Breaking News: ಭಾರತದಲ್ಲೇ ಮೊದಲು ಎಚ್‌ಎಂಪಿವಿ ಬೆಂಗಳೂರಿನಲ್ಲಿ ಪತ್ತೆ; ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ವೈರಾಣು, ಆತಂಕ ಬೇಡ ಎಂದ ಸರ್ಕಾರ
ಭಾರತದಲ್ಲಿ ಎಚ್‌ಎಂಪಿವಿ ವೈರಸ್ ಕಾಣಿಸಿಕೊಂಡಿದೆ. ಅದೂ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ವೈರಾಣು ಕಾಣಿಸಿಕೊಂಡಿದ್ದು, ಇಬ್ಬರಲ್ಲಿ ವೈರಸ್ ಇರುವುದು ಪತ್ತೆಯಾಗಿದೆ.
ಬೆಂಗಳೂರು: ಹೊಸ ವರ್ಷದಲ್ಲಿ ಚೀನಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್( ಎಚ್‌ಎಂಪಿವಿ) ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ. ಅದೂ ಬೆಂಗಳೂರಿನಲ್ಲಿ ಇಬ್ಬರು ಮಗುವಿನಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ ಮೊದಲ ಪ್ರಕರಣ ದಾಖಲಾಗಿರುವುದು ಬೆಂಗಳೂರಿನಲ್ಲಿಯೇ. ಚೀನಾದಲ್ಲಿ ಕಂಡು ಬಂದ ಎಚ್‌ಎಂಪಿವಿ ವೈರಾಣುವಿನಿಂದ ಏಕಾಏಕಿ ಇಡೀ ಜಗತ್ತು ಆತಂಕಕ್ಕೊಳಗಾಗಿದ್ದರೆ, ಭಾರತದ ಬೆಂಗಳೂರು ನಗರದಲ್ಲಿ ವೈರಸ್‌ನ ಮೊದಲ ಪ್ರಕರಣ ಪತ್ತೆಯಾಗಿದೆ. ಬ್ರಾಂಕೋಪ್ನ್ಯುಮೋನಿಯಾದ ಸೂಚನೆಗಳಿದ್ದ 3 ತಿಂಗಳ ಹೆಣ್ಣು ಶಿಶುವನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್‌ಎಂಪಿವಿ ವೈರಾಣು ಇರುವ ಸೂಚನೆ ನಂತರ ತಪಾಸಣೆ ನಡೆಸಲಾಗಿತ್ತು. ಚೇತರಿಸಿಕೊಂಡ ನಂತರ ಮಗುವನ್ನು ಆಸ್ಪತ್ರೆಯಿಂದ ಕಳುಹಿಸಲಾಗಿತ್ತು. ಇದಾದ ಬಳಿಕ 8 ತಿಂಗಳ ಗಂಡು ಮಗು ಕೂಡ ಬ್ರಾಂಕೋಪ್ನ್ಯುಮೋನಿಯಾದ ಇತಿಹಾಸದೊಂದಿಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿತ್ತು. ಮಗುವಿಗೆ ಎಚ್‌ಎಂಪಿವಿಗೆ ಇರುವುದು ದೃಢಪಟ್ಟಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಹೇಳಿದೆ.
