ಮಹಾ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ಸಾವು; ತಾಯಿ-ಮಗಳ ಜತೆಗೆ ಮತ್ತಿಬ್ಬರ ದಾರುಣ ಅಂತ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಮಹಾ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ಸಾವು; ತಾಯಿ-ಮಗಳ ಜತೆಗೆ ಮತ್ತಿಬ್ಬರ ದಾರುಣ ಅಂತ್ಯ

ಮಹಾ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ಸಾವು; ತಾಯಿ-ಮಗಳ ಜತೆಗೆ ಮತ್ತಿಬ್ಬರ ದಾರುಣ ಅಂತ್ಯ

ಮೌನಿ ಅಮಾವಾಸ್ಯೆಯಂದು ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡಿದ್ದ ಕರ್ನಾಟಕದ ಬೆಳಗಾವಿಯ ನಾಲ್ವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ತಾಯಿ-ಮಗಳು ಮಾತ್ರವಲ್ಲದೆ ಮತ್ತಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಮಹಾ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ಸಾವು
ಮಹಾ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ಸಾವು

ಬೆಳಗಾವಿ: ಪ್ರಯಾಗ್‌​ರಾಜ್‌​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಗಂಭೀರವಾಗಿ ಗಾಯಗೊಂಡಿದ್ದ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ. ತಾಯಿ ಮತ್ತು ಮಗಳು ಮಾತ್ರವಲ್ಲದೆ, ಮತ್ತೊಬ್ಬರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಅವರ ಮಗಳು ಮೇಘಾ ಹತ್ತರವಾಠ (18) ನಿಧನರಾಗಿದ್ದಾರೆ. ಅಲ್ಲದೆ ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಹಾಗೂ ಶಿವಾಜಿ ನಗರದ ನಿವಾಸಿ ಮಹಾದೇವಿ ಕೂಡಾ ಸಾವನ್ನಪ್ಪಿದ್ದಾರೆ. ಪ್ರಯಾಗ್‌ರಾಜ್‌ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬೆಳಗಾವಿಯವರ ಸಂಖ್ಯೆ ನಾಲ್ಕಕ್ಕೇರಿದೆ.

ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನಕ್ಕಾಗಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿತ್ತು. ಪವಿತ್ರ ಸ್ನಾನಕ್ಕಾಗಿ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತ ನಡೆದಿತ್ತು.

ಬೆಳಗಾವಿಯಲ್ಲಿರುವ ಜ್ಯೋತಿ ಹತ್ತರವಾಠ ಕುಟುಂಬಸ್ಥರಿಗೆ ಬೆಳಗ್ಗೆಯಿಂದ ಇಬ್ಬರ ಸಂಪರ್ಕ ಸಿಕ್ಕಿರಲಿಲ್ಲ. ಫೋನ್‌ ರಿಂಗ್ ಆಗುತ್ತಿದ್ದರೂ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 30 ಜನರ ತಂಡ ಮಹಾ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿತ್ತು. ಇದೀಗ ಘೋರ ದುರಂತದಲ್ಲಿ ತಾಯಿ-ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಮುಂಜಾನೆಯಿಂದಲೂ ಕನ್ನಡಿಗರು ನಾಪತ್ತೆಯಾಗಿರುವ ಕುರಿತು ವರದಿಯಾಗಿತ್ತು. ಬೆಳಗಾವಿ ಜಿಲ್ಲಾಧಿಕಾರಿಯೂ ಐವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.

30 ಜನರ ತಂಡದ ಪೈಕಿ 9 ಮಂದಿ ಒಂದೆಡೆ ಇದ್ದರು. ಮುಂಜಾನೆಯೇ ಬೆಳಗಾವಿಯ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ವಡಗಾಂವ್ ಉಪನಗರದ ನಿವಾಸಿಗಳಾದ ಬಿಜೆಪಿ ಕಾರ್ಯಕರ್ತರಾದ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಘೋರ್ಪಡೆ, ಇಬ್ಬರು ಬಾಲಕಿಯರಾದ ಮೇಘಾ ಮತ್ತು ಜ್ಯೋತಿ ಎಂಬವರು ಕಾಲ್ತುಳಿತದಲ್ಲಿ ಗಾಯಗಳೊಂದಿಗೆ ಪಾರಾಗಿದ್ದರು. ಮತ್ತೊಂದು ಗುಂಪಿನಲ್ಲಿದ್ದ ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು.

