Bangalore News: ಬೆಂಗಳೂರು ಬಿಎಂಟಿಸಿಯಲ್ಲಿ ಈಗಲೂ ಓಡುತ್ತಿವೆ ಶೇ. 25 ಡಕೋಟಾ ಬಸ್‌‌ಗಳು, ಸಿಎಜಿ ವರದಿಯಲ್ಲಿ ಬಹಿರಂಗ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಬಿಎಂಟಿಸಿಯಲ್ಲಿ ಈಗಲೂ ಓಡುತ್ತಿವೆ ಶೇ. 25 ಡಕೋಟಾ ಬಸ್‌‌ಗಳು, ಸಿಎಜಿ ವರದಿಯಲ್ಲಿ ಬಹಿರಂಗ

Bangalore News: ಬೆಂಗಳೂರು ಬಿಎಂಟಿಸಿಯಲ್ಲಿ ಈಗಲೂ ಓಡುತ್ತಿವೆ ಶೇ. 25 ಡಕೋಟಾ ಬಸ್‌‌ಗಳು, ಸಿಎಜಿ ವರದಿಯಲ್ಲಿ ಬಹಿರಂಗ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಜನರಿಗೆ ನಿತ್ಯ ಸೇವೆ ನೀಡುವ ಬಿಎಂಟಿಸಿ ಈಗಲೂ ಡಕೋಟಾ ಬಸ್‌ಗಳನ್ನು ಓಡಿಸುತ್ತಿದೆ ಎನ್ನುವುದನ್ನು ಸಿಎಜಿ ವರದಿ ಉಲ್ಲೇಖಿಸಿದೆ.

ಬೆಂಗಳೂರಿನಲ್ಲಿ ಶೇ. 25 ರಷ್ಟು ಡಕೋಟಾ ಬಸ್‌ಗಳು ಈಗಲೂ ಓಡುತ್ತಿವೆ.
ಬೆಂಗಳೂರಿನಲ್ಲಿ ಶೇ. 25 ರಷ್ಟು ಡಕೋಟಾ ಬಸ್‌ಗಳು ಈಗಲೂ ಓಡುತ್ತಿವೆ.

ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನರಿಗೆ ದಶಕಗಳಿಂದ ಸೇವೆ ನೀಡುತ್ತಿರುವ ಬೆಂಗಳೂರು ನಗರ ಮೆಟ್ರೋ ಪಾಲಿಟಿನ್‌ ಸಾರಿಗೆ( ಬಿಎಂಟಿಸಿ) ನಿಮಗೆ ಒದಗಿಸುವ ಬಸ್‌ಗಳು ಎಷ್ಟು ಸುರಕ್ಷಿತ ಎನ್ನುವುದು ತಿಳಿದಿದೆಯೇ, ಅದರಲ್ಲೂ ಈಗಲೂ ಬಿಎಂಟಿಸಿ ಎಷ್ಟು ಪ್ರಮಾಣದಲ್ಲಿ ಡಕೋಟಾ ಬಸ್‌ ಮೂಲಕವೇ ಸೇವೆ ನೀಡುತ್ತಿದೆ ಎನ್ನುವುದಾದರೂ ನಿಮಗೆ ಗೊತ್ತೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಹಳತಾದ ಮತ್ತು ‘ವಯಸ್ಸಾದ’ ಬಸ್‌ಗಳನ್ನು ಓಡಿಸುತ್ತಿದೆ ಎಂದು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಬಹಿರಂಗಪಡಿಸಿದೆ. ಬಿಟಿಎಂಸಿಯ ಯ ಸುಮಾರು ಶೇ.25 ಬಸ್‌ಗಳನ್ನು ಅವಧಿ ಮುಗಿದವು ಎಂದು ವರ್ಗೀಕರಿಸಲಾಗಿದೆ, ನಿಯಮಗಳ ಪ್ರಕಾರ ಅವುಗಳ ಬಳಕೆಯ ಅವಧಿ ಮೀರಿದೆ. ಆದರೂ ಬೇಡಿಕೆ ಕಾರಣದಿಂದ ಕೆಲವು ಮಾರ್ಗಗಳಲ್ಲಿ ಇಂತಹ ಬಸ್‌ಗಳನ್ನು ಬಳಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಷ್ಟು ಡಕೋಟಾ ಬಸ್‌ಗಳಿವೆ

