ಬೆಂಗಳೂರು: ಆಯುಷ್ಮಾನ್ ಭಾರತ್ ಪ್ರಯೋಜನ ಸಿಗದಿದ್ದಕ್ಕೆ 72 ವರ್ಷದ ಕ್ಯಾನ್ಸರ್ ವ್ಯಕ್ತಿ ಆತ್ಮಹತ್ಯೆ; ಅರ್ಹರಿಗೆ ಏಕೆ ಯೋಜನೆ ಸಿಗುತ್ತಿಲ್ಲ
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಅವರಿಗೆ 5 ಲಕ್ಷ ರೂಪಾಯಿಗಳ ವಿಮೆ ನೀಡಲು ಬೆಂಗಳೂರಿನ ಆಸ್ಪತ್ರೆಯೊಂದು ನಿರಾಕರಿಸಿದೆ. ಇದರಿಂದ ಬೇಸರಗೊಂಡು 72 ವರ್ಷದ ಕ್ಯಾನ್ಸರ್ ರೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಯುಷ್ಮಾನ್ ಭಾರತ್ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ.

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯೂ (ಎಬಿ-ಪಿಎಂಜೆಎವೈ) ಅನುದಾನದ ಗೊಂದಲದಿಂದ ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಆರೋಪಗಳು ಕೇಳಬಂದಿವೆ. ಇದರ ನಡುವೆ ಆಯುಷ್ಮಾನ್ ಭಾರತ್ ಯೋಜನೆ ಸಿಗದಿದ್ದಕ್ಕೆ ಬೇಸರಗೊಂಡು ವೃದ್ಧನೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 72 ವರ್ಷದ ಬೆಂಗಳೂರು ನಿವಾಸಿ ಎಂದು ವರದಿಯಾಗಿದೆ. ಇವರಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಅಡಿಯಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯೊಂದು ನಿರಾಕರಿಸಿದೆ. ಇದರಿಂದ ಬೇಸರಗೊಂಡು ವೃದ್ಧ 2024ರ ಡಿಸೆಂಬರ್ 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೃತ ವೃದ್ಧ, ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿಯಾಗಿದ್ದು, ಕ್ಯಾನ್ಸರ್ ಪತ್ತೆಯಾದ 15 ದಿನಗಳ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಹಿರಿಯ ನಾಗರಿಕನಿಗೆ 5 ಲಕ್ಷ ರೂಪಾಯಿಗಳ ವಿಮೆಯನ್ನು ಒದಗಿಸಲು ಆಸ್ಪತ್ರೆ ನಿರಾಕರಿಸಿದೆ ಎಂದು ತಿಳಿದಾಗ ರೋಗಿಯು ಹೆಚ್ಚು ಆಘಾತಕ್ಕೊಳಗಾಗಿದ್ದರು ಎಂದು ಮೃತನ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶಗಳು ಇನ್ನೂ ಬಂದಿಲ್ಲ ಎಂದ ಆಸ್ಪತ್ರೆ
"ನಾವು ಎಬಿ ಪಿಎಂ-ಜೆಎವೈ ಹಿರಿಯ ನಾಗರಿಕರ ಕಾರ್ಡ್ ಅನ್ನು ರಚಿಸಿದ್ದರೂ, ಅವರಿಗೆ ವಾರ್ಷಿಕ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಇತ್ತು. ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಕೆಎಂಐಒ) ಈ ಪ್ರಯೋಜನವನ್ನು ನಿರಾಕರಿಸಿತು, ರಾಜ್ಯ ಸರ್ಕಾರದ ಆದೇಶಗಳು ಇನ್ನೂ ಬಂದಿಲ್ಲ ಎಂದು ಹೇಳಿದೆ. ಆದರೂ ಇದರಿಂದ ನಮಗೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ವಿಸ್ತರಿಸಿತು" ಎಂದು ಕುಟುಂಬದ ಸದಸ್ಯರೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿರುವುದಾಗಿ ವರದಿಯಾಗಿದೆ.