ಮತ್ತಿಬ್ಬರು ಸಾವು

ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಅವರು ತಮ್ಮ ಪತ್ನಿ ಜೊತೆಗೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಇಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಅರುಣ್ ಅವರನ್ನು ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅರುಣ್ ಕೊಪರ್ಡೆ ಸಾವನ್ನಪ್ಪಿದ್ದಾರೆ. ಅರುಣ್ ಕೊಪಾರ್ಡೆ ಮನೆಗೆ ಬೆಳಗಾವಿ ತಹಶೀಲ್ದಾರ್ ಸಿಬ್ಬಂದಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಶಿವಾಜಿ ನಗರದ ನಿವಾಸಿ ಮಹಾದೇವಿ ಸಾವನ್ನಪ್ಪಿದ್ದಾರೆ. ಮಹಾದೇವಿ ಕುಟುಂಬಸ್ಥರನ್ನು ಭೇಟಿಯಾಗಿ ಶಾಸಕ ರಾಜು ಸೇಠ್ ಸಾಂತ್ವನ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಏನು ಹೇಳಿದ್ರು?

ಇಂದು ಬೆಳಗ್ಗೆ ಕಾಲ್ತುಳಿತ ಪ್ರಕರಣವಾಗಿದ್ದು, ಬೆಳಗಾವಿಯ ಕುಟುಂಬಸ್ಥರಿಗೆ ಸಂಪರ್ಕ ಸಿಗುತ್ತಿಲ್ಲ ಎಂದು ಹೇಳಿದ್ದರು. ದುರಂತದಲ್ಲಿ ಒಬ್ಬರಿಗೊಬ್ಬರ ಸಂಪರ್ಕ ಕಡಿತಗೊಂಡಿದೆ. ಅಮವಾಸ್ಯೆ ಸ್ನಾನಕ್ಕೆಂದು 8 ಕೋಟಿಗೂ ಅಧಿಕ ಜನ ಸೇರುವ ಸಂದರ್ಭ ಬಂದಿದೆ. ಯಾತ್ರಾರ್ಥಿಗಳ ಪೋಷಕರು ಭಯ ಪಡುವ ಅಗತ್ಯ ಇಲ್ಲ. ಉತ್ತರ ಪ್ರದೇಶದ ಜಿಲ್ಲಾಡಳಿತ ಜತೆಗೆ ನಾನು ಸಂಪರ್ಕದಲ್ಲಿದ್ದೇನೆ. 24 ಗಂಟೆ ಕಾಯುತ್ತೇವೆ. ನಾಪತ್ತೆಯಾದವರ ಸಂಪರ್ಕ ಸಾಧ್ಯವಾಗಬಹುದು. ನಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ವೆಬ್‌ಸೈಟ್‌ನಲ್ಲಿ ನಮ್ಮ ನಂಬರ್ ಇದೆ. ಅಗತ್ಯ ಇದ್ದವರು ಸಂಪರ್ಕಿಸಬಹುದು ಎಂದು ಡಿಸಿ ಹೇಳಿದ್ದಾರೆ.

ಕಾಲ್ತುಳಿತ ದುರಂತ ಸಂಭವಿಸಿದ್ದು ಹೇಗೆ?

ಇಂದು ಮೌನಿ ಅಮಾವಾಸ್ಯೆ ಕಾರಣ ಜನಸಂದಣಿ ಹೆಚ್ಚಾಗಿತ್ತು. ಈ ದಿನ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಅಥವಾ ಪವಿತ್ರ ಸ್ನಾನ ಮಾಡಲು ಭಕ್ತ ಸಾಗರದ ಹರಿದು ಬಂದಿತ್ತು. ಆದರೆ, ಜನದಟ್ಟಣೆ ಹೆಚ್ಚಾದ ಕಾರಣದಿಂದ ಬ್ಯಾರಿಕೇಡ್​ಗಳು ಮುರಿದಿವೆ. ಹೀಗಾಗಿ ಜನರು ಏಕಾಏಕಿ ನುಗ್ಗಿದರು. ಈ ವೇಳೆ ಸಾಕಷ್ಟು ಮಂದಿ ಕೆಳಗೆ ಬಿದ್ದರು. ಆಗ ಕಾಲ್ತುಳಿತ ಸಂಭವಿಸಿ ಈ ಘೋರ ದುರಂತ ಸಂಭವಿಸಿತು. ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ಸಂಭವಿಸಿತು. ಮತ್ತೊಂದೆಡೆ ಸ್ನಾನ ಮಾಡಿ ಬರುವವರಿಗೆ ನಿರ್ಗಮನದ ಗೇಟ್​ ನಿರ್ಬಂಧಿಸಿದ್ದೂ ಕಾಲ್ತುಳಿತಕ್ಕೆ ಕಾರಣವಾಯಿತು. ಬೆಳಗಿನ ಜಾವ ಮೃತರ ಸಂಖ್ಯೆ 15 ಎಂದು ಹೇಳಲಾಗಿತ್ತು. ಆದರೆ ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

Whats_app_banner