2017-18 ಮತ್ತು 2021-22 ರ ನಡುವೆ, ಬಿಎಂಟಿಸಿಯಲ್ಲಿನ ಶೇ 12.60 ರಿಂದ ಶೇ. 29.08 ಅಂದರೆ 841 ರಿಂದ 1,909 ಸಾಮಾನ್ಯ ಬಸ್‌ಗಳು ತಮ್ಮ ಬಳಕೆಯ ಅವಧಿಯನ್ನು ಮೀರಿ ಬಳಕೆಯಲ್ಲಿವೆ ಎನ್ನುವುದನ್ನು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ, 341 ರಿಂದ 823 ಬಸ್‌ಗಳು ಉತ್ಪಾದನೆ ಕಂಪೆನಿ ನಿಗದಿ ಮಾಡಿದ ಅವಧಿಯ ಜತೆಯಲ್ಲಿ ಮೈಲೇಜ್ ಮಿತಿಗಳನ್ನು ಮೀರಿ ಬಳಕೆಯಾಗುತ್ತಿವೆ ಎನ್ನುವುದನ್ನೂ ವರದಿಯಲ್ಲಿ ವಿವರಿಸಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

11 ವರ್ಷಕ್ಕಿಂತ ಹಳೆಯದಾದ ವಾಹನಗಳು ಈಗಲೂ ದಿನಕ್ಕೆ 206 ಕಿಮೀಗಳ ನಿಗದಿತ ಸಂಚಾರ ಗುರಿಯಲ್ಲಿ 80 ರಿಂದ 147 ಕಿಮೀ ನಡುವೆ ಸಂಚರಿಸುತ್ತಿವೆ. 8.5 ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ಓಡಿದ ವಾಹನಗಳ ಸಂದರ್ಭದಲ್ಲಿ, ಉತ್ಪಾದಕತೆಯು ದಿನಕ್ಕೆ 0.11 ರಿಂದ 3.27 ಕಿಮೀ ನಡುವೆ ಮಾತ್ರ ಎನ್ನುವುದು ಎಂದು ಸಿಎಜಿ ಉಲ್ಲೇಖಿಸಿರುವ ಅಂಶ.

8.5 ಲಕ್ಷ ಕಿ.ಮೀ.ಗೂ ಹೆಚ್ಚು ಓಡಿದ ಮತ್ತು ಟ್ರಿಪ್‌ಗೆ ಬಳಸದ ಬಸ್‌ಗಳನ್ನು ಸಹ ಬಿಎಂಟಿಸಿ ಬಳಕೆಯ ಭಾಗವಾಗಿ ತೋರಿಸಲಾಗಿದೆ. ಅಂತಹ ವಾಹನಗಳ ಬಳಕೆಯ ಪ್ರಮಾಣವು 9.59 ರಿಂದ 14.54 ಪ್ರತಿಶತದಷ್ಟಿವೆ

ನಿರ್ವಹಣಾ ವೆಚ್ಚ ಅಧಿಕ

ಬಿಎಂಟಿಸಿಯ ನಿರ್ವಹಣಾ ವೆಚ್ಚದ ಅನುಪಾತವು 2017-18 ರಲ್ಲಿ ಶೇ. 133.59 ರಿಂದ 2021-22 ರಲ್ಲಿ ಶೇ. 222.62 ಕ್ಕೆ ಏರಿದೆ ಎಂದು ಆಡಿಟ್ ಗಮನಿಸಿದೆ. ಸಿಬ್ಬಂದಿ ವೆಚ್ಚ ಶೇ 60 ಮತ್ತು ಇಂಧನ ವೆಚ್ಚಗಳು ಶೇ. 27 ಕಾರ್ಯಾಚರಣಾ ವೆಚ್ಚದ ಪ್ರಮುಖ ಅಂಶಗಳಾಗಿವೆ.

ಮಿತಿಗಿಂತ ಹೆಚ್ಚಿರುವ ವೆಚ್ಚವನ್ನು ಸರಿದೂಗಿಸಲು ಪ್ರಯತ್ನಿಸಿದರೂ ಕಾರ್ಯಾಚರಣೆಯ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿಲ್ಲ. ಆದರೂ ಸಾರ್ವಜನಿಕರಿಗೆ ಸೇವೆ ನೀಡುವ ಭಾಗವಾಗಿ ಹಲವು ಮಾರ್ಗಗಳಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ದಶಕದಿಂದ ಏರದ ಪ್ರಯಾಣ ದರ

ಇದಲ್ಲದೆ, 2014-15 ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದ ಕಾರಣ ಬಿಎಂಟಿಸಿಯು 649.74 ಕೋಟಿ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗದೇ ನಷ್ಟದಲ್ಲಿಯೇ ಮುಂದುವರಿದಿದೆ ಎನ್ನುವ ಅಂಶವನ್ನೂ ತಿಳಿಸಲಾಗಿದೆ.

 

Whats_app_banner