ಕನ್ನಡ ಸುದ್ದಿ  /  Karnataka  /  Accident Insurance Facility Of <Span Class='webrupee'>₹</span>1 Crore Implemented For Ksrtc Staff

KSRTC news: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಸೌಲಭ್ಯ ಜಾರಿ

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್‌ರ್‌ಟಿಸಿಯು ಸಿಬ್ಬಂದಿಗೆ 1 ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೊಳಿಸಿದೆ. ಈಗಾಗಲೇ 50 ಲಕ್ಷ ರೂಪಾಯಿ ಮೊತ್ತದ ವಿಮೆ ಜಾರಿಯಲ್ಲಿದ್ದು, ಇಂದು ಹೆಚ್ಚುವರಿ 50 ಲಕ್ಷ ರೂ. ಮೊತ್ತದ ವಿಮೆ ಜಾರಿಗೊಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಅಪಘಾತ ವಿಮಾ ಸೌಲಭ್ಯ ಜಾರಿ
ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಅಪಘಾತ ವಿಮಾ ಸೌಲಭ್ಯ ಜಾರಿ

ದೇಶದಲ್ಲಿ ಅತ್ಯುತ್ತಮ ಸೌಲಭ್ಯಗಳೊಂದಿಗೆ ಬಸ್‌ ಸೇವೆ ಒದಗಿಸುತ್ತಿರುವ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ. ಉತ್ತಮ ಗುಣಮಟ್ಟದ ಪ್ರಯಾಣಿಕ ಸೇವೆ ನೀಡುತ್ತಿರುವ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆ ಮಡಿಲಿಗೆ ಈಗಾಗಲೇ ಹಲವಾರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಹಲವಾರು ಹೊಸ ಯೋಜನೆಗಳೊಂದಿಗೆ ಸದಾ ಪ್ರಯಾಣಿಕಸ್ನೇಹಿ ಸಾರಿಗೆ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಸಂಸ್ಥೆ, ಈಗ ತನ್ನ ಸಿಬ್ಬಂದಿಗೆ ಶುಭಸುದ್ದಿಯೊಂದನ್ನು ನೀಡಿದೆ.

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್‌ರ್‌ಟಿಸಿಯು ಸಿಬ್ಬಂದಿಗೆ 1 ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೊಳಿಸಿದೆ. ಈಗಾಗಲೇ 50 ಲಕ್ಷ ರೂಪಾಯಿ ಮೊತ್ತದ ವಿಮೆ ಜಾರಿಯಲ್ಲಿದ್ದು, ಇಂದು ಹೆಚ್ಚುವರಿ 50 ಲಕ್ಷ ರೂ. ಮೊತ್ತದ ವಿಮೆ ಜಾರಿಗೊಳಿಸಲಾಗಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 50 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿತ್ತು. ಇದರೊಂದಿಗೆ ಇಂದು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಒಟ್ಟು 1 ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮೆ ಮಾಡಿದಂತಾಗಿದೆ.

ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಮತ್ತು ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಜಾರಿಗೆ ತಂದಿರುತ್ತದೆ. ವಿಶೇಷವೆಂದರೆ ಈ ವಿಮೆಯು ಸಿಬ್ಬಂದಿಯು ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗ ಅಪಘಾತದಿಂದ ಮೃತಪಟ್ಟರೂ ಕ್ಲೈಮ್‌ ಆಗಲಿದೆ.

ಇದರ ಮುಂದುವರಿದ ಭಾಗವಾಗಿ, ಇಂದು ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ಸಿಬ್ಬಂದಿಗೆ 50 ಲಕ್ಷ ರೂ.ವರೆಗೆ ಹೆಚ್ಚುವರಿ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಈ ವಿಮಾ ಯೋಜನೆಗೆ ಸಿಬ್ಬಂದಿಯು ಪ್ರತಿ ತಿಂಗಳು ರೂ.62.50 + ಜಿ.ಎಸ್.ಟಿ ಸೇರಿದಂತೆ ವಾರ್ಷಿಕ 885 ರೂ. ಪ್ರೀಮಿಯಂ ಮೊತ್ತ ಪಾವತಿಸಬೇಕಾಗುತ್ತದೆ.