ಹಿರಿಯ ನಾಗರಿಕರ ಯೋಜನೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲ. ಈ ಬಗ್ಗೆ ಆದೇಶಗಳಿಗಾಗಿ ಕಾಯಲಾಗುತ್ತಿದೆ ಎಂದು ಕೆಎಂಐಒ ಉಸ್ತುವಾರಿ ನಿರ್ದೇಶಕ ಡಾ.ರವಿ ಅರ್ಜುನನ್ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ದೃಢಪಡಿಸಿದೆ. ಹಣಕಾಸಿನ ಅಂಶಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಕೋರಿದೆ ಎಂದು ಹೇಳಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 5 ಲಕ್ಷ ರೂಪಾಯಿಗಳ ಉಚಿತ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಆದರೆ ಯೋಜನೆಯನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಭಾರಿ ಗೊಂದಲಗಳಿವೆ. ಈಗಾಗಲೇ ರಾಜ್ಯದಲ್ಲಿ ಎಬಿ-ಪಿಎಂಎಜೆವೈ ಆರೋಗ್ಯ ಕರ್ನಾಟಕ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆಯಡಿ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬದ ಎಲ್ಲಾ ವಯೋಮಾನದವರಿಗೆ ವಾರ್ಷಿಕ 5 ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಎಪಿಎಲ್ ಕಾರ್ಡ್ ದಾರರಿಗೆ ಈ ಯೋಜನೆಯಡಿಯಲ್ಲಿ ಚಿಕಿತ್ಸೆಯ ಶೇಕಡಾ 30 ರಷ್ಟು ವೆಚ್ಚವನ್ನು ಪಾವತಿಸಲಾಗುತ್ತಿದೆ.
ಯೋಜನೆಯ ಅನುದಾನದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ-ಸಚಿವ ದಿನೇಶ್ ಗುಂಡೂರಾವ್
70 ವರ್ಷ ಮೇಲ್ಪಟ್ಟ ಹಿರಿಯರಿಗೆ 5 ಲಕ್ಷ ರೂಪಾಯಿ ವರೆಗಿನ ಆರೋಗ್ಯ ವಿಮಾನ ಸೌಲಭ್ಯ ನೀಡುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ ಈವರೆಗೆ ಅನುದಾನದ ಖಚಿತತೆಯನ್ನು ನೀಡಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಕರ್ನಾಟಕ ಸರ್ಕಾರದಿಂದಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಯೋಜನೆ ಜಾರಿಗೆ ನಾವು ಕೂಡ ಉತ್ಸಕರಾಗಿದ್ದೇವೆ. ಆದರೆ ಪ್ರಕಾರ, ಎಷ್ಟು ಹಣ ಬರುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದಾಗಿ ವರದಿಯಾಗಿದೆ.
---
ಸಮಸ್ಯೆಗಳಿಗೆ ತಾಳ್ಮೆಯಿಂದ ಪರಿಹಾರಗಳನ್ನು ಕಂಡುಕೊಳ್ಳಬೇಕು. ಯಾರೂ ಕೂಡ ಆತ್ಮಹತ್ಯೆಯ ನಿರ್ಧಾರಗಳನ್ನು ಕೈಗೊಳ್ಳಬಾರದು. ನಿಮಗೆ ಬೆಂಬಲ ಬೇಕಾದರೆ ಅಥವಾ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.
ಸಹಾಯವಾಣಿಗಳು: ಆಸ್ರಾ: 022 2754 6669
ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918,
ರೋಶನಿ ಫೌಂಡೇಶನ್ (ಸಿಕಂದರಾಬಾದ್) ಸಂಪರ್ಕ ಸಂಖ್ಯೆಗಳು: 040-66202001, 040-66202000,
ಒನ್ ಲೈಫ್: ಸಂಪರ್ಕ ಸಂಖ್ಯೆ: 78930 78930, ಸೇವಾ: ಸಂಪರ್ಕ ಸಂಖ್ಯೆ: 09441778290
