ಬೆಂಗಳೂರಿನಲ್ಲಿ ನಾಳೆಯಿಂದ ಏರೋ ಇಂಡಿಯಾ ಶೋ; ನೀವೂ ಹೋಗ್ತಿದ್ದೀರಾ? ಹಾಗಿದ್ರೆ ಈ 5 ಅಂಶಗಳನ್ನು ಗಮನಿಸಿ
ಉದ್ಯಾನ ನಗರಿ ಬೆಂಗಳೂರಿನಲ್ಲಿ ನಾಳೆಯಿಂದ (ಫೆ.10) ಏರೋ ಇಂಡಿಯಾ ಶೋ ನಡೆಯುತ್ತಿದೆ. ವೈಮಾನಿಕ ಪ್ರದರ್ಶನ ನೋಡಲು ಬರುವವರಿಗೆ ಈ 5 ಅಂಶಗಳು ತಿಳಿದಿರಬೇಕು. ಪಾರ್ಕಿಂಗ್, ಮಾರ್ಗ ನಿರ್ಬಂಧಗಳು ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಇರಲಿದೆ.

ಬೆಂಗಳೂರು: ಬಹುನಿರೀಕ್ಷಿತ ಏರೋ ಇಂಡಿಯಾ ಶೋ 2025ಕ್ಕೆ (Aero India Show 2025) ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ನಾಳೆಯಿಂದ, ಅಂದರೆ ಫೆಬ್ರುವರಿ 10ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಫೈಟರ್ ಜೆಟ್‌ಗಳು ಯಲಹಂಕ ವಾಯುನೆಲೆಯಲ್ಲಿ ಪೂರ್ವಾಭ್ಯಾಸದ ಹಾರಾಟವನ್ನು ಆರಂಭಿಸಿವೆ. ಬಾನಂಗಳದಲ್ಲಿ ರೋಮಾಂಚಕ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಲು ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಅವರು ಭಾನುವಾರ (ಫೆ. 9) ಎಲ್‌ಸಿಎ ತೇಜಸ್ ಯುದ್ಧ ವಿಮಾನದ ತರಬೇತಿ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಹಾರಾಟ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಏರೋ ಇಂಡಿಯಾ ಶೋ ನೋಡಲು ಬೆಂಗಳೂರಿಗೆ ಬರುವ ಯೋಜನೆ ಹಾಕಿಕೊಂಡಿರುವವರು ಈ ಐದು ಪ್ರಮುಖ ವಿಷಯಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ.
ನೋಂದಣಿ ಮತ್ತು ಪಾಸ್ ವಿಧಗಳು
ಏರ್ ಶೋನಲ್ಲಿ ಭಾಗವಹಿಸಲು ಇಷ್ಟ ಇರುವವರು, ಮುಂಚಿತವಾಗಿ ಪಾಸ್ ಪಡೆಯಬೇಕು. ಏರೋ ಇಂಡಿಯಾದ ಅಧಿಕೃತ ವೆನ್‌ಸೈಟ್‌ನಲ್ಲಿ "Visitor Registration" ವಿಭಾಗಕ್ಕೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ಇಲ್ಲಿ ಮೂರು ರೀತಿಯ ಪಾಸ್‌ಗಳು ಲಭ್ಯವಿವೆ. ತಮ್ಮ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಿಸಿನೆಸ್, ಜನರಲ್ ಮತ್ತು ಎಡಿವಿಎ ವಿಭಾಗದ ಪಾಸ್ ಪಡೆಯಬಹುದು. ಜನರು ತಮ್ಮ ಆದ್ಯತೆಗಳ ಆಧಾರದ ಮೇಲೆ ಇದನ್ನು ಆಯ್ಕೆ ಮಾಡಬಹುದು.
ಪಾಸ್ ಬೆಲೆಯ ವಿವರ
ಬಿಸಿನೆಸ್ ಪಾಸ್ ಬೇಕಾದರೆ ಭಾರತೀಯ ಪ್ರಜೆಗಳಿಗೆ 5,000 ರೂ ಮತ್ತು ವಿದೇಶಿ ಪ್ರಜೆಗಳಿಗೆ 150 ಡಾಲರ್ ಬೆಲೆ ನಿಗದಿಪಡಿಸಲಾಗಿದೆ. ಇದರಲ್ಲಿ ಎಡಿವಿಎ ಮತ್ತು ಕಾರ್ ಪಾರ್ಕಿಂಗ್ ಪಾಸ್ ಸೇರಿದಂತೆ ಒಂದು ವ್ಯವಹಾರ ದಿನಕ್ಕೆ (ಫೆಬ್ರವರಿ 10-12) ಪ್ರವೇಶ ಸಿಗುತ್ತದೆ . ಜನರಲ್ ವಿಸಿಟರ್ ಪಾಸ್ ಪಡೆದವರು ಫೆ. 13-14ರಂದು ಪ್ರದರ್ಶನ ಮತ್ತು ಎಡಿವಿಎ ಎರಡಕ್ಕೂ ಪ್ರವೇಶ ಪಡೆಯುತ್ತಾರೆ. ಇದಕ್ಕೆ ಭಾರತೀಯರಿಗೆ 2,500 ರೂ. ಮತ್ತು ವಿದೇಶೀಯರಿಗೆ 50 ಡಾಲರ್ ನಿಗದಿಪಡಿಸಲಾಗಿದೆ. ಎಡಿವಿಎ ಪಾಸ್ ವೆಚ್ಚವು 1,000 (ಭಾರತೀಯರು) ಮತ್ತು 50 ಡಾಲರ್ (ವಿದೇಶಿಯರು) ಆಗಿದ್ದು, ಫೆ. 11-14ರವರೆಗೆ ವಾಯು ಪ್ರದರ್ಶನ ವೀಕ್ಷಣೆ ಪ್ರದೇಶಕ್ಕೆ ಪ್ರವೇಶಿಸಬಹುದು.
ಪಾರ್ಕಿಂಗ್ ಮಾರ್ಗಸೂಚಿಗಳು
ಪಾರ್ಕಿಂಗ್ ಪಾಸ್ ಹೊಂದಿರುವವರು ವಿಮಾನ ನಿಲ್ದಾಣ ರಸ್ತೆಯನ್ನು ತೆಗೆದುಕೊಂಡು, ಐಎಎಫ್ ಹುಣಸೇಮಾರನಹಳ್ಳಿಯ ಫ್ಲೈಓವರ್ ದಾಟಿ ಯು-ಟರ್ನ್ ತೆಗೆದುಕೊಳ್ಳಬೇಕು. ಸರ್ವಿಸ್ ರಸ್ತೆ ಮೂಲಕ ಗೇಟ್ ಸಂಖ್ಯೆ 05ಕ್ಕೆ ಎಂಟ್ರಿ ಕೊಡಬೇಕು. ನಿರ್ಗಮಿಸುವಾಗ ರೇವಾ ಕಾಲೇಜು ಜಂಕ್ಷನ್ ಮೂಲಕ ಗೇಟ್ ಸಂಖ್ಯೆ 05ಎ ಬಳಸಬೇಕು. ಪಾರ್ಕಿಂಗ್ ಪಾಸ್ ಇಲ್ಲದವರಾದರೆ, ಜಿಕೆವಿಕೆ ಕ್ಯಾಂಪಸ್ ಅಥವಾ ಜಕ್ಕೂರು ವಾಯುನೆಲೆಯಲ್ಲಿ ವಾಹನ ನಿಲುಗಡೆ ಮಾಡಬಹುದು. ಅಲ್ಲಿಂದ ಉಚಿತ ಬಿಎಂಟಿಸಿ ಶಟಲ್ ಬಸ್ಸುಗಳು ಲಭ್ಯವಿರುತ್ತವೆ.
ಮಾರ್ಗಸೂಚಿ ಮತ್ತು ಕ್ಯೂಆರ್ ಕೋಡ್
ಏರ್‌ಶೋನಲ್ಲಿ ಭಾಗವಹಿಸುವವರು ತಮ್ಮ ಪಾಸ್ ಅಥವಾ ಟಿಕೆಟ್‌ನಲ್ಲಿ ನಮೂದಾಗಿರುವ ಕ್ಯೂಆರ್ ಕೋಡ್‌ನಲ್ಲಿ ಉಲ್ಲೇಖಿಸಿರುವಂತೆ, ಗೊತ್ತುಪಡಿಸಿದ ಮಾರ್ಗವನ್ನೇ ಅನುಸರಿಸಬೇಕು. ನಿಯೋಜಿತ ಮಾರ್ಗದ ಹೊರತಾಗಿ ಬೇರೆ ಮಾರ್ಗವನ್ನು ಅನುಮತಿಸಲಾಗುವುದಿಲ್ಲ.
ಸಮಯ ಮತ್ತು ಭದ್ರತಾ ತಪಾಸಣೆ
ಪ್ರದರ್ಶನವು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇರುತ್ತದೆ. ಪ್ರತಿದಿನ ಎರಡು ಏರ್ ಶೋಗಳು ನಡೆಯುತ್ತವೆ. ಒಂದು ಬೆಳಗ್ಗೆ ನಡೆದರೆ, ಇನ್ನೊಂದು ಮಧ್ಯಾಹ್ನ ನಡೆಯುತ್ತದೆ. ಕಾರ್ಯಕ್ರಮದುದ್ದಕ್ಕೂ ಭದ್ರತಾ ತಪಾಸಣೆಗಳನ್ನು ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಸಂದರ್ಶಕರು ಮಾನ್ಯವಾಗಿರುವ ಯಾವುದೇ ಸರ್ಕಾರಿ ಐಡಿಯನ್ನು ಹೊಂದಿರಬೇಕು.
