ತುಮಕೂರಿನಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ; ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ 4 ದಿನ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಿನಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ; ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ 4 ದಿನ ಕಾರ್ಯಕ್ರಮ

ತುಮಕೂರಿನಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ; ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ 4 ದಿನ ಕಾರ್ಯಕ್ರಮ

ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಡಿಸೆಂಬರ್ 12ರ ಗುರುವಾರ ಬೆಳಗ್ಗೆ ಯೋಗಾಸನ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. (ವರದಿ: ಈಶ್ವರ್‌ ತುಮಕೂರು)

ತುಮಕೂರಿನ ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ
ತುಮಕೂರಿನ ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ

ತುಮಕೂರು: ಡಿಸೆಂಬರ್ 12ರಿಂದ 15ರವರೆಗೆ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಐದನೇ ಹಿರಿಯರ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ ನಡೆಯಲಿದೆ. ಈ ಕುರಿತು ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ಕರ್ನಾಟಕ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್ ಹಾಗೂ ಎಸ್‌ಜಿಎಸ್ ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯದದ ಸಹಯೋಗದೊಂದಿಗೆ ಸ್ಪರ್ಧೆ ನಡೆಯುತ್ತಿದೆ. ಡಿಸೆಂಬರ್ 12ರಿಂದ ನಾಲ್ಕು ದಿನಗಳ ಕಾಲ ಈ ಸ್ಪರ್ಧೆ ನಡೆಯುತ್ತಿದ್ದು, 31 ರಾಜ್ಯ ತಂಡಗಳು ಭಾಗವಹಿಸಲಿವೆ.

ರಾಜ್ಯಗಳ ವಿವಿಧ ತಂಡಗಳಿಂದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಗ ಸಂಸ್ಥೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು ಸಿದ್ಧಲಿಂಗ ಮಹಾ ಸ್ವಾಮೀಜಿ ಹೇಳಿದ್ದಾರೆ.

ತುಮಕೂರು ನಗರದಲ್ಲಿ ಇಂತಹ ಬೃಹತ್ ಯೋಗಾಸನ ಸ್ವರ್ಧೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನ ಬಹಳ ಪ್ರಸಿದ್ದಿ ಪಡೆದಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಮಾಡುವುದು ಸಹಕಾರಿಯಾಗಲಿದೆ. ಸರ್ಕಾರಗಳು ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದು, ಜಿಲ್ಲಾಡಳಿತ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಮುಂಬರುವ 2030ರ ಏಷ್ಯಾ ಗೇಮ್ಸ್‌ ಮತ್ತು 2036ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಯೋಗಾಸನ ಸ್ಪರ್ಧೆಯನ್ನು ಒಂದು ಪ್ರದರ್ಶನ ಕ್ರೀಡೆಯಾಗಿ ಭಾಗವಹಿಸಲು ಅವಕಾಶ ನೀಡಿರುವುದು ಸಂತೋಷದ ವಿಚಾರವಾಗಿದೆ. ನಾಲ್ಲು ದಿನಗಳ ಈ ಸ್ಪರ್ಧೆ ಯಶಸ್ವಿಯಾಗಲಿ ಎಂದು ಶುಭಕೋರಿದರು.

ಡಿಸೆಂಬರ್ 12ರ ಗುರುವಾರ ಬೆಳಗ್ಗೆ 9 ಗಂಟೆಗೆ ಯೋಗಾಸನ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ತಲಾ 400 ಮಹಿಳಾ ಮತ್ತು ಪುರುಷ ಸ್ಪರ್ಧಿಗಳು

ಕೇಂದ್ರದ ಕ್ರೀಡಾ ಇಲಾಖೆಯ ಆಯುಷ್ ಮಂತ್ರಾಲಯದ ಅಡಿಯಲ್ಲಿ ಯೋಗಾಸನ ಬಂದ ನಂತರ, 2020ರಲ್ಲಿ ಕೇಂದ್ರ ಸರ್ಕಾರ ಯೋಗವನ್ನು ಕ್ರೀಡೆ ಎಂದು ಮಾಡಿದ ನಂತರ ಇದುವರೆಗೂ ನಾಲ್ಕು ರಾಷ್ಟ್ರೀಯ ಯೋಗಾಸನ ಸ್ಪರ್ಧೆ ನಡೆಸಲಾಗಿದೆ.‌ ಈ ಬಾರಿ ತುಮಕೂರಿನಲ್ಲಿ ಐದನೇ ಹಿರಿಯರ ರಾಷ್ಟ್ರೀಯ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲಾ ರಾಜ್ಯಗಳ ತಲಾ ಒಂದೊಂದು ಪುರುಷ ಮತ್ತು ಮಹಿಳಾ ತಂಡಗಳ ಜೊತೆಗೆ ನ್ಯಾಷನಲ್ ಪೊಲೀಸ್ ಅಕಾಡೆಮಿಯ ಒಂದು ತಂಡ ಸೇರಿ 32 ತಂಡಗಳ ನಾಲ್ಕು ನೂರು ಮಹಿಳೆ ಮತ್ತು ನಾಲ್ಕು ನೂರು ಪುರುಷ ತಂಡಗಳ 800 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜೊತೆಗೆ 200 ಜನ ಅಧಿಕಾರಿಗಳು ಸೇರಿ ಒಟ್ಟು 1000 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಯೋಗಾಸನ ಸಂಸ್ಥೆಯ ಕಾರ್ಯದರ್ಶಿ ನಿರಂಜನಮೂರ್ತಿ ಹೇಳಿದರು.

ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ

ಕ್ರೀಡಾಪಟುಗಳಿಗೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವಾಸ್ಯವ್ಯ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳಿಗೆ ಮಠದ ಯಾತ್ರಿನಿವಾಸದಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಕ್ರೀಡಾಂಗಣದಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗುತ್ತದೆ.

Whats_app_banner