Elephant attack in Dakshina Kannada: ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿ; ಆನೆ ಹಿಡಿಯುವ ಕಾರ್ಯಾಚರಣೆ ಶುರು-2 killed in elephant attack in dakshina kannada forest officials to launch capture mission ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Elephant Attack In Dakshina Kannada: ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿ; ಆನೆ ಹಿಡಿಯುವ ಕಾರ್ಯಾಚರಣೆ ಶುರು

Elephant attack in Dakshina Kannada: ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿ; ಆನೆ ಹಿಡಿಯುವ ಕಾರ್ಯಾಚರಣೆ ಶುರು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿಯಾಗಿದ್ದಾರೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆ ದಾಳಿಯಲ್ಲಿ ಯುವತಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. (ಫೋಟೋ-ಸಾಂದರ್ಭಿಕ)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆ ದಾಳಿಯಲ್ಲಿ ಯುವತಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. (ಫೋಟೋ-ಸಾಂದರ್ಭಿಕ)

ಮಂಗಳೂರು: ರಾಜ್ಯದಲ್ಲಿ ಮತ್ತೆ ಆನೆಗಳ ಹಾವಳಿ ಹೆಚ್ಚಾಗ್ತಿದೆ. ಆನೆ ದಾಳಿಯಿಂದ ಯುವತಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ನಡೆದಿದೆ.

ಸೋಮವಾರ (ಫೆ.20) ಮುಂಜಾನೆ ಈ ಘಟನೆ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರನ್ನು 21 ವರ್ಷದ ರಂಜಿತಾ ಹಾಗೂ 55 ವರ್ಷ ರಮೇಶ್ ರೈ ಎಂದು ಗುರುತಿಸಲಾಗಿದೆ.

ರಂಜಿತಾ ಅವರು ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿದ್ದು, ಅವರು ಬೆಳಿಗ್ಗೆ ಸೊಸೈಟಿಗೆ ಕಾಡು ದಾರಿಯಲ್ಲಿ ಹೋಗುತ್ತಿದ್ದ ವೇಳೆ ನೈಲದಲ್ಲಿ ಆನೆ ದಾಳಿ ನಡೆಸಿತ್ತು. ಆನೆಯನ್ನು ಕಂಡು ರಂಜಿತಾ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ರಮೇಶ್ ಅವರ ಮೇಲೂ ಆನೆ ದಾಳಿ ನಡೆಸಿತ್ತು.

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಿತಾ ಅವರನ್ನು ನೆಲ್ಯಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಪರಿಸರದಲ್ಲಿ ಅನೇಕ ತಿಂಗಳುಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಮನುಷ್ಯರ ಮೇಲೆ ದಾಳಿ ನಡೆಸಿದ್ದು, ಇದೇ ಮೊದಲು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ರಮೇಶ್ ರೈ ಅವರ ಮೃತದೇಹವನ್ನು ಸ್ಥಳಾಂತರಿಸಲು ಅಡ್ಡಿಪಡಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರತಿಭಟನೆಯ ನಡುವೆಯೇ ಕಡಬ ಪೊಲೀಸರು ಆನೆ ಹಾವಳಿ ಕುರಿತು ವ್ಯಕ್ತಿಯೊಬ್ಬರು ಮಾಡಿದ್ದ ವಿಡಿಯೋವನ್ನು ಅಳಿಸಿ ಹಾಕಿದ್ದರಿಂದ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೆಂಜಿಲಾಡಿಯ ಜನವಸತಿ ಪ್ರದೇಶದಲ್ಲಿ ನಿರಂತರವಾಗಿ ಆನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆ ತಾಳಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥ ನಾರಾಯಣ ಶೆಟ್ಟಿ ಆರೋಪಿಸಿದ್ದಾರೆ.

ಕಾಡಾನೆಗಳು ಈ ಪ್ರದೇಶದಲ್ಲಿ ಬೆಳೆಗಳನ್ನು ನಾಶಪಡಿಸುತ್ತಿವೆ, ಆದರೆ ರೆಂಜಿಲಾಡಿ ಗ್ರಾಮದಲ್ಲಿ ಆನೆಯೊಂದು ಮನುಷ್ಯರನ್ನು ಕೊಂದಿರುವುದು ಇದೇ ಮೊದಲು. ಕಾಡಾನೆಗಳು ಗ್ರಾಮಗಳಿಗೆ ನುಗ್ಗದಂತೆ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳದ ಹೊರತು ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಮರ್ದಾಳ ಗ್ರಾಮದ ಸಂತೋಷ ಎಂಬಾತ ರೆಂಜಿಲಾಡಿ ಭಾಗದಲ್ಲಿ ಕಾಡಾನೆ ಹಾವಳಿ ಕುರಿತು ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ. ಐತ್ತೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೀಡಿದ ದೂರಿನ ಆಧಾರದ ಮೇಲೆ ಕಡಬ ಪೊಲೀಸರು ವೀಡಿಯೊವನ್ನು ಅಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ದಕ್ಷಿಣ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವೈ.ಕೆ.ದಿನೇಶ್ ಕುಮಾರ್ ಮತ್ತು ಡಿಸಿ ಎಂ.ಆರ್.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ನಾಗರಹೊಳೆ ಮತ್ತು ದುಬಾರೆ ಶಿಬಿರಗಳಿಂದ ತರಬೇತಿ ಪಡೆದ ಆನೆಗಳನ್ನು ಕರೆತಂದು ಕಾಡಾನೆಗಳನ್ನು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನಾದರೂ ಲಿಖಿತವಾಗಿ ಭರವಸೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಡಬಕ್ಕೆ ಆನೆಗಳನ್ನು ಹಿಡಿಯಲು ಆನೆಗಳ ತಂಡವನ್ನು ಕಳುಹಿಸಲು ನಾವು ಈಗಾಗಲೇ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮಂಗಳವಾರದಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಡಿಸಿಎಫ್ ಡಾ.ವೈ.ಕೆ.ದಿನೇಶ್ ಕುಮಾರ್ ತಿಳಿಸಿದ್ದಾರೆ. ಅದರಂತೆ ಅರಣ್ಯಾಧಿಕಾರಿಗಳು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ಮಂಗಳವಾರ (ಫೆ.21) ಬೆಳಗ್ಗೆಯಿಂದ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಮೃತ ರಂಜಿತಾ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕುಟುಂಬದ ಒಬ್ಬರಿಗೆ ಉದ್ಯೋಗ ಹಾಗೂ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

mysore-dasara_Entry_Point