ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿ; ಮಹಾನಗರ ಪಾಲಿಕೆಯಾಗಿ ಬೀದರ್ ಮೇಲ್ದರ್ಜೆಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿ; ಮಹಾನಗರ ಪಾಲಿಕೆಯಾಗಿ ಬೀದರ್ ಮೇಲ್ದರ್ಜೆಗೆ

ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿ; ಮಹಾನಗರ ಪಾಲಿಕೆಯಾಗಿ ಬೀದರ್ ಮೇಲ್ದರ್ಜೆಗೆ

ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿ ಮಾಡುವುದರ ಜತೆಗೆ, ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದಿಸಿದೆ. (ವರದಿ: ಎಚ್‌. ಮಾರುತಿ, ಬೆಂಗಳೂರು)

ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್‌ ಆಗಿ 5 ತಾಲೂಕುಗಳ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೆಂಗಳೂರು: ಬೆಂಗಳೂರು ನಗರದ ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಕುರಿತು ಸಚಿವ ಸಂಪುಟ ಅನುಮೋದನೆ ನೀಡಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶ: ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸಲು ಇಂದು (ಜ.30) ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ.

2006ರ ಅಕ್ಟೋಬರ್‌ 18ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಬಿಡದಿ, ಸಾತನೂರು, ರಾಮನಗರ, ಸೋಲೂರು ಮತ್ತು ನಂದಗುಡಿಯಲ್ಲಿ 5 ಸಮಗ್ರ ಉಪನಗರಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್‌ನಲ್ಲಿ ಟೌನ್‌ಶಿಪ್ ಅಭಿವೃದ್ಧಿ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿತ್ತು.

ಬೆಂಗಳೂರಿನ ಜನದಟ್ಟಣೆ ಕಡಿಮೆ ಮಾಡಲು, ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿತ್ತು.

2024ರ ಸೆಪ್ಟೆಂಬರ್‌ 02ರಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ, ಹಾಗೂ ಹಾರೋಹಳ್ಳಿ ತಾಲ್ಲೂಕು, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ ಸಾಗುವಳಿ ವಿಸ್ತೀರ್ಣ 6023ಎಕರೆ 24 ಗುಂಟೆ ಹಾಗೂ 'ಎ' ಖರಾಬು ವಿಸ್ತೀರ್ಣದ ಒಟ್ಟು 101 ಎಕರೆ 12 ಗುಂಟೆ ಮತ್ತು 'ಬಿ' ಖರಾಬು ವಿಸ್ತೀರ್ಣ 2818 ಎಕರೆ 39 ಗುಂಟೆ ಪೈಕಿ 722 ಎಕರೆ 31 ಗುಂಟೆ ಕೆರೆ ಪುದೇಶ ಸೇರಿದಂತೆ ಸುಮಾರು ಒಟ್ಟು 8942 ಎಕರೆ 35 ಗುಂಟೆ ಪ್ರದೇಶದಲ್ಲಿ ಈಗಾಗಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಖಾತೆ ತೆರೆದಿರುವ ನಿವೇಶನಗಳನ್ನು ಒಳಗೊಂಡಂತೆ, ಹ್ಯಾಮ್ಲೆಟ್, ಸೆಟಲ್ಮೆಂಟ್, ಶಾಲೆ/ಕಾಲೇಜು, ಕೆರೆ, ಸ್ಮಶಾನ ಮತ್ತಿತರೆ ಸಾರ್ವಜನಿಕ ಉದ್ದೇಶಿತ ಜಾಗಗಳನ್ನು ಯಥಾವತ್ತಾಗಿ ಕಾಯ್ದಿರಿಸಿ, ಉಳಿದ ಪ್ರದೇಶಕ್ಕೆ ಪ್ರಸ್ತುತ ಪ್ರಥಮ ಹಂತದಲ್ಲಿ ಬಿಡದಿ ಸಮಗ್ರ ಉಪನಗರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಪ್ರಕ್ರಿಯೆಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ ಸರ್ಕಾರದ ತಾತ್ವಿಕ ಅನುಮೋದನೆ ನೀಡಿತ್ತು.

ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ

ಹಾಲಿ ಬೀದರ್ ನಗರಸಭೆಯೊಂದಿಗೆ ಅಷ್ಟೂರ ಗ್ರಾಮ ಪಂಚಾಯಿತಿಯ ಓಡವಾಡ, ತಾಜಲಾಪುರ, ಅಮಲಾಪುರ ಗ್ರಾಮ ಪಂಚಾಯತಿಯ ಅಮಲಾಪುರ, ಗೋರನಹಳ್ಳಿ (ಬಿ), ಅಲಿಯಾಬಾದ ಗ್ರಾಮ ಪಂಚಾಯತಿಯ ಅಲಿಯಾಬಾದ, ಚೋಂಡಿ, ಚೌಳಿ, ಗಾದಗಿ ಗ್ರಾಮ ಪಂಚಾಯತಿಯ ಸಿಪ್ಪಲಗೇರಿ, ಶಾಮರಾಜಪುರ, ಕಬೀರವಾಡಾ, ಮಾಮನಕೇರಿ, ಕೋಳಾರ ಗ್ರಾಮ ಪಂಚಾಯತಿಯ ಕೋಳಾರ (ಕೆ), ನಿಜಾಮಪುರ, ಹಜ್ಜರಗಿ, ಕಮಲಪುರ ಹಾಗೂ ಮರಖಲ ಗ್ರಾಮ ಪಂಚಾಯತಿಯ ಚಿಕ್ಕಪೇಟ್ ಗ್ರಾಮ ಸೇರಿ ಒಟ್ಟು 16 ಗ್ರಾಮಗಳನ್ನು ಸೇರ್ಪಡೆಗೊಳಿಸಿ, ಬೀದರ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದಿಸಿದೆ.

ಕ್ರೀಡಾಪಟುಗಳ ಮೀಸಲಾತಿ ಹೆಚ್ಚಳ

ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್‌ಸ್ಟೇಬಲ್‌ನಿಂದ ಡಿವೈಎಸ್‌ಪಿ ವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.2ರಿಂದ ಶೇ.3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆ

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ 32 ಗುಂಟೆ ಪ್ರದೇಶಗಳನ್ನು ವನ್ಯಜೀವಿ (ಸಂರಕ್ಷಣಾ) ಅಧಿನಿಯಮ, 1972ರ ಕಲಂ 36(ಎ) ರನ್ವಯ “ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಸಚಿವ ಸಂಪುಟ ಅನುಮೋದಿಸಿದೆ.

ವರದಿ: ಎಚ್‌. ಮಾರುತಿ, ಬೆಂಗಳೂರು

Whats_app_banner