2025ರ ಡಿಪ್ಲೊಮಾ ಅಡ್ಮಿಷನ್: ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
2025ರ ಡಿಪ್ಲೊಮಾ ಅಡ್ಮಿಷನ್: ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್ ಲಭ್ಯವಿರುವ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿರುವ 39 ಸ್ಥಾನಗಳನ್ನು ಭರ್ತಿ ಮಾಡುವುದಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರು: ವಿವಿಧ ಸರ್ಕಾರಿ ಶಿಕ್ಷಣ ಸಂಸ್ಥೆಗಳ 2025-26ನೇ ಸಾಲಿನ ಶೈಕ್ಷಣಿಕ ಅವಧಿಯ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಡಿಹೆಚ್ಟಿಟಿ) ಕೋರ್ಸ್ ಕಲಿಕೆಗಾಗಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 39 ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವ್ಯಾಸಂಗದ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು 2,500 ರೂಪಾಯಿಯಂತೆ ಶಿಷ್ಯವೇತನ ಸಿಗಲಿದೆ. ಪುರುಷ ಅಭ್ಯರ್ಥಿಗಳಿಗೆ ವಸತಿನಿಲಯದ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುತ್ತದೆ ಎಂದು ವಾರ್ತಾ ಪ್ರಸಾರ ಇಲಾಖೆ ಪ್ರಕಟಣೆ ತಿಳಿಸಿದೆ.
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್ಗೆ ಅರ್ಜಿ ಆಹ್ವಾನ; ಅರ್ಹತೆ ಮತ್ತು ಇತರೆ ವಿವರ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್ಗೆ ಅರ್ಜಿ ಸಲ್ಲಿಸುವವರು, ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಓದಿರಬೇಕು. 2025ರ ಜುಲೈ 1ಕ್ಕೆ ಸಾಮಾನ್ಯವರ್ಗದ ಅಭ್ಯರ್ಥಿಗಳಾದರೆ 15 ರಿಂದ 23 ರ ವಯೋಮಿತಿಯಲ್ಲಿರಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 15 ರಿಂದ 25 ರ ವಯೋಮಿತಿಯಲ್ಲಿರಬೇಕು. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೋಢೀಕೃತ ಅಂಕಗಳ ಮೆರಿಟ್ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತದೆ.
ಡಿಪ್ಲೊಮಾ ಕೋರ್ಸ್ ಲಭ್ಯವಿರುವ ಸಂಸ್ಥೆಗಳು ಮತ್ತು ಸೀಟುಗಳ ಸಂಖ್ಯೆ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಕಲಿಕೆಗಾಗಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 39 ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವ ಶಿಕ್ಷಣ ಸಂಸ್ಥೆಯಲ್ಲಿ ಎಷ್ಟು ಸೀಟುಗಳಿವೆ ಎಂಬ ವಿವರ ಇಲ್ಲಿದೆ.
1) ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ-ಬೆಟಗೇರಿ (ಕರ್ನಾಟಕ) 22 ಅಭ್ಯರ್ಥಿಗಳು
2) ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಸೇಲಂ (ತಮಿಳುನಾಡು) 12 ಅಭ್ಯರ್ಥಿಗಳು
3) ಎಸ್.ಪಿ.ಕೆ.ಎಂ. ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ವೆಂಕಟಗಿರಿ (ನೆಲ್ಲೂರು ಜಿಲ್ಲೆ, ಆಂಧ್ರಪ್ರದೇಶ)-03
4) ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕಣ್ಣೂರು (ಕೇರಳ) - 02 ಅಭ್ಯರ್ಥಿಗಳು
ಮೆರಿಟ್ ಆಧಾರದ ಮೇಲೆ ಅಡ್ಮಿಷನ್; ಮಾಹಿತಿ ಪಡೆಯಲು ಹೀಗೆ ಮಾಡಿ
ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾ ಡಿಪ್ಲೊಮಾ ಸಂಸ್ಥೆಗಳಲ್ಲಿ, ಕೋರ್ಸ್ ಪ್ರವೇಶ ಕುರಿತಂತೆ ಕೌನ್ಸಿಲಿಂಗ್ಗಾಗಿ ಕರೆಯಲಾಗುವುದು. ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಫಾರಂಗಳಿಗಾಗಿ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ, ಮೊಬೈಲ್ ಸಂಖ್ಯೆ 9449162822 ಅಥವಾ ಆಯಾ ಜಿಲ್ಲೆಯ ಜಂಟಿ/ಉಪ/ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಅರ್ಜಿಗಳನ್ನು https://khtigadag.ac.in/AdmissionForm.pdf ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಂಡು, ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ "ಪ್ರಾಂಶುಪಾಲರು, ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ-582102 ಇವರಿಗೆ 2025 ನೇ ಜೂನ್ 15 ರೊಳಗೆ ಸಲ್ಲಿಸಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರು ಹಾಗೂ ನಿರ್ದೇಶಕರು ತಿಳಿಸಿದ್ದಾರೆ.