ಬೆಂಗಳೂರಲ್ಲಿ ಪ್ರಾಪರ್ಟಿ ಲೋನ್‌ ಯಾವುದಕ್ಕೆ ಸಿಗುತ್ತೆ; ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಪ್ರಯೋಜನಗಳೇನು- ಇಲ್ಲಿದೆ ಪೂರ್ತಿ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಪ್ರಾಪರ್ಟಿ ಲೋನ್‌ ಯಾವುದಕ್ಕೆ ಸಿಗುತ್ತೆ; ಎ ಖಾತಾ Vs ಬಿ ಖಾತಾ, ವ್ಯತ್ಯಾಸವೇನು, ಪ್ರಯೋಜನಗಳೇನು- ಇಲ್ಲಿದೆ ಪೂರ್ತಿ ವಿವರ

ಬೆಂಗಳೂರಲ್ಲಿ ಪ್ರಾಪರ್ಟಿ ಲೋನ್‌ ಯಾವುದಕ್ಕೆ ಸಿಗುತ್ತೆ; ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಪ್ರಯೋಜನಗಳೇನು- ಇಲ್ಲಿದೆ ಪೂರ್ತಿ ವಿವರ

A Khata vs B Khata in BBMP: ಬೆಂಗಳೂರಲ್ಲಿ ಆಸ್ತಿ ಮಾಡಬೇಕು ಎಂದು ಕನಸು ಕಾಣುವವರ ಗಮನಿಸಬೇಕಾದ ವಿಚಾರ ಇದು. ಎ ಖಾತಾ ಮತ್ತು ಬಿ ಖಾತಾಗಳ ನಡುವಿನ ವ್ಯತ್ಯಾಸವೇನು, ಪ್ರಯೋಜನಗಳೇನು, ಪ್ರಾಪರ್ಟಿ ಲೋನ್ ಯಾವುದಕ್ಕೆ ಸಿಗುತ್ತೆ ಎಂಬಿತ್ಯಾದಿ ಪೂರ್ತಿ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಯಾವುದಕ್ಕೆ ಪ್ರಾಪರ್ಟಿ ಲೋನ್ ಸಿಗುತ್ತೆ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಯಾವುದಕ್ಕೆ ಪ್ರಾಪರ್ಟಿ ಲೋನ್ ಸಿಗುತ್ತೆ ಎಂಬ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ) (Khata image courtesy sobha.com)

A Khata vs B Khata in BBMP: ಬೆಂಗಳೂರಲ್ಲಿ ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ, ಸೈಟ್ ಖರೀದಿ ಮಾಡ್ತೀರಾ, ಹಾಗಾದ್ರೆ ಆ ಆಸ್ತಿಯ ದಾಖಲೆಯಲ್ಲಿ ಖಾತಾ ಯಾವುದು ನಮೂದಾಗಿ ಎಂಬುದನ್ನು ಗಮನಿಸಿ. ಎ ಖಾತಾ ಇದೆಯಾ ಅಥವಾ ಬಿ ಖಾತಾ ಇದೆಯಾ ನೋಡಿ. ಯಾವುದಾದರೆ ಏನಾಯಿತು ಖಾತಾ ಇದ್ದರಾಯಿತಲ್ಲ ಎಂಬ ಭಾವನೆ ಸಹಜ. ಎ ಖಾತಾ ಆಸ್ತಿಗೂ ಬಿ ಖಾತಾ ಆಸ್ತಿಗೂ ಇರುವ ವ್ಯತ್ಯಾಸ ಏನು? ಒಂದೊಮ್ಮೆ ಬಿ ಖಾತಾ ಇದ್ದರೆ ಅದನ್ನು ಎ ಖಾತಾಗೆ ಉನ್ನತೀಕರಿಸುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಮನದಲ್ಲಿ ಓಡತೊಡಗಿತಾ? ಹಾಗಾದರೆ ಅವೆಲ್ಲದಕ್ಕೂ ಉತ್ತರ ಇಲ್ಲಿದೆ.