ಹೊಸ ಯೋಜನೆ ಕುರಿತು ಮಾತನಾಡಿದ ನಿಗಮದ ಅಧ್ಯಕ್ಷ ಎಂ ಚಂದ್ರಪ್ಪ ಅವರು, ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮ ಯೋಜನೆಯಾಗಿದೆ. ಅಪಘಾತ (On duty ಮತ್ತು Off duty) ವಿಮಾ ಯೋಜನೆಯಾಗಿರುವುದು ಸಿಬ್ಬಂದಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕರು ಹಾಗೂ ನಿಗಮದ ಅಧ್ಯಕ್ಷರಾದ ಎಂ ಚಂದ್ರಪ್ಪ ಅವರ ಸಮ್ಮುಖದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಕಡೆಯವರು ಸೇರಿಕೊಂಡು ಒಡಂಬಡಿಕೆಗೆ ಸಹಿ ಹಾಕಲಾಯಿತು.

ವಿಮಾ ಪಾಲಿಸಿ ವಿವರ

ಈ ಯೋಜನೆಯ ಪ್ರಕಾರ, ಕರ್ತವ್ಯದಲ್ಲಿರುವ ಸಿಬ್ಬಂದಿಯು ಪ್ರತಿ ತಿಂಗಳು 62.50 ರೂಪಾಯಿ ಮತ್ತು ಜಿಎಟ್‌ಟಿ ಸೇರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ ವಾರ್ಷಿಕ ರೂ.750+ ಜಿ.ಎಸ್.ಟಿ ಸೇರಿದಂತೆ ಒಟ್ಟು 885 ರೂಪಾಯಿ ಪಾವತಿಸಬೇಕು

ಈ ವೈಯಕ್ತಿಕ ವಿಮಾ ಯೋಜನೆಯ ಮೂಲಕ, ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. 50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.

ಅಪಘಾತದಲ್ಲಿ ಸಿಬ್ಬಂದಿಯು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಸಹ 50 ಲಕ್ಷಗಳ ರೂ. ವಿಮಾ ಪರಿಹಾರ ದೊರೆಯಲಿದೆ.

ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ, ಸಿಬ್ಬಂದಿಯು ಕರ್ತವ್ಯನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲಿ ಆಗುವ ವೈಯಕ್ತಿಕ ಅಪಘಾತಗಳ ಸಂದರ್ಭದಲ್ಲಿಯೂ ಈ ವಿಮೆ ಅನ್ವಯಿಸುತ್ತದೆ.

ಒಂದು ವೇಳೆ ಸಿಬ್ಬಂದಿಯು ಅಪಘಾತಕ್ಕೆ ತುತ್ತಾಗಿ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದ ಸದರ್ಭದಲ್ಲಿ; ಆತ ಚೇತರಿಸಿಕೊಳ್ಳುವವರೆಗೆ, ಅವನಿಗೆ ವಿಮಾ ಮಾಡಲಾದ ರೂ.50 ಲಕ್ಷ ಮೊತ್ತದ ಶೇಕಡಾ ಒಂದರಷ್ಟು ಮೊತ್ತವನ್ನು ಪ್ರತಿವಾರ ನೀಡಲಾಗುತ್ತದೆ. ಅಂದರೆ ಇಂದು 5000 ರೂಪಾಯಿ ಹೆಚ್ಚದಂತೆ ಅಥವಾ ಅವರ ಮಾಸಿಕ ಸಂಬಳದ ಶೇಕಡಾ 25ರಷ್ಟನ್ನು ಮೀರದಂತೆ ಇರುತ್ತದೆ. ಈ ಎರಡು ಮೊತ್ತದಲ್ಲಿ ಯಾವುದು ಕಡಿಮೆಯೋ ಅದನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡುತ್ತದೆ.

ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿಗೆ ರೂ.1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಂತಾಗಿದೆ. ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗೆ ಯಾವುದೇ ಅಪಘಾತ ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ.