Karnataka Election: ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಬಾರದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್; ದೆಹಲಿಯಲ್ಲಿ ಬ್ಯುಸಿ ಎಂದ ಪೃಥ್ವಿ ರೆಡ್ಡಿ
ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಎಎಪಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅನುಪಸ್ಥಿತಿ ಕಾಡುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly election) ಹೊಸ ರಾಷ್ಟ್ರೀಯ ಪಕ್ಷ ಆಮ್ ಆದ್ಮಿ ಪಾರ್ಟಿ (Aam Aadmi Party)ಯಿಂದ 209 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಭರ್ಜರಿ ಪ್ರಚಾರ ಮಾಡುತ್ತಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ (Punjab CM Bhagwant Mann) ಸೇರಿದಂತೆ ರಾಷ್ಟ್ರ ಮಟ್ಟದ ಹಲವು ಎಎಪಿ ನಾಯಕರು (AAP Leaders) ರಾಜ್ಯದಲ್ಲಿ ಕ್ಯಾಂಪೇನ್ ಮಾಡಿದ್ದಾರೆ.
ಆದರೆ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮಾತ್ರ ಕರ್ನಾಟಕದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಬರಲೇ ಇಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇದ್ದರೂ ಅವರು ಇತ್ತ ತಲೆ ಹಾಕಲೇ ಇಲ್ಲ.
ಹೈವೋಲ್ಟೇಜ್ ಚುನಾವಣಾ ಕಣವಾಗಿರುವ ಕರ್ನಾಟಕದಲ್ಲಿ ಪ್ರಚಾರ ಮಾಡಲು ಎಎಪಿ ನಾಯಕ ಯಾಕೆ ಬಂದಿಲ್ಲ ಎಂಬ ವಿಚಾರವಾಗಿ ಇಂದು (ಮೇ 7, ಭಾನುವಾರ) ಮಾತನಾಡಿರುವ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿ ವಾಲ್ ಅವರು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಮಾರ್ಚ್ 4 ರಂದು ದಾವಣಗೆರೆಯಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ಕಾರ್ಯಕ್ರಮಕ್ಕೆ ಅರವಿಂದ್ ಕೇಜ್ರಿವಾಲ್ ಅವರು ಆಗಮಿಸಿದ್ದರು. ಖಂಡಿತವಾಗಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಹೆಚ್ಚು ಭಾವನಾತ್ಮಕ ವಿಷಯವಾಗಿದೆ. ಅರವಿಂದ್ ಕೇಜ್ರಿಲ್ ಅವರು ಇನ್ಮುಂದೆ ಒಬ್ಬ ವ್ಯಕ್ತಿಯಲ್ಲ ಒಂದು ಕಲ್ಪನೆ ಎಂದಿದ್ದಾರೆ.
ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕಲ್ಪನೆ ಹೆಚ್ಚು ಪ್ರಚಲಿತವಾಗಿದೆ. ಯಾಕೆಂದರೆ ಇತರ ಪಕ್ಷಗಳು ಎಎಪಿ ಯೋಜನೆಗಳನ್ನು ನಕಲು ಮಾಡುತ್ತಿವೆ ಎಂದು ಪೃಥ್ವಿ ಪಿಟಿಐಗೆ ತಿಳಿಸಿದ್ದಾರೆ.
ಪಕ್ಷದ ಇಬ್ಬರು ಹಿರಿಯ ನಾಯಕರನ್ನು ಕೇಂದ್ರದ ಏಜೆನ್ಸಿಗಳು ಬಂಧಿಸಿರುವುದರಿಂದ ದೆಹಲಿಯ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಸಿಎಂ ಕೇಜ್ರಿವಾಲ್ ಅವರ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್‌ನಲ್ಲಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ದೆಹಲಿಯಲ್ಲಿ ಬಹಳಷ್ಟು ಘಟನೆ ನಡೆದಿವೆ. ನಮ್ಮ ನಾಯಕರಾದ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ.
ಅವರು ಕೂಡ ಸರ್ಕಾರದ ಭಾಗವಾಗಿದ್ದ ಕಾರಣ. ದೆಹಲಿಯ ಜನರಿಗೆಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ದೆಹಲಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ಅವರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಪಂಜಾಬ್ ಸಿಎಂ ಭಗವಂತ್ ಮಾನ್, ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ, ಸಂಜಯ್ ಸಿಂಗ್, ಹಿರಿಯ ನಾಯಕರಾದ ದಿಲೀಪ್ ಪಾಂಡೆ ಹಾಗೂ ಅತಿಶಿ ಅವರು ಪಕ್ಷದ ಪರವಾಗಿ ಈವರೆಗೆ ಪ್ರಚಾರ ಮಾಡಿದ್ದಾರೆ ಎಂದು ಪೃಥ್ವಿ ರೆಡ್ಡಿ ವಿವರಿಸಿದ್ದಾರೆ.
ಕರ್ನಾಟಕದಲ್ಲಿ ಎಎಪಿ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಪ್ರಶ್ನೆಗೆ, 2018ರ ಚುನಾವಣೆಯಲ್ಲೂ ನಾವು ಸ್ಪರ್ಧಿಸಿ ಹೋರಾಟ ಮಾಡಿದ್ದೇವೆ. ಎಎಪಿ ಬಗ್ಗೆ ಒಂದು ಪರಿಕಲ್ಪನೆ ಇದ್ದು, ಕೇವಲ ಉತ್ತೀರ್ಣರಾಗಲು ಸ್ಪರ್ಧಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ . ನೂರಕ್ಕೆ ನೂರು ಅಂಕ ಗಳಿಸಲು ತಯಾರಿ ನಡೆಸಿದ್ದೇವೆ. 2018ರಲ್ಲಿ ಕೇವಲ 28 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದ್ದೇವು. ಈ ಬಾರಿ 209 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದು ಹೋರಾಟ ಮಾಡ್ತಿದ್ದೇವೆ.
ಇತರೆ ರಾಜಕೀಯ ಪಕ್ಷಗಳು ಟೀಕೆಗಳ ಕುರಿತು ಪ್ರತಿಕ್ರಿಯಿಸಿ, ಕೆಲವು ಪಕ್ಷಗಳು ಎಎಪಿಯನ್ನು ಕಡಿಮೆ ಅಂದಾಜು ಮಾಡುತ್ತಿವೆ. ಆದರೆ ನಮ್ಮ ಪಕ್ಷವು ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಈ ಹಿಂದೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ನಮ್ಮನ್ನು ಋತುಮಾನದ ಕೀಟಗಳು ಎಂದು ಕರೆದಿದ್ದಾರೆ ಎಂಬುದನ್ನು ಮರೆಯಬಾರದು ಅಂತ ಹೇಳಿದ್ದಾರೆ.