ಬೆಂಗಳೂರಲ್ಲಿ ಆಸ್ತಿ ದಾಖಲೆ ಬದಲಾದ ಬಗೆ

ಬೆಂಗಳೂರಲ್ಲಿ ಆಸ್ತಿ ದಾಖಲೆ ಬದಲಾದ ಬಗೆಯನ್ನೊಮ್ಮೆ ಅರ್ಥಮಾಡಿಕೊಳ್ಳಬೇಕು. ಬೆಂಗಳೂರು ಬೆಳೆದು ವಿಸ್ತರಣೆಯಾದ ಬೆನ್ನಿಗೆ 2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಥಾಪನೆಯಾಯಿತು. ಇದಾದ ಬಳಿಕ ಆಸ್ತಿ ದಾಖಲೆಗಳನ್ನು ಖಾತಾ ಎಂದು ಗುರುತಿಸಿ, ಅದರಲ್ಲಿ ಕೆಲವು ವರ್ಗೀಕರಣಗಳನ್ನು ಮಾಡಲಾಯಿತು. ಖಾತಾ ಎಂಬುದು ಆಸ್ತಿ ಮಾಲೀಕತ್ವದ ದಾಖಲೆ. ಇದು ಮಹಾನಗರದ ಒಳಗೆ ಆಸ್ತಿ ಮಾಲೀಕತ್ವದ ನಿರ್ದಿಷ್ಟ ಗುಣಲಕ್ಷಣಗಳನ್ನು ವರ್ಗೀಕರಿಸಲು, ಪ್ರಮಾಣೀಕರಿಸಲು ನೆರವಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಖಾತೆಗಳನ್ನು ಎ ಮತ್ತು ಬಿ ಎಂದು ವರ್ಗೀಕರಿಸಲಾಗಿದೆ.

ಬೆಂಗಳೂರಿನಲ್ಲಿ ಖಾತಾ ಪ್ರಮಾಣ ಪತ್ರ ಯಾಕೆ ಬೇಕು ಎಂದು ಕೇಳಿದರೆ ನಿರೀಕ್ಷಿಸಬಹುದಾದ ಉತ್ತರ ಇದು. ಆಸ್ತಿಯನ್ನು ಕಾನೂನುಬದ್ಧಗೊಳಿಸುವ ಖಾತಾ ಪ್ರಮಾಣ ಪತ್ರ ಇದ್ದರಷ್ಟೆ, ಕಟ್ಟಡ ಪರವಾನಗಿ, ಲೇಔಟ್ ಯೋಜನೆಗೆ ಅನುಮೋದನೆ, ಬ್ಯಾಂಕ್ ಸಾಲ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸಿಗುವುದು. ಹಾಗಾಗಿ ಖಾತಾ ಪ್ರಮಾಣ ಪತ್ರ ಬೇಕೇ ಬೇಕು.

ಹಾಗಾದರೆ ಖಾತಾ ಯಾರು ಪಡೆಯಬಹುದು ಎಂಬುದನ್ನು ಗಮನಿಸುವುದಾದರೆ, ಬೆಂಗಳೂರಲ್ಲಿ ನೀವು ಆಸ್ತಿ ಮಾಲೀಕರಾಗಿದ್ದರೆ, ಖಾತಾ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದರೆ, ಟೈಟಲ್ ಡೀಡ್‌, ಎನ್‌ಕಂಬರೆನ್ಸ್ ಸರ್ಟಿಫಿಕೇಟ್‌, ಆಸ್ತಿ ತೆರಿಗೆ ರಸೀದಿಗಳು ಬೇಕಾಗುತ್ತದೆ. ಕರ್ನಾಟಕ ಸರ್ಕಾರ ಅನುಮೋದಿಸಿರುವ ಯಾವುದೇ ನಾಗರಿಕ ಸೇವಾ ಕೇಂದ್ರದಲ್ಲಿ ಖಾತಾ ಪಡೆಯಲು ಅರ್ಜಿ ಸಲ್ಲಿಸಬಹುದು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎ ಖಾತಾ ಎಂದರೇನು

ಬಿಬಿಎಂಪಿ ವ್ಯಾಪ್ತಿಯಲ್ಲಿ ಎ ಖಾತಾ ಆಸ್ತಿ ದಾಖಲೆ ಇದ್ದರೆ ಅಂತಹ ಆಸ್ತಿಯ ಮಾಲೀಕತ್ವ ಪರಿಪೂರ್ಣ ಎಂದು ಪ್ರಮಾಣಿಸಿದಂತೆ. ಅದು ಆಸ್ತಿಯ ಕಾನೂನುಬದ್ಧತೆಯನ್ನು ದೃಢೀಕರಿಸುವ, ಆಸ್ತಿ ತೆರಿಗೆ ಪಕ್ಕಾ ಪಾವತಿಯಾಗುವ ಪ್ರಮಾಣಪತ್ರವಾಗಿ ಗುರುತಿಸಲ್ಪಟ್ಟಿದೆ. ಇದು ಆಸ್ತಿ ಮಾಲೀಕರಿಗೆ ಪರವಾನಗಿಗಳು ಮತ್ತು ಸಾಲಗಳಿಗೆ ಅರ್ಜಿ ಸಲ್ಲಿಸಲು ಅನುಮತಿಸುತ್ತದೆ ಮತ್ತು ನಿರ್ಮಾಣ, ಮಾರಾಟ ಮತ್ತು ಮಾಲೀಕತ್ವ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ. ಎ ಖಾತಾ ಆಸ್ತಿ ಮಾಲೀಕರಿಗೆ ವಿವಿಧ ಹಕ್ಕುಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ, ಸುಗಮ ಹಣಕಾಸಿನ ವಹಿವಾಟುಗಳು ಮತ್ತು ಆಸ್ತಿ-ಸಂಬಂಧಿತ ಚಟುವಟಿಕೆಗಳನ್ನು ಖಾತ್ರಿಪಡಿಸುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ಎಂದರೇನು

