ಚಿತ್ರದುರ್ಗ ಬಳಿ ಅಪಘಾತದಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ತೀವ್ರ ಗಾಯ, ದಾವಣಗೆರೆ ಆಸ್ಪತ್ರೆಗೆ ದಾಖಲು
ಅಧಿವೇಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗ: ವಿಧಾನಸಭೆಯ ಉಪಾಧ್ಯಕ್ಷ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರು ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅಧಿವೇಶನ ಮುಗಿಸಿ ರಾಣೆಬೆನ್ನೂರಿಗೆ ವಾಪಸಾಗುವಾಗ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಶುಕ್ರವಾರ ಸಂಜೆ ಗಾಯಗೊಂಡಿದ್ದು ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಪಾರಾಗಿದ್ದಾರೆ. ತಲೆ, ಕಾಲು ಹಾಗೂ ಎದೆ ಭಾಗಕ್ಕೆ ಏಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಕೂಡಲೇ ಚಿತ್ರದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ನೀಡಿರುವ ಪ್ರಕಾರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಆತಂಕ ಪಡುವ ಸನ್ನಿವೇಶ ಇಲ್ಲ ಎಂದು ಖಚಿತಪಡಿಸಿದ್ದಾರೆ.
ರುದ್ರಪ್ಪ ಲಮಾಣಿ ಅವರು ಹಾವೇರಿ ಕ್ಷೇತ್ರದ ಶಾಸಕರಾಗಿದ್ದರೂ ರಾಣೆಬೆನ್ನೂರು ಮೂಲದವರು. ಅಲ್ಲಿಯೇ ಅವರು ವಾಸಿಸುತ್ತಾರೆ. ಬಜೆಟ್ ಅಧಿವೇಶನ ಬೆಂಗಳೂರಿನಲ್ಲಿ ನಡೆದಿದ್ದು ಅಧಿವೇಶನವನ್ನು ಶುಕ್ರವಾರ ಮಧ್ಯಾಹ್ನವೇ ಮುಂದೂಡಲಾಗಿತ್ತು. ಇದರಿಂದ ಮಧ್ಯಾಹ್ನವೇ ಬೆಂಗಳೂರಿನಿಂದ ರಾಣೆಬೆನ್ನೂರು ಕಡೆ ಹೊರಟಿದ್ದರು.
ಈ ನಡುವೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ಮೂತ್ರ ವಿಸರ್ಜಗೆಂದು ನಿಲ್ಲಿಸಿದ್ದರು.ಮೂತ್ರ ವಿಸರ್ಜನೆ ಮಾಡಿ ಬಂದು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದರಿಂದ ಅಲ್ಲಿಯೇ ಎಳೆನೀರು ಕುಡಿಯುತ್ತಿದ್ದರು.
ಈ ವೇಳೆ ಸ್ಕೂಟರ್ ಸವಾರನೊಬ್ಬ ಅದೇ ಮಾರ್ಗದಲ್ಲಿ ಬಂದು ಏಕಾಏಕಿ ರುದ್ರಪ್ಪ ಲಮಾಣಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ರುದ್ರಪ್ಪ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರ ಎದೆ, ಕಾಲು,ತಲೆ ಭಾಗಕ್ಕೆ ಏಟು ಬಿದ್ದಿದೆ. ರಕ್ತಸ್ರಾವವೂ ಆಗಿದೆ. ಜತೆಗಿದ್ದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಚಿಕಿತ್ಸೆ ಮುಂದುವರಿದಿದೆ.
ರುದ್ರಪ್ಪ ಲಮಾಣಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದೇವೆ. ಯಾವುದೇ ಅಪಾಯವಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಒಂದು ದಿನದ ವಿರಾಮ ತೆಗೆದುಕೊಳ್ಳಲಿದ್ದಾರೆ. ಭಯ ಪಡುವ ಪ್ರಮೇಯವಿಲ್ಲ ಎಂದು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದರು.
ಬ್ಯಾಡಗಿ ಕ್ಷೇತ್ರದಲ್ಲಿ ಎರಡು ಬಾರಿ, ಹಾವೇರಿಯಲ್ಲಿ ಎರಡು ಬಾರಿ ಸೋತಿರುವ ರುದ್ರಪ್ಪ ಲಮಾಣಿ ಮೂರು ಬಾರಿ ಶಾಸಕರಾಗಿದ್ದಾರೆ.
ಎಂಬತ್ತರ ದಶಕದಲ್ಲಿ ಕಾಂಗ್ರೆಸ್‌ನಲ್ಲಿಯೇ ರಾಜಕೀಯ ಜೀವನ ಆರಂಭಿಸಿ ಧಾರವಾಡ ಜಿಲ್ಲಾಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ 1994ರಲ್ಲಿ ಬ್ಯಾಡಗಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋತರು. ಆನಂತರ 1999ರಲ್ಲಿ ರುದ್ರಪ್ಪ ಅವರು ಹಿಂದೆ ಬ್ಯಾಡಗಿ ಕ್ಷೇತ್ರದ ಶಾಸಕರಾಗಿದ್ದರು. 2004ರಲ್ಲಿ ಸೋತರು. 2008ರಲ್ಲಿ ಮೀಸಲು ಬದಲಾವಣೆ ನಂತರ ಹಾವೇರಿಯಿಂದ ಸ್ಪರ್ಧೆ ಮಾಡಿ ಎರಡನೇ ಬಾರಿ ಗೆದ್ದಿದ್ದಾರೆ. ಎಂಟು ವರ್ಷದ ಹಿಂದೆ ಮುಜರಾಯಿ ಹಾಗೂ ಜವಳಿ ಸಚಿವರಾಗಿದ್ದರು. ಈ ಬಾರಿ ಗೆದ್ದರೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಬದಲಿಗೆ ವಿಧಾನಸಭೆಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ತಿಂಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ನಡೆದಿದ್ದ ಸಂತ ಸೇವಾಲಾಲ್ ಅವರ ಜಯಂತ್ಯುತ್ಸವದ ವೇಳೆ ಕಬ್ಬಡ್ಡಿ ಆಡುವಾಗಲೂ ರುದ್ರಪ್ಪ ಲಮಾಣಿ ಅವರು ಬಿದ್ದು ಗಾಯಗೊಂಡಿದ್ದರು. ಕಬ್ಬಡ್ಡಿ ಪಂದ್ಯಾವಳಿ ಆಡುವಾಗ ತಾವೇ ರೈಡ್ ಮಾಡಲು ರುದ್ದಪ್ಪ ಹೋಗಿದ್ದಾಗ ಆಯತಪ್ಪಿ ಬಿದ್ದಿದ್ದರು.ಕೆಲ ಹೊತ್ತು ಅವರು ಅಸ್ವಸ್ಥರಾಗಿದ್ದರು. ಆನಂತರ ಆಸ್ಪತ್ರೆಗೆ ದಾಖಲಿಸಿದಾಗ ಆಗಲೂ ಅವರು ಚೇತರಿಸಿಕೊಂಡಿದ್ದರು. ಇದಾದ ಒಂದು ತಿಂಗಳಲ್ಲೇ ಮತ್ತೊಂದು ಅಪಘಾತಕ್ಕೆ ಅವರು ಸಿಲುಕಿದಾರೆ.
ಘಟನೆ ಹಿನ್ನೆಲೆಯಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
