್ಷ ಹಣ ಮಾಡಿ ಕೊಡುತ್ತೇವೆ ಎಂದು ಗ್ರಾಮದ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಆರು ತಿಂಗಳಲ್ಲಿ ಗ್ರಾಮವೊಂದರಲ್ಲಿ 60ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಲೂಟಿ ಮಾಡಿದ್ದಾರೆ.
ಈ ಘಟನೆ ನಡೆದಿರುವುದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ. ನಿಮಗೆ ಕಷ್ಟ ಇದೆಯಾ, ಆರು ತಿಂಗಳಲ್ಲಿ ನಿಮ್ಮ ಕಷ್ಟ ಪರಿಹಾರ ಮಾಡುತ್ತೇವೆ ಎಂದು ನಂಬಿಸಿ ಕಳ್ಳರು ವಂಚಿಸಿದ್ದಾರೆ. ಖದೀಮರು ಮನೆಗೆ ಬಂದು ರಾತ್ರಿ ವೇಳೆ ಪೂಜೆ ಮಾಡಿ ಹಣ ಇಡುತ್ತಿದ್ದರು. ಎಲ್ಲರ ಮೊಬೈಲ್ ಪೋನ್ ಫ್ಲೈಟ್ ಮೋಡ್ಗೆ ಹಾಕಿಸಿ ಲೈಟ್ ಆಫ್ ಮಾಡಿಸಿ ಪೂಜೆ ಮಾಡುತ್ತಿದ್ದರು. ಪೂಜೆ ನಂತರ ಬಾಕ್ಸ್ವೊಂದರಲ್ಲಿ ಲಕ್ಷಾಂತರ ಹಣ ಇಟ್ಟು ಪ್ಯಾಕ್ ಮಾಡಬಹುದಾ ಎಂದು ಕೇಳುತ್ತಿದ್ದರು.
ಮನೆಯವರು ಒಪ್ಪಿಗೆ ಕೊಟ್ಟಾಗ ನೀವು ಹೊರಗೆ ಹೋಗಿ ನಾವು ಪೂಜೆ ಮಾಡಿ ಮತ್ತೆ ಪ್ಯಾಕ್ ಮಾಡಬೇಕು ಅಂತಾ ಅವರನ್ನು ಹೊರಗೆ ಕಳುಹಿಸುತ್ತಿದ್ದರು. ಆದರೆ ಆ ಪ್ಯಾಕ್ ಮಾಡುವ ವೇಳೆ ಹಣವನ್ನು ದೋಚುತ್ತಿದ್ದರು. ಪ್ಯಾಕ್ ಮಾಡಿದ ಬಳಿಕ ಈ ಬಾಕ್ಸ್ ಅನ್ನು 168 ದಿನಗಳವರೆಗೆ ತೆಗೆಯಬಾರದು. ಆಮೇಲೆ ಇದರಲ್ಲಿರುವ ಹಣ 10 ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಿದ್ದರು. ಇದನ್ನು ನಂಬಿದ ಜನರು ಕೊನೆಗೆ ಮೋಸ ಹೋಗಿರುವುದು ಗೊತ್ತಾಗಿದೆ. ಇಂಧ್ರ ಸಿನಿಮಾದಲ್ಲಿ ಥೇಟ್ ಇಂತಹದ್ದೇ ಘಟನೆ ನಡೆದಿದ್ದು, ಅದನ್ನು ಅಂದು ವಾಸ್ತವಕ್ಕೆ ತಕ್ಕಂತೆ ಹಾಸ್ಯ ರೂಪದಲ್ಲಿ ಪ್ರದರ್ಶಿಸಿದ್ದರು. ಆದರಿಲ್ಲಿ ಥೇಟ್ ಅಂತಹದ್ದೇ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ.
ನ್ಯಾಯ ಹೇಳ್ತಿದ್ದವರಿಂದಲೇ ಮಹಾಮೋಸ
ತಾಂಡಾಗಳಲ್ಲಿ ಕಾರುಬಾರಿ ಎನ್ನುವ ಮನೆತನದವರು ಜನರಿಗೆ ನ್ಯಾಯ ಹೇಳುವಂತರಾಗಿದ್ದರು. ಆ ಮನೆಯವರ ಮಾತು ಕೇಳಿ ಇದೀಗ ತಾಂಡಾದ ನೂರಾರು ಜನರು ಮೋಸಕ್ಕೆ ಒಳಗಾಗಿದ್ದಾರೆ. ಮೋಸ ಹೋದ ಕಲ್ಲಹಳ್ಳಿ ತಾಂಡಾದ ಕುಮಾರ ನಾಯ್ಕ್ ಹೊಸಪೇಟೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಪರಿಸ್ಥಿತಿ ಏನೆಂಬುದನ್ನು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಮೇರೆಗೆ ಮೂವರನ್ನು ಬಂಧಿಸಿದ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಆತನಿಗೆ ಸಹಕರಿಸುತ್ತಿದ್ದ ಕಲ್ಲಹಳ್ಳಿ ಗ್ರಾಮದ ಸ್ವಾಮಿ ನಾಯ್ಕ್, ಕಾರುಬಾರಿ ವೆಂಕ್ಯಾ ನಾಯ್ಕ್ ಬಂಧಿತರು.
ಬಂಧಿತರಿಂದ ಬರೋಬ್ಬರಿ 35 ಲಕ್ಷ ನಗದು ಹಣ, ನೋಟು ಎಣಿಸುವ 1 ಯಂತ್ರ, ಟಾವೆಲ್, ಜಮ್ಕಾನ್ ಜಪ್ತಿ ಮಾಡಲಾಗಿದೆ. ಜಿತೇಂದ್ರನ ಚಿತ್ರದುರ್ಗದ ಮನೆಯಲ್ಲಿಯೂ ಪೊಲೀಸರಿಂದ ತಪಾಸಣೆ ಮಾಡಲಾಗಿದೆ. ಆದರೆ ಪ್ರಮುಖ ಆರೋಪಿಗಳಾದ ಕಲ್ಲಹಳ್ಳಿ ಗ್ರಾಮದ ಸ್ವಾಮಿ ನಾಯ್ಕ್, ಕಾರುಬಾರಿ ವೆಂಕ್ಯಾ ನಾಯ್ಕ್ ಪರಾರಿಯಾಗಿದ್ದು, ಪೊಲೀಸರು ಅವರನ್ನು ಬಂಧಿಸಲು ಬಲೆ ಬೀಸಿದ್ದಾರೆ.