ಎ ಖಾತಾಕ್ಕೆ ಹೊರತಾದ ಆಸ್ತಿ ದಾಖಲೆಗಳನ್ನು ಬಿ ಖಾತಾ ಎಂದು ವರ್ಗೀಕರಿಸಲಾಗಿದೆ. ಇಂತಹ ಆಸ್ತಿಗಳು ಪೂರ್ತಿ ಕಾನೂನು ಬದ್ಧ ಆಸ್ತಿಗಳಲ್ಲ. ಇದರಲ್ಲಿ ಕಟ್ಟಡದ ಬೈಲಾ, ನಿಬಂಧನೆ ಉಲ್ಲಂಘನೆ, ಅನಧಿಕೃತ ಬಡಾವಣೆ, ಕಂದಾಯ ಭೂಮಿಯಲ್ಲಿ ನಿರ್ಮಿಸಲಾದ ಪ್ರಮಾಣ ಪತ್ರವಿಲ್ಲದ ಆಸ್ತಿ ಮುಂತಾದವು ಸೇರಿಕೊಂಡಿವೆ. ಇವುಗಳಿಂದ ಆಸ್ತಿ ತೆರಿಗೆ ಸಂಗ್ರಹಿಸುವುದಕ್ಕಾಗಿ ಬಿಬಿಎಂಪಿ ಈ ಆಸ್ತಿಗಳಿಗೆ ಬಿ ಖಾತಾ ಪ್ರಮಾಣ ಪತ್ರವನ್ನು ಒದಗಿಸಿದೆ. ಅಗತ್ಯ ದಾಖಲೆಗಳನ್ನು ಒಗ್ಗೂಡಿಸಿಕೊಂಡು ಬಿ ಖಾತಾದಿಂದ ಆಸ್ತಿಯನ್ನು ಎ ಖಾತಾಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೂ ಬಿಬಿಎಂಪಿ ಅವಕಾಶ ನೀಡಿದೆ.

ಬೆಂಗಳೂರಲ್ಲಿ ಎ ಖಾತಾ vs ಬಿ ಖಾತಾ ನಡುವೆ ವ್ಯತ್ಯಾಸ ಏನು ಎಂಬುದನ್ನು ಅರಿಯಬೇಕು. ವಿಶೇಷವಾಗಿ ಅದರ ಗುಣಲಕ್ಷಣಗಳು ಬಹಳ ವ್ಯತ್ಯಾಸವಿದ್ದು, ಮಾಲೀಕರಿಗೆ ಯಾವ ರೀತಿ ಪ್ರಯೋಜನಕ್ಕೆ ಬರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.

ಬೆಂಗಳೂರಲ್ಲಿ ಎ ಖಾತಾ vs ಬಿ ಖಾತಾ 

ಗುಣಲಕ್ಷಣಎ ಖಾತಾ ಆಸ್ತಿ ಬಿ ಖಾತಾ ಆಸ್ತಿ
ಕಾನೂನು ಸ್ಥಾನಮಾನಕಾನೂನು ಬದ್ಧವಾಗಿ ಮಾನ್ಯವಾದ ಆಸ್ತಿಮಾಲೀಕತ್ವದ ದಾಖಲೆಗಳಿದ್ದರೂ ಅಕ್ರಮ ಆಸ್ತಿ
ಮಾಲೀಕತ್ವ ವರ್ಗಾವಣೆ/ ಮರು ಮಾರಾಟಸುಲಭವಾಗಿ ವರ್ಗಾವಣೆ / ಮರು ಮಾರಾಟ ಮಾಡಬಹುದುವರ್ಗಾವಣೆ/ ಮರು ಮಾರಾಟಕ್ಕೆ ನಿರ್ಬಂಧ
ವಾಣಿಜ್ಯ ಪರವಾನಗಿ ವಾಣಿಜ್ಯ ಪರವಾನಗಿ ಸಿಗುತ್ತೆವಾಣಿಜ್ಯ ಪರವಾನಗಿ ಸಿಗಲ್ಲ
ನಿರ್ಮಾಣ ಪರವಾನಗಿ ಮತ್ತು ವಿಸ್ತರಣೆನಿರ್ಮಾಣ ಪರವಾನಗಿ ಸಿಗುತ್ತೆ, ವಿಸ್ತರಣೆಗೂ ಅವಕಾಶವಿದೆ.ವಿಸ್ತರಣೆಗೆ ನಿರ್ಬಂಧವಿದೆ
ಸಾಲ ಸೌಲಭ್ಯಆಸ್ತಿ ಮೇಲೆ ಸಾಲ ಸಿಗುತ್ತೆಆಸ್ತಿ ಮೇಲೆ ಸಾಲ ಸಿಗಲ್ಲ
ದಾಖಲೆಗಳ ಸ್ಥಿತಿಗತಿಕಾನೂನು ಬದ್ಧ ದಾಖಲೆಯಾಗಿದ್ದು ವ್ಯವಹಾರಕ್ಕೆ ಬಳಸಬಹುದುತಾತ್ಕಾಲಿಕ ದಾಖಲೆ ಇದು, ಎ ಖಾತಾಗೆ ಉನ್ನತೀಕರಿಸಲು ಸಹಕಾರಿ
ನವೀಕರಣ ಮತ್ತು ನಿರ್ಮಾಣಸುಲಭವಾಗಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಬಹುದು ಅಥವಾ ನಿರ್ಮಾಣ ಪರವಾನಗಿ ಪಡೆಯಬಹುದುನಿರ್ಮಾಣ, ನವೀಕರಣ ಎರಡಕ್ಕೂ ನಿರ್ಬಂಧವಿದೆ