ಎಚ್‌ಎಂಪಿವಿ ಶ್ವಾಸಕೋಶಗಳು ಮತ್ತು ಉಸಿರಾಟದ ಮಾರ್ಗಗಳ ಮೇಲೆ ಪರಿಣಾಮ ಬೀರುವ ಉಸಿರಾಟದ ವೈರಸ್ ಚಿಕ್ಕ ಮಕ್ಕಳು, ವೃದ್ಧರು ಮತ್ತು ದೈಹಿಕವಾಗಿ ದುರ್ಬಲಗೊಂಡು ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆಯಾಗಿರುವವರಿಗೆ ಹೆಚ್ಚಿನ ಅಪಾಯಗಳನ್ನು ಉಂಟುಮಾಡುತ್ತದೆ. ಉಸಿರಾಟದ ತೊಂದರೆ ಅಧಿಕವಾಗಿ ತೊಂದರೆಯಾಗಬಹುದು. ಸಾಮಾನ್ಯ ಔಷಧಿಗಳೊಂದಿಗೆ ಇದನ್ನು ನಿರ್ವಹಿಸಬಹುದು. ಸಾಮಾನ್ಯವಾಗಿ ಆಸ್ಪತ್ರೆಗೆ ಅಗತ್ಯವಿಲ್ಲವಾದರೂ ಉಸಿರಾಟದ ತೊಂದರೆ ಅತಿಯಾದರೆ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪರೀಕ್ಷೆ ನಡೆಸಿದ ನಂತರ 2025ರ ಜನವರಿ 3 ರಂದು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿ ಮಗು ಚೇತರಿಸಿಕೊಳ್ಳುತ್ತಿದೆ. ವೈರಾಣು ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ. ಮಗುವಿನ ಮಾದರಿಯನ್ನು ನಮ್ಮ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿಲ್ಲ ಬದಲಿಗೆ ಖಾಸಗಿ ಆಸ್ಪತ್ರೆಯಲ್ಲಿಯೇ ನಡೆಸಿರುವ ಪರೀಕ್ಷೆಗಳ ವರದಿಗಳು ಬಂದಿವೆ. ಖಾಸಗಿ ಆಸ್ಪತ್ರೆಯ ಪರೀಕ್ಷೆಗಳನ್ನು ನಾವು ಅನುಮಾನಿಸಲು ಯಾವುದೇ ಕಾರಣವಿಲ್ಲ" ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಎಚ್‌ಎಂಪಿವಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಶನಿವಾರ ಮಾರ್ಗಸೂಚಿ ಸಲಹಾ ಪಟ್ಟಿ ಬಿಡುಗಡೆ ಮಾಡಿದಾಗ ಹೇಳಿತ್ತು. ಆದರೆ ಸೋಮವಾರ ನೀಡಿರುವ ಹೇಳಿಕೆ ಪ್ರಕಾರ, ಭಾರತದಲ್ಲಿ ಮೊದಲ ಎಚ್‌ಎಂಪಿವಿ ಪ್ರಕರಣ ಬೆಂಗಳೂರಿನಲ್ಲಿ ಮೊದಲು 3 ತಿಂಗಳ ಮಗು ನಂತರ 8 ತಿಂಗಳ ವಯಸ್ಸಿನ ಶಿಶುಗಳಲ್ಲಿ ಕಂಡುಬಂದಿದೆ. ಇದಕ್ಕಾಗಿ ಜನ ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಚೀನಾದಲ್ಲಿದ್ದ ವೈರಸ್ ರೂಪಾಂತರಗೊಂಡಿರುವ ಮಾಹಿತಿಯಿದೆ. ಭಾರತ ಸರ್ಕಾರವೂ ನಮಗೆ ಈ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಹಾಗೂ ಮಾರ್ಗಸೂಚಿಗಳನ್ನೇನು ಬಿಡುಗಡೆ ಮಾಡಿಲ್ಲ. ಅವರೂ ಕೂಡ ಹೆಚ್ಚಿನ ವಿವರವನ್ನು ವೈರಾಣು ಹಾಗು ಅದರ ಪ್ರಭಾವಗಳ ಕುರಿತು ಪಡೆಯುತ್ತಿದ್ದಾರೆ. ನಾವೂ ಕೂಡ ಮಾಹಿತಿ ಕಲೆ ಹಾಕುತ್ತಿದ್ದು, ಮುನ್ನೆಚ್ಚರಿಕೆ ವಹಿಸಿದ್ದೇವೆ ಎನ್ನುತ್ತಾರೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.
ದೆಹಲಿ ಸರ್ಕಾರವು ಎಚ್‌ಎಂಪಿವಿ ವೈರಾಣು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೆಚ್ಚಬಹುದಾದ ಪ್ರಕರಣಗಳ ದೃಷ್ಟಿಯಿಂದ, ಶೀತಜ್ವರ ತರಹದ ಅನಾರೋಗ್ಯ ಮತ್ತು ತೀವ್ರವಾದ ಉಸಿರಾಟದ ಸೋಂಕು ಪ್ರಕರಣಗಳನ್ನು ತ್ವರಿತವಾಗಿ ವರದಿ ಮಾಡಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ದೆಹಲಿ ಅಧಿಕಾರಿಗಳು ಹೇಳುತ್ತಾರೆ.