ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆ ಜತೆಜತೆಗೇ ಉತ್ತೀರ್ಣರಾದ ನರಿಕೊಂಬು ಗ್ರಾಮದ ಅಮ್ಮ, ಮಗಳು
2nd PUC Results: ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು 27 ವರ್ಷಗಳ ಬಳಿಕ ಕೌಟುಂಬಿಕ ಜೀವನದಲ್ಲಿ ತೊಡಗಿಸಿಕೊಂಡ ಸಮಯದಲ್ಲಿ ಮಗಳ ಜೊತೆ ಪರೀಕ್ಷೆ ಬರೆಯುವ ಸಾಹಸಕ್ಕೆ ಕೈಹಾಕಿದ ಮಹಿಳೆಯ ಸಾಧನೆ ಇದು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

2nd PUC Results: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ತಾಯಿ- ಮಗಳು ಈ ಬಾರಿ ಜತೆಯಾಗಿಯೇ ದ್ವಿತೀಯ ಪಿಯುಸಿ ಪಾಸ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು 27 ವರ್ಷಗಳ ಬಳಿಕ ಕೌಟುಂಬಿಕ ಜೀವನದಲ್ಲಿ ತೊಡಗಿಸಿಕೊಂಡ ಸಮಯದಲ್ಲಿ ಮಗಳ ಜೊತೆ ಪರೀಕ್ಷೆ ಬರೆಯುವ ಸಾಹಸಕ್ಕೆ ಕೈಹಾಕಿದ ಮಹಿಳೆಯ ಸಾಧನೆ ಇದು.
ಪಿಯುಸಿ ಪರೀಕ್ಷೆ ಜತೆಜತೆಗೇ ಉತ್ತೀರ್ಣರಾದ ಅಮ್ಮ, ಮಗಳು
ಮಾಣಿಮಜಲು ನಿವಾಸಿಗಳಾದ ತಾಯಿ ರವಿಕಲಾ ಹಾಗೂ ಅವರ ಪುತ್ರಿ ತ್ರಿಶಾ ಈ ಸಾಧನೆ ಮಾಡಿದವರು. ರವಿಕಲಾ ಅವರು ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದರೆ, ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 586 ಅಂಕಗಳನ್ನು ಪಡೆದಿದ್ದಾರೆ.
1998 ರಲ್ಲಿ ಎಸೆಸೆಲ್ಲಿ ತೇರ್ಗಡೆಯಾಗಿದ್ದ ರವಿಕಲಾ, ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ ಹಲವು ವರ್ಷಗಳಿಂದ ನರಿಕೊಂಬಿನ ತಾರಿಪಡ್ಪು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭವಾಗುತ್ತದೆ. ಹೀಗಾಗಿ ಕಾರ್ಯಕರ್ತೆಯರು ಪಿಯುಸಿ ಉತ್ತೀರ್ಣರಾಗಿರಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದನ್ನೇ ಭಲವಾಗಿ ಸ್ವೀಕರಿಸಿದ ರವಿಕಲಾ, ಪಿಯುಸಿ ಬರೆಯಲು ಮನಸ್ಸು ಮಾಡಿದರು. ಅದರಂತೆ ಬಿ.ಮೂಡ ಸರಕಾರಿ ಕಾಲೇಜಿಗೆ ಬಂದು ಖಾಸಗಿಯಾಗಿ ಪರೀಕ್ಷೆ ಬರೆಯುವ ಕುರಿತು ಮಾಹಿತಿ ಕೇಳಿದ್ದರು. ಇದೀಗ ಎಸ್‌ಎಸ್‌ಎಲ್‌ಸಿ ಮುಗಿಸಿ 27 ವರ್ಷಗಳ ಬಳಿಕ ಮೊದಲ ಪ್ರಯತ್ನದಲ್ಲೇ ಪಿಯುಸಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.
ರವಿಕಲಾ ಅವರು ಕಲಾವಿಭಾಗದವನ್ನು ಆರಿಸಿಕೊಂಡು ಬಂಟ್ವಾಳದ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪ್ರೌಡ ಶಾಲೆಯಲ್ಲಿ ಪರೀಕ್ಷೆ ಬರೆದು ಶೇ. 50 ಅಂಕಗಳನ್ನು ಪಡೆದು ತೇರ್ಗಡೆಯಾದರೆ ಮಗಳು ತ್ರಿಶಾ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ. ಅವಳು ಈ ಬಾರಿ 97.67 ಪರ್ಸೆಂಟ್ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾಳೆ.
ಕೆಲಸ ಹೋಗಬಹುದು ಎಂಬ ಹೆದರಿಕೆಯಿಂದ ಪರೀಕ್ಷೆ ಬರೆದೆ: ರವಿಕಲಾ
ಮಾಣಿಮಜಲು ನಿವಾಸಿ ಮಂಜುನಾಥ್ ಅವರ ಪತ್ನಿ ರವಿಕಲಾ ಅವರು ಬಡ ಕುಟುಂಬದ ಮಹಿಳೆಯಾಗಿದ್ದಾರೆ. ಬಂಟ್ವಾಳ ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆಯ ತಾರಿಪಡ್ಪು ಅಂಗನಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ತ್ರಿಷಾ ಮತ್ತು ತನ್ವಿ ಅವರ ಇಬ್ಬರು ಮಕ್ಕಳು.
ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ.ಮತ್ತು ಯುಕೆಜಿ ಶಿಕ್ಷಣ ಪ್ರಾರಂಭವಾಗುವುದರಿಂದ ಕಾರ್ಯಕರ್ತರು ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿರಬೇಕು ಎಂಬ ಆದೇಶ ಸರಕಾರ ಹೊರಡಿಸಿತ್ತು. ಒಂದು ಕಡೆ ಕೆಲಸಕ್ಕೆ ಕುತ್ತು ಬರುವ ಆಘಾತ ಮತ್ತೊಂದು ಕಡೆ ಪಿಯುಸಿ ಪರೀಕ್ಷೆ ಬರೆಯುವ ಸವಾಲು. ಕೆಲಸ ಹೋದರೆ ಹೆಣ್ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ, ಅದಕ್ಕಾಗಿ ಪಿಯುಸಿ ಪರೀಕ್ಷೆ ಬರೆಯಲು ಮುಂದಾದೆ ಎಂದರು.
ಲಿಖಿತ ರೂಪದಲ್ಲಿ ಪರೀಕ್ಷೆ ಗಾಗಿ ಸಿದ್ದತೆ ನಡೆಸಿದ್ದ ಅವರಿಗೆ ಕೆಲಸದ ಒತ್ತಡ ಪರೀಕ್ಷೆಗಾಗಿ ಓದಿ ತಯಾರು ಮಾಡಲು ಸಾಕಷ್ಟು ಸಮಯ ಸಿಗಲಿಲ್ಲ. ಆದರೂ ಹಣ ಕಟ್ಟಿದ್ದೇನೆ ಎಂಬ ಒಂದೇ ಉದ್ದೇಶದಿಂದ ಪರೀಕ್ಷೆ ಬರೆದೆ ಸಿದ್ದ ಎಂಬ ಛಲದಿಂದ ಪರೀಕ್ಷೆ ಹಾಜರಾಗಿದ್ದೆ ಎಂದರು.
ಪರೀಕ್ಷೆ ಹಾಲ್ ಗೆ ಹೋಗುವಾಗ ಒಂದು ರೀತಿಯ ಭಯ ಕಾಡಿತ್ತು
ಎಸ್.ಎಸ್.ಎಲ್.ಸಿ.ಬರೆದು 27 ವರ್ಷಗಳ ಬಳಿಕ ನಾನು ಎಕ್ಸಾಮ್ ಕೊಠಡಿಗೆ ತೆರಳಿದಾಗ ಅಲ್ಲಿರುವ ಮಗಳ ಪ್ರಾಯದ ವಿದ್ಯಾರ್ಥಿಗಳನ್ನು ಕಂಡಾಗ ನನಗೆ ನಾಚಿಕೆಯಾಗಿತ್ತು, ಭಯವೂ ಆಗಿತ್ತು. ಅವರಿಗೂ ನನ್ನ ಮೇಲೆ ಸಂಶಯಗೊಂಡು ಅಂಟಿ ಅವರ ಮಗಳ ಹಾಲ್ ಟಿಕೆಟ್ ನೀಡಲು ಶಾಲೆಗೆ ಬಂದಿರಬೇಕು ಎಂದು ಮಾತನಾಡಿಸಿದ್ದು ನನಗೆ ಮುಜುಗರ ಕೂಡ ಉಂಟು ಮಾಡಿತ್ತು. ನನ್ನ ಗಂಡ ಇಬ್ಬರು ಮಕ್ಕಳು, ಕುಟುಂಬದ ಸದಸ್ಯರ ಸಹಕಾರ, ಇಲಾಖೆಯ ಪ್ರೋತ್ಸಾಹ ನನಗೆ ಪಿಯುಸಿ ಪಾಸ್ ಮಾಡಲು ಅವಕಾಶ ನೀಡಿದೆ. ಛಲ ಮತ್ತು ಸಾಧನೆ ಮಾಡಿದರೆ ಯಾವ ವಯಸ್ಸಿನಲ್ಲಿಯೂ ಪರೀಕ್ಷೆ ಬರೆದು ಯಶಸ್ಸು ಕಾಣಬಹುದು ಎಂಬುದು ನಾನು ಕಂಡು ಕೊಂಡ ಸತ್ಯ ವಿಚಾರ. ಮಗಳ ಜೊತೆ ನಾನು ಪಿಯುಸಿ ಬರೆದ ಎಂಬ ಸಂತಸ ಮತ್ತು ಒಂದು ರೀತಿಯ ದಾಖಲೆ ಮಾಡಿದ್ದೇನೆ ಎಂಬ ಖುಷಿಯಿಂದ ನಾನಿದ್ದೇನೆ ಎಂದು ಅವರು ತಿಳಿಸಿದರು.
ಬದುಕಿನಲ್ಲಿ ಮುಂದೆ ಬರಲು ಈ ಪರೀಕ್ಷೆ ಬರೆದಿರುವೆ. ಪತಿ, ಮಕ್ಕಳು, ನಾದಿನಿ, ಇಲಾಖೆಯವರ ಸಹಕಾರದಿಂದ ಇದು ಸಾಧ್ಯವಾಗಿದೆ. ಬಹಳ ಸಂತೋಷವಾಗಿದೆ. ಕೆಲಸದ ಒತ್ತಡದ ಮಧ್ಯೆ ಅತ್ಮೀಯರಿಂದ ಪುಸ್ತಕ ಕೇಳಿ ಪಡೆದು ಓದಿದ್ದು ಸಾರ್ಥಕವಾಯಿತು ಎನ್ನುವ ರವಿಕಲಾಗೆ ಮಗಳು ಸಾಥ್ ನೀಡಿದ್ದಾಳೆ. 'ಓದಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ನನ್ನ ಅಮ್ಮ ಸಾಬೀತು ಪಡಿಸಿರುವ ಅಮ್ಮನೇ ನನಗೆ ಮಾದರಿ, ಅವರ ಕುರಿತು ಹೆಮ್ಮೆ ಇದೆ ಎಂದು ಮಗಳು ತ್ರಿಶಾ ಸಾಥ್ ನೀಡಿದ್ದಾಳೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