ಎ ಖಾತಾ ಮಾಲೀಕರಿಗೆ ಸಾಲ ಸೌಲಭ್ಯ ಸುಲಭ ಲಭ್ಯ

ಎ ಖಾತಾ ಮಾಲೀಕರು ಸುಲಭವಾಗಿ ತೆರಿಗೆ ಪಾವತಿಸಬಹುದು, ವ್ಯಾಪಾರ ಪರವಾನಗಿಗಳು ಮತ್ತು ಸಾಲಗಳಂತಹ ಪ್ರಯೋಜನಗಳನ್ನು ಪಡೆಯಬಹುದು. ಬಿ ಖಾತಾ ಆಸ್ತಿಗಳಾದರೆ, ಅವುಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡ ಅಥವಾ ಆಕ್ಯುಪೆನ್ಸಿ ಪ್ರಮಾಣಪತ್ರಗಳಂತಹ ಅಗತ್ಯ ದಾಖಲಾತಿಗಳನ್ನು ಹೊಂದಿರುವುದಿಲ್ಲ. ಏಕೆಂದರೆ ಅವು ಅನುಮೋದಿತ ಕಟ್ಟಡ ಯೋಜನೆಗಳ ಪ್ರಕಾರ ಇರಲ್ಲ. ಪರಿಣಾಮ, ಅವರು ಕೆಲವು ಸವಲತ್ತುಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಅನರ್ಹರಾಗುತ್ತಾರೆ.

ಕರ್ನಾಟಕ ಹೈಕೋರ್ಟ್ 2014ರ ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನ ಪ್ರಕಾರ, ಬಿ ಖಾತಾ ಆಸ್ತಿಗಳಿಗೂ ಕಾನೂನು ರಕ್ಷಣೆ ದೊರಕಿದೆ. ಎ ಖಾತಾಗೆ ಸಿಗುವ ಎಲ್ಲ ಮಾನ್ಯತೆಗಳೂ ಕೆಲವು ನಿಬಂಧನೆಗಳಿಗೆ ಒಳಪಟ್ಟು ಬಿ ಖಾತೆಗೂ ಇದೆ. ಆದರೆ, ಅವುಗಳನ್ನು ಅಕ್ರಮ ಆಸ್ತಿ ಎಂದು ವರ್ಗೀಕರಿಸುವಂತೆ ಇಲ್ಲ ಎಂಬುದು ಸ್ಪಷ್ಟ ಸೂಚನೆ.

ಆದ್ದರಿಂದ ಬೆಂಗಳೂರಲ್ಲಿ ಆಸ್ತಿ ಖರೀದಿ ಮಾಡುವವರು ಖಾತಾ ಪ್ರಮಾಣ ಪತ್ರವನ್ನು ಸರಿಯಾಗಿ ಪರಿಶೀಲಿಸಬೇಕು. ಬಿ ಖಾತಾ ಇದ್ದರೆ ಅದರ ಮಾನ್ಯತೆಯನ್ನು ಪ್ರಮಾಣಿಸಿಕೊಳ್ಳಬೇಕು. ಎ ಖಾತಾಗೆ ಅದನ್ನು ವರ್ಗಾಯಿಸುವುದಕ್ಕೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು.

ಮಾಹಿತಿ ಮೂಲ- bbmp.gov.in, sobha.com, paytm.com

Whats_app_banner