ಕನ್ನಡ ಸುದ್ದಿ  /  Karnataka  /  A Message Has Been Sent That Maharashtra Minister's Visit To Belgaum Is Not Good Says Cm Bommai

CM Bommai: 'ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ.. ಅವರು ಇಲ್ಲಿಗೆ ಬರಬಾರದು ಎಂಬ ಸಂದೇಶ ರವಾನಿಸಲಾಗಿದೆ'

ಎರಡು ರಾಜ್ಯಗಳ ಮಧ್ಯೆ ಇರುವ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಅವರು ಇಲ್ಲಿಗೆ ಬರಬಾರದು ಎಂಬ ಸಂದೇಶವನ್ನು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಮದುರ್ಗ (ಬೆಳಗಾವಿ): ಎರಡು ರಾಜ್ಯಗಳ ಮಧ್ಯೆ ಇರುವ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಅವರು ಇಲ್ಲಿಗೆ ಬರಬಾರದು ಎಂಬ ಸಂದೇಶವನ್ನು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಬೆಳಗಾವಿಯ ರಾಮದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಡಿಸೆಂಬರ್ 06 ರಂದು ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಹಿಂದೆ ಹಲವಾರು ಬಾರಿ ಈ ಪ್ರಯತ್ನಗಳಾದಾಗ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿತ್ತೋ ಅದೇ ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.

ಕನ್ನಡ ಕುಲಬಾಂಧವರಿರುವ ಜತ್ ತಾಲ್ಲೂಕಿನವರು ಹಲವಾರು ವರ್ಷಗಳಿಂದ ನೀರಿಲ್ಲದೆ ಬಳಲುತ್ತಿದ್ದರು. ಅಂತಹುದರಲ್ಲಿ ಮಹಾರಾಷ್ಟ್ರ ನೀರಿನ ಯೋಜನೆ ರೂಪಿಸಿದೆ ಎಂದಿದ್ದಾರೆ. ಆ ಯೋಜನೆ ಸಾಕಾರಗೊಳ್ಳಲಿ. ಆ ಭಾಗದ ಜನರಿಗೆ ನೀರು ತಲುಪುವ ಕೆಲಸವಾಗಲಿ ಎಂದು ಇದೇ ವೇಳೆ ಹೇಳಿದರು.

ನಿನ್ನೆ ಗಡಿ ವಿವಾದದ ಬಗ್ಗೆ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಸುಪ್ರೀಂಕೋರ್ಟ್​ನಲ್ಲಿ ಗಡಿ ವಿವಾದದ ಪ್ರಕರಣ ಇಂದು ವಿಚಾರಣೆಗೆ ಬರಲಿದ್ದು, ಕರ್ನಾಟಕದ ನಿಲುವು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಅರ್ಜಿ ಮೈಂಟೆನಬಲ್ ಅಲ್ಲ ಎನ್ನುವುದು ನಮ್ಮ ನಿಲುವು. ಅದನ್ನೇ ನಮ್ಮ ವಕೀಲರು ವಾದ ಮಂಡಿಸಿದ್ದಾರೆ. ನಮ್ಮ ನಿಲುವು ಸಂವಿಧಾನಬದ್ದ ಹಾಗೂ ಕಾನೂನಾತ್ಮಕವಾಗಿದೆ. ಎಲ್ಲಾ ಅಂಶಗಳ ಬಗ್ಗೆ ವಕೀಲರು ವಾದ ಮಾಡಲಿದ್ದಾರೆ ಎಂದು ಹೇಳಿದ್ದರು.

ಗಡಿ ವಿವಾದದ ನಡುವೆ ಬೆಳಗಾವಿಯಲ್ಲಿ ಆತಂಕ ಸೃಷ್ಟಿಸಿದ ಘಟನೆ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಹಂತಕ್ಕೆ ಬಂದು ನಿಂತಿದೆ. ಗಡಿ ವಿಚಾರವಾಗಿ ಬಸ್​ಗಳ ಮೇಲೆ ಕಲ್ಲುತೂರಾಟ, ಮಸಿ ಬಳಿಯುವ ಘಟನೆಗಳು ನಡೆಯುತ್ತಿವೆ. ಇದರ ನಡುವೆ ಮಹಾರಾಷ್ಟ್ರ ನಾಯಕರ ಹೇಳಿಕೆಗಳು ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಲು ಕಾರಣವಾಗುತ್ತಿದೆ. ರಾಜಕೀಯ ನಾಯಕರ ನಡುವೆ ಇದ್ದ ವಾಕ್ಸಮರ ಇದೀಗ ವಿದ್ಯಾರ್ಥಿಗಳ ನಡುವೆ ಜಗಳದ ಮಟ್ಟಕ್ಕೆ ಬಂದು ನಿಂತಿದೆಯೇ ಎಂಬ ಆತಂಕಕ್ಕೆ ಮೊನ್ನೆ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.

ಬೆಳಗಾವಿಯ ಟಿಳಕವಾಡಿಯಲ್ಲಿನ ಗೋಗಟೆ ಕಾಲೇಜಿನಲ್ಲಿ ಈ ಘಟನೆ ಮೊನ್ನೆ (ಬುಧವಾರ) ನಡೆದಿದೆ. ಅಂತರ-ಕಾಲೇಜು ಉತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕನ್ನಡ ಹಾಡೊಂದು ಪ್ಲೇ ಆಗುತ್ತಿದ್ದಂತೆಯೇ ಕನ್ನಡ ಧ್ವಜ ಹಿಡಿದು ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡಿದ್ದಾನೆ. ಆದರೆ ಅಲ್ಲಿದ್ದ ಕೆಲ ವಿದ್ಯಾರ್ಥಿಗಳು ಆ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಕಾಲೇಜು ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಸಿನವರಾದ ಕಾರಣ ಅವರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಮಹಾರಾಷ್ಟ್ರ ಪರ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ, ಈ ಬಗ್ಗೆ ದೂರು ನೀಡದಲು ಥಳಿತಕ್ಕೊಳಗಾದ ವಿದ್ಯಾರ್ಥಿ ಪೊಲೀಸ್​ ಠಾಣೆಗೆ ಹೋದರೆ ಅಲ್ಲಿ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿಯಲ್ಲಿ ನಡೆದ ಈ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ನಿನ್ನೆ ಬೆಳಗಾವಿ-ಗೋವಾ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರ ವಿರುದ್ಧ ಘೋಷಣೆ ಕೂಗಿದ್ದಾರೆ. ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕಾಲೇಜಿಗೆ ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆ ಕಾಲೇಜಿನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

IPL_Entry